ಸೋಮವಾರ, ಅಕ್ಟೋಬರ್ 25, 2021
24 °C

ಸಂಪಾದಕೀಯ: ಟೀಕಾಕಾರರ ದನಿ ಉಡುಗಿಸಲು ಕಾನೂನು ಜಾರಿ ಸಂಸ್ಥೆಗಳ ದುರ್ಬಳಕೆ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಮಾಧ್ಯಮ ಸಂಸ್ಥೆಗಳು, ವ್ಯಕ್ತಿಗಳು ಮತ್ತು ಇತರ ಸಂಘಟನೆಗಳ ವಿರುದ್ಧ ಸರ್ಕಾರದ ಇಲಾಖೆಗಳು ಮತ್ತು ಕಾನೂನು ಜಾರಿ ಸಂಸ್ಥೆಗಳ ದಾಳಿ ಮುಂದುವರಿದಿದೆ. ತನ್ನ ಪರವಾಗಿ ಇಲ್ಲದ ಯಾವುದೇ ವ್ಯಕ್ತಿಯ ವಿರುದ್ಧ ಸರ್ಕಾರವು ಅಧಿಕಾರ ಬಲವನ್ನು ತೋರಬಹುದು ಎಂಬುದೇ ಈ ದಾಳಿಗಳು ಪ್ರತಿಯೊಬ್ಬರಿಗೂ ನೀಡುವ ಎಚ್ಚರಿಕೆಯಾಗಿದೆ. ಮಾಜಿ ಐಎಎಸ್‌ ಅಧಿಕಾರಿ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತ ಹರ್ಷ ಮಂದರ್ ಮತ್ತು ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಸೋನು ಸೂದ್‌ ಅವರು ಇಂತಹ ದಾಳಿಗಳ ಇತ್ತೀಚಿನ ಗುರಿಯಾಗಿದ್ದಾರೆ. ಹರ್ಷ ಮಂದರ್‌ ಅವರಿಗೆ ಸೇರಿದ ಕೆಲವು ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕಳೆದ ವಾರ ದಾಳಿ ಮಾಡಿ ಶೋಧ ನಡೆಸಿದ್ದಾರೆ. ಹಣ ಅಕ್ರಮ ವರ್ಗಾವಣೆಯ ಆರೋಪವನ್ನು ಅವರ ಮೇಲೆ ಹೊರಿಸಲಾಗಿದೆ.

ಸೋನು ಸೂದ್‌ ಅವರ ಮುಂಬೈನ ಸ್ಥಳ ಮತ್ತು ಅವರ ಜತೆ ಸೇರಿ ಉದ್ಯಮ ನಡೆಸುತ್ತಿರುವ ಲಖನೌನ ರಿಯಲ್‌ ಎಸ್ಟೇಟ್‌ ಕಂಪನಿಯ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ನಡೆದಿದೆ. ಹರ್ಷ ಮಂದರ್‌ ಅವರು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಆಡಳಿತ ಪಕ್ಷದ ಟೀಕಾಕಾರರು. ಸೋನು ಸೂದ್‌ ಅವರು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರನ್ನು ಭೇಟಿಯಾದ ಮರುದಿನವೇ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಸೋನು ಸೂದ್‌ ಅವರನ್ನು ಆಮ್‌ ಆದ್ಮಿ ಪಕ್ಷದ ರಾಯಭಾರಿಯಾಗಿ ಕೇಜ್ರಿವಾಲ್‌ ನೇಮಿಸಿದ್ದಾರೆ. ‌

ಆಡಳಿತ ವ್ಯವಸ್ಥೆ, ಅಧಿಕಾರ ಮತ್ತು ಕಾನೂನು ಜಾರಿ ಸಂಸ್ಥೆಗಳನ್ನು ಈ ಹಿಂದಿನ ಸರ್ಕಾರಗಳು ಕೂಡ ದುರ್ಬಳಕೆ ಮಾಡಿಕೊಂಡಿವೆ. ಆದರೆ, ಟೀಕಾಕಾರರು, ಭಿನ್ನಮತೀಯರು ಹಾಗೂ ರಾಜಕೀಯ ಪ್ರತಿಸ್ಪರ್ಧಿಗಳ ವಿರುದ್ಧ ಈ ಎಲ್ಲವನ್ನೂ ಇಷ್ಟೊಂದು ವ್ಯವಸ್ಥಿತವಾಗಿ ಈ ಹಿಂದಿನ ಸರ್ಕಾರಗಳು ಬಳಸಿಕೊಂಡಿರಲಿಲ್ಲ. ಕಾನೂನು ಜಾರಿ ಸಂಸ್ಥೆಗಳನ್ನು ಈ ರೀತಿಯಲ್ಲಿ ದುರ್ಬಳಕೆ ಮಾಡಿಕೊಳ್ಳುತ್ತಿರುವುದನ್ನು ಖಂಡಿಸಿ ಸುಮಾರು 700 ಮಂದಿ ಚಿಂತಕರು ಮತ್ತು ಸಾಮಾಜಿಕ ಹೋರಾಟಗಾರರು ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.

‘ಈಗಿನ ಸರ್ಕಾರದ ಟೀಕಾಕಾರರನ್ನು ಹೆದರಿಸುವುದಕ್ಕಾಗಿ, ಅವರ ಮೇಲೆ ಒತ್ತಡ ಹೇರುವುದಕ್ಕಾಗಿ ಮತ್ತು ಅವರನ್ನು ಸುಮ್ಮನಾಗಿಸುವುದಕ್ಕಾಗಿಯೇ ಇಂತಹ ದಾಳಿಗಳು ನಡೆಯುತ್ತಿವೆ ಎಂದು ಭಾವಿಸಬೇಕಾಗಿದೆ’ ಎಂದು ಈ ಹೇಳಿಕೆಯಲ್ಲಿ ಅಭಿಪ್ರಾಯಪಡಲಾಗಿದೆ.

ಸರ್ಕಾರದ ನಡವಳಿಕೆಯನ್ನು ವಿಮರ್ಶಾತ್ಮಕವಾಗಿ ನೋಡಿದ ಹಲವು ಮಾಧ್ಯಮ ಸಂಸ್ಥೆಗಳ ಮೇಲೆ ಕೂಡ ಇತ್ತೀಚಿನ ಕೆಲ ವಾರಗಳಲ್ಲಿ ದಾಳಿಗಳು ನಡೆದಿವೆ. ಮಾಧ್ಯಮ ಸಂಸ್ಥೆಗಳಿಗೆ ಸೇರಿದ ಸ್ಥಳಗಳಲ್ಲಿ ಕಾನೂನು ಜಾರಿ ಸಂಸ್ಥೆಗಳು ನಡೆಸಿದ ಶೋಧದ ಬಗ್ಗೆ ಭಾರತೀಯ ಸಂಪಾದಕರ ಕೂಟವು ಕಳವಳ ವ್ಯಕ್ತಪಡಿಸಿದೆ. ರಾಜಕೀಯ ಪ್ರತಿಸ್ಪರ್ಧಿಗಳು ಮತ್ತು ಅವರ ಸಂಬಂಧಿಕರು ಕೂಡ ಸರ್ಕಾರದ ಈ ನಡವಳಿಕೆಯ ಬಿಸಿ ಅನುಭವಿಸಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸಂಬಂಧಿಕರು ಮತ್ತು ಬೆಂಬಲಿಗರು ಕೂಡ ಇಂತಹ ದಾಳಿಗಳಿಗೆ ಒಳಗಾಗಿದ್ದಾರೆ. ಸರ್ಕಾರದ ಟೀಕಾಕಾರರು ಮತ್ತು ರಾಜಕೀಯ ಪ್ರತಿಸ್ಪರ್ಧಿಗಳಿಗೆ ಕಾನೂನು ಜಾರಿ ಸಂಸ್ಥೆಗಳ ಮೂಲಕ ಪಾಠ ಕಲಿಸಲಾಗುವುದು ಎಂಬ ಸಂದೇಶವನ್ನು ಈ ದಾಳಿಗಳು ರವಾನಿಸುತ್ತವೆ. 

ಹೀಗೆ ನಡೆಸಲಾದ ದಾಳಿಗಳ ವಿರುದ್ಧ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ. ಹಾಗಿದ್ದರೂ ಸರ್ಕಾರ ಹಿಂದೇಟು ಹಾಕಿಲ್ಲ ಮತ್ತು ದಾಳಿಗಳು ಅಬಾಧಿತವಾಗಿ ನಡೆಯುತ್ತಲೇ ಇವೆ. ಯಾವುದೇ ರೀತಿಯ ಟೀಕೆ–ಟಿಪ‍್ಪಣಿಗಳು ಬಂದರೂ ದಾಳಿಗಳು ಮುಂದುವರಿದಿವೆ ಎಂದಾದರೆ, ಇದು ಸರ್ಕಾರ ಅಳವಡಿಸಿಕೊಂಡ ನೀತಿಯ ಭಾಗವೇ ಆಗಿದೆ ಎಂದು ಭಾವಿಸಬೇಕಾಗುತ್ತದೆ. ಪ್ರತಿಭಟನಕಾರರನ್ನು ಮತ್ತು ವಿಮರ್ಶಕರನ್ನು ಬಂಧಿಸುವ ಪ್ರವೃತ್ತಿಯನ್ನೂ ಸರ್ಕಾರ ತೋರಿದೆ.

ಹೀಗೆ ಬಂಧಿಸಲಾದವರ ಮೇಲೆ ‘ದೇಶ ವಿರೋಧಿ’ ಚಟುವಟಿಕೆಯ ಗಂಭೀರ ಆರೋಪಗಳನ್ನೂ ಹೊರಿಸಲಾಗಿದೆ. ಸರ್ಕಾರದ ಇಂತಹ ನಡವಳಿಕೆಗಳನ್ನು ನ್ಯಾಯಾಲಯಗಳು ಕೂಡ ಟೀಕಿಸಿವೆ. ಸರ್ಕಾರದ ಈ ರೀತಿಯ ವರ್ತನೆಯು ಪ್ರಜಾಸತ್ತಾತ್ಮಕ ಅವಕಾಶಗಳನ್ನು ಮೊಟಕು ಮಾಡುತ್ತದೆ ಮತ್ತು ಸರ್ಕಾರವು ಹೆಚ್ಚು ಹೆಚ್ಚು ನಿರಂಕುಶವೂ ಕಾನೂನಿನ ಬಗ್ಗೆ ಗೌರವ ಇಲ್ಲದ್ದೂ ಆಗಲು ಕಾರಣವಾಗುತ್ತದೆ. ಕಾನೂನನ್ನು ರಕ್ಷಿಸುವುದು ಮತ್ತು ಅದನ್ನು ಜಾರಿ ಮಾಡುವುದು ಸರ್ಕಾರದ್ದೇ ಕರ್ತವ್ಯವಾಗಿದೆ. ಆದರೆ, ಸರ್ಕಾರವೇ ಕಾನೂನು ಮೀರಿ ವರ್ತಿಸುತ್ತಿದೆ. ಸರ್ಕಾರದ ಸಂಸ್ಥೆಗಳನ್ನು ದುರ್ಬಳಕೆ ಮಾಡುವ ಮೂಲಕ, ತನ್ನ ಇಷ್ಟಾನಿಷ್ಟಗಳಿಗೆ ತಕ್ಕಂತೆ ಕುಣಿಸುವ ಮೂಲಕ, ರಾಜಕೀಯ ಅಗತ್ಯಗಳಿಗೆ ಬಳಸಿಕೊಳ್ಳುವ ಮೂಲಕ ಸರ್ಕಾರದ ಸಾಂಸ್ಥಿಕ ಚೌಕಟ್ಟನ್ನೇ ನಿರ್ನಾಮ ಮಾಡಲು ಸರ್ಕಾರ ಮುಂದಾಗಿದೆ. ಇದರಿಂದಾಗಿ, ಜನರ ಪ್ರಜಾಸತ್ತಾತ್ಮಕ, ಸಾಂವಿಧಾನಿಕ ಹಕ್ಕುಗಳು ಮೊಟಕಾಗುತ್ತವೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು