ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಪಾದಕೀಯ | ಮೆಟ್ರೊ ಅವಘಡ: ದಕ್ಷವಾಗಿ ತನಿಖೆ ನಡೆದು ಉತ್ತರದಾಯಿತ್ವ ನಿಗದಿ ಆಗಲಿ

Last Updated 12 ಜನವರಿ 2023, 19:45 IST
ಅಕ್ಷರ ಗಾತ್ರ

‘ನಮ್ಮ ಮೆಟ್ರೊ’ದ ಸ್ತಂಭ ನಿರ್ಮಾಣಕ್ಕಾಗಿ ನಿಲ್ಲಿಸಿದ್ದ ಕಬ್ಬಿಣದ ಚೌಕಟ್ಟು ಉರುಳಿ ಬಿದ್ದು ತಾಯಿ ಮತ್ತು ಮಗು ಬೆಂಗಳೂರಿನಲ್ಲಿ ಮಂಗಳವಾರ ಮೃತಪಟ್ಟಿದ್ದಾರೆ. ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ಮತ್ತು ಅದು ನಿಯೋಜಿಸಿರುವ ಗುತ್ತಿಗೆದಾರರು (ಈ ಪ್ರಕರಣದಲ್ಲಿ ನಾಗಾರ್ಜುನ ಕನ್‌ಸ್ಟ್ರಕ್ಷನ್‌ ಕಂಪನಿ–ಎನ್‌ಸಿಸಿ) ಅನುಸರಿಸುತ್ತಿರುವ ಗುಣಮಟ್ಟ ಮಾನದಂಡದ ಬಗ್ಗೆಯೇ ಈ ಪ್ರಕರಣವು ಅನುಮಾನ ಮೂಡಿಸಿದೆ.

ಲೋಹಿತ್ ಕುಮಾರ್‌ ವಿ. ಸುಲಾಖೆ ಮತ್ತು ಅವರ ಪತ್ನಿ, ಸಾಫ್ಟ್‌ವೇರ್‌ ಎಂಜಿನಿಯರ್‌ ತೇಜಸ್ವಿನಿ (28) ದ್ವಿಚಕ್ರ ವಾಹನದಲ್ಲಿ ತಮ್ಮ ಎರಡೂವರೆ ವರ್ಷ ವಯಸ್ಸಿನ ಅವಳಿ ಮಕ್ಕಳನ್ನು ಪ್ಲೇಸ್ಕೂಲ್‌ನಲ್ಲಿ ಬಿಟ್ಟು ಬರಲು ಹೋಗುತ್ತಿದ್ದರು. 12 ಮೀಟರ್‌ ಎತ್ತರದ ಕಬ್ಬಿಣದ ಚೌಕಟ್ಟು ಆ ಹೊತ್ತಿಗೆ ಅವರ ಮೇಲೆ ಬಿದ್ದಿದೆ. ದಂಪತಿಯ ಮಗ ವಿಹಾನ್‌ ಮತ್ತು ತೇಜಸ್ವಿನಿ ಸ್ಥಳದಲ್ಲಿಯೇ ಮೃತಪಟ್ಟರು. ಲೋಹಿತ್‌ ಕುಮಾರ್ ಮತ್ತು ದಂಪತಿಯ ಮಗಳು ಗಾಯಗೊಂಡಿದ್ದಾರೆ. ಚೌಕಟ್ಟಿನ ಸುತ್ತಲೂ ಇದ್ದ ಕಬ್ಬಿಣದ ನಾಲ್ಕು ಕಟ್ಟುಗಳಲ್ಲಿ ಒಂದು ಸಡಿಲಗೊಂಡಿದ್ದು ಚೌಕಟ್ಟು ಕುಸಿದು ಬೀಳಲು ಕಾರಣ ಎಂದು ಹೇಳಲಾಗಿದೆ.

ಎಂಜಿನಿಯರಿಂಗ್ ಲೆಕ್ಕಾಚಾರ ತಪ್ಪಿದ್ದು ಅಥವಾ ಕಳಪೆ ಗುಣಮಟ್ಟದ ಕಬ್ಬಿಣ ಬಳಸಿದ್ದು ಇದಕ್ಕೆ ಕಾರಣ ಆಗಿರಬಹುದು. ಬಿಎಂಆರ್‌ಸಿಎಲ್‌, ತನಿಖೆಗಾಗಿ ಆಂತರಿಕ ತನಿಖಾ ಸಮಿತಿಯೊಂದನ್ನು ರಚಿಸಿದೆ. ಜೊತೆಗೆ, ಸ್ವತಂತ್ರ ತನಿಖೆ ನಡೆಸುವಂತೆ ಬೆಂಗಳೂರಿನ ಐಐಎಸ್‌ಸಿಯ ತಜ್ಞರನ್ನು ಕೋರಿದೆ. ಪೊಲೀಸ್‌ ತನಿಖೆಗೂ ಆದೇಶ ನೀಡಲಾಗಿದೆ. ಗುತ್ತಿಗೆದಾರರು ಮತ್ತು ಬಿಎಂಆರ್‌ಸಿಎಲ್‌ನ ಕೆಲ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಮೆಟ್ರೊ ನಿರ್ಮಾಣ ಸ್ಥಳದಲ್ಲಿ ಇದು ಮೊದಲ ಅವಘಡವೇನೂ ಅಲ್ಲ. ಕಳೆದ ಕೆಲವು ತಿಂಗಳಲ್ಲಿಯೇ ಎರಡು ಅವಘಡಗಳು ನಡೆದಿವೆ. ಒಂದು, ಕಳೆದ ನವೆಂಬರ್‌ನಲ್ಲಿ ನಡೆದಿದೆ. ಅದು ಇಬ್ಬಲೂರು ಬಳಿ ನಡೆದಿತ್ತು. ಮತ್ತೊಂದು, ಕೆ.ಆರ್‌. ಪುರದಲ್ಲಿ ನಡೆದಿದೆ. ಇದು ವರದಿಯೇ ಆಗಿಲ್ಲ. ಮಂಗಳವಾರದ ದುರ್ಘಟನೆಯೂ ಇದೇ ಕೆ.ಆರ್‌.ಪುರ– ವಿಮಾನ ನಿಲ್ದಾಣ ಮಾರ್ಗದಲ್ಲಿ ನಡೆದಿದೆ. ಮೊದಲು ನಡೆದ ಎರಡು ಅವಘಡಗಳಲ್ಲಿ ಜೀವಹಾನಿ ಆಗಿಲ್ಲದ ಕಾರಣ ಬಿಎಂಆರ್‌ಸಿಎಲ್ ಮತ್ತು ಮೆಟ್ರೊ ಗುತ್ತಿಗೆದಾರರು ಯಾವ ಪಾಠವನ್ನೂ ಕಲಿಯಲಿಲ್ಲ.

‘ಓಲಾಡುತ್ತಿರುವ ಸ್ತಂಭಗಳು’ ಮತ್ತು ಇತರ ಅಪಾಯಗಳ ಕುರಿತು ಜನರು ಈ ಹಿಂದೆ ಗಮನ ಸೆಳೆದಿದ್ದೂ ಇದೆ. ಬಿಎಂಆರ್‌ಸಿಎಲ್ ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ಸುರಕ್ಷತೆಗಾಗಿ ಕೈಗೊಂಡ ಕ್ರಮಗಳ ಕುರಿತು ಪರಿಶೀಲನೆ ನಡೆಸಬೇಕು ಮತ್ತು ಅವುಗಳನ್ನು ದಾಖಲಿಸಬೇಕು. ಮೆಟ್ರೊ ಕಾಮಗಾರಿ ಸ್ಥಳದಲ್ಲಿ ನಾಗರಿಕರು ಮೃತಪಟ್ಟಾಗ ಅದಕ್ಕೆ ಹೆಚ್ಚಿನ ಪ್ರಚಾರ ಸಿಕ್ಕಿದೆ. ಆದರೆ, ಕೆಲವು ವರ್ಷಗಳಲ್ಲಿ ಮೆಟ್ರೊ ಕಾಮಗಾರಿಯ ಸಂದರ್ಭದಲ್ಲಿ ಕಾರ್ಮಿಕರಲ್ಲಿ ಹಲವರು ಅವಘಡಗಳಿಗೆ ಬಲಿಯಾಗಿದ್ದಾರೆ. ಈ ಸಾವುಗಳ ಕುರಿತು ಹೆಚ್ಚಿನ ಗಮನಹರಿಸಲಾಗಿಲ್ಲ.

ಮಂಗಳವಾರದ ದುರ್ಘಟನೆಗೂ ಮುಂಚೆ ಹಲವು ಅವಘಡಗಳು ನಡೆದಿವೆ. ಹೀಗಾಗಿ, ಉತ್ತರದಾಯಿತ್ವವನ್ನು ನಿಗದಿ ಮಾಡಲೇಬೇಕು. ಅವಘಡಗಳನ್ನು ಕೆಳ ಹಂತಗಳಲ್ಲಿಯೇ ಮುಚ್ಚಿ ಹಾಕಿ, ಬಿಎಂಆರ್‌ಸಿಎಲ್‌ನ ಉನ್ನತ ಅಧಿಕಾರಿಗಳ ಗಮನಕ್ಕೆ ಬಾರದಂತೆ ಮಾಡಲಾಗಿದೆಯೇ? ಕೆಳ ಮತ್ತು ಮಧ್ಯಮ ಮಟ್ಟದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡರೆ ಸಾಲದು, ಎನ್‌ಸಿಸಿಯ ಮುಖ್ಯಸ್ಥ ಮತ್ತು ಹಿರಿಯ ಅಧಿಕಾರಿಗಳ ವಿರುದ್ಧವೇ ದೂರು ದಾಖಲಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಹಾಗಿದ್ದರೂ ಎಫ್‌ಐಆರ್‌ನಲ್ಲಿ ಕೆಳ ಮತ್ತು ಮಧ್ಯಮ ಹಂತದ ಅಧಿಕಾರಿಗಳ ಹೆಸರು ಮಾತ್ರ ಉಲ್ಲೇಖವಾಗಿದೆ.

ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್‌ ಅವರ ವಿರುದ್ಧ ದೂರು ದಾಖಲಾಗುವುದು ಬಿಡಿ, ಮುಖ್ಯ ಎಂಜಿನಿಯರ್‌ ಅಥವಾ ಪ್ರಾಜೆಕ್ಟ್ ಎಂಜಿನಿಯರ್‌ ವಿರುದ್ಧವೂ ದೂರು ದಾಖಲಾಗಿಲ್ಲ. ಸುರಕ್ಷತೆಗೆ ಸಂಬಂಧಿಸಿದ ಪ್ರತಿಯೊಂದು ವಿಚಾರವೂ ವ್ಯವಸ್ಥಾಪಕ ನಿರ್ದೇಶಕರ ಗಮನಕ್ಕೆ ಬರುವಂತಹ ವ್ಯವಸ್ಥೆ ಬಿಎಂಆರ್‌ಸಿಎಲ್‌ನಲ್ಲಿ ಇದೆಯೇ? ಅಂತಹ ವ್ಯವಸ್ಥೆ ಇದೆ ಎಂದಾದರೆ, ಈಗ ನಡೆದಿರುವ ಅವಘಡದ ಹೊಣೆಯನ್ನು ಅವರೇ ವಹಿಸಿಕೊಳ್ಳಬೇಕಾಗುತ್ತದೆ. ಇಲ್ಲ ಎಂದಾದರೆ ಅಂತಹ ವ್ಯವಸ್ಥೆಯೊಂದನ್ನು ಜಾರಿಗೆ ತರುವುದು ಅವರ ಹೊಣೆಗಾರಿಕೆಯಾಗಿದೆ. ಸುರಕ್ಷತೆಗೆ ಸಂಬಂಧಿಸಿದ ವರದಿಯನ್ನು ಜನರಿಗೆ ಪ್ರತೀ ತಿಂಗಳು ದೊರೆಯುವಂತೆ ಮಾಡಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT