ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಹರೂ ಚಿತ್ರ ಕೈಬಿಟ್ಟಿರುವುದು ಸಣ್ಣತನ; ಮೊದಲ ಪ್ರಧಾನಿ ಇಲ್ಲದ ಚರಿತ್ರೆ ಅಪೂರ್ಣ

Last Updated 15 ಆಗಸ್ಟ್ 2022, 19:01 IST
ಅಕ್ಷರ ಗಾತ್ರ

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಕುರಿತು ರಾಜ್ಯ ಸರ್ಕಾರ ನೀಡಿರುವ ಜಾಹೀರಾತಿನಲ್ಲಿ ಜವಾಹರಲಾಲ್‌ ನೆಹರೂ ಅವರ ಭಾವಚಿತ್ರ–ವಿವರ ಇಲ್ಲದಿರುವಂತೆ ನೋಡಿಕೊಂಡಿರುವುದು ಸಣ್ಣತನದ ಹಾಗೂ ನಾಚಿಕೆಗೇಡಿನ ಕೆಲಸ. ರಾಷ್ಟ್ರದ ಹಾಗೂ ರಾಜ್ಯದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳನ್ನು ಈ ಜಾಹೀರಾತಿನಲ್ಲಿ ಪ್ರಕಟಿಸಿ, ಅವರನ್ನು ಸ್ಮರಿಸಲಾಗಿದೆ.

ರಾಷ್ಟ್ರಮಟ್ಟದ ಸ್ವಾತಂತ್ರ್ಯ ಹೋರಾಟಗಾರರ ಸಾಲಿನಲ್ಲಿ ಮಹಾತ್ಮ ಗಾಂಧಿ, ಸುಭಾಷ್‌ ಚಂದ್ರ ಬೋಸ್‌, ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಸೇರಿದಂತೆ ಹಲವರ ಚಿತ್ರಗಳಿವೆ. ಆದರೆ, ಆ ಚಿತ್ರಗಳ ಸಾಲಿನಲ್ಲಿ ನೆಹರೂ ಅವರ ಚಿತ್ರ ಇಲ್ಲ. ಜಾಹೀರಾತಿನ ಮೇಲ್ಭಾಗದ ಒಂದು ತುದಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಗುಂಪಿನಲ್ಲಿರುವ ನೆಹರೂ ಅವರ ರೇಖಾಚಿತ್ರವು ಅವರನ್ನು ಕೆಳಗಿನ ಭಾವಚಿತ್ರಗಳ ಸಾಲಿನಿಂದ ಹೊರಗಿಟ್ಟಿರುವುದನ್ನು ಖಂಡಿತವಾಗಿಯೂ ಸರಿದೂಗಿಸುವುದಿಲ್ಲ. ಬದಲು, ಆ ಪ್ರಮಾದವು ಇನ್ನಷ್ಟು ಎದ್ದು ಕಾಣುವಂತೆ ಮಾಡುತ್ತದೆ. ನೆಹರೂ ಅವರ ಭಾವಚಿತ್ರವನ್ನಷ್ಟೇ ಕೈಬಿಟ್ಟಿಲ್ಲ. ದಕ್ಷಿಣ ಭಾರತದ ನೇತಾರರಲ್ಲಿ ಯಾರೊಬ್ಬರ ಭಾವಚಿತ್ರವೂ ಅದರಲ್ಲಿ ಸ್ಥಾನ ಪಡೆದಿಲ್ಲ. ಹಾಗೆಯೇ, ಇನ್ನೊಂದು ತುದಿಯಲ್ಲಿ ಝಾನ್ಸಿರಾಣಿ ಲಕ್ಷ್ಮೀಬಾಯಿ ಅವರ ಚಿತ್ರಕ್ಕೆ ಸ್ಥಾನ ಕಲ್ಪಿಸಿರುವುದನ್ನು ಬಿಟ್ಟರೆ, ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಮಹಿಳಾ ಸಮುದಾಯವನ್ನೂ ಕಡೆಗಣಿಸಲಾಗಿದೆ.

ರಾಷ್ಟ್ರಮಟ್ಟದ ವರ್ಚಸ್ಸು ಹೊಂದಿರುವಂತಹ, ದಕ್ಷಿಣ ಭಾರತಕ್ಕೆ ಸೇರಿದ ಸ್ವಾತಂತ್ರ್ಯ ಸೇನಾನಿಯಾಗಲೀ, ಹೋರಾಟಗಾರ್ತಿಯಾಗಲೀ ಯಾರೊಬ್ಬರೂ ಇರಲಿಲ್ಲವೇ? ಜೈಲಿನಿಂದ ಬಿಡುಗಡೆ ಹೊಂದುವ ಸಲುವಾಗಿ ಬ್ರಿಟಿಷ್‌ ಸರ್ಕಾರದ ಕ್ಷಮೆ ಯಾಚಿಸಿದ್ದ ವಿವಾದಾತ್ಮಕ ಮುಖಂಡ ಸಾವರ್ಕರ್‌, 1924ರ ನಂತರದ ಸ್ವಾತಂತ್ರ್ಯ ಹೋರಾಟದಲ್ಲಿ ಯಾವ ಪಾತ್ರವನ್ನೂ ವಹಿಸಿಲ್ಲ. ಅವರ ಚಿತ್ರವೂ ಸ್ಥಾನ ಪಡೆದಿರುವಾಗ ರಾಜಾಜಿ ಹಾಗೂ ಸರೋಜಿನಿ ನಾಯ್ಡು ಅವರಂಥವರಿಗೆ ಈ ಜಾಹೀರಾತಿನಲ್ಲಿ ಸ್ಥಾನ ಇಲ್ಲದಿರುವುದನ್ನು ಏನೆಂದು ವ್ಯಾಖ್ಯಾನಿಸುವುದು?

ನೆಹರೂ ಅವರಿಲ್ಲದ ಭಾರತೀಯ ಸ್ವಾತಂತ್ರ್ಯ ಹೋರಾಟದ ಚರಿತ್ರೆಯನ್ನು ಮತ್ತು ಸ್ವಾತಂತ್ರ್ಯೋತ್ತರ ಭಾರತದ ಇತಿಹಾಸವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಮುಂಚೂಣಿ ಸ್ವಾತಂತ್ರ್ಯ ಹೋರಾಟಗಾರನಾಗಿ, ರಾಷ್ಟ್ರ ನಿರ್ಮಾತೃವಾಗಿ ನೆಹರೂ ಅವರಿಗೆ ಗಾಂಧೀಜಿ ಅವರ ನಂತರದ ಸ್ಥಾನವಿದೆ. ಅಂತಹ ಪ್ರಮುಖ ನಾಯಕನ ಚಿತ್ರವನ್ನೇ ಹೋರಾಟಗಾರರ ಚಿತ್ರಪಟಗಳ ಸಾಲಿನಿಂದ ಹೊರಗಿಟ್ಟಿರುವುದು ನಗೆಪಾಟಲಿಗೆ ಈಡು ಮಾಡುವಂಥದ್ದು. ಇದು, ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡಿದ ಅವಮಾನವೂ ಆಗಿದ್ದು, ಕಾನೂನು ಕ್ರಮವನ್ನು ಸಹ ಎದುರಿಸಬಹುದಾದ ಕೃತ್ಯ.

ನೆಹರೂ ಅವರು ಪ್ರತಿಪಾದಿಸಿದ ಮೌಲ್ಯಗಳು ಮತ್ತು ಆದರ್ಶಗಳು ತನ್ನ ಸಿದ್ಧಾಂತಕ್ಕೆ ತದ್ವಿರುದ್ಧವಾಗಿರುವುದು ಮತ್ತು ನೆಹರೂ ಅವರ ವಂಶದವರೇ ಈಗ ಕಾಂಗ್ರೆಸ್‌ ಪಕ್ಷವನ್ನು ಮುನ್ನಡೆಸುತ್ತಿರುವುದು ಸಂಘ ಪರಿವಾರದ ಪಾಲಿಗೆ ಅವರು ಅಪಥ್ಯವಾಗಲು, ಅಮಾನ್ಯವಾಗಲು ಕಾರಣ. ಹಾಗೆ ನೋಡಿದರೆ, ಸಾವರ್ಕರ್‌ ಅವರ ಮೌಲ್ಯಗಳು ಮತ್ತು ಸಿದ್ಧಾಂತಗಳು ಸ್ವಲ್ಪಮಟ್ಟಿಗೆ ಸಂಘ ಪರಿವಾರಕ್ಕೆ ಹೊಂದಿಕೆ ಆಗುತ್ತವೆ. ಉಳಿದಂತೆ ಚಿತ್ರಗಳಲ್ಲಿ ಇರುವ ಇತರ ಹೋರಾಟಗಾರರ ಮೌಲ್ಯಗಳು ಮತ್ತು ಆದರ್ಶಗಳು ಸಂಘ ಪರಿವಾರದ ಸಿದ್ಧಾಂತಕ್ಕೆ ಸರಿಹೊಂದುವುದಿಲ್ಲ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ನಾಯಕರು ತನ್ನ ಬಳಿ ಇಲ್ಲದಿರುವುದರಿಂದ ಅವರನ್ನು ಅನಿವಾರ್ಯವಾಗಿ ಒಪ್ಪಿಕೊಂಡಿದೆ.

ನೆಹರೂ ಅವರು ಕೊನೆಯುಸಿರು ಎಳೆದು ದಶಕಗಳೇ ಸಂದಿದ್ದರೂ ದೇಶದ ಇಂದಿನ ಪ್ರತಿಯೊಂದು ಸಮಸ್ಯೆಗೂ ಅವರೇ ಕಾರಣ ಎಂದು ತೆಗಳುವ ಬಿಜೆಪಿಯ ನೀತಿಯ ಭಾಗವಾಗಿಯೇ ಸರ್ಕಾರದ ಜಾಹೀರಾತಿನಲ್ಲಿ ನೆಹರೂ ಅವರ ಚಿತ್ರ ಇಲ್ಲದಂತೆ ಆಗಿದೆ. 1947ರಲ್ಲಿ ದೇಶ ವಿಭಜನೆಗೂ ಅವರೇ ಕಾರಣ ಎಂದು ಬಿಂಬಿಸುವಂತಹ ವಿಡಿಯೊವನ್ನೂ ಆ ಪಕ್ಷ ಬಿಡುಗಡೆ ಮಾಡಿದೆ. ಎರಡು ರಾಷ್ಟ್ರಗಳ ಪರಿಕಲ್ಪನೆಯನ್ನು ಮುನ್ನೆಲೆಗೆ ತಂದಿದ್ದು ಹಿಂದೂ ಮತ್ತು ಮುಸ್ಲಿಂ ಎರಡೂ ಸಮುದಾಯಗಳಲ್ಲಿದ್ದ ತೀವ್ರವಾದಿ ಗುಂಪುಗಳು. ಬೇರೆ ಆಯ್ಕೆಯೇ ಇಲ್ಲದಿದ್ದ ಕಾರಣಕ್ಕಾಗಿ ಸರ್ದಾರ್‌ ಪಟೇಲ್‌ ಅವರೂ ಸೇರಿದಂತೆ ಕಾಂಗ್ರೆಸ್‌ ನಾಯಕರು ಅದನ್ನು ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕಾಯಿತು. ದೇಶ ವಿಭಜನೆಯ ಹೊಣೆಯನ್ನು ಯಾವುದೇ ನಾಯಕನ ಮೇಲೆ ಹೊರಿಸಬೇಕಿಲ್ಲ. ಅಲ್ಲದೆ,ನೆಹರೂ ಅವರೇ ಇದಕ್ಕೆಲ್ಲ ಕಾರಣ ಎಂದು ನಿರೂಪಿಸುವ ಯಾವ ಸಾಕ್ಷ್ಯಾಧಾರವೂ ಬಿಜೆಪಿಯ ಬಳಿ ಇಲ್ಲ.

ಇತಿಹಾಸವನ್ನು ಮೂಗಿನ ನೇರಕ್ಕೆ ಮರುಸೃಷ್ಟಿಸಲು ಹೊರಟವರ ಸಿದ್ಧಾಂತದ ಭಾಗವಾಗಿ ನೆಹರೂ ಅವರನ್ನು ನಿಂದಿಸುವ ಈ ಪರಿಪಾಟ ತೀವ್ರಗೊಂಡಿದೆ. ಸರ್ಕಾರಿ ಜಾಹೀರಾತಿನಿಂದ ನೆಹರೂ ಅವರ ಚಿತ್ರವನ್ನು ಕೈಬಿಟ್ಟಿರುವುದು ಸಹ ಅದರ ಮುಂದುವರಿದ ಭಾಗವಾಗಿದೆ. ಇಂತಹ ರಾಜಕೀಯ ಪ್ರಚಾರಕ್ಕಾಗಿ ತೆರಿಗೆದಾರರ ಹಣ ಪೋಲು ಮಾಡುವ ಯಾವ ಅಧಿಕಾರವೂ ರಾಜ್ಯ ಸರ್ಕಾರಕ್ಕಿಲ್ಲ. ಸ್ವಾತಂತ್ರ್ಯ ಹೋರಾಟಕ್ಕೆ ಮತ್ತು ದೇಶವನ್ನು ಕಟ್ಟುವುದಕ್ಕೆ ಮೊದಲ ಹಾಗೂ ಮಹಾನ್‌ ಪ್ರಧಾನಿಯ ಕೊಡುಗೆ ಏನೆಂಬುದು ಇಡೀ ದೇಶಕ್ಕೆ ಗೊತ್ತಿದೆ. ನೆಹರೂ ಅವರ ಚಿತ್ರವನ್ನು ಹೊರಗಿಟ್ಟ ಮಾತ್ರಕ್ಕೆ ಇತಿಹಾಸದಿಂದ ಅವರನ್ನು ಮರೆಯಾಗಿಸಲು ಸಾಧ್ಯವಿಲ್ಲ. ಬದಲಾಗಿ,ಈ ಕೃತ್ಯವು ಚರಿತ್ರೆಯಲ್ಲಿ ಅವರ ಪಾತ್ರ ಏನೆಂಬುದನ್ನು ಜನ ಇನ್ನಷ್ಟು ಸ್ಪಷ್ಟವಾಗಿ ನೆನಪಿಸಿಕೊಳ್ಳುವಂತೆ ಮಾಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT