ಶುಕ್ರವಾರ, ಸೆಪ್ಟೆಂಬರ್ 17, 2021
22 °C

ಸಂಪಾದಕೀಯ: ಆರ್ಥಿಕ ಉತ್ತೇಜನ ಸಾಲದು-ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಬೇಕು

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಕೊರೊನಾ ವೈರಾಣುವಿನ ಏಟಿನಿಂದ ಅರ್ಥವ್ಯವಸ್ಥೆಯನ್ನು ಪಾರು ಮಾಡಲು ಕೇಂದ್ರ ಸರ್ಕಾರವು ಹಂತ ಹಂತವಾಗಿ ಘೋಷಿಸಿರುವ ಉತ್ತೇಜನಾ ಕ್ರಮಗಳನ್ನು ಪರಿಶೀಲನೆಗೆ ಒಳಪಡಿಸಿರುವ ಸಂಸತ್ತಿನ ಸ್ಥಾಯಿ ಸಮಿತಿಯೊಂದು, ‘ಕ್ರಮಗಳು ಅಗತ್ಯಕ್ಕೆ ಅನುಗುಣವಾಗಿ ಇಲ್ಲ’ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದೆ. ಕೊರೊನಾ ಎರಡನೆಯ ಅಲೆಗೆ ಮೊದಲು ಆರ್ಥಿಕತೆಯಲ್ಲಿ ಕಾಣಿಸುತ್ತಿದ್ದ ಚಲನಶೀಲ ಸ್ಥಿತಿ, ನಂತರದಲ್ಲಿ ಆಗಿರುವ ಬದಲಾವಣೆಗಳನ್ನು ಗಮನಿಸಿದರೆ ಸಮಿತಿಯ ಅಭಿಪ್ರಾಯವು ಸರಿಯಾಗಿಯೇ ಇದೆ ಎಂದು ಅನಿಸುತ್ತದೆ. ಸರ್ಕಾರ ಘೋಷಿಸಿದ ಉತ್ತೇಜನಾ ಕ್ರಮಗಳು ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ (ಎಂಎಸ್‌ಎಂಇ) ವಲಯದ ಉದ್ದಿಮೆಗಳ ಮೇಲೆ ಮಾಡಿರುವ ಪರಿಣಾಮ ಏನು ಎಂಬ ಬಗ್ಗೆ ಕೈಗಾರಿಕೆಗಳಿಗೆ ಸಂಬಂಧಿಸಿದ ಸಂಸತ್ ಸ್ಥಾಯಿ ಸಮಿತಿಯು ಅಧ್ಯಯನ ನಡೆಸಿದೆ. ಸರ್ಕಾರದ ಕ್ರಮಗಳು ಉದ್ದಿಮೆಗಳಿಗೆ ಸಾಲವನ್ನು ಕೊಡುವುದರತ್ತ ಹೆಚ್ಚು ಗಮನ ನೀಡಿವೆ. ಆದರೆ, ಮಾರುಕಟ್ಟೆಯಲ್ಲಿ ಬೇಡಿಕೆಯನ್ನು ತಕ್ಷಣಕ್ಕೆ ಸೃಷ್ಟಿಸುವತ್ತ ಈ ಕ್ರಮಗಳು ಸೂಕ್ತ ಗಮನ ನೀಡಿಲ್ಲ ಎನ್ನುವ ಅಭಿಪ್ರಾಯ ಸಮಿತಿಯದ್ದು. ಕೊರೊನಾ ವೈರಾಣು ಹರಡುವುದನ್ನು ತಡೆಯುವ ಉದ್ದೇಶದಿಂದ ಜಾರಿಗೆ ತಂದ ಲಾಕ್‌ಡೌನ್‌ ಪರಿಣಾಮವಾಗಿ, ಮಾರುಕಟ್ಟೆಗಳು ಬಾಗಿಲು ಹಾಕಿದವು. ಉತ್ಪಾದನಾ ವಲಯದ ಉದ್ದಿಮೆಗಳಿಗೆ ತಮ್ಮ ಉತ್ಪನ್ನಗಳನ್ನು ಮಾರಲು ಅವಕಾಶ ತೀರಾ ಕ್ಷೀಣಿಸಿತು. ಇದರಿಂದಾಗಿ ಸಂಘಟಿತ ಹಾಗೂ ಅಸಂಘಟಿತ ವಲಯಗಳ ಲಕ್ಷಾಂತರ ಜನ ಉದ್ಯೋಗ ಕಳೆದುಕೊಂಡರು. ಉದ್ಯೋಗ ಕಳೆದುಕೊಂಡವರ ಕೊಳ್ಳುವ ಶಕ್ತಿ ಉಡುಗಿಹೋಯಿತು. ಮಾರುಕಟ್ಟೆಯಲ್ಲಿ ವಸ್ತುಗಳಿಗೆ, ಸೇವೆಗಳಿಗೆ ಬೇಡಿಕೆ ಕುಸಿಯಿತು. ನೆರೆಹೊರೆಯವರು ಕೆಲಸ ಕಳೆದುಕೊಳ್ಳುತ್ತಿದ್ದುದನ್ನು ನೋಡಿದ, ಅರ್ಥವ್ಯವಸ್ಥೆ ಅಸ್ಥಿರಗೊಂಡ ಸ್ಥಿತಿಯನ್ನು ಅನುಭವಿಸಿದ ಇತರ ಅನೇಕರು ತಮ್ಮ ಖರ್ಚುಗಳನ್ನು ಗಮನಾರ್ಹವಾಗಿ ತಗ್ಗಿಸಿದರು. ಇದರಿಂದಾಗಿ ಬೇಡಿಕೆಯ ಮೇಲೆ ಪರಿಣಾಮ ಉಂಟಾಯಿತು. ವೇತನ ಕಡಿತ, ಆದಾಯ ಕುಸಿತದ ಬಿಸಿ ಅನುಭವಿಸಿದವರು ತೀರಾ ಅಗತ್ಯವಲ್ಲದ ವಸ್ತುಗಳ ಖರೀದಿಯನ್ನು ಸಹಜವಾಗಿಯೇ ಕಡಿಮೆ ಮಾಡಿದರು. ಇದು ಕೂಡ ಮಾರುಕಟ್ಟೆಯ ಚೈತನ್ಯವನ್ನು ಕುಗ್ಗಿಸಿತು. ದೇಶದ ಅರ್ಥವ್ಯವಸ್ಥೆ ಇಂದು ಎದುರಿಸುತ್ತಿರುವ ಸಮಸ್ಯೆಯ ಸ್ಥೂಲ ವಿವರಣೆ ಇದು. ಸಮಸ್ಯೆಯು ಇಷ್ಟೇ ಅಲ್ಲ; ಸಮಸ್ಯೆಯು ‘ಬೇಡಿಕೆ’ಗೆ ಸೀಮಿತವಾಗಿಲ್ಲ.

ತಯಾರಿಕೆ ಹಾಗೂ ಪೂರೈಕೆಯಲ್ಲಿಯೂ ತೀವ್ರ ಬಿಕ್ಕಟ್ಟುಗಳು ಖಂಡಿತ ಇವೆ. ಆದರೆ, ಬೇಡಿಕೆಯನ್ನು ಹೆಚ್ಚಿಸುವ ಮೂಲಕ ತಯಾರಿಕೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ತಕ್ಷಣದಲ್ಲಿ ಪರಿಹಾರ ಕಂಡುಕೊಳ್ಳಬಹುದು ಎಂಬ ಅಭಿಪ್ರಾಯವನ್ನು ಅರ್ಥಶಾಸ್ತ್ರಜ್ಞರಲ್ಲಿ ಹಲವರು ವ್ಯಕ್ತಪಡಿಸಿದ್ದಾರೆ. ಇದು ಸಾಧ್ಯ ವಾಗಬೇಕು ಎಂದಾದರೆ, ಆರ್ಥಿಕವಾಗಿ ದುರ್ಬಲರಾದವರಿಗೆ ನೇರ ನಗದು ವರ್ಗಾವಣೆಯಂತಹ ಯೋಜನೆಗಳನ್ನು ರೂಪಿಸಬೇಕಾಗುತ್ತದೆ. ‘ಜ್ಯಾಮ್‌’ (ಜನಧನ ಖಾತೆ – ಆಧಾರ್‌ ಸಂಖ್ಯೆ – ಮೊಬೈಲ್‌ ಸಂಖ್ಯೆ ಒಂದಕ್ಕೊಂದು ಜೋಡಣೆ ಆಗಿರುವುದು) ಸೌಲಭ್ಯ ಸರ್ಕಾರದ ಬಳಿ ಇರುವ ಕಾರಣ, ಆರ್ಥಿಕವಾಗಿ ದುರ್ಬಲರಾಗಿರುವವರನ್ನು ಗುರುತಿಸಿ, ಅವರಿಗೆ ಹಣಕಾಸಿನ ನೆರವು ನೀಡುವುದು ತಾಂತ್ರಿಕವಾಗಿ ಅಸಾಧ್ಯದ ಕೆಲಸ ಅಲ್ಲ.

ಲಾಕ್‌ಡೌನ್‌ ಮತ್ತು ಸಾಂಕ್ರಾಮಿಕದ ಪರಿಣಾಮವಾಗಿ ಎಂಎಸ್ಎಂಇ ವಲಯಕ್ಕೆ ಆಗಿರುವ ನಷ್ಟ ಎಷ್ಟು ಎಂಬುದನ್ನು ತಾನು ಲೆಕ್ಕಹಾಕಿಲ್ಲ ಎಂದು ಕೇಂದ್ರ ಸರ್ಕಾರವು ಸಮಿತಿಗೆ ಹೇಳಿದೆ ಎಂದು ವರದಿಯಾಗಿದೆ. ಸಮಿತಿಯು ಈ ನಷ್ಟದ ಪ್ರಮಾಣ ಎಷ್ಟು ಎಂಬುದನ್ನು ಅಂದಾಜಿಸುವಂತೆ ಕೇಂದ್ರಕ್ಕೆ ಸೂಚಿಸಿದೆ. ಎಂಎಸ್‌ಎಂಇ ವಲಯಕ್ಕೆ ನೀಡಲಾಗಿರುವ ಸಾಲದ ಪೈಕಿ ಶೇಕಡ 25ರಷ್ಟು ಮರುಪಾವತಿ ಆಗದಿರಬಹುದು ಎಂಬ ಭೀತಿಯನ್ನು ಈ ಉದ್ಯಮ ವಲಯವನ್ನು ಪ್ರತಿನಿಧಿಸುವ ಸಂಘಟನೆಗಳು ಸಮಿತಿಗೆ ತಿಳಿಸಿವೆ. ಈ ಪ್ರಮಾಣದ ಸಾಲ ಮರುಪಾವತಿ ಆಗದಿದ್ದರೆ ಬ್ಯಾಂಕ್‌ಗಳ ಮೇಲೆ ಸೃಷ್ಟಿಯಾಗುವ ಒತ್ತಡ ಯಾವ ಬಗೆಯದು, ಬಂಡವಾಳ ಮಾರುಕಟ್ಟೆಗಳು ಯಾವ ಬಗೆಯಲ್ಲಿ ಪ್ರತಿಕ್ರಿಯೆ ನೀಡಬಹುದು ಎಂಬುದನ್ನೆಲ್ಲ ಸಂಬಂಧಪಟ್ಟ ಸಚಿವಾಲಯಗಳು ಪರಿಶೀಲಿಸುವುದು ಒಳಿತು. ಕೇಂದ್ರ ಸರ್ಕಾರವು ಘೋಷಿಸಿರುವ ತುರ್ತು ಸಾಲ ಖಾತರಿ ಯೋಜನೆಯ ಪ್ರಯೋಜನವು ಸಣ್ಣ ಪ್ರಮಾಣದ ಉದ್ಯಮಗಳಿಗೆ ಸರಿಯಾಗಿ ಸಿಗುವಂತೆಯೂ ಸರ್ಕಾರಗಳು ನಿಗಾ ವಹಿಸಬೇಕು. ಬೃಹತ್ ಉದ್ಯಮಗಳಿಗೆ ಬಂಡವಾಳವನ್ನು ಮಾರುಕಟ್ಟೆಯಿಂದ ತರುವ ಸಾಮರ್ಥ್ಯ ಇರುತ್ತದೆ. ಆದರೆ ಸಣ್ಣ ಉದ್ಯಮಗಳಿಗೆ ಅಂತಹ ಶಕ್ತಿ ಸಾಮಾನ್ಯವಾಗಿ ಇರುವುದಿಲ್ಲ. ಈಗಿನ ಸ್ಥಿತಿಯಲ್ಲಿ ಸಣ್ಣ ಉದ್ದಿಮೆಗಳು ದುಡಿಯುವ ಬಂಡವಾಳಕ್ಕೂ ಬ್ಯಾಂಕ್‌ಗಳನ್ನೇ ನೆಚ್ಚಿಕೊಂಡಿರುವ ಸಾಧ್ಯತೆ ಇದೆ. ಸಣ್ಣ ಉದ್ದಿಮೆಗಳಿಗೆ ಸಾಲ ತ್ವರಿತವಾಗಿ ಸಿಗುವಂತೆ ಮಾಡುವ, ಆ ಸಾಲವು ಅನುತ್ಪಾದಕ ಆಗದಂತೆ, ಬ್ಯಾಂಕ್‌ಗಳಿಗೆ ಹೊರೆ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿಯೂ ಸರ್ಕಾರದ ಮೇಲೆ ಇದೆ. ಮಾರುಕಟ್ಟೆಯಲ್ಲಿ ಉತ್ಪನ್ನಗಳಿಗೆ, ಸೇವೆಗಳಿಗೆ ಬೇಡಿಕೆ ಹೆಚ್ಚು ಮಾಡುವುದು ಬಹುಶಃ ಈ ಸಮಸ್ಯೆಗೆ ಒಂದು ದೊಡ್ಡ ಉತ್ತರ ಆಗಬಹುದು. ಭಾರತವು ಮುಕ್ತ ಮಾರುಕಟ್ಟೆ ವ್ಯವಸ್ಥೆಯನ್ನು ಒಪ್ಪಿಕೊಂಡು ಮೂರು ದಶಕಗಳು ಕಳೆದಿವೆ. ಈ ವ್ಯವಸ್ಥೆಯಲ್ಲಿ ಜನ ಬಡವರಾಗಿದ್ದರೆ, ಅವರಿಗೆ ಕೊಳ್ಳುವ ಶಕ್ತಿ ಇಲ್ಲದಿದ್ದರೆ ಸರ್ಕಾರಗಳು ಶ್ರೀಮಂತವಾಗಿ ಉಳಿಯಲು ಸಾಧ್ಯವಿಲ್ಲ. ಸರ್ಕಾರಗಳ ಬಳಿ ಶ್ರೀಮಂತಿಕೆ ಇಲ್ಲದಿದ್ದರೆ ಅಭಿವೃದ್ಧಿ ಕಾರ್ಯಗಳು ವೇಗ ಕಳೆದುಕೊಳ್ಳುತ್ತವೆ. ಹಾಗಾಗಿ, ಜನರ ಕೈಯಲ್ಲಿ ಹಣ ಹೆಚ್ಚು ಚಲಾವಣೆ ಆಗುವಂತೆ ಮಾಡಬೇಕಿರುವುದು ಈ ಹೊತ್ತಿನ ಜರೂರುಗಳಲ್ಲಿ ಒಂದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು