ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳ ಗ್ರಾಮ ವಾಸ್ತವ್ಯ ತೋರಿಕೆಯ ನಡೆ ಆಗದಿರಲಿ

ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಬೇಕಾದ ಸ್ಥಿತಿ ತಲೆದೋರಿರುವುದು ಏಕೆ ಎಂಬುದರ ಕುರಿತು ಅಧಿಕಾರಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು
Last Updated 22 ಜನವರಿ 2021, 19:30 IST
ಅಕ್ಷರ ಗಾತ್ರ

ಕಂದಾಯ ಇಲಾಖೆಯ ಅಧಿಕಾರಿಗಳು ರಾಜ್ಯದಲ್ಲಿ ತಿಂಗಳಿಗೊಮ್ಮೆ ಗ್ರಾಮ ವಾಸ್ತವ್ಯ ಮಾಡುವುದನ್ನು ಇಲಾಖೆ ಕಡ್ಡಾಯ ಮಾಡಿದೆ. ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಎಂಬ ಈ ಕಾರ್ಯಕ್ರಮ ಫೆಬ್ರುವರಿ ಮೂರನೇ ಶನಿವಾರದಿಂದ ಆರಂಭವಾಗುವುದು ಎಂದು ಕಂದಾಯ ಸಚಿವರು ಹೇಳಿದ್ದಾರೆ. ಜಿಲ್ಲಾಧಿಕಾರಿಗಳು, ತಹಶೀಲ್ದಾರ್, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗರು, ಭೂದಾಖಲೆಗಳ ಉಪನಿರ್ದೇಶಕರು, ಸಹಾಯಕ ನಿರ್ದೇಶಕರು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಗ್ರಾಮದಲ್ಲಿ ಇದ್ದು, ಜನರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸಬೇಕು. ಈ ವೇಳೆ ಅಧಿಕಾರಿಗಳು ಗ್ರಾಮದ ಗಣ್ಯರ ಮನೆಯಲ್ಲಿ ಊಟ ಮಾಡಬಾರದು. ಸರ್ಕಾರಿ ಶಾಲೆ, ಅಂಗನವಾಡಿ ಅಥವಾ ವಿದ್ಯಾರ್ಥಿ ನಿಲಯಗಳಲ್ಲಿ ಊಟ ಮಾಡಿ, ಅಲ್ಲಿನ ಸ್ಥಿತಿಗತಿಗಳ ಬಗ್ಗೆ ಸರ್ಕಾರಕ್ಕೆ ವರದಿ ನೀಡಬೇಕು ಎಂದೂ ಸಚಿವರು ಸೂಚಿಸಿದ್ದಾರೆ. ಕಂದಾಯ ಸಚಿವರ ಈ ಆಲೋಚನೆ ಒಳ್ಳೆಯದು. ಆದರೆ ಇದೊಂದು ತೋರಿಕೆಯ ಕಾರ್ಯಕ್ರಮ ಆಗಬಾರದು. ಅಧಿಕಾರಿಗಳ ದಂಡು, ಜಾತ್ರೆಯ ರೀತಿ ಗ್ರಾಮಕ್ಕೆ ಭೇಟಿ ನೀಡಿ, ಕಾಟಾಚಾರಕ್ಕೆ ಒಂದು ಸಭೆ ಮಾಡಿ ಬರಬಾರದು. ಅಧಿಕಾರಿಗಳು ಗ್ರಾಮ ವಾಸ್ತವ್ಯ ಮಾಡುವುದರಿಂದ ಗ್ರಾಮಸ್ಥರಿಗೆ ಅನುಕೂಲ ಆಗಬೇಕೇ ವಿನಾ ಅನನುಕೂಲ ಆಗಬಾರದು. ಸರ್ಕಾರಿ ಹಣ ಪೋಲಾಗಬಾರದು. ಜನ ಇದ್ದಲ್ಲಿಗೇ ಹೋಗಿ ಅವರ ಸಮಸ್ಯೆಗಳನ್ನು ಅರಿತು ಅವನ್ನು ಬಗೆಹರಿಸುವುದು ಸರ್ಕಾರಿ ಅಧಿಕಾರಿಗಳ ಕರ್ತವ್ಯ. ಜನರ ತೆರಿಗೆ ಹಣದಲ್ಲಿ ಅವರಿಗೆ ವೇತನ ನೀಡುವುದು ಕೂಡ ಇದೇ ಉದ್ದೇಶದಿಂದ. ಇದನ್ನು ಅಧಿಕಾರಿಗಳು ಮೊದಲು ಅರ್ಥ ಮಾಡಿಕೊಳ್ಳಬೇಕು. ಪಿಂಚಣಿ, ವಿಧವಾ ವೇತನ, ಬಿಪಿಎಲ್ ಕಾರ್ಡ್, ಆಶ್ರಯ ಮನೆ, ಆಧಾರ್ ಕಾರ್ಡ್, ಮತದಾರರ ಪಟ್ಟಿಗೆ ಸಂಬಂಧಿಸಿದ ಸಮಸ್ಯೆಗಳಲ್ಲದೆ, ಸರ್ಕಾರಿ ಜಮೀನು ಒತ್ತುವರಿ, ಅತಿವೃಷ್ಟಿ, ಅನಾವೃಷ್ಟಿಯ ಸ್ಥಿತಿಗತಿ ಬಗ್ಗೆಯೂ ಪರಿಶೀಲನೆ ನಡೆಸಬೇಕು ಎಂದು ಸಚಿವರು ಸೂಚಿಸಿದ್ದಾರೆ. ಇವೆಲ್ಲವೂ ಸರ್ಕಾರಿ ನೌಕರರು ಮತ್ತು ಅಧಿಕಾರಿಗಳು ನಿತ್ಯ ಮಾಡಲೇಬೇಕಾದ ಕೆಲಸಗಳು. ಇವನ್ನು ಮಾಡುವುದಕ್ಕೆ ತಿಂಗಳಿಗೆ ಒಂದು ದಿನ ನಿಗದಿ ಮಾಡುವುದೇ ನಮ್ಮ ವ್ಯವಸ್ಥೆಯ ಲೋಪವನ್ನು ಎತ್ತಿ ತೋರಿಸುತ್ತದೆ. ಸಂಬಂಧಪಟ್ಟ ಅಧಿಕಾರಿಗಳು ತಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದರೆ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಎಂಬ ಕಾರ್ಯಕ್ರಮ ಮಾಡುವ ಅಗತ್ಯ ಬೀಳುತ್ತಿರಲಿಲ್ಲ. ಇಂತಹ ಕಾರ್ಯಕ್ರಮ ಆಯೋಜಿಸುವಂತಹ ಸ್ಥಿತಿ ತಲೆದೋರಿರುವುದು ತಮ್ಮ ಕಾರ್ಯವೈಖರಿಗೆ ಹಿಡಿದ ಕನ್ನಡಿ ಎಂದು ಅಧಿಕಾರಿಗಳು ಭಾವಿಸಬೇಕು. ಈವರೆಗೆ ಮಾಡಿದ ತಪ್ಪನ್ನು ಸರಿಪಡಿಸಿಕೊಂಡು, ಜನರಿಗೆ ಸಿಗಬೇಕಾದ ಸೌಕರ್ಯ ಇನ್ನು ಮುಂದಾದರೂ ಸಕಾಲಕ್ಕೆ ದೊರೆಯುವಂತೆ ಮಾಡಬೇಕು. ತಿಂಗಳಲ್ಲಿ ಒಂದು ದಿನ ಜನರ ಸಮಸ್ಯೆ ಆಲಿಸಿದರೆ ಸಾಕು ಎಂಬ ಮನೋಭಾವ ಮೂಡಬಾರದು.

ಪಿಂಚಣಿ, ವಿಧವಾ ವೇತನ, ವೃದ್ಧಾಪ್ಯ ವೇತನ ಪಡೆಯಲು ಅಗತ್ಯವಾದ ದಾಖಲೆ ಮಾಡಿಸಿಕೊಳ್ಳಲು ಇಲಾಖೆಯಿಂದ ಇಲಾಖೆಗೆ ಅಲೆಯಬೇಕಾದ ಪರಿಸ್ಥಿತಿ ಇದೆ. ಇಲ್ಲಿ ಮಧ್ಯವರ್ತಿಗಳ ಕಾಟವೂ ಇದೆ. ಭ್ರಷ್ಟಾಚಾರವೂ ಇದೆ. ಇವೆಲ್ಲವನ್ನೂ ತಪ್ಪಿಸಬೇಕು. ಅಂದಾಗಮಾತ್ರ ಈ ಕಾರ್ಯಕ್ರಮಕ್ಕೆ ಒಂದು ಅರ್ಥ ಬರುತ್ತದೆ. ಇಲ್ಲವಾದರೆ ಇದು ಕೂಡ ಸರ್ಕಾರದ ಹಲವಾರು ಕಾರ್ಯಕ್ರಮಗಳಂತೆ ಪ್ರದರ್ಶನದ, ದುಂದುವೆಚ್ಚದ ಕಾರ್ಯಕ್ರಮವಾಗುತ್ತದೆ. ಈ ಹಿಂದೆ ಕೂಡ ಕೆಲವು ಜಿಲ್ಲಾಧಿಕಾರಿಗಳು ಗ್ರಾಮ ವಾಸ್ತವ್ಯದ ಕಾರ್ಯಕ್ರಮ ಮಾಡಿದ್ದರು. ಮುಖ್ಯಮಂತ್ರಿಯೇ ಗ್ರಾಮ ವಾಸ್ತವ್ಯ ಮಾಡಿದ ಉದಾಹರಣೆಯೂ ನಮ್ಮ ಮುಂದೆ ಇದೆ. ಈ ಹಿಂದಿನ ಸರ್ಕಾರ ಜನಸಂಪರ್ಕ ಸಭೆ ಮಾಡಿತ್ತು. ಆದರೂ ಗ್ರಾಮಾಂತರ ಮಟ್ಟದಲ್ಲಿ ಸಮಸ್ಯೆಗಳು ಕಡಿಮೆಯಾಗಿಲ್ಲ. ಪರಿಸ್ಥಿತಿ ಸುಧಾರಿಸಿಲ್ಲ. ಜನರ ಅಲೆದಾಟ ಅಂತ್ಯ ಕಂಡಿಲ್ಲ. ಇದಕ್ಕೆ ಏನು ಕಾರಣ ಎನ್ನುವುದನ್ನು ತಿಳಿದುಕೊಂಡು ಹೆಜ್ಜೆ ಇಟ್ಟರೆ, ಹಳ್ಳಿಗಳತ್ತ ನಡೆ ಎನ್ನುವುದಕ್ಕೆ ಒಂದು ಅರ್ಥ ಬರುತ್ತದೆ. ಇಲ್ಲವಾದರೆ ಎಲ್ಲವೂ ಹೊಳೆಯಲ್ಲಿ ಹುಣಿಸೆಹಣ್ಣು ತೊಳೆದ ಹಾಗೆ ಆಗುತ್ತದೆ. ಅಧಿಕಾರಿಗಳು ಈಗಲಾದರೂ ಎಚ್ಚೆತ್ತುಕೊಂಡು ಜನಸಾಮಾನ್ಯರ ದೈನಂದಿನ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಮಾಡಬೇಕು. ಗ್ರಾಮ ವಾಸ್ತವ್ಯದಲ್ಲಿ ಬಂದ ಅರ್ಜಿಗಳ ವಿಲೇವಾರಿಗೆ ಸೂಕ್ತ ವ್ಯವಸ್ಥೆಯನ್ನೂ ಮಾಡಿಕೊಳ್ಳಬೇಕು. ಆಗ ಜನರಿಗೆ ನೆಮ್ಮದಿ ಸಿಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT