ಮಂಗಳವಾರ, ಮೇ 17, 2022
26 °C

ಸಂಪಾದಕೀಯ: ತುರಹಳ್ಳಿ ಕಿರು ಅರಣ್ಯಕ್ಕೆ ಶಾಶ್ವತ ರಕ್ಷಣೆ ಒದಗಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು ನಗರ ಬೆಳೆಯುತ್ತಾ ಹೋದಂತೆ ಅದರ ನೈಸರ್ಗಿಕ ಪರಿಸರದ ಮೇಲೆ ಒತ್ತಡ ಹೆಚ್ಚುತ್ತಲೇ ಇದೆ. ಇದರ ನಡುವೆಯೂ ತುರಹಳ್ಳಿ ಕಿರು ಅರಣ್ಯವು ನಗರದ ‘ಆಮ್ಲಜನಕ’ ಕಾರ್ಖಾನೆಯ ರೀತಿ ಕೆಲಸ ನಿರ್ವಹಿಸುತ್ತಾ ಬಂದಿದೆ. ಮಹಾನಗರದ ಸೆರಗಿನಲ್ಲೇ ಇರುವ ಈ ಕಾಡು ಈಗಲೂ ಹಲವು ವನ್ಯಜೀವಿಗಳಿಗೆ ನೆಲೆ ಒದಗಿಸುತ್ತಿದೆ. 597 ಎಕರೆಗಳಷ್ಟು ವಿಶಾಲವಾಗಿರುವ ತುರಹಳ್ಳಿ ಕಿರು ಅರಣ್ಯದಲ್ಲಿ ಜಿಂಕೆ, ಹಂದಿ, ಮುಂಗುಸಿ ಮುಂತಾದ ಸಸ್ತನಿಗಳಲ್ಲದೇ ನೂರಕ್ಕೂ ಹೆಚ್ಚು ಪ್ರಭೇದಗಳ ಪಕ್ಷಿಗಳು, 250 ಬಗೆಯ ಕ್ರಿಮಿ–ಕೀಟಗಳು, 25 ಬಗೆಯ ಸರೀಸೃಪಗಳಿರುವುದನ್ನು ಪರಿಸರತಜ್ಞರು ಗುರುತಿಸಿದ್ದಾರೆ.

ಈ ಕಿರು ಅರಣ್ಯಕ್ಕೆ ಸೇರಿದ 40 ಎಕರೆ ಪ್ರದೇಶದಲ್ಲಿ ಅರಣ್ಯ ಇಲಾಖೆ ಈಗಾಗಲೇ ಒಂದು ವೃಕ್ಷೋದ್ಯಾನವನ್ನು ಅಭಿವೃದ್ಧಿಪಡಿಸಿದೆ. ಆದಾಗ್ಯೂ, ನಗರದ ಹೊರವಲಯಗಳಲ್ಲಿ 400 ಎಕರೆಗೂ ಹೆಚ್ಚು ವಿಸ್ತೀರ್ಣದಲ್ಲಿ ವೃಕ್ಷೋದ್ಯಾನ ಅಭಿವೃದ್ಧಿಪಡಿಸುವ ಯೋಜನೆಗೆ ಸರ್ಕಾರವು ತುರಹಳ್ಳಿ ಕಿರು ಅರಣ್ಯವನ್ನೇ ಆಯ್ಕೆ ಮಾಡಿಕೊಂಡಿದೆ.

ನೈಸರ್ಗಿಕ ಕಾಡನ್ನು ಕಡಿದು ಅಲ್ಲಿ ಮತ್ತೆ ಮರಗಳನ್ನು ಬೆಳೆಸುವುದರ ಹಿಂದಿನ ತರ್ಕವೇನು ಎಂಬುದು ಯಕ್ಷಪ್ರಶ್ನೆ. ‘ನೈಸ್‌’ ರಸ್ತೆ ಕಾಮಗಾರಿಯಿಂದಾಗಿ ಈ ಕಿರು ಅರಣ್ಯ ಈಗಾಗಲೇ ಎರಡು ಹೋಳಾಗಿದೆ. ಇದರಿಂದ ವನ್ಯಜೀವಿಗಳ ಸಹಜ ಬದುಕಿನ ಮೇಲೆ ಬಹಳಷ್ಟು ದುಷ್ಪರಿಣಾಮ ಉಂಟಾಗಿದೆ. ವಾಹನಗಳು ಡಿಕ್ಕಿ ಹೊಡೆದು ಪ್ರತಿವರ್ಷವೂ ಹಾವುಗಳು, ಜಿಂಕೆಗಳು ಸಾಯುವುದು ವರದಿಯಾಗುತ್ತಲೇ ಇದೆ. ಕಾಡಿನ ಅಂಚಿನಲ್ಲಿ ಮನೆಗಳು, ಅಪಾರ್ಟ್‌ಮೆಂಟ್‌ ಸಮುಚ್ಚಯಗಳು ಸಹ ನಿರ್ಮಾಣವಾಗಿದ್ದು, ಅಲ್ಲಿ ಮನುಷ್ಯನ ಹಸ್ತಕ್ಷೇಪ ಹೆಚ್ಚಿದೆ. ಈ ಕಾಡಿನಲ್ಲಿ ಕಳ್ಳಬೇಟೆ ನಡೆಯುತ್ತಿರುವ ದೂರುಗಳೂ ಇವೆ. ಅಲ್ಲಿ ವೃಕ್ಷೋದ್ಯಾನ ನಿರ್ಮಿಸಿ ಮತ್ತಷ್ಟು ಮಾನವ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಿದರೆ ವನ್ಯಜೀವಿಗಳ ಪರಿಸ್ಥಿತಿ ಏನಾಗಬೇಡ?

ಅರಣ್ಯ ಇಲಾಖೆಯು ಬೆಂಗಳೂರು ನಗರ ವಿಭಾಗಕ್ಕೆ 2013ರಿಂದ 2023ರವರೆಗೆ ಕಾರ್ಯ ಯೋಜನೆಯೊಂದನ್ನು ರೂಪಿಸಿದೆ. 30 ಡಿಗ್ರಿಗಿಂತ ಹೆಚ್ಚಿನ ಇಳಿಜಾರು ಇರುವ ಕಡೆ ಯಾವುದೇ ಮರಗಳನ್ನು ಕಡಿಯುವುದಕ್ಕೆ ಅವಕಾಶ ನೀಡಬಾರದು, ತೊರೆಗಳ ಅಕ್ಕಪಕ್ಕದಲ್ಲಿ 30 ಮೀಟರ್‌ಗಿಂತ ಹೆಚ್ಚು ಎತ್ತರಕ್ಕೆ ಬೆಳೆದ ಯಾವುದೇ ಮರವನ್ನು ಕಡಿಯುವುದಕ್ಕೆ ಪರವಾನಗಿ ನೀಡಬಾರದು ಎಂಬ ಅಂಶಗಳು ಇದರಲ್ಲಿವೆ. ಇಳಿಜಾರುಗಳಿಂದ ಕೂಡಿದ ಈ ಕಿರು ಅರಣ್ಯ ಪ್ರದೇಶದಲ್ಲಿ ಯಾವುದೇ ಮರ ಕಡಿಯಲು ಅವಕಾಶ ಇಲ್ಲ ಎನ್ನುವುದು ಅರಣ್ಯ ಇಲಾಖೆಗೆ ಗೊತ್ತಿಲ್ಲದ ಸಂಗತಿ ಏನಲ್ಲ. ಕೋವಿಡ್ ನಿಯಂತ್ರಣಕ್ಕೆ ಲಾಕ್‌ಡೌನ್‌ ಜಾರಿಗೊಳಿಸಿದಾಗ ಬೆಂಗಳೂರಿನ ಮಲ್ಲೇಶ್ವರ, ಜಯನಗರದಂತಹ ಪ್ರದೇಶಗಳಲ್ಲೂ ನವಿಲುಗಳು ಕಾಣಿಸಿಕೊಂಡಿವೆ.

ಕೆಲವೆಡೆ ಜಿಂಕೆಗಳೂ ಕಾಣಿಸಿಕೊಂಡಿದ್ದವು. ಮನುಷ್ಯನ ಹಸ್ತಕ್ಷೇಪ ಇಲ್ಲದೇ ಹೋದರೆ ವನ್ಯಜೀವಿಗಳು ಮತ್ತೆ ನಿರ್ಭೀತಿಯಿಂದ ಓಡಾಡಬಲ್ಲವು ಎಂಬುದಕ್ಕೆ ಇದೇ ಪುರಾವೆ. ತುರಹಳ್ಳಿ ಕಿರು ಅರಣ್ಯದಲ್ಲಿ ವೃಕ್ಷೋದ್ಯಾನ ನಿರ್ಮಿಸುವುದರ ವಿರುದ್ಧ ಸಾರ್ವಜನಿಕರು ಹಾಗೂ ಪರಿಸರ ಕಾರ್ಯಕರ್ತರು ದೊಡ್ಡ ಮಟ್ಟದಲ್ಲಿ ಧ್ವನಿ ಎತ್ತಿದ ಬಳಿಕ ಅರಣ್ಯ ಸಚಿವರು ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರ ಅಹವಾಲು ಆಲಿಸಿದ್ದಾರೆ. ಈ ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಭರವಸೆ ನೀಡಿದ್ದಾರೆ. ಆದರೆ, ಈ ಯೋಜನೆಯನ್ನು ಶಾಶ್ವತವಾಗಿಯೇ ಕೈಬಿಡುವ ಅಗತ್ಯವಿದೆ.

ಈ ಕಾಡಿನಲ್ಲಿ ಮುಂದೆಯೂ ಮಾನವ ಚಟುವಟಿಕೆಗೆ ಅವಕಾಶ ಕಲ್ಪಿಸಬಾರದು. 1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆ ಮತ್ತು 2002ರ ಜೀವವೈವಿಧ್ಯ ಸಂರಕ್ಷಣೆ ಕಾಯ್ದೆ ಪ್ರಕಾರ ಅರಣ್ಯಗಳನ್ನು ರಕ್ಷಿಸುವ ಹೊಣೆ ಸರ್ಕಾರದ್ದು. ತುರಹಳ್ಳಿ ಕಿರು ಅರಣ್ಯದ ಪಾಲಿಗೆ ಸರ್ಕಾರವೇ ಖಳನಾಗುವುದು ಬೇಡ. ಕಾಡುಗಳು ಸರ್ಕಾರದ ಸ್ವತ್ತಾದರೂ ಅದರ ನಿಜವಾದ ವಾರಸುದಾರರು ಜನರೇ ಆಗಿದ್ದಾರೆ. ತುರಹಳ್ಳಿಯಂತಹ ಕಿರು ಅರಣ್ಯ ಈಗಲೂ ಉಳಿದಿದೆಯೆಂದರೆ ಅದರಲ್ಲಿ ಜನರ ಹಾಗೂ ಪರಿಸರ ಕಾರ್ಯಕರ್ತರ ನಿರಂತರ ಪ್ರಯತ್ನವೂ ಅಡಗಿದೆ ಎಂಬುದು ಸ್ಫಟಿಕ ಸ್ಪಷ್ಟ.

ವೃಕ್ಷೋದ್ಯಾನಗಳನ್ನು ಅಭಿವೃದ್ಧಿಪಡಿಸುವ ಕಾರ್ಯವನ್ನು ತೋಟಗಾರಿಕಾ ಇಲಾಖೆಗೆ ಬಿಟ್ಟು, ನಶಿಸುತ್ತಿರುವ ಕಾಡುಗಳನ್ನು ಕಾಪಾಡುವುದಕ್ಕೆ ಅರಣ್ಯ ಇಲಾಖೆ ಹೆಚ್ಚಿನ ಗಮನ ವಹಿಸುವುದು ಒಳ್ಳೆಯದು. ಅಭಿವೃದ್ಧಿ ಚಿಂತನೆಗಳು ಮನುಷ್ಯ ಕೇಂದ್ರಿತವಾಗಿದ್ದರೆ ಸಾಲದು. ಅಳಿದುಳಿದ ವನ್ಯಜೀವಿಗಳ ರಕ್ಷಣೆ ಬಗ್ಗೆಯೂ ಸರ್ಕಾರ ಕಾಳಜಿ ವಹಿಸಬೇಕು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು