ಗುರುವಾರ , ಫೆಬ್ರವರಿ 25, 2021
29 °C

ಸಂಪಾದಕೀಯ | ಕಲ್ಲುಗಣಿ ದುರಂತ: ಸ್ಫೋಟಕ ನಿಯಂತ್ರಣ ವ್ಯವಸ್ಥೆಯ ವೈಫಲ್ಯ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ಹಿರೇನಾಗವಲ್ಲಿ ಬಳಿಯ ಕಲ್ಲು ಕ್ವಾರಿಯೊಂದರಲ್ಲಿ ಜಿಲೆಟಿನ್‌ ಸ್ಫೋಟಗೊಂಡು ಆರು ಕಾರ್ಮಿಕರು ದುರ್ಮರಣಕ್ಕೀಡಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯ ಹುಣಸೋಡು ಬಳಿ ಜನವರಿಯಲ್ಲಿ ಅಪಾರ ಪ್ರಮಾಣದ ಸ್ಫೋಟಕವಿದ್ದ ಲಾರಿಯೊಂದು ಸ್ಫೋಟಗೊಂಡು ಆರು ಮಂದಿ ಸಾವಿಗೀಡಾಗಿದ್ದರು. ಅದಾದ ಒಂದು ತಿಂಗಳಲ್ಲೇ ಮತ್ತೊಂದು ದುರಂತ ಸಂಭವಿಸಿದೆ. ಕಲ್ಲು ಗಣಿಗಾರಿಕೆ ಮತ್ತು ಸ್ಫೋಟಕಗಳ ಬಳಕೆ ಮೇಲೆ ನಿಯಂತ್ರಣ ಸಾಧಿಸಲು ಆಡಳಿತ ವ್ಯವಸ್ಥೆಗೆ ಇನ್ನೂ ಸಾಧ್ಯವಾಗಿಲ್ಲ ಎಂಬುದನ್ನು ಈ ಪ್ರಕರಣ ಸ್ಪಷ್ಟವಾಗಿ ತೆರೆದಿಟ್ಟಿದೆ. ಕಲ್ಲು ಗಣಿ ಗುತ್ತಿಗೆಗಳ ಮಂಜೂರಾತಿಯಲ್ಲಿನ ಅಕ್ರಮ, ಸುರಕ್ಷತಾ ವ್ಯವಸ್ಥೆ ಮತ್ತು ಸ್ಫೋಟಕಗಳ ಬಳಕೆ ಮೇಲೆ ನಿಗಾ ಇಡುವ ಪರಿಣಾಮಕಾರಿ ವ್ಯವಸ್ಥೆಯೂ ಇಲ್ಲ ಎಂಬುದನ್ನೂ ಇದು ತೋರಿಸಿ ಕೊಟ್ಟಿದೆ. ರಸ್ತೆ, ಸೇತುವೆ, ಕಟ್ಟಡ ಮತ್ತಿತರ ಕಾಮಗಾರಿಗಳಿಗೆ ಕಲ್ಲಿನ ಬಳಕೆ ಅನಿವಾರ್ಯ. ಆದರೆ, ಕಲ್ಲು ಗಣಿಗಳಲ್ಲಿ ದುರಂತ ಸಂಭವಿಸಿ ಪ್ರಾಣ ಹಾನಿಯಾಗುವುದು ಮತ್ತು ಆಸ್ತಿಗಳಿಗೆ ಹಾನಿಯಾಗು ವುದನ್ನು ತಪ್ಪಿಸಬಲ್ಲ ಬಿಗಿಯಾದ ಕ್ರಮಗಳನ್ನು ಜಾರಿಗೆ ತರಲು ಇನ್ನೂ ಸಾಧ್ಯವಾಗಿಲ್ಲ ಎಂಬುದಕ್ಕೆ ಹುಣಸೋಡು ಹಾಗೂ ಹಿರೇನಾಗವೇಲಿ ದುರ್ಘಟನೆಗಳು ಸಾಕ್ಷ್ಯ ಒದಗಿಸಿವೆ. ಕಲ್ಲು ಗಣಿಗಳ ನಿಯಂತ್ರಣ ಮತ್ತು ಅಲ್ಲಿನ ಚಟುವಟಿಕೆಗಳ ಮೇಲೆ ನಿಗಾ ಇಡುವ ಅಧಿಕಾರ ಹಲವು ಇಲಾಖೆಗಳ ನಡುವೆ ಹರಿದು ಹಂಚಿಹೋಗಿದೆ. ಗಣಿ ಗುತ್ತಿಗೆಗಳ ಮಂಜೂರಾತಿ ಮತ್ತು ನವೀಕರಣಕ್ಕೆ ಇರುವ ಆಸಕ್ತಿಯು ನಿಯಂತ್ರಣ ಹಾಗೂ ನಿಗಾಕ್ಕೆ ಇಲ್ಲದಿರುವುದು ಪದೇ ಪದೇ ದುರಂತಗಳು ಸಂಭವಿಸುವುದಕ್ಕೆ ಎಡೆಮಾಡುತ್ತಿದೆ. ಕ್ರಷರ್‌ಗಳ ಸಂಖ್ಯೆ ಮತ್ತು ಅಧಿಕೃತ ಕಲ್ಲು ಗಣಿಗಳ ಸಂಖ್ಯೆಯ ನಡುವಿನ ಭಾರಿ ಅಂತರವು ಕಲ್ಲು ಗಣಿಗಾರಿಕೆಯ ಅಕ್ರಮಗಳಿಗೆ, ಸಾವು– ನೋವುಗಳಿಗೆ ಮೂಲ ಕಾರಣ ಎಂಬ ಅಭಿಪ್ರಾಯಕ್ಕೆ ಹಿರೇನಾಗವೇಲಿ ದುರಂತ ಮತ್ತೊಮ್ಮೆ ಬಲವಾದ ಪುರಾವೆ ಒದಗಿಸಿದೆ.

ಕಲ್ಲು ಗಣಿಗಾರಿಕೆ ನಡೆಸುತ್ತಿರುವವರಿಗೆ ಹೊರ ರಾಜ್ಯಗಳಿಂದ ದೊಡ್ಡ ಪ್ರಮಾಣದಲ್ಲಿ ಜಿಲೆಟಿನ್‌, ಜೆಲ್‌ ಟ್ಯೂಬ್‌, ಎಲೆಕ್ಟ್ರಿಕ್‌ ಡಿಟೋನೇಟರ್‌
ಗಳಂತಹ ಸ್ಫೋಟಕಗಳು ಪೂರೈಕೆಯಾಗುತ್ತಿವೆ. ಈ ಸ್ಫೋಟಕಗಳ ಸಾಗಣೆ, ದಾಸ್ತಾನು ಮತ್ತು ಬಳಕೆಯ ಮೇಲೆ ನಿಗಾ ಇಡುವುದಕ್ಕೆ ಸರಿಯಾದ ವ್ಯವಸ್ಥೆಯೇ ಇಲ್ಲ. ಕಲ್ಲು ಗಣಿಗಳಲ್ಲಿ ದುರಂತ ಸಂಭವಿಸಿದ ಬಳಿಕವಷ್ಟೇ ಪೊಲೀಸ್‌, ಕಂದಾಯ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಈ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ. ಪೊಲೀಸರ ದಾಳಿಯ ವೇಳೆ ಬಚ್ಚಿಟ್ಟಿದ್ದ ಸ್ಫೋಟಕಗಳನ್ನು ಹೊರಕ್ಕೆ ಸಾಗಿಸಲು ಯತ್ನಿಸಿದಾಗ ಹಿರೇನಾಗವೇಲಿಯಲ್ಲಿ ಸ್ಫೋಟ ಸಂಭವಿಸಿದೆ ಎಂಬ ಮಾಹಿತಿ ಹೊರಬಿದ್ದಿದೆ. ಜಿಲ್ಲಾಧಿಕಾರಿಗಳು ನೀಡುವ ನಿರಾಕ್ಷೇಪಣಾ ಪತ್ರವನ್ನು ಆಧರಿಸಿ, ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷತಾ ಸಂಸ್ಥೆಯು (ಪಿಇಎಸ್‌ಒ) ಕಲ್ಲು ಗಣಿಗಳಲ್ಲಿ ಸ್ಫೋಟಕ್ಕೆ ಅನುಮತಿ ನೀಡುವ ವ್ಯವಸ್ಥೆ ಇದೆ. ಆದರೆ, ಸ್ಫೋಟಕ ಬಳಕೆಗೆ ಸಂಬಂಧಿಸಿದಂತೆ ನಿಯಂತ್ರಣ ಮತ್ತು ತಪಾಸಣೆಯು ಕಡತಗಳಿಗೆ ಸೀಮಿತವಾಗಿದೆ. ಸ್ಫೋಟಕ ಕಾಯ್ದೆ– 1884 ಹಾಗೂ ಸ್ಫೋಟಕ ನಿಯಮ–2008ರಲ್ಲಿ ತಪಾಸಣೆಯ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ಮತ್ತು ಹೆಚ್ಚುವರಿ ಜಿಲ್ಲಾಧಿಕಾರಿಗಳಿಗೆ ಹಂಚಿಕೆ ಮಾಡಲಾಗಿದೆ. ಆದರೆ, ಕಲ್ಲು ಗಣಿಗಳ ವಿಚಾರದಲ್ಲಿ ರಾಜಕೀಯ ಒತ್ತಡ, ಪ್ರಭಾವಗಳು ಕೆಲಸ ಮಾಡುವುದೇ ಹೆಚ್ಚು. ಗುತ್ತಿಗೆ ನೀಡುವಾಗ ಸ್ಥಳೀಯ ಒತ್ತಡಗಳಿಗೆ ಮಣಿಯುವ ಜಿಲ್ಲಾಡಳಿತದ ಅಧಿಕಾರಿಗಳು, ನಿಯಂತ್ರಣ ಕ್ರಮಗಳತ್ತ ಮೌನ ವಹಿಸುವುದು ಸರ್ವೇಸಾಮಾನ್ಯ ಸಂಗತಿಯಂತಾಗಿದೆ. ಗಣಿ ಪ್ರದೇಶದಲ್ಲಿ ಸುರಕ್ಷತಾ ವ್ಯವಸ್ಥೆಗಳ ಮೇಲೆ ನಿಗಾ ಇರಿಸುವ ಹೊಣೆಗಾರಿಕೆ ಹೊಂದಿರುವ ಗಣಿ ಸುರಕ್ಷತಾ ಮಹಾ ನಿರ್ದೇಶನಾಲಯದಲ್ಲಿ (ಡಿಜಿಎಂಎಸ್‌) ಕಲ್ಲು ಗಣಿಗಳನ್ನು ನೋಂದಣಿ ಮಾಡಿಸಿ, ಅನುಮತಿ ಪಡೆಯುತ್ತಿಲ್ಲ ಎಂಬ ಸಂಗತಿಯೂ ಹುಣಸೋಡು ಸ್ಫೋಟದ ನಂತರ ನಡೆಯುತ್ತಿರುವ ತನಿಖೆಯಲ್ಲಿ ಬಯಲಾಗಿದೆ. ಕಲ್ಲು ಗಣಿಗಳಲ್ಲಿ ಸಾವು ನೋವು ತಡೆಯಲು ಸುರಕ್ಷತಾ ಕ್ರಮಗಳ ಪಾಲನೆಯನ್ನು ಕಡ್ಡಾಯಗೊಳಿಸಲು ಅವುಗಳನ್ನು ನೇರವಾಗಿ ಡಿಜಿಎಂಎಸ್‌ ಅಡಿಯಲ್ಲಿ ತರುವುದು, ಗುತ್ತಿಗೆ ಮಂಜೂರಾತಿ ಮತ್ತು ನವೀಕರಣದಲ್ಲಿ ಬಿಗಿಯಾದ ವ್ಯವಸ್ಥೆ ರೂಪಿಸುವುದು ಅಗತ್ಯವಿದೆ. ಸ್ಫೋಟಕಗಳ ದಾಸ್ತಾನು ಮತ್ತು ಬಳಕೆಯ ಮೇಲೆ ನಿಗಾ ಇರಿಸುವುದಕ್ಕೆ ವಿಶೇಷ ವ್ಯವಸ್ಥೆಯ ಅಗತ್ಯವಿದೆ. ಸ್ಫೋಟಕಗಳ ನಿರ್ವಹಣೆಯ ಜ್ಞಾನ ಮತ್ತು ತರಬೇತಿ ಇಲ್ಲದ ಸ್ಥಳೀಯ ಪೊಲೀಸರನ್ನು ಇಂತಹ ಕೆಲಸಗಳಿಗೆ ನಿಯೋಜಿಸುವುದು ಮತ್ತಷ್ಟು ದುರಂತಗಳಿಗೆ ಕಾರಣವಾಗುವ ಅಪಾಯವೂ ಇದೆ. ಕಲ್ಲು ಕ್ವಾರಿಗಳಲ್ಲಿನ ಚಟುವಟಿಕೆಗಳನ್ನು ರಾಜಕೀಯ ಹಸ್ತಕ್ಷೇಪದಿಂದ ಮುಕ್ತಗೊಳಿಸಿ, ಸಂಪೂರ್ಣವಾಗಿ ಪಾರದರ್ಶಕಗೊಳಿಸಬೇಕಿದೆ. ನಿಯಮ ಪಾಲನೆ, ಸ್ಫೋಟಕಗಳ ಬಳಕೆ ಮತ್ತು ಕಾರ್ಮಿಕರ ಜೀವ ರಕ್ಷಣೆ ಕುರಿತು ಕಲ್ಲು ಗಣಿಗಳ ಮಾಲೀಕರಲ್ಲಿ ಜಾಗೃತಿ ಮೂಡಿಸಬೇಕಾದ ಜರೂರು ಕೂಡ ಇದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು