ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಪಾದಕೀಯ: ವಿರೋಧ ಪಕ್ಷಗಳ ಸದಸ್ಯರ ಅಮಾನತು, ದುರ್ಬಲಗೊಂಡಿದ್ದು ಪ್ರಜಾಪ್ರಭುತ್ವ

Published 19 ಡಿಸೆಂಬರ್ 2023, 23:30 IST
Last Updated 19 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ಸಂಸತ್ತಿನ ಉಭಯ ಸದನಗಳಲ್ಲಿ ವಿರೋಧ ಪಕ್ಷಗಳ ಸದಸ್ಯರನ್ನು ಹಾಲಿ ಅಧಿವೇಶನದ ಅವಧಿ ಪೂರ್ಣಗೊಳ್ಳುವವರೆಗೆ ಅಮಾನತು ಮಾಡುವ ಪರಿಪಾಟ ಕೆಲವು ದಿನಗಳಿಂದ ನಡೆಯುತ್ತಿದೆ. ಇದರ ಪರಿಣಾಮವಾಗಿ ಉಭಯ ಸದನಗಳಲ್ಲಿ ವಿರೋಧ ಪಕ್ಷಗಳ ಸದಸ್ಯರಿಗೆ ಮೀಸಲಾಗಿರುವ ಆಸನಗಳು ಬಹುತೇಕ ಖಾಲಿಯಾಗಿವೆ. ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ವಿರೋಧ ಪಕ್ಷಗಳ ಸದಸ್ಯರನ್ನು ದಿನದಿನವೂ ಸಾಮೂಹಿಕವಾಗಿ ಅಮಾನತು ಮಾಡುತ್ತಿರುವುದು ತೀರಾ ಅಸಾಮಾನ್ಯ ಬೆಳವಣಿಗೆ. ಕಳೆದ ವಾರ, ವಿರೋಧ ಪಕ್ಷಗಳ 14 ಮಂದಿ ಸದಸ್ಯರನ್ನು ಅಮಾನತು ಮಾಡಲಾಯಿತು. ಸೋಮವಾರ, ಲೋಕಸಭೆಯ 33 ಸಂಸದರನ್ನು, ರಾಜ್ಯಸಭೆಯ 45 ಸಂಸದರನ್ನು ಅಮಾನತು ಮಾಡಲಾಯಿತು. ಇವರೆಲ್ಲರೂ ‘ಇಂಡಿಯಾ’ ಮೈತ್ರಿಕೂಟದ ಸದಸ್ಯ ಪಕ್ಷಗಳಿಗೆ ಸೇರಿದವರು. ಮಂಗಳವಾರದ ಕಲಾಪದಲ್ಲಿ ಒಟ್ಟು 49 ಮಂದಿಯನ್ನು ಅಮಾನತು ಮಾಡಲಾಗಿದೆ. ಅಂದರೆ ಈ ಬಾರಿಯ ಅಧಿವೇಶನದಲ್ಲಿ ಇದುವರೆಗೆ 141 ಮಂದಿ ಸಂಸದರನ್ನು ಅಮಾನತು ಮಾಡಲಾಗಿದೆ. ಕೆಲವು ಸದಸ್ಯರ ವರ್ತನೆಯ ಬಗ್ಗೆ ಪರಿಶೀಲನೆ ನಡೆಸುವಂತೆ ಹಕ್ಕುಬಾಧ್ಯತಾ ಸಮಿತಿಗೆ ಸೂಚಿಸಲಾಗಿದೆ. ಹಕ್ಕುಬಾಧ್ಯತಾ ಸಮಿತಿಯ ವರದಿ ಸಲ್ಲಿಕೆ ಆಗುವವರೆಗೆ ಈ ಸದಸ್ಯರು ಸದನದಿಂದ ಹೊರಗೆ ಇರಬೇಕಿದೆ. ಇನ್ನುಳಿದ ಸದಸ್ಯರು ಚಳಿಗಾಲದ ಅಧಿವೇಶನ ಪೂರ್ಣವಾಗುವವರೆಗೆ ಅಮಾನತಿನಲ್ಲಿ ಇರುತ್ತಾರೆ. ಇಷ್ಟೊಂದು ಸಂಖ್ಯೆಯಲ್ಲಿ ಸಂಸದರ ವಿರುದ್ಧ ಹಿಂದೆ ಕ್ರಮ ಕೈಗೊಂಡ ನಿದರ್ಶನ ಇಲ್ಲ.

ಸಂಸತ್ತಿನ ಭದ್ರತಾ ಲೋಪದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಂಸತ್ತಿನಲ್ಲಿ ಹೇಳಿಕೆ ನೀಡಬೇಕು ಎಂಬ ಬೇಡಿಕೆಗೆ ಪಟ್ಟು ಹಿಡಿದು ವಿರೋಧ ಪಕ್ಷಗಳ ಸದಸ್ಯರು ಭಿತ್ತಿಪತ್ರಗಳನ್ನು ಹಿಡಿದು ಘೋಷಣೆಗಳನ್ನು ಕೂಗಿರುವುದು ಈ ಅಮಾನತುಗಳಿಗೆ ಪ್ರಧಾನ ಕಾರಣವಾಗಿದೆ. ಸರ್ಕಾರವು ಸಂಸತ್ತಿನಲ್ಲಿ ಹೇಳಿಕೆ ನೀಡಿಲ್ಲ. ಆದರೆ ದುರದೃಷ್ಟದ ಸಂಗತಿಯೆಂದರೆ, ಇಬ್ಬರೂ ನಾಯಕರು ಸಂಸತ್ತಿನ ಭದ್ರತಾ ಲೋಪದ ಬಗ್ಗೆ ಸಂಸತ್ತಿನ ಹೊರಗಡೆ ಹೇಳಿಕೆಗಳನ್ನು ನೀಡಿದ್ದಾರೆ. ಹೀಗೆ ಮಾಡಿರುವುದು ಸಂಸತ್ತಿನ ಹಕ್ಕುಗಳ ಉಲ್ಲಂಘನೆ ಎಂದೂ ಪರಿಗಣಿಸಬಹುದು. ಇಂಥದ್ದೊಂದು ಮಹತ್ವದ ವಿಚಾರದ ಬಗ್ಗೆ ಸರ್ಕಾರ ಹೇಳಿಕೆ ನೀಡಬೇಕು ಹಾಗೂ ಅದರ ಬಗ್ಗೆ ಚರ್ಚೆ ನಡೆಯಬೇಕು ಎಂಬ ಬೇಡಿಕೆಯನ್ನು ಇರಿಸುವ ಹಕ್ಕು ಸಂಸದರಿಗೆ ಇದೆ. ಸಂಸತ್ತು ಇರುವುದೇ ಇಂತಹ ಚರ್ಚೆಗಳಿಗೆ ವೇದಿಕೆ ಕಲ್ಪಿಸಲು. ಚರ್ಚೆಗಳು ನಡೆದರೆ ದೇಶಕ್ಕೆ ಅದರ ಪ್ರಯೋಜನ ಸಿಗುತ್ತದೆ. ಆದರೆ ಕೇಂದ್ರ ಸರ್ಕಾರವು ತಾಂತ್ರಿಕ ಕಾರಣ ನೀಡಿ ಅಥವಾ ಒಪ್ಪಲು ಸಾಧ್ಯವಿಲ್ಲದ ಯಾವುದಾದರೂ ಒಂದು ಕಾರಣ ನೀಡಿ ಇಂತಹ ಚರ್ಚೆಗೆ ಅವಕಾಶ ನಿರಾಕರಿಸಲು ಯತ್ನಿಸುತ್ತಿದೆ. ಪ್ರಧಾನಿಯಾಗಲೀ ಗೃಹ ಸಚಿವರಾಗಲೀ ನಿಯಮಗಳಿಗೆ, ಸಂಪ್ರದಾಯಗಳಿಗೆ ಹಾಗೂ ಸಂಸತ್ತಿನಲ್ಲಿ ವ್ಯಕ್ತವಾಗುವ ಬೇಡಿಕೆಗಳಿಗೆ ಅತೀತರಲ್ಲ. ಸಂಸದೀಯ ಹೊಣೆಗಾರಿಕೆಗಳನ್ನು ನಿರ್ವಹಿಸುವ ಸಂದರ್ಭಗಳಲ್ಲಿ, ವಿರೋಧ ಪಕ್ಷಗಳು ಹೇಳಿರುವಂತೆ, ವ್ಯಕ್ತಿಗತ ಅಹಂ ಭಾವವು
ಅಡ್ಡಿಯಾಗಬಾರದು. 

ವಿರೋಧ ಪಕ್ಷಗಳ ಸದಸ್ಯರು ಸದನದ ಘನತೆ ಕುಗ್ಗಿಸುವ ನಡತೆ ತೋರಿದ್ದಕ್ಕಾಗಿ ಅವರನ್ನು ಅಮಾನತು ಮಾಡಲಾಗಿದೆ ಎಂಬ ಸಮರ್ಥನೆಯು ಸರ್ಕಾರದ ಕಡೆಯಿಂದ ಬಂದಿದೆ. ವಿರೋಧ ಪಕ್ಷಗಳ ಸದಸ್ಯರು ತಮ್ಮ ಹಕ್ಕುಗಳ ನಿರಾಕರಣೆ ಆದಾಗ ಹತಾಶೆಯಿಂದ ದುರ್ವರ್ತನೆ ತೋರುವುದಿದೆ. ಆದರೆ ವಿರೋಧ ಪಕ್ಷಗಳನ್ನು ಜೊತೆಯಾಗಿ ಕೊಂಡೊಯ್ಯುವ, ಸಂಸತ್ತಿನ ಕಲಾಪಗಳು ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುವ ಹೊಣೆಯು ಸರ್ಕಾರದ ಮೇಲಿದೆ. ಸದಸ್ಯರನ್ನು ಸಂಸತ್ತಿನಿಂದ ಅಥವಾ ವಿಧಾನಸಭೆಗಳಿಂದ ದೀರ್ಘ ಅವಧಿಗೆ ಅಮಾನತು ಮಾಡುವುದು ಅಸಾಂವಿಧಾನಿಕ, ಅದು ಉಚ್ಚಾಟನೆಗೆ ಸಮ ಎಂದು ಸುಪ್ರೀಂ ಕೋರ್ಟ್ ಕೂಡ ಹೇಳಿದೆ. ವಿರೋಧ ಪಕ್ಷಗಳ ಸದಸ್ಯರು ಇಲ್ಲದಿದ್ದ ಸಂದರ್ಭದಲ್ಲಿ ಅಂಗೀಕಾರ ಪಡೆದುಕೊಂಡ ಮಸೂದೆಗಳ ಮಹತ್ವವು ಒಂದು ಅರ್ಥದಲ್ಲಿ ಕುಗ್ಗುತ್ತದೆ. ಈಗ ವಿರೋಧ ಪಕ್ಷಗಳ ಹೆಚ್ಚಿನ ಸದಸ್ಯರು ಸದನದ ಕಲಾಪಗಳಲ್ಲಿ ಭಾಗಿಯಾಗುವುದಿಲ್ಲ. ಅವರು ಸಂಸತ್ತಿನ ಹೊರಗಡೆ ಪ್ರತಿಭಟನೆ ಮುಂದುವರಿಸಬಹುದು. ಇದರ ಪರಿಣಾಮವಾಗಿ ಉಳಿದುಕೊಳ್ಳುವುದು ದುರ್ಬಲಗೊಂಡ ಸಂಸತ್ತು ಹಾಗೂ ದುರ್ಬಲಗೊಂಡ ಪ್ರಜಾಪ್ರಭುತ್ವ. ವಿರೋಧ ಪಕ್ಷಗಳ ಸದಸ್ಯರನ್ನು ಈ ಪ್ರಮಾಣದಲ್ಲಿ ಸಂಸತ್ತಿನಿಂದ ಹೊರಹಾಕುವ ಕೆಲಸ ನಡೆಯುವುದು ಸರ್ವಾಧಿಕಾರಿ ಪ್ರಭುತ್ವ ಇರುವೆಡೆಗಳಲ್ಲಿ ಮಾತ್ರ. ದೇಶದ ಸಾಂವಿಧಾನಿಕ ವ್ಯವಸ್ಥೆಯ ಹೃದಯ ಸ್ಥಾನದಲ್ಲಿ ಇರುವುದು ಸಂಸತ್ತು. ಇದನ್ನು ಒಂದು ಪ್ರಹಸನದ ಮಟ್ಟಕ್ಕೆ ಇಳಿಸುವ ಕೆಲಸ ಆಗಬಾರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT