ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ತೈಲ, ಎಲ್‌ಪಿಜಿ ಬೆಲೆ ಏರಿಕೆ ಕಷ್ಟಕಾಲದಲ್ಲಿ ಹೊರೆ ಹೆಚ್ಚಳ ಬೇಡ

Last Updated 23 ಮಾರ್ಚ್ 2022, 19:45 IST
ಅಕ್ಷರ ಗಾತ್ರ

ಪೆಟ್ರೋಲ್, ಡೀಸೆಲ್ ಮತ್ತು ಮನೆಗಳಲ್ಲಿ ಬಳಸುವ ಅಡುಗೆ ಅನಿಲ ಸಿಲಿಂಡರ್‌ ಬೆಲೆಯನ್ನು ಹೆಚ್ಚಿಸಲಾಗಿದೆ. ಉತ್ತರಪ್ರದೇಶ ಸೇರಿದಂತೆ ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಹತ್ತಿರವಾಗುವವರೆಗೆ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಪ್ರತಿದಿನ ಎಂಬಂತೆ ಹೆಚ್ಚಿಸಲಾಗುತ್ತಿತ್ತು. ತೈಲೋತ್ಪನ್ನಗಳ ಬೆಲೆ ಏರಿಕೆಗೂ ತನಗೂ ಸಂಬಂಧ ಇಲ್ಲ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯ ಆಧಾರದಲ್ಲಿ ದೇಶಿ ಮಾರುಕಟ್ಟೆಯಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಆಗುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳುತ್ತಿತ್ತು. ಆದರೆ, ಚುನಾವಣೆ ಸಂದರ್ಭದಲ್ಲಿ ಮಾತ್ರ ಸುಮಾರು ನಾಲ್ಕು ತಿಂಗಳ ಅವಧಿಗೆ ದೇಶದಲ್ಲಿ ಪೆಟ್ರೋಲ್‌ ಬೆಲೆ ಹಾಗೂ ಡೀಸೆಲ್ ಬೆಲೆ ಸ್ಥಿರವಾಗಿದ್ದವು. ಆಗ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಏರಿಳಿಕೆ ಆಗಿರಲಿಲ್ಲವೇ? ಇದಕ್ಕೆ ಉತ್ತರ ಸಾರ್ವಜನಿಕರಿಗೂ ಗೊತ್ತಿದೆ, ಸರ್ಕಾರಕ್ಕೂ ಗೊತ್ತಿದೆ. ಕೇಂದ್ರದ ಎನ್‌ಡಿಎ ಸರ್ಕಾರದ ನೇತೃತ್ವವನ್ನು ವಹಿಸಿರುವ ಬಿಜೆಪಿಯು ಮುಕ್ತ ಮಾರುಕಟ್ಟೆಯ ತತ್ವಗಳ ಪರವಾಗಿ ಮಾತನಾಡುತ್ತದೆ, ಪೆಟ್ರೋಲ್-ಡೀಸೆಲ್ ಬೆಲೆಯನ್ನು ನಿಯಂತ್ರಣಮುಕ್ತಗೊಳಿಸಿದೆ. ಆದರೆ, ಚುನಾವಣೆ ಸಂದರ್ಭದಲ್ಲಿ ಮಾತ್ರ ತೈಲ ಬೆಲೆಯನ್ನು ಸ್ಥಿರವಾಗಿ ಇರಿಸುತ್ತದೆ. ಇದು ಮುಕ್ತ ಮಾರುಕಟ್ಟೆಯ ‍ಪರ ನೀತಿ ಅಲ್ಲ; ಇದು ಚುನಾವಣಾ ಲೆಕ್ಕಾಚಾರದ ನೀತಿ ಆಗುತ್ತದೆ. ದೇಶದಲ್ಲಿ ಕೋವಿಡ್ ಅಲೆ ಆರಂಭವಾದಾಗ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ವಿಪರೀತವಾಗಿ ಕುಸಿಯಿತು. ಅದರ ಲಾಭವನ್ನು ಸರ್ಕಾರವು ಜನರಿಗೆ ವರ್ಗಾಯಿಸಲಿಲ್ಲ. ಇದು ತೈಲ ಬೆಲೆಯನ್ನು ನಿಯಂತ್ರಣ ಮುಕ್ತಗೊಳಿಸಿದ ಉದ್ದೇಶಕ್ಕೆ ತಕ್ಕುದಾಗಿ ಇರಲಿಲ್ಲ. ಸರ್ಕಾರವು ತನ್ನ ಒಲವು ಯಾವ ತತ್ವದ ಕಡೆ ಇದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.

ಜಾಗತಿಕ ಮಟ್ಟದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದ್ದು, ಜನಸಾಮಾನ್ಯರ ಹಿತಾಸಕ್ತಿ ರಕ್ಷಿಸುವ ಉದ್ದೇಶದಿಂದ ಇಂಧನ ಬೆಲೆಯನ್ನು ನಿಯಂತ್ರಣದಲ್ಲಿ ಇರಿಸಲು ಜಾಗರೂಕತೆಯಿಂದ, ಅಗತ್ಯ ಎದುರಾದಾಗ ಮಧ್ಯಪ್ರವೇಶ ಮಾಡಲಾಗುವುದು ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಅವರು ರಾಜ್ಯಸಭೆಯಲ್ಲಿ ಹಿಂದಿನ ವಾರ ಹೇಳಿದ್ದರು. ಈಗ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯು ಸತತವಾಗಿ ಎರಡು ದಿನಗಳಿಂದ ಏರಿಕೆ ಆಗಿದೆ. ಹಿಂದಿನ ಅನುಭವದ ಆಧಾರದಲ್ಲಿ ಹೇಳುವುದಾದರೆ, ಈ ಬೆಲೆ ಏರಿಕೆಯು ಇನ್ನೂ ಕೆಲವು ದಿನಗಳವರೆಗೆ ಮುಂದುವರಿಯುವ ಸಾಧ್ಯತೆ ಇದೆ. ಸರ್ಕಾರವೇ ಹೇಳಿರುವ ‘ಅಗತ್ಯ ಎದುರಾದಾಗ ಮಧ್ಯಪ್ರವೇಶ’ ಎಂಬ ಮಾತಿನ ಅರ್ಥ ಏನು? ಜನವರಿ ಮತ್ತು ಫೆಬ್ರುವರಿಯಲ್ಲಿ ಚಿಲ್ಲರೆ ಹಣದುಬ್ಬರ ದರವು ಭಾರತೀಯ ರಿಸರ್ವ್‌ ಬ್ಯಾಂಕ್ ಹಾಕಿಕೊಂಡಿರುವ ಮಿತಿಯನ್ನು ಮೀರಿದೆ. ಈಗ ಡೀಸೆಲ್ ಬೆಲೆ ಹೆಚ್ಚಳವು ಹಣದುಬ್ಬರ
ವನ್ನು ಇನ್ನಷ್ಟು ಹೆಚ್ಚುವಂತೆ ಮಾಡಲಿದೆ ಎಂಬ ವಿಚಾರವಾಗಿ ಅನುಮಾನಗಳೇನೂ ಬೇಕಿಲ್ಲ. ಈಗಿನ ಪರಿಸ್ಥಿತಿಯು, ಹಣದುಬ್ಬರ ಪ್ರಮಾಣ ನಿಯಂತ್ರಿಸಲು ಆರ್‌ಬಿಐಗೆ ಬಡ್ಡಿ ದರ ಹೆಚ್ಚಿಸುವ ಒತ್ತಡವನ್ನು ಸೃಷ್ಟಿಸಬಹುದು. ಹಾಗೆ ಆದಲ್ಲಿ, ಈಗ ಕೆಲವು ತಿಂಗಳುಗಳಿಂದ ಅರ್ಥ ವ್ಯವಸ್ಥೆಯಲ್ಲಿ ಕಂಡುಬಂದಿರುವ ಲವಲವಿಕೆಯು ಮಂಕಾಗಬಹುದು. ದೇಶದಲ್ಲಿ ತೈಲೋತ್ಪನ್ನಗಳ ಬೆಲೆ ಹೆಚ್ಚಿಸುವ ಹಾಗೂ ಇಳಿಸುವ ಅಧಿಕಾರವು ಮಾರುಕಟ್ಟೆಯ ಕೈಯಲ್ಲಿ ಇಲ್ಲ, ಅದು ಇರುವುದು ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಕೈಯಲ್ಲಿ ಎಂಬುದನ್ನು ಚುನಾವಣಾ ಸಂದರ್ಭವು ತೋರಿಸಿಕೊಟ್ಟಿದೆ. ಹೀಗಾಗಿ, ಈಗಿನ ಸಂದರ್ಭದಲ್ಲಿ ತೈಲೋತ್ಪನ್ನಗಳ ಬೆಲೆಯನ್ನು ಇನ್ನಷ್ಟು ಹೆಚ್ಚಿಸುವ ಮೊದಲು ಸಮಗ್ರವಾಗಿ ಆಲೋಚಿಸಿ ತೀರ್ಮಾನ ಕೈಗೊಳ್ಳುವುದು ಸೂಕ್ತವಾದೀತು.

ಒಂದು ವರ್ಷಕ್ಕೂ ಕಡಿಮೆ ಅವಧಿಯಲ್ಲಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯು ₹140ರಷ್ಟು ಹೆಚ್ಚಳವಾಗಿದೆ. 2020ರ ಮೇ ತಿಂಗಳವರೆಗೆ ಎಲ್‌ಪಿಜಿಗೆ ಸಬ್ಸಿಡಿ ನೀಡಲಾಗುತ್ತಿತ್ತು. ನಂತರದಲ್ಲಿ ಸಬ್ಸಿಡಿ ಮೊತ್ತ ವರ್ಗಾವಣೆಯು ಬಹುತೇಕ ಸ್ಥಗಿತವಾಗಿದೆ ಎಂದು ವರದಿಯಾಗಿದೆ. ಹೀಗಿದ್ದರೂ, ಕೇಂದ್ರ ಸರ್ಕಾರವು ಈ ವಿಚಾರವಾಗಿ ಅಧಿಕೃತವಾಗಿ ಒಂದಿನಿತೂ ಮಾತನಾಡುತ್ತಿಲ್ಲ. ಸಬ್ಸಿಡಿಯನ್ನು ಸ್ಥಗಿತಗೊಳಿಸಿದ್ದು ಏಕೆ ಎಂಬುದನ್ನು ಸಾರ್ವಜನಿಕರಿಗೆ ತಿಳಿಸುವ ಹೊಣೆಗಾರಿಕೆಯನ್ನಾದರೂ ಅದು ತೋರಿಸಬೇಕಿತ್ತು. ಅದನ್ನು ಇದುವರೆಗೂ ಮಾಡದೆ ಇರುವುದು ಸರಿಯಲ್ಲ. ವರದಿಗಳ ಪ್ರಕಾರ, ಈಗ ಸಾರ್ವಜನಿಕರು 14.2 ಕೆ.ಜಿ. ತೂಕದ ಎಲ್‌ಪಿಜಿ ಸಿಲಿಂಡರ್‌ಗೆ ‍ಪಾವತಿ ಮಾಡಬೇಕಿರುವ ಮೊತ್ತವು ಇದುವರೆಗಿನ ಗರಿಷ್ಠ ಮೊತ್ತ. ಪೆಟ್ರೋಲ್, ಡೀಸೆಲ್ ಬೆಲೆ ಇನ್ನೂ ಕೆಲವು ಸಮಯದವರೆಗೆ ಆಗಾಗ ಹೆಚ್ಚಳ ಆಗಲಿದೆ ಎಂದು ಉದ್ಯಮದ ಮೂಲಗಳು ಹೇಳಿರುವುದಾಗಿ ವರದಿಯಾಗಿದೆ. ಈಗಿನ ಬೆಲೆ ಏರಿಕೆಯು ಸಾರ್ವಜನಿಕರ, ಅದರಲ್ಲೂ ಮುಖ್ಯವಾಗಿ ಕಡಿಮೆ ಆದಾಯ ಇರುವ ವರ್ಗಗಳ ತಿಂಗಳ ಖರ್ಚಿನ ಮೇಲೆ ವಿಪರೀತ ಒತ್ತಡ ಸೃಷ್ಟಿಸುತ್ತದೆ ಎಂಬುದರಲ್ಲಿ ಅನುಮಾನ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT