ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ| ಚಿಂತನೆ, ಸಮಾಲೋಚನೆ ಇಲ್ಲದೆ‘ಅಗ್ನಿಪಥ’ ಯೋಜನೆ ಘೋಷಣೆ

Last Updated 21 ಜೂನ್ 2022, 19:31 IST
ಅಕ್ಷರ ಗಾತ್ರ

ರಕ್ಷಣಾ ಪಡೆಗಳಲ್ಲಿ ನೇಮಕಾತಿಗಾಗಿ ಹೊಸ ನೀತಿಯನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಈ ನೀತಿಯನ್ನು ವಿರೋಧಿಸಿ ದೇಶದ ವಿವಿಧ ಭಾಗಗಳಲ್ಲಿ ವ್ಯಕ್ತವಾಗಿರುವ ಆಕ್ರೋಶವು ಈ ನೀತಿಯ ಕುರಿತು ಯುವಜನರು ಹೊಂದಿರುವ ಆತಂಕ ಮತ್ತು ಕಳವಳಗಳನ್ನು ತೋರಿಸುತ್ತದೆ. ‘ಅಗ್ನಿಪಥ’ ಎಂಬ ಹೆಸರಿನ ಹೊಸ ನೇಮಕಾತಿ ಯೋಜನೆಯ ಬಗ್ಗೆ ಸರ್ಕಾರವು ಸ್ಪಷ್ಟೀಕರಣಗಳನ್ನು ನೀಡಿ, ಕೆಲವು ಬದಲಾವಣೆ ಗಳನ್ನು ಮಾಡಿದ ಬಳಿಕವೂ ಪ್ರತಿಭಟನೆ ನಿಂತಿಲ್ಲ. ಹಲವು ದಶಕಗಳ ಬಳಿಕ ಸೇನಾ ನೇಮಕಾತಿ ನೀತಿಯಲ್ಲಿ ಭಾರಿ ಬದಲಾವಣೆಯನ್ನು ಅಗ್ನಿಪಥ ತಂದಿದೆ. ಆದರೆ, ಅದರ ಪರಿಣಾಮಗಳೇನು ಎಂಬುದರ ಕುರಿತು ಅಗತ್ಯ ಇದ್ದಷ್ಟು ಚಿಂತನೆ ನಡೆದಿದೆಯೇ ಎಂಬ ಬಗ್ಗೆ ಅನುಮಾನಗಳು ಮೂಡಿವೆ. ಸೇನಾ ಪಡೆಗಳಲ್ಲಿ ಇರುವವರ ಸರಾಸರಿ ವಯಸ್ಸನ್ನು ಕಡಿಮೆ ಮಾಡುವ ಮೂಲಕ ಮೂರೂ ಸೇನೆಗಳಲ್ಲಿ ತಾರುಣ್ಯ ತುಂಬುವುದು ಹೊಸ ನೀತಿಯ ಮುಖ್ಯ ಗುರಿ. ಹದಿನೇಳೂವರೆ ವರ್ಷದಿಂದ 21 ವರ್ಷದ ಒಳಗಿನವರು (ಮೊದಲ ತಂಡದಲ್ಲಿ ನೇಮಕಾತಿಗೆ ಗರಿಷ್ಠ ವಯೋಮಿತಿಯಲ್ಲಿ ಎರಡು ವರ್ಷ ಸಡಿಲಿಕೆ ಘೋಷಿಸಲಾಗಿದೆ) ಅಗ್ನಿಪಥ ಯೋಜನೆ ಅಡಿಯಲ್ಲಿ ಸೇನೆಗೆ ಸೇರಲು ಅರ್ಹರು. ಹೀಗೆ ನೇಮಕಗೊಂಡವರನ್ನು ಅಗ್ನಿವೀರರು ಎಂದು ಕರೆಯಲಾಗುವುದು ಎಂದು ಸರ್ಕಾರ ಹೇಳಿದೆ. ಅಗ್ನಿವೀರರ ಕರ್ತವ್ಯದ ಅವಧಿಯು ನಾಲ್ಕು ವರ್ಷ ಮಾತ್ರ. ಇವರಲ್ಲಿ ಶೇ 25ರಷ್ಟು ಮಂದಿಯನ್ನು ಆಯ್ದು ದೀರ್ಘಾವಧಿ ಕರ್ತವ್ಯಕ್ಕೆ ಮರುನೇಮಕ ಮಾಡಿಕೊಳ್ಳಲಾಗುವುದು. ಉಳಿದವರಿಗೆ ₹11.71 ಲಕ್ಷದ ನಿಧಿಯನ್ನು ಕೊಟ್ಟು ಅವರ ಸೇವೆಯನ್ನು ಅಂತ್ಯಗೊಳಿಸಲಾಗುವುದು. ಸೇನೆಯ ಯುದ್ಧ ಸಾಮರ್ಥ್ಯವನ್ನು ಈ ಯೋಜನೆಯು ಹೆಚ್ಚಿಸಲಿದೆ ಮತ್ತು ಸೈನ್ಯದಲ್ಲಿ ತಂತ್ರಜ್ಞಾನ ಬಳಕೆಯು ಹೆಚ್ಚಲಿದೆ ಎಂದು ಹೇಳಲಾಗಿದೆ. ಬ್ರಿಟಿಷರ ಕಾಲದಲ್ಲಿ ಆರಂಭಿಸಲಾದ ನಿರ್ದಿಷ್ಟ ಜಾತಿ ಮತ್ತು ಸಮುದಾಯ ಆಧಾರಿತ ರೆಜಿಮೆಂಟ್‌ ವ್ಯವಸ್ಥೆಯನ್ನು ಹೊಸ ನೇಮಕಾತಿ ನೀತಿಯಲ್ಲಿ ಅನುಸರಿಸಲಾಗುವುದಿಲ್ಲ. ರೆಜಿಮೆಂಟ್‌ಗಳು ಅಖಿಲ ಭಾರತ ಸ್ವರೂಪ ಪಡೆದುಕೊಳ್ಳಲಿವೆ ಮತ್ತು ಎಲ್ಲ ವರ್ಗಗಳನ್ನೂ ಒಳಗೊಂಡಿರಲಿವೆ ಎಂದು ಮೊದಲಿಗೆ ಹೇಳಲಾಗಿತ್ತು. ಆದರೆ, ರೆಜಿಮೆಂಟ್‌ ವ್ಯವಸ್ಥೆ ಮುಂದುವರಿಯುಲಿದೆ ಎಂದು ಸೇನೆಯು ಸ್ಪಷ್ಟಪಡಿಸಿದೆ.

ಅಗ್ನಿಪಥ ಯೋಜನೆಗೆ ಮಾಜಿ ಸೈನಿಕರು ಮತ್ತು ರಕ್ಷಣಾ ತಜ್ಞರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ದೇಶದ ಯುವ ಜನರಿಗೆ ಈ ಯೋಜನೆಯು ಇಷ್ಟವಾಗಿಲ್ಲ ಎಂಬುದನ್ನು ಪ‍್ರತಿಭಟನೆಗಳೇ ಹೇಳುತ್ತವೆ. ಸರ್ಕಾರಕ್ಕೆ ಉಳಿತಾಯ ಆಗಲಿದೆ ಎಂಬುದುಈ ಯೋಜನೆಯ ದೊಡ್ಡ ಪ್ರಯೋಜನ. ಸೈನಿಕರಿಗೆ ನೀಡುವ ಪಿಂಚಣಿ ಮತ್ತು ಇತರ ನಿವೃತ್ತಿ ಸೌಲಭ್ಯಗಳಿಗೆ ಆಗುವ ವೆಚ್ಚ ತಗ್ಗುತ್ತದೆ. ಅಲ್ಪಾವಧಿ ಕರ್ತವ್ಯ ಆಧಾರಿತ ನೇಮಕ ಪದ್ಧತಿಯು ಇತರ ಕೆಲವು ದೇಶಗಳಲ್ಲಿ ಇದೆ. ಆದರೆ, ರಕ್ಷಣಾ ಪಡೆಗಳಲ್ಲಿ ಕಾಯಂ ಉದ್ಯೋಗಕ್ಕೆ ನೇಮಕಗೊಳ್ಳಲು ಜನರ ಕೊರತೆ ಇಲ್ಲದ ಭಾರತದಂತಹ ದೇಶಕ್ಕೆ ಇಂತಹ ನೀತಿ ಅಗತ್ಯವೇ ಎಂಬುದು ಚರ್ಚಾರ್ಹ.

ಅಗ್ನಿವೀರರನ್ನು ಸಮರ್ಥ ಸೈನಿಕರನ್ನಾಗಿ ರೂಪಿಸಲು ಈಗ ನಿಗದಿ ಮಾಡಿರುವ ತರಬೇತಿ ಅವಧಿಯು ಸಾಕೇ ಎಂಬ ಪ್ರಶ್ನೆ ಇದೆ. ಕಾಯಂ ಆಗಿ ಸೇನೆಗೆ ಸೇರಿದವರಷ್ಟು ಸ್ಫೂರ್ತಿಯುತವಾಗಿ ಅಗ್ನಿವೀರರು ಇರಬಹುದೇ ಎಂಬ ಪ್ರಶ್ನೆಯೂ ಇದೆ. ಅಲ್ಪಾವಧಿ ಕರ್ತವ್ಯದ ಬಳಿಕ ಕೆಲಸ ಕಳೆದುಕೊಳ್ಳುವ ಮುಕ್ಕಾಲು ಪಾಲು ಯುವಜನರು ನಿರಾಶೆ ಮತ್ತು ಹತಾಶೆಗೆ ಒಳಗಾಗುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾಗಿದೆ. ಪಿಂಚಣಿ ಸೌಲಭ್ಯ ಇಲ್ಲದ ಅಲ್ಪಾವಧಿ ಉದ್ಯೋಗದತ್ತ ಅರ್ಹ ಯುವಜನರು ಆಕರ್ಷಿತರಾಗದೇ ಇರಬಹುದು. ಸೇನೆಯ ಉದ್ಯೋಗದ ಆಕಾಂಕ್ಷೆಯಲ್ಲಿದ್ದ ಯುವಜನರು ಈ ಕಾರಣಕ್ಕಾಗಿಯೇ ಹೆಚ್ಚು ನಿರಾಶರಾಗಿದ್ದಾರೆ. ದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ಈ ಹಿನ್ನೆಲೆಯಲ್ಲಿ ನೋಡಬೇಕು. ಕೇಂದ್ರ ಗೃಹ ಸಚಿವಾಲಯದ ಪೊಲೀಸ್‌ ಪಡೆಗಳು ಮತ್ತು ರಕ್ಷಣಾ ಸಚಿವಾಲಯದ ಅರೆ ಸೇನಾ ಪಡೆಗಳಲ್ಲಿ ಅಗ್ನಿವೀರರಿಗೆ ಶೇ 10ರಷ್ಟು ಮೀಸಲಾಗಿ ಘೋಷಿಸುವ ಮೂಲಕ ಪ್ರತಿಭಟನೆಯನ್ನು ತಣ್ಣಗಾಗಿಸುವ ಯತ್ನವನ್ನು ಸರ್ಕಾರ ಮಾಡಿದೆ. ಈ ಘೋಷಣೆಯ ಬಳಿಕವೂ ಪ್ರತಿಭಟನೆ ಮುಂದುವರಿದಿದೆ. ಏಕೆಂದರೆ, ಈ ಪಡೆಗಳಲ್ಲಿ ವಾರ್ಷಿಕ ಲಭ್ಯವಿರುವ ಹುದ್ದೆಗಳ ಸಂಖ್ಯೆ ದೊಡ್ಡದೇನಲ್ಲ. ಹಾಗಾಗಿ ‘ಅಗ್ನಿವೀರ’ರಾಗಿ ಸೇನೆಯಿಂದ ಹೊರಬರುವವರಲ್ಲಿ ದೊಡ್ಡ ವರ್ಗವು ಬೇರೆಡೆಯೇ ಉದ್ಯೋಗ ಕಂಡುಕೊಳ್ಳಬೇಕಾಗುತ್ತದೆ. ನಮ್ಮ ದೇಶದಲ್ಲಿ ಉದ್ಯೋಗ ಪಡೆದುಕೊಳ್ಳುವುದು ಅಷ್ಟೊಂದು ಸುಲಭವೇನಲ್ಲ. ಅಗ್ನಿಪಥ ಯೋಜನೆಯು ಸಮಾಜದ ಮೇಲೆಯೂ ಪ್ರತಿಕೂಲ ಪರಿಣಾಮ ಬೀರಬಹುದು ಎಂಬ ಕಳವಳದಲ್ಲಿ ಹುರುಳಿಲ್ಲ ಎಂದು ಹೇಳಲಾಗದು. ಸೇನಾ ತರಬೇತಿ ಹೊಂದಿರುವ ಈ ಯುವಕರಲ್ಲಿ ಹಲವರಿಗೆ ಸೂಕ್ತ ಉದ್ಯೋಗ ಸಿಗದೆ, ಅವರು ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ದುರ್ಬಳಕೆ ಆಗಬಹುದು ಎಂಬ ಆತಂಕ ಕೆಲವರಲ್ಲಿದೆ. ಯೋಜನೆ ಘೋಷಣೆಗಿಂತ ಮೊದಲೇ ಸಂಬಂಧಪಟ್ಟ ಎಲ್ಲರ ಜೊತೆಗೆ ಸಮಾಲೋಚನೆಯನ್ನು ಸರ್ಕಾರ ನಡೆಸಬೇಕಿತ್ತು. ಹಾಗೆ ಸಮಾಲೋಚನೆ ನಡೆಸಿದ್ದರೆ, ಯೋಜನೆಯಲ್ಲಿ ಇದೆ ಎಂದು ಹೇಳಲಾಗುವ ಹಲವು ಲೋಪಗಳನ್ನು ಸರಿಪಡಿಸಬಹುದಾಗಿತ್ತು. ಯೋಜನೆ ಘೋಷಣೆಯ ಬಳಿಕ ಪದೇ ಪದೇ ಬದಲಾವಣೆಗಳನ್ನು ಮಾಡುವುದನ್ನು ತಪ್ಪಿಸಬಹುದಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT