ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Editorial | ಒಂದು ರಾಷ್ಟ್ರ, ಒಂದು ಚುನಾವಣೆ: ಕಾರ್ಯಸಾಧುವಲ್ಲ, ಬಾಧಕವೇ ಹೆಚ್ಚು

ಕಕಕ
Published : 20 ಸೆಪ್ಟೆಂಬರ್ 2024, 22:56 IST
Last Updated : 20 ಸೆಪ್ಟೆಂಬರ್ 2024, 22:56 IST
ಫಾಲೋ ಮಾಡಿ
Comments

‘ಒಂದು ದೇಶ, ಒಂದು ಚುನಾವಣೆ’ ವ್ಯವಸ್ಥೆಯ ಬಗ್ಗೆ ರಾಮನಾಥ ಕೋವಿಂದ್ ನೇತೃತ್ವದ ಸಮಿತಿ ನೀಡಿದ್ದ ಶಿಫಾರಸುಗಳನ್ನು ಕೇಂದ್ರ ಸಚಿವ ಸಂಪುಟ ಒಪ್ಪಿಕೊಂಡಿದೆ. ಆಂದರೆ, ಈ ವ್ಯವಸ್ಥೆಯನ್ನು ಜಾರಿಗೆ ತರುವ ಪ್ರಸ್ತಾವವನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಅಧಿಕೃತವಾಗಿ ಅನುಮೋದಿಸಿದಂತೆ ಆಗಿದೆ. ಕೇಂದ್ರ ಸರ್ಕಾರ ಹಾಗೂ ಬಿಜೆಪಿಯು ಈ ವ್ಯವಸ್ಥೆಯ ಪರವಾಗಿ ಈಚೆಗೆ ಹಲವು ವರ್ಷಗಳಿಂದ ಮಾತನಾಡುತ್ತ ಬಂದಿವೆ. ಈಗ ಈ ವ್ಯವಸ್ಥೆಯನ್ನು ಜಾರಿಗೆ ತರಲು ನೀಲನಕ್ಷೆಯೊಂದು ಸಿದ್ಧವಾಗಿದೆ. ಈ ಸಮಿತಿಯು ಕೇಂದ್ರ ಸರ್ಕಾರ ಹೇಳಿದ್ದನ್ನು ಮಾತ್ರ ಮಾಡಲು ಸಾಧ್ಯವಿತ್ತು. ಈ ಸಮಿತಿಗೆ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದವರನ್ನು ನೇಮಕ ಮಾಡುವ ಮೂಲಕ ಶಿಫಾರಸುಗಳಿಗೆ ಹೆಚ್ಚಿನ ವಿಶ್ವಾಸಾರ್ಹತೆ ತಂದುಕೊಡುವ ಯತ್ನವನ್ನು ಮಾಡಲಾಯಿತು. ಮೊದಲ ಹಂತವಾಗಿ, ಲೋಕಸಭೆ ಹಾಗೂ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸಬೇಕು ಎಂದು ಸಮಿತಿಯು ಶಿಫಾರಸು ಮಾಡಿದೆ. ಮುಂದಿನ ಹಂತದಲ್ಲಿ, ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಪಂಚಾಯಿತಿಗಳಿಗೆ 100 ದಿನಗಳ ಒಳಗಾಗಿ ಚುನಾವಣೆ ನಡೆಸಬೇಕು ಎಂದು ಅದು ಹೇಳಿದೆ. ಇಡೀ ಪರಿಕಲ್ಪನೆಯ ಅನುಷ್ಠಾನಕ್ಕೆ ಪ್ರಕ್ರಿಯೆಗಳನ್ನು ಹಾಗೂ ಮಾರ್ಗವನ್ನು ಸಮಿತಿಯು ತೋರಿಸಿಕೊಟ್ಟಿದೆ. ವ್ಯವಸ್ಥೆಯನ್ನು ಅನುಷ್ಠಾನಕ್ಕೆ ತರಲು ಸಂವಿಧಾನಕ್ಕೆ ಕನಿಷ್ಠ 18 ತಿದ್ದುಪಡಿಗಳನ್ನು ತರಬೇಕು ಎಂದು ಅದು ಹೇಳಿದೆ.

‘ಒಂದು ರಾಷ್ಟ್ರ, ಒಂದು ಚುನಾವಣೆ’ ವಿಚಾರವು ಬಹಳ ವರ್ಷಗಳಿಂದ ಚರ್ಚೆಯಲ್ಲಿದೆ. ಆದರೆ ಈ ಪ್ರಸ್ತಾವಕ್ಕೆ ಬಿಜೆಪಿ ಹೊರತುಪಡಿಸಿ, ಇತರ ಪ್ರಬಲ ರಾಜಕೀಯ ಪಕ್ಷಗಳ ಪೈಕಿ ಹೆಚ್ಚಿನ ಪಕ್ಷಗಳ ಬೆಂಬಲ ಇಲ್ಲ. ಇಲ್ಲಿರುವುದು ಒಂದೇ ಬಗೆಯ ರಾಜಕಾರಣ, ದೇಶದ ಉದ್ದಗಲಕ್ಕೂ ಪ್ರಜಾತಾಂತ್ರಿಕ ಚುನಾವಣಾ ಪ್ರಕ್ರಿಯೆಯು ಒಂದೇ ಬಗೆಯಲ್ಲಿ ಇರುತ್ತದೆ ಎಂಬ ನಂಬಿಕೆಯು ಬಿಜೆಪಿಯಲ್ಲಿ ಇರುವಂತೆ ಕಾಣುತ್ತಿದೆ. ಆ ನಂಬಿಕೆಯ ಕಾರಣದಿಂದಾಗಿ ಬಿಜೆಪಿಯು ಈ ವ್ಯವಸ್ಥೆಯ ಪರವಾಗಿ ಇರುವಂತಿದೆ. ಆದರೆ ಈ ವ್ಯವಸ್ಥೆಯು ದೇಶದ ವೈವಿಧ್ಯಮಯ ರಾಜಕೀಯ ಸನ್ನಿವೇಶ, ಸಮಾಜದಲ್ಲಿನ ವೈವಿಧ್ಯ ಹಾಗೂ ದೇಶದ ಜನಜೀವನದಲ್ಲಿನ ವೈವಿಧ್ಯಕ್ಕೆ ವಿರುದ್ಧವಾಗಿದೆ. ಅಷ್ಟೇ ಅಲ್ಲದೆ, ಈ ವ್ಯವಸ್ಥೆಯು ದೇಶದ ಒಕ್ಕೂಟ ಸ್ವರೂಪಕ್ಕೆ ವಿರುದ್ಧವಾಗಿಯೂ ಇದೆ. ಈ ವ್ಯವಸ್ಥೆಯು ರಾಷ್ಟ್ರೀಯ ಪಕ್ಷಗಳಿಗೆ ಹೆಚ್ಚಿನ ಅನುಕೂಲವನ್ನು ಕಲ್ಪಿಸುತ್ತದೆ. ಹೊಸ ವ್ಯವಸ್ಥೆಯು ಜಾರಿಗೆ ಬಂದರೆ, ರಾಜ್ಯ ಮತ್ತು ಪ್ರಾದೇಶಿಕ ವಿಚಾರಗಳಿಗಿಂತಲೂ ಹೆಚ್ಚಾಗಿ ಚುನಾವಣೆಗಳಲ್ಲಿ ರಾಷ್ಟ್ರೀಯ ವಿಚಾರಗಳಿಗೆ ಸಂಬಂಧಿಸಿದ ಆರ್ಭಟದ ಮಾತುಗಳಿಗೇ ಪ್ರಾಧಾನ್ಯ ಸಿಗುವಂತೆ ಆಗುತ್ತದೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಆರಂಭದ ವರ್ಷಗಳಲ್ಲಿ ಲೋಕಸಭೆ ಹಾಗೂವಿಧಾನಸಭೆಗಳಿಗೆ ಚುನಾವಣೆಗಳು ಏಕಕಾಲದಲ್ಲಿ ನಡೆದವು. ಅದಾದ ನಂತರದಲ್ಲಿ ದೇಶದ ರಾಜಕಾರಣವು ಬಹಳಷ್ಟು ವಿಕಾಸ ಹೊಂದಿದೆ. ಈ ವಿಕಾಸವು ಬಹಳ ಸಹಜವಾದುದು. ಮನಸ್ಸಿಗೆ ತೋಚಿದಂತೆ ಮಾನದಂಡವೊಂದನ್ನು ರೂಪಿಸಿಕೊಂಡು, ದೇಶವು ಈ ಮಾನದಂಡಕ್ಕೆ ಹೊಂದಿಕೊಳ್ಳಬೇಕು ಎಂಬ ಒತ್ತಡವನ್ನು ಸೃಷ್ಟಿಸಿ, ಸಹಜವಾಗಿ ಆಗಿರುವ ವಿಕಾಸವನ್ನು ಕೃತಕವಾಗಿ ಹಿಂದಕ್ಕೊಯ್ಯುವ ಕೆಲಸ ಮಾಡಬಾರದು. ಭಾರತವು ರಾಜ್ಯಗಳ ಒಂದು ಒಕ್ಕೂಟ. ಇಲ್ಲಿನ ಜನರಿಗೆ ತಮ್ಮ ರಾಜಕೀಯ ಆಯ್ಕೆಗಳನ್ನು ನಿರ್ಧರಿಸಲು ಸ್ವಾತಂತ್ರ್ಯ ಇರಬೇಕು.

‘ಒಂದು ರಾಷ್ಟ್ರ, ಒಂದು ಚುನಾವಣೆ’ ವ್ಯವಸ್ಥೆಯು ಜಾರಿಗೆ ಬಂದರೆ ದೇಶದ ಬೊಕ್ಕಸದ ಮೇಲಿನ ಚುನಾವಣಾ ವೆಚ್ಚಗಳು ತಗ್ಗುತ್ತವೆ, ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ಚುನಾವಣೆಗಾಗಿ ಮಾಡುವ ವೆಚ್ಚಗಳೂ ಕಡಿಮೆ ಆಗುತ್ತವೆ ಎಂಬ ವಾದವೊಂದನ್ನು ಜನರ ಮುಂದಿಡಲಾಗಿದೆ. ಈ ವ್ಯವಸ್ಥೆಯು ಜಾರಿಗೆ ಬಂದರೆ, ಆಡಳಿತಕ್ಕೆ ಎದುರಾಗುವ ಅಡ್ಡಿಗಳು ಕೂಡ ಕಡಿಮೆ ಆಗುತ್ತವೆ ಎಂದು ವಾದಿಸಲಾಗಿದೆ. ಆದರೆ ವಾಸ್ತವದಲ್ಲಿ, ಪ್ರಜಾತಂತ್ರವು ಬಹಳ ಅಗ್ಗವಾಗಿ ಸಿಗುವ ವಸ್ತುವಲ್ಲ. ಚುನಾವಣೆಗಳು ಏಕಕಾಲದಲ್ಲಿ ನಡೆಯಲಿ, ಬೇರೆ ಬೇರೆಯಾಗಿ ನಡೆಯಲಿ, ಆ ಸಂದರ್ಭಗಳಲ್ಲಿ ರಾಜಕೀಯ ಪಕ್ಷಗಳು ಸಂಗ್ರಹಿಸುವ ಹಾಗೂ ವೆಚ್ಚ ಮಾಡುವ ಹಣದ ಮೊತ್ತವನ್ನು ಕಡಿಮೆ ಮಾಡುವ ಯತ್ನವೊಂದು ಆಗಬೇಕಿದೆ. ವಾಸ್ತವದಲ್ಲಿ ಇದೇ ನಿಜವಾದ ಸಮಸ್ಯೆ. ಹೀಗಾಗಿ, ‘ಒಂದು ರಾಷ್ಟ್ರ, ಒಂದು ಚುನಾವಣೆ’ ವ್ಯವಸ್ಥೆಯಿಂದಾಗಿ ವೆಚ್ಚಗಳು ಕಡಿಮೆ ಆಗುತ್ತವೆ ಎಂದು ಹೇಳುವುದು ಜನರ ಗಮನವನ್ನು ಬೇರೆಡೆ ಸೆಳೆಯುವ ಒಂದು ತಂತ್ರದಂತೆ ಮಾತ್ರ ಕಾಣುತ್ತದೆ. ಹೊಸ ವ್ಯವಸ್ಥೆಯ ಬಗ್ಗೆ ಎಲ್ಲರಲ್ಲಿ ಸಹಮತ ಮೂಡಿಸುವ ಉದ್ದೇಶ ತನ್ನದು ಎಂದು ಕೇಂದ್ರ ಸರ್ಕಾರ ಹೇಳಿದೆ. ಆದರೆ ಸರ್ಕಾರದ ಮಾತುಗಳಲ್ಲಿ ಪ್ರಾಮಾಣಿಕತೆ ಕಾಣುತ್ತಿಲ್ಲ. ವಿರೋಧ ಪಕ್ಷಗಳು ತಮ್ಮ ಕಳವಳವನ್ನು ಸ್ಪಷ್ಟವಾಗಿ ತಿಳಿಸಿವೆ, ಕೋವಿಂದ್ ನೇತೃತ್ವದ ಸಮಿತಿಗೂ ಅವು ತಮ್ಮ ಕಳವಳಗಳನ್ನು ಹೇಳಿವೆ. ಹೀಗಿದ್ದರೂ ಸಮಿತಿಯು ತನ್ನ ಪೂರ್ವನಿರ್ಧರಿತ ಶಿಫಾರಸುಗಳನ್ನು ಸರ್ಕಾರಕ್ಕೆ ನೀಡಿದೆ, ಸರ್ಕಾರವು ಆ ಶಿಫಾರಸುಗಳನ್ನು ಒಪ್ಪಿಕೊಂಡಿದೆ. ದೇಶದ ರಾಜಕೀಯ ವ್ಯವಸ್ಥೆಯು ಮುಂದಕ್ಕೆ ಸಾಗುವಂತೆ ಮಾಡಬೇಕಿರುವುದು ಇಲ್ಲಿನ ರಾಜಕೀಯ ಪಕ್ಷಗಳು. ಹೆಚ್ಚಿನ ಸಂಖ್ಯೆಯ ರಾಜಕೀಯ ಪಕ್ಷಗಳಿಗೆ ಒಂದು ರಾಷ್ಟ್ರ ಒಂದು ಚುನಾವಣೆ ವ್ಯವಸ್ಥೆ ಬೇಕಾಗಿಲ್ಲ ಎಂದಾದರೆ, ಅದು ಜಾರಿಗೆ ಬರಲು ಸಾಧ್ಯವಿಲ್ಲ. ಈಗಿನ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಈ ವ್ಯವಸ್ಥೆಯನ್ನು ಜಾರಿಗೆ ತರಲು ಅಗತ್ಯವಿರುವ ಸಂವಿಧಾನ ತಿದ್ದುಪಡಿಗಳಿಗೆ ಸಂಸತ್ತಿನ ಅಂಗೀಕಾರ ಪಡೆದುಕೊಳ್ಳುವ ಸಾಧ್ಯತೆಯೂ ಕಡಿಮೆ ಇದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT