ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಪಾದಕೀಯ: ಮುಕ್ತ ಚುನಾವಣೆ ಸಾಧ್ಯವಾಗಿಸುವಲ್ಲಿ ಜನರ ಸಹಭಾಗಿತ್ವವೂ ಅಗತ್ಯ

Last Updated 31 ಮಾರ್ಚ್ 2023, 19:41 IST
ಅಕ್ಷರ ಗಾತ್ರ

ಭಾರತೀಯ ಚುನಾವಣಾ ಆಯೋಗವು ಕರ್ನಾಟಕ ವಿಧಾನಸಭೆಯ ಚುನಾವಣೆಗೆ ದಿನಾಂಕವನ್ನು ಪ್ರಕಟಿಸಿದೆ. ಈ ಮೂಲಕ ಚುನಾವಣಾ ಪ್ರಕ್ರಿಯೆಗೆ ಚಾಲನೆ ದೊರೆತಿದೆ. ಮೇ 10ರಂದು ಮತದಾನ ನಡೆದು, ಮೇ 13ರಂದು ಮತ ಎಣಿಕೆ ನಡೆಯಲಿದೆ. ಮುಂದಿನ 40 ದಿನಗಳಲ್ಲಿ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಚುನಾವಣೆ ಈಗ ಘೋಷಣೆಯಾಗಿದ್ದರೂ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಕೆಲವು ತಿಂಗಳುಗಳಿಂದಲೇ ಚುನಾವಣಾ ಸಿದ್ಧತೆ ನಡೆಸಿದ್ದಾರೆ. ಪ್ರಚಾರದ ಬಿರುಸು ಆರಂಭಗೊಂಡು ಕೆಲವು ತಿಂಗಳುಗಳೇ ಆಗಿವೆ. ನಮ್ಮ ರಾಜಕೀಯ ಪಕ್ಷಗಳು ಮತ್ತು ಹುರಿಯಾಳುಗಳಾಗಲು ಬಯಸಿದವರಲ್ಲಿ ಹಲವರು ಎಷ್ಟು ಲಜ್ಜೆಗೇಡಿಗಳು ಎಂಬುದು ಚುನಾವಣೆ ಘೋಷಣೆಗೆ ಮುನ್ನವೇ ಬಯಲಾಗಿದೆ. ರಾಜ್ಯವನ್ನು ಅಭಿವೃದ್ಧಿಯತ್ತ ಒಯ್ಯುವ ಮುನ್ನೋಟ, ಜನಪರವಾದ ಕಾಳಜಿ, ಶಾಸಕಾಂಗದ ಮಹತ್ವದ ಅರಿವು, ನಾಯಕತ್ವ ಗುಣದ ಮೂಲಕ ಚುನಾವಣೆ ಗೆಲ್ಲುವ ಕುರಿತಂತೆ ಯಾರೂ ಚಿಂತಿಸುತ್ತಿಲ್ಲ. ಸೀರೆ, ಕುಕ್ಕರ್‌, ಗೋಡೆ ಗಡಿಯಾರ, ಟಿ.ವಿ.ಯಂಥ ವಸ್ತುಗಳನ್ನು ನೀಡಿ ಮತದಾರರಿಗೆ ಆಮಿಷ ಒಡ್ಡುವ ಕೆಲಸ ಎಗ್ಗಿಲ್ಲದೆ ನಡೆದಿದೆ. ಕೆಲವರು ಕಾನೂನು ಜಾರಿ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ. ಬಾಡೂಟ, ಮದ್ಯ ಸಮಾರಾಧನೆಯ ಕಾರ್ಯಕ್ರಮ ಏರ್ಪಡಿಸಿ ಮತದಾರರ ಮನಗೆಲ್ಲಲು ಯತ್ನಿಸಿದ ಹಲವರು ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಂಡಿದ್ದಾರೆ. ರಾಜಕಾರಣಿಗಳ ಮಾತು, ಅದಕ್ಕೆ ತಿರುಗೇಟುಗಳೆಲ್ಲ ಅಸಹನೀಯ ಎನ್ನಿಸುವ ಮಟ್ಟಕ್ಕೆ ಹೋಗಿವೆ. ಈಗ, ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ. ಹಾಗಾಗಿ, ಪಕ್ಷಗಳು ಮತ್ತು ಅಭ್ಯರ್ಥಿಗಳು ಹೆಚ್ಚು ಎಚ್ಚರದಲ್ಲಿ ಇರಬೇಕಾಗುತ್ತದೆ. ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಏನೇ ಮಾಡಿದರೂ ಸರಿ ಎಂಬ ಮನೋಭಾವ ಇದೆ. ಆದರೆ, ಇದು ಪ್ರಜಾಪ್ರಭುತ್ವವನ್ನು ಅರ್ಥ ಮಾಡಿಕೊಳ್ಳದವರ ಅವಿವೇಕ ಮಾತ್ರ. ವಿಧಾನಸಭೆಗೆ 2018ರಲ್ಲಿ ನಡೆದ ಇಡೀ ಚುನಾವಣಾ ಪ‍್ರಕ್ರಿಯೆಯಲ್ಲಿ ವಶಕ್ಕೆ ಪಡೆದಷ್ಟು ದಾಖಲೆ ಇಲ್ಲದ ಹಣವನ್ನು ಈಗಾಗಲೇ ವಶಕ್ಕೆ ಪಡೆಯಲಾಗಿದೆ. ಇದು ನಿಜಕ್ಕೂ ಎಚ್ಚರಿಕೆ ಗಂಟೆ.

ರಾಜ್ಯದಲ್ಲಿ ಸಕ್ರಿಯವಾಗಿರುವ ಮೂರೂ ಪ್ರಮುಖ ಪಕ್ಷಗಳಿಗೆ ಈ ಚುನಾವಣೆ ಬಹಳ ಮಹತ್ವದ್ದು. ಮರಳಿ ಅಧಿಕಾರಕ್ಕೆ ಬರಲು ಶತಾಯ ಗತಾಯ ಯತ್ನಿಸುತ್ತಿರುವ ಕಾಂಗ್ರೆಸ್‌ಗೆ ಈ ಚುನಾವಣೆ ಇನ್ನೂ ಹೆಚ್ಚು ಮುಖ್ಯವಾಗಿದೆ. ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ಯತ್ನಿಸುತ್ತಿದ್ದರೆ, ರಾಜ್ಯ ರಾಜಕಾರಣದಲ್ಲಿ ಪ್ರಸ್ತುತವಾಗಿಯೇ ಇರಬೇಕು ಎಂಬ ಹೆಬ್ಬಯಕೆ ಜೆಡಿಎಸ್‌ಗೆ ಇದೆ. ಲೋಕಸಭೆಗೆ ಮುಂದಿನ ವರ್ಷ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಈ ದೃಷ್ಟಿಯಿಂದಲೂ ಕರ್ನಾಟಕದ ಚುನಾವಣೆಯು ಎಲ್ಲ ಪಕ್ಷಗಳಿಗೆ ಮಹತ್ವದ್ದಾಗಿದೆ. ರಾಷ್ಟ್ರ ಮಟ್ಟದಲ್ಲಿ ಬಿಜೆಪಿಯನ್ನು ವಿರೋಧಿಸುವ ಪಕ್ಷಗಳ ನಾಯಕತ್ವ ಸ್ಥಾನವನ್ನು ದೃಢೀಕರಿಸಿಕೊಳ್ಳುವುದಕ್ಕೆ ಕಾಂಗ್ರೆಸ್‌ಗೆ ಕರ್ನಾಟಕದ ಗೆಲುವು ಅನಿವಾರ್ಯ. ಹಾಗೆಯೇ, ದಕ್ಷಿಣದಲ್ಲಿ ಇರುವ ಏಕೈಕ ರಾಜ್ಯವನ್ನು ಬಿಟ್ಟುಕೊಡಲು ಬಿಜೆಪಿಯೂ ಸಿದ್ಧವಿಲ್ಲ. ಸರ್ಕಾರದಲ್ಲಿ ಭಾಗಿಯಾಗಿರುವ ಹಲವರ ಮೇಲೆ ಭ್ರಷ್ಟಾಚಾರದ ಆರೋಪಗಳಿವೆ. ಕಾಮಗಾರಿ ಗುತ್ತಿಗೆಯಲ್ಲಿ ಶೇ 40ರಷ್ಟನ್ನು ಲಂಚದ ರೂಪದಲ್ಲಿ ಕೊಡಬೇಕಾಗುತ್ತದೆ ಎಂಬ ಆರೋಪವನ್ನು ಪ್ರಧಾನಿ ಕಚೇರಿಯವರೆಗೆ ಒಯ್ಯಲಾಗಿದೆ. ಆದರೆ ಯಾವುದೇ ಕ್ರಮ ಜರುಗಿಲ್ಲ. ಇದು ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾದ ವಿಷಯ. ರಾಜ್ಯ ಸರ್ಕಾರದ ಕಾರ್ಯಕ್ಷಮತೆ, ದಕ್ಷತೆಯು ಕಳಪೆಯಾಗಿತ್ತು ಎಂದೂ ವಿಶ್ಲೇಷಿಸಲಾಗಿದೆ. ಹೀಗಾಗಿ, ಆಡಳಿತ ವಿರೋಧಿ ಅಲೆ ಇದೆ ಎನ್ನುವುದು ವಾಸ್ತವ. ಪ್ರಚಾರಕ್ಕಾಗಿ ಬಿಜೆಪಿ ತನ್ನ ಕೇಂದ್ರದ ನಾಯಕರು ಅದರಲ್ಲೂ ಮುಖ್ಯವಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಅವಲಂಬಿಸಿದೆ. ಕಾಂಗ್ರೆಸ್‌ ಪಕ್ಷದ ಮುಂದೆಯೂ ಹಲವು ಸವಾಲುಗಳು ಇವೆ. ಬಿಜೆಪಿಯ ಸೋಲರಿಯದ ಚುನಾವಣಾ ವ್ಯವಸ್ಥೆಯನ್ನು ಎದುರಿಸುವುದು ಕಾಂಗ್ರೆಸ್‌ ಮುಂದಿನ ಬಹುದೊಡ್ಡ ಸವಾಲು.

ಚುನಾವಣಾ ಪ್ರಚಾರ ಕಣವು ಎಲ್ಲ ರೀತಿಯ ಅಭಿವ್ಯಕ್ತಿಗಳಿಗೆ ಸಾಕ್ಷಿಯಾಗಿದೆ. ಧರ್ಮ, ಜಾತಿ, ವರ್ಗಗಳ ಆಧಾರದ ಮಾತು ಕೇಳಿಬಂದಿದೆ; ಹಣ, ತೋಳ್ಬಲದ ಪ್ರದರ್ಶನವಾಗಿದೆ; ವೈಯಕ್ತಿಕ ಮಹತ್ವಾಕಾಂಕ್ಷೆ ವ್ಯಕ್ತವಾಗಿದೆ. ಭರವಸೆ ನೀಡಲಾಗಿದೆ, ಆಶಾಭಾವವನ್ನು ಸೃಷ್ಟಿಸಲಾಗಿದೆ; ದ್ವೇಷ ಭಾಷಣದ ಜೊತೆಗೆ ಧ್ರುವೀಕರಣದ ಯತ್ನವೂ ನಡೆದಿದೆ. ಪ್ರದೇಶ, ಜಾತಿ, ಧರ್ಮದ ಆಧಾರದಲ್ಲಿ ಮತ ಕೇಳಲಾಗಿದೆ. ವರ್ತಮಾನದ ವಿಚಾರಗಳಲ್ಲಿ ಮಾತ್ರವಲ್ಲ, ಭೂತ ಮತ್ತು ಭವಿಷ್ಯ ಕುರಿತು ಕೂಡ ಆರೋಪ ಮತ್ತು ಪ್ರತ್ಯಾರೋಪ ಮಾಡಲಾಗಿದೆ. ಪ್ರಚಾರದ ಭರಾಟೆಯಲ್ಲಿ ಅಭಿವ್ಯಕ್ತಿಯಾಗಿರುವ ಎಲ್ಲವನ್ನೂ ಮತದಾರರು ಅಳೆದು ತೂಗಿ ನೋಡಬೇಕು. ರಾಜಕಾರಣಿಗಳು ತಮ್ಮ ಮತದ ಜೊತೆಗೆ ಪರಾರಿ ಆಗುವುದಿಲ್ಲ ಎಂಬುದನ್ನು ಮತದಾರರು ಖಾತರಿಪಡಿಸಿಕೊಳ್ಳಬೇಕು. ಈ ಹಿಂದೆಂದಿಗಿಂತಲೂ ಈಗ ರಾಜಕಾರಣವು ಜನರು ಮತ್ತು ಅವರ ಜೀವನಕ್ಕೆ ಹೆಚ್ಚು ಮುಖ್ಯವಾಗಿದೆ. ಚುನಾವಣೆಯು
ಪ್ರಜಾಪ್ರಭುತ್ವವನ್ನು ಅಭಿವ್ಯಕ್ತಿಸುವ ಪರಿಣಾಮಕಾರಿ ಸಾಧನ. ಕರ್ನಾಟಕಕ್ಕೆ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯು ಬೇಕಿದೆ. ಇದನ್ನು ಸಾಧ್ಯವಾಗಿಸುವುದು ಚುನಾವಣಾ ಆಯೋಗದ ಕರ್ತವ್ಯ ಮಾತ್ರವಲ್ಲ, ಜನರ ಕರ್ತವ್ಯವೂ ಹೌದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT