ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಶಿಕ್ಷಣ ನೀತಿ: ಆಶಯ ಒಳ್ಳೆಯದು, ಅನುಷ್ಠಾನದ ಹಾದಿ ಸವಾಲಿನದು

Last Updated 30 ಜುಲೈ 2020, 21:09 IST
ಅಕ್ಷರ ಗಾತ್ರ

ದೇಶದ ಶಿಕ್ಷಣ ವ್ಯವಸ್ಥೆಯನ್ನು ಮಹತ್ವದ ಬದಲಾವಣೆಗಳಿಗೆ ಒಳಪಡಿಸುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಗೆ ಕೇಂದ್ರ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ. ಹೊಸ ಶಿಕ್ಷಣ ನೀತಿಯು 34 ವರ್ಷಗಳ ಸುದೀರ್ಘ ಅವಧಿಯ ಬಳಿಕ ಪುನಃ ಅನಾವರಣಗೊಂಡಿದೆ. ಕೆ.ಕಸ್ತೂರಿ ರಂಗನ್‌ ನೇತೃತ್ವದ ಸಮಿತಿಯು ಸಲ್ಲಿಸಿದ್ದ ಕರಡು ನೀತಿಯನ್ನು 2019ರ ಲೋಕಸಭಾ ಚುನಾವಣೆ ಬಳಿಕ ಸಾರ್ವಜನಿಕರ ಅವಗಾಹನೆಗೆಬಿಡುಗಡೆ ಮಾಡಿ, ಪ್ರತಿಕ್ರಿಯೆಗಳನ್ನು ಆಹ್ವಾನಿಸಲಾಗಿತ್ತು. ಅದಕ್ಕೆ ಈಗ ಅನುಮೋದನೆಯ ಮುದ್ರೆ ಬಿದ್ದಿದೆ. 2014ರ ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿ ನೀಡಿದ್ದ ಆಶ್ವಾಸನೆಯು ಈ ಮೂಲಕ ಈಡೇರಿದಂತಾಗಿದೆ. ಶಿಕ್ಷಣ ವ್ಯವಸ್ಥೆಯ ಈಗಿರುವ 10+2 ಮಾದರಿಯನ್ನು 5+3+3+4 ಮಾದರಿಗೆ ಬದಲಿಸುವ ಉದ್ದೇಶವು ಈ ನೀತಿಯ ಪ್ರಧಾನ ಅಂಶಗಳಲ್ಲಿ ಒಂದು. ಪದವಿಪೂರ್ವ ಶಿಕ್ಷಣ ಎಂಬ ಒಂದು ಹಂತವನ್ನು ಕೈಬಿಟ್ಟು, ಶಾಲಾ ಶಿಕ್ಷಣವನ್ನೇ ನಾಲ್ಕು ಹಂತಗಳನ್ನಾಗಿ ವಿಂಗಡಿಸಲಾಗಿದೆ. ಪಠ್ಯ, ಪಠ್ಯಪೂರಕ, ಪಠ್ಯೇತರ ಚಟುವಟಿಕೆಗಳು ಎಂಬ ವಿಭಜನೆಯಿಲ್ಲದೆ, ಈ ಎಲ್ಲವೂ ಪಠ್ಯದ ಭಾಗವೇ ಆಗಿರುವಂತೆ ನೋಡಿಕೊಳ್ಳುವ ಇರಾದೆ ಈ ನೀತಿಯಲ್ಲಿ ಅಡಕಗೊಂಡಿರುವುದು ವಿಶೇಷ. ಇದರಿಂದಾಗಿ ಪ್ರದರ್ಶನ ಕಲೆಗಳು, ಕುಂಬಾರಿಕೆ, ಮರಗೆಲಸದಂತಹ ಕೌಶಲಗಳೂ ಪಠ್ಯದ ಭಾಗವಾಗಲಿವೆ.ಆರನೇ ತರಗತಿಯಿಂದಲೇ ಕಂಪ್ಯೂಟರ್‌ ಕೋಡಿಂಗ್‌ ಮತ್ತು ವೃತ್ತಿ ಕೌಶಲಕ್ಕೆ ಅವಕಾಶ ಕಲ್ಪಿಸುವ ಉದ್ದೇಶವನ್ನು ಈ ಶಿಕ್ಷಣ ನೀತಿಯು ಹೊಂದಿದೆ.ಉನ್ನತ ಶಿಕ್ಷಣಕ್ಕೆ ವಿಷಯ ಆಯ್ಕೆಯಲ್ಲಿ ಹೆಚ್ಚು ಅವಕಾಶ ಇರಲಿರುವುದು, ಪದವಿ ಕೋರ್ಸ್‌ನಿಂದ (ಯು.ಜಿ) ವಿದ್ಯಾರ್ಥಿಗಳು ನಿಗದಿತ ಘಟ್ಟದಲ್ಲಿ ನಿರ್ಗಮಿಸುವುದಕ್ಕೆ ಮತ್ತು ನಿರ್ದಿಷ್ಟ ಅವಧಿಯೊಳಗೆ ಮತ್ತೆ ಕೋರ್ಸ್‌ ಮುಂದುವರಿಸುವುದಕ್ಕೆ ಅವಕಾಶ ಇರುವುದು ಗುಣಾತ್ಮಕ ಅಂಶಗಳು. ಎಂ.ಫಿಲ್‌ ಪದವಿಯನ್ನು ರದ್ದುಗೊಳಿಸುವ ಉದ್ದೇಶಕ್ಕೆ ಸಕಾರಣಗಳು ಇಲ್ಲದೇ ಇಲ್ಲ. ಪಿಎಚ್‌.ಡಿ ಪ್ರಬಂಧಗಳ ಗುಣಮಟ್ಟ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿನ ಬೌದ್ಧಿಕ ಸಂವಾದದ ಮಟ್ಟ ಅಷ್ಟಕ್ಕಷ್ಟೆ. ಅವುಗಳನ್ನು ಎತ್ತರಿಸುವ ಕೆಲಸ ಇನ್ನಾದರೂ ಆಗಬೇಕು.

ಉನ್ನತ ಶಿಕ್ಷಣದ ನಿಯಂತ್ರಣಕ್ಕೆ ಹೊಸ ವ್ಯವಸ್ಥೆ, ಶಿಕ್ಷಕ ತರಬೇತಿ ಕೇಂದ್ರಗಳ ಗುಣಮಟ್ಟ ಸುಧಾರಣೆಗೆ ಕ್ರಮ, ಡಿಜಿಟಲ್‌ ಶೈಕ್ಷಣಿಕ ಸಂಪನ್ಮೂಲ ಅಭಿವೃದ್ಧಿಪಡಿಸಲು ಪ್ರತ್ಯೇಕ ತಂತ್ರಜ್ಞಾನ ಘಟಕ ಸ್ಥಾಪನೆ, ಆರ್‌ಟಿಇ ಅವಕಾಶ ವಿಸ್ತರಣೆ, ಶಿಕ್ಷಣಕ್ಕೆ ಜಿಡಿಪಿಯ ಶೇ 6ರಷ್ಟು ಹಣ ವಿನಿಯೋಗಿಸುವ ಗುರಿ... ಇಂತಹ ಹಲವಾರು ಸುಧಾರಣಾ ಕ್ರಮಗಳನ್ನು ಈ ನೀತಿಯು ಒಳಗೊಂಡಿದೆ ಮತ್ತು ಇವೆಲ್ಲವೂ ಸದಾಶಯದಿಂದ ಕೂಡಿವೆ. ಕಾಲಕ್ಕೆ ತಕ್ಕಂತೆ ಶಿಕ್ಷಣದ ಸ್ವರೂಪ ಬದಲಾಗಬೇಕಾ
ಗಿದೆ ಎಂಬುದು ಒಪ್ಪತಕ್ಕ ವಿಷಯ. ಆದರೆ, ನೀತಿ ರೂಪಿಸಿದ ಮಾತ್ರಕ್ಕೆ ಇವೆಲ್ಲ ಸಾಧ್ಯವಾಗುವುದಿಲ್ಲ. ಅದಕ್ಕೆ ಬದ್ಧತೆ ಬೇಕು, ಸಂಪನ್ಮೂಲ ಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸಮನ್ವಯ ಇರಬೇಕು. ಶಿಕ್ಷಣ ನಮ್ಮ ಸಂವಿಧಾನದ ಸಮವರ್ತಿ ಪಟ್ಟಿಯಲ್ಲಿದೆ. ಹೀಗಾಗಿ, ಜವಾಬ್ದಾರಿಯು ಕೇಂದ್ರ ಮತ್ತು ರಾಜ್ಯಗಳ ನಡುವೆ ಹಂಚಿಹೋಗಿದೆ.ಬೋಧನಾ ಮಾಧ್ಯಮದ ವಿಚಾರವನ್ನೇ ನಿದರ್ಶನವಾಗಿ ತೆಗೆದುಕೊಂಡರೆ, ಅದಕ್ಕಿರುವ ತೊಡಕುಗಳು ಒಂದೆರಡಲ್ಲ. ಬೋಧನಾ ಮಾಧ್ಯಮವುಅವಕಾಶ ಇದ್ದಲ್ಲಿ ಕೊನೇಪಕ್ಷ 5ನೇ ತರಗತಿಯವರೆಗೆ, ಸಾಧ್ಯವಿದ್ದಲ್ಲಿ 8ನೇ ತರಗತಿಯವರೆಗೆ ಹಾಗೂ ಆನಂತರವೂ ಮನೆಭಾಷೆ, ಮಾತೃಭಾಷೆ, ಸ್ಥಳೀಯ ಭಾಷೆ ಅಥವಾ ಪ್ರಾದೇಶಿಕ ಭಾಷೆಯಲ್ಲಿ ಇರಬೇಕು ಎಂದು ಹೊಸ ಶಿಕ್ಷಣ ನೀತಿ ಹೇಳಿದೆ. ‘ಸಾಧ್ಯವಿದ್ದಲ್ಲಿ’ ಎಂಬ ಪದವೇ ಜಾರಿಕೊಳ್ಳಲು ಅನುವಾಗಿಸುತ್ತದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ದಶಕಗಳಿಂದ ಹಗ್ಗಜಗ್ಗಾಟ ನಡೆದಿದೆ. ಸುಪ್ರೀಂ ಕೋರ್ಟ್‌ ಮೆಟ್ಟಿಲು ಹತ್ತಲಾಗಿದೆ. ಕಲಿಕೆ ಎನ್ನುವುದು ಅಭಿವ್ಯಕ್ತಿಯ ಒಂದು ಭಾಗ. ಮಗು ಯಾವ ಭಾಷೆಯಲ್ಲಿ ಕಲಿಯಬೇಕು ಎನ್ನುವುದನ್ನು ಸರ್ಕಾರ ನಿರ್ಧರಿಸುವಂತಿಲ್ಲ, ಅದು ಮಗು ಮತ್ತು ಪೋಷಕರಿಗೆ ಸಂಬಂಧಿಸಿದ ವಿಷಯ ಎಂದು ಸಂವಿಧಾನ ಪೀಠ ತೀರ್ಪು ನೀಡಿದೆ. ಪ್ರಾಥಮಿಕ ಹಂತದಲ್ಲಿ ಮಕ್ಕಳು ತಮ್ಮ ಮನೆಭಾಷೆ ಇಲ್ಲವೇ ಪರಿಸರದ ಭಾಷೆಯಲ್ಲಿ ಕಲಿಯುವುದರಿಂದ ಕಲಿಕಾ ಪ್ರಕ್ರಿಯೆಗೆ ಭದ್ರ ಬುನಾದಿ ಒದಗುತ್ತದೆ ಎಂಬುದು ಜಗತ್ತಿನಾದ್ಯಂತ ಶಿಕ್ಷಣ ತಜ್ಞರ ಅಭಿಮತ. ಆದರೆ, ಅದಕ್ಕೆ ಕಿವಿಗೊಡುವವರ ಸಂಖ್ಯೆ ವಿರಳಾತಿವಿರಳ. ಪರಿಸರದ ಭಾಷೆಯಲ್ಲಿ ಶಿಕ್ಷಣ ಎಂಬ ಪರಿಕಲ್ಪನೆ ಇಂಗ್ಲಿಷ್‌ ಮಾಧ್ಯಮ ಶಾಲೆಗಳಲ್ಲಿ ಕಲಿಯುವ ಗೀಳಿನಲ್ಲಿ ಮಹತ್ವ ಕಳೆದುಕೊಂಡಿದೆ. ಇಂಗ್ಲಿಷ್‌ ಮಾಧ್ಯಮ ಶಾಲೆಗಳಿಗೆ ಈಗ ನಮ್ಮ ಸರ್ಕಾರವೇ ಒತ್ತಾಸೆಯಾಗಿ ನಿಂತಿದೆ. ನೆರೆಯ ಆಂಧ್ರಪ್ರದೇಶ ಸರ್ಕಾರ ಕೂಡ ಪ್ರಾಥಮಿಕ ಹಂತದಿಂದಲೇ ಇಂಗ್ಲಿಷ್‌ ಮಾಧ್ಯಮ ಅಳವಡಿಸುವ ನಿರ್ಧಾರ ಕೈಗೊಂಡಿದೆ. ಪೋಷಕರ ಬೇಡಿಕೆಗೆ ಸರ್ಕಾರಗಳು ಸ್ಪಂದಿಸತೊಡಗಿವೆ. ಆಡಳಿತದ ಚುಕ್ಕಾಣಿ ಹಿಡಿಯುವ ಕೈ ಬದಲಾದ ಕೂಡಲೇ ನೀತಿಗಳೂ ಬದಲಾಗುತ್ತವೆ. ಅದಕ್ಕೆ ಮಕ್ಕಳು ಪ್ರಯೋಗಪಶುಗಳಾಗುವುದು ಬೇಡ. ಪರಿಸರದ ಭಾಷೆಯಲ್ಲೇ ಮಕ್ಕಳಿಗೆ ಶಿಕ್ಷಣ ಸಿಗಬೇಕು ಎಂಬ ಬದ್ಧತೆ ಇದ್ದರೆ, ಅದಕ್ಕೆ ಅಡೆತಡೆಯಾಗಿರುವ ಕಾನೂನಿನ ಮತ್ತು ಸಾಂವಿಧಾನಿಕ ಅಂಶಗಳು ಮೊದಲು ನಿವಾರಣೆಯಾಗಬೇಕು. ಕೇಂದ್ರ ಈ ದಿಸೆಯಲ್ಲಿ ಗಮನಹರಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT