ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿವಿಷಕ್ಕೆ ಮತ್ತೆ ಮತ್ತೆ ಬಲಿ ಮರ್ಯಾದೆಗೇಡು ಹತ್ಯೆಗಳಿಗೆ ಕೊನೆಯೆಲ್ಲಿ?

Published 29 ಆಗಸ್ಟ್ 2023, 23:55 IST
Last Updated 29 ಆಗಸ್ಟ್ 2023, 23:55 IST
ಅಕ್ಷರ ಗಾತ್ರ

ಸಮಾಜವನ್ನು ಆಳವಾಗಿ ಆವರಿಸಿಕೊಂಡಿರುವ ಜಾತಿವಿಷದ ಮುಂದೆ ಕರುಳ ಸಂಬಂಧಗಳೂ ಬೆಲೆ ಕಳೆದುಕೊಂಡು ಸಾವಿನಂಥ ಘೋರಗಳು ಸಂಭವಿಸುತ್ತವೆ ಎನ್ನುವುದಕ್ಕೆ ಕೋಲಾರ ಜಿಲ್ಲೆಯ ತೊಟ್ಲಿ ಗ್ರಾಮದಲ್ಲಿ ನಡೆದಿರುವ ಯುವತಿಯ ಕೊಲೆ ನಿದರ್ಶನದಂತಿದೆ. ಜಾತಿವ್ಯಸನದ ಕಾರಣದಿಂದಾಗಿ ಹೆತ್ತ ಮಗಳನ್ನು ತಂದೆಯೇ ಕೊಂದಿರುವ ಕೃತ್ಯದ ಹಿಂದಿನ ಕ್ರೌರ್ಯ ನಾಗರಿಕ ಸಮಾಜಕ್ಕೆ ಕಳಂಕಪ್ರಾಯವಾದುದು. ಎಂತಹುದೇ ಸಂದರ್ಭದಲ್ಲೂ ಮಕ್ಕಳ ಹಿತಾಸಕ್ತಿಯನ್ನು ರಕ್ಷಿಸಬೇಕಾದ ತಂದೆಗೆ, ತನ್ನದಲ್ಲದ ಜಾತಿಯ ಯುವಕನನ್ನು ಪ್ರೇಮಿಸಿದ ಮಗಳು ಕೊಲೆಗೆ ಅರ್ಹಳಾಗಿ ಕಾಣಿಸಿರುವುದು ಕೌಟುಂಬಿಕ ಸಂಬಂಧಗಳ ಘನತೆಯನ್ನೇ ಪ್ರಶ್ನಾರ್ಹವನ್ನಾಗಿಸುವಂತಿದೆ. ಪರಿಶಿಷ್ಟ ಪಂಗಡದ ಯುವಕನನ್ನು ಪ್ರೇಮಿಸಿದ ಒಕ್ಕಲಿಗ ಕುಟುಂಬದ ರಮ್ಯಾ, ಕೊಲೆಗೀಡಾಗಿರುವ ನತದೃಷ್ಟ ತರುಣಿ. ಜೂನ್‌ 27ರಂದು ಕೋಲಾರ ಜಿಲ್ಲೆಯ ಬೋಡಗುರ್ಕಿ ಗ್ರಾಮದಲ್ಲಿ ಇಂತಹುದೇ ಪ್ರಕರಣ ನಡೆದಿತ್ತು. ಪರಿಶಿಷ್ಟ ಜಾತಿಯ ಯುವಕನನ್ನು ಪ್ರೀತಿಸಿದ ಯುವತಿ ತನ್ನ ತಂದೆಯಿಂದಲೇ ಕೊಲೆಗೀಡಾಗಿದ್ದಳು ಹಾಗೂ ಪ್ರೇಮಿಯ ಸಾವಿನ ಸುದ್ದಿ ತಿಳಿದು ಆಘಾತಕ್ಕೆ ಒಳಗಾದ ಯುವಕ ಚಲಿಸುವ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ. ಆ ಘಟನೆ ಹಸಿಯಾಗಿರುವಾಗಲೇ ಗಾಯವನ್ನು ಮತ್ತಷ್ಟು ಹುಣ್ಣಾಗಿಸುವಂತಹ ಮತ್ತೊಂದು ಹತ್ಯೆ ನಡೆದಿದೆ. ತನ್ನ ಮಾತುಗಳಿಗೆ ಬೆಲೆ ಕೊಡದಿರುವ ಮಗಳನ್ನು ಕೊಂದಿರುವ ತಂದೆ, ತನ್ನ ಸಹೋದರರ ಸಹಾಯದಿಂದ ಮೃತದೇಹವನ್ನು ತೋಟದಲ್ಲಿ ಹೂತುಹಾಕಿದ್ದಾನೆ. ಮಗಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಊರಿನವರನ್ನು ನಂಬಿಸುವ ಪ್ರಯತ್ನವನ್ನೂ ಮಾಡಿದ್ದಾನೆ. ಆದರೆ, ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಊರಿನಲ್ಲಿ ಹಬ್ಬಿದ ವದಂತಿ ಪೊಲೀಸರನ್ನು ತಲುಪಿದೆ. ಪೊಲೀಸರು ಸ್ವಯಂಪ್ರೇರಣೆಯಿಂದ ದೂರು ದಾಖಲಿಸಿಕೊಂಡು ನಡೆಸಿದ ವಿಚಾರಣೆಯಲ್ಲಿ ಹತ್ಯೆಯ ಸಂಗತಿ ಬಹಿರಂಗಗೊಂಡಿದೆ. ಮರ್ಯಾದೆಗೇಡು ಹತ್ಯೆಯ ಹಿನ್ನೆಲೆಯಲ್ಲಿ ಕೊಲೆಗೀಡಾದ ಯುವತಿಯ ತಂದೆ ಹಾಗೂ ಆತನ ಇಬ್ಬರು ತಮ್ಮಂದಿರನ್ನು ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕರ್ನಾಟಕ ಮಾತ್ರವಲ್ಲದೆ, ದೇಶದ ವಿವಿಧ ಭಾಗಗಳಲ್ಲೂ ಜಾತಿಕುರುಡಿನ ಕಿಚ್ಚಿಗೆ ತರುಣ– ತರುಣಿಯರು ಬಲಿಯಾಗುತ್ತಲೇ ಇದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಕೆಲವು ಪ್ರಕರಣಗಳು ಆತ್ಮಹತ್ಯೆಯ ಹೆಸರಿನಲ್ಲಿ ಮುಚ್ಚಿಹೋಗಿರುವ ಸಾಧ್ಯತೆಗಳೂ ಇವೆ. ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೊ ಅಂಕಿಅಂಶಗಳ ಪ್ರಕಾರ 2017–2018ರಲ್ಲಿ ಮರ್ಯಾದೆಗೇಡು ಹತ್ಯೆಯ ಒಂದು ಪ್ರಕರಣವಷ್ಟೇ ದೇಶದಲ್ಲಿ ದಾಖಲಾಗಿದ್ದು, 2019ರಲ್ಲಿ 25 ಪ್ರಕರಣಗಳು ವರದಿಯಾಗಿವೆ. ಆದರೆ, ಸ್ವಯಂ ಸೇವಾಸಂಸ್ಥೆಯೊಂದರ 2019ರ ವರದಿಯ ಪ್ರಕಾರ, ಐದು ವರ್ಷಗಳ ಅವಧಿಯಲ್ಲಿ 195 ಪ್ರಕರಣಗಳು ತಮಿಳುನಾಡೊಂದರಲ್ಲೇ ವರದಿಯಾಗಿವೆ. ಕರ್ನಾಟಕದಲ್ಲೂ ಮರ್ಯಾದೆಗೇಡು ಹತ್ಯೆಯ ಪ್ರಕರಣಗಳು ಆಗಾಗ ವರದಿಯಾಗುತ್ತಲೇ ಇವೆ. ನಾಯಕ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬ ಅನ್ಯಜಾತಿಯ ಯುವಕನನ್ನು ಪ್ರೇಮಿಸಿದ ಮಗಳನ್ನು ಕೊಂದಿರುವ ಸುದ್ದಿ ತುಮಕೂರು ಜಿಲ್ಲೆಯ ಚಿಕ್ಕಹೆಡಿಗೆಹಳ್ಳಿಯಲ್ಲಿ ಇತ್ತೀಚೆಗೆ ನಡೆದಿತ್ತು. ಬಳ್ಳಾರಿಯಲ್ಲಿ ಯುವತಿಯೊಬ್ಬಳು ತನ್ನ ಪ್ರೇಮದ ಕಾರಣದಿಂದಾಗಿ ತಂದೆಯಿಂದಲೇ ಕೊಲೆಗೀಡಾಗಿದ ಘಟನೆ ಕಳೆದ ವರ್ಷ ನಡೆದಿತ್ತು. ಈಗ ಕೋಲಾರ ಜಿಲ್ಲೆಯಲ್ಲಿ ಎರಡು ತಿಂಗಳ ಅವಧಿಯಲ್ಲಿ ಎರಡು ಮಾರ್ಯದೆಗೇಡು ಹತ್ಯೆಗಳು ನಡೆದಿವೆ. ಈ ಹತ್ಯೆಗಳು ಸಮಾಜದಲ್ಲಿ ಆಳವಾಗಿ ಬೇರುಬಿಟ್ಟಿರುವ ಜಾತೀಯತೆಯ ಕ್ರೌರ್ಯವನ್ನು ಸೂಚಿಸುವಂತಿವೆ. ಜ್ವಾಲಾಮುಖಿಯಂತೆ ಆಗಾಗ ಸ್ಫೋಟಿಸುವ ಜಾತಿವಿಷಕ್ಕೆ ಯುವಜನ ಬಲಿಯಾಗುತ್ತಿದ್ದಾರೆ. ಈ ಹತ್ಯೆಗಳಿಂದ ದೇಶದ ಜಾತ್ಯತೀತ ಸ್ವರೂಪ ಗಾಸಿಗೊಳ್ಳುತ್ತಿದ್ದು, ಸಂವಿಧಾನದ ಆಶಯಗಳೂ ಮುಕ್ಕಾಗುತ್ತಿವೆ. ಚಂದ್ರಯಾನದಂತಹ ಅತ್ಯುನ್ನತ ವೈಜ್ಞಾನಿಕ ಸಾಧನೆಗಳ ಇನ್ನೊಂದು ತುದಿಯಲ್ಲಿ ಸಮಾಜದ ಅಂತಃಕರಣವೇ ಬರಡಾಗುತ್ತಿದೆಯೇನೊ ಎಂದು ಅನುಮಾನ ಮೂಡಿಸುವಂತಹ ಘಟನೆಗಳು ನಡೆಯುತ್ತಿವೆ. ಜಾತಿ ಹಾಗೂ ಧರ್ಮದ ಹೆಸರಿನಲ್ಲಿ ನಡೆಯುವ ದ್ವೇಷ–ಹಿಂಸೆಯನ್ನು ತಡೆಗಟ್ಟದೇ ಹೋದರೆ, ನಮ್ಮ ವೈಜ್ಞಾನಿಕ ಸಾಧನೆಗಳು ಹಾಗೂ ವೈಚಾರಿಕ ಚಿಂತನೆಗಳು ‘ಬರಡು ಹೆಮ್ಮೆ’ಯಾಗಿಯೇ ಉಳಿಯಲಿವೆ. ಸಮಾಜದ ಅಂತಃಕರಣವನ್ನು ನಿರಂತರವಾಗಿ ಜಾಗೃತವಾಗಿರಿಸುವ ಕೆಲಸವನ್ನು ಸರ್ಕಾರಗಳು ಪ್ರಜ್ಞಾಪೂರ್ವಕವಾಗಿ ಮಾಡಬೇಕು. ಆ ಕೆಲಸದಲ್ಲಿ ಜನಸಾಮಾನ್ಯರೂ ತೊಡಗಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT