ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುನರ್‌ ನಾಮಕರಣ ಪ್ರಹಸನ ಸಾಕುಜನರ ಬದುಕಿನ ಸುಧಾರಣೆ ಆಗಬೇಕು

Last Updated 9 ಆಗಸ್ಟ್ 2021, 2:03 IST
ಅಕ್ಷರ ಗಾತ್ರ

ರಾಜೀವ್‌ ಗಾಂಧಿ ಖೇಲ್ ರತ್ನ ಪ್ರಶಸ್ತಿ ಹೆಸರನ್ನು ‘ಮೇಜರ್‌ ಧ್ಯಾನಚಂದ್ ಖೇಲ್ ರತ್ನ’ ಪ್ರಶಸ್ತಿ ಎಂದು ಬದಲಾಯಿಸಲು ನಿರ್ಧರಿಸಿರುವ ಕೇಂದ್ರ ಸರ್ಕಾರದ ನಡೆ, ರಾಜಕಾರಣದ ಆಟವೇ ಹೊರತು ಕ್ರೀಡಾಸ್ಫೂರ್ತಿಯನ್ನು ಎತ್ತಿಹಿಡಿಯುವ ಪ್ರಯತ್ನವಲ್ಲ. ಸಂಸ್ಥೆ, ಸರ್ಕಾರಿ ಕಾರ್ಯಕ್ರಮ ಅಥವಾ ಆಟದ ಮೈದಾನಗಳಿಗೆ ಹಿಂದಿನ ಸರ್ಕಾರಗಳು ಮಾಡಿದ ನಾಮಕರಣವನ್ನು ಅಧಿಕಾರದಲ್ಲಿರುವ ಪಕ್ಷ ಬದಲಾಯಿಸುವ ಕ್ಷುಲ್ಲಕ ರಾಜಕಾರಣದಿಂದ ಜನರಿಗೆ ಅಥವಾ ದೇಶದ ಅಭಿವೃದ್ಧಿಗೆ ಉಪಯೋಗವೇನೂ ಇಲ್ಲ.

ನಾಲ್ಕು ದಶಕಗಳನಂತರ ಭಾರತೀಯ ಹಾಕಿ ಆಟಗಾರರು ಒಲಿಂಪಿಕ್ಸ್‌ನಲ್ಲಿ ಪದಕ ಸಾಧನೆ ಮಾಡಿರುವ ಸಂದರ್ಭವನ್ನು ಬಳಸಿಕೊಂಡಿರುವ ಸರ್ಕಾರ, ಭಾರತೀಯ ಹಾಕಿಯ ದಂತಕಥೆ ಧ್ಯಾನಚಂದ್ ಹೆಸರನ್ನು ರಾಜಕೀಯ ಕಾರಣಗಳಿಗಾಗಿ ನೆನಪಿಸಿಕೊಂಡಿದೆ. ಧ್ಯಾನಚಂದ್ ಅವರ ಹೆಸರಿನಿಂದ ಕ್ರೀಡಾಕ್ಷೇತ್ರದ ಉನ್ನತ ಪ್ರಶಸ್ತಿಯನ್ನು ಗುರುತಿಸುವುದು ತಾರ್ಕಿಕವಾಗಿ ಸರಿ. ಆದರೆ, ಈಗಾಗಲೇ ಚಾಲ್ತಿಯಲ್ಲಿರುವ ಪ್ರಶಸ್ತಿಯೊಂದರ ಹೆಸರನ್ನು ಬದಲಿಸುವ ಮೂಲಕ ಧ್ಯಾನಚಂದ್ ಅವರನ್ನು ಗೌರವಿಸುವುದು ಸರಿಯಲ್ಲ. ಹಾಕಿ ಮಾಂತ್ರಿಕನಿಗೆ ಗೌರವ ಸಲ್ಲಿಸುವ ಉದ್ದೇಶ ಪ್ರಾಮಾಣಿಕವಾಗಿದ್ದಲ್ಲಿ, ಭಾರತೀಯ ಹಾಕಿಗೆ ಕಾಯಕಲ್ಪ ನೀಡಲು ಹೊಸ ಕಾರ್ಯಕ್ರಮಗಳನ್ನು ಸರ್ಕಾರ ಹಮ್ಮಿಕೊಳ್ಳ ಬಹುದಿತ್ತು‌.

ಯುವ ಹಾಕಿ ಆಟಗಾರರ ಶೋಧ ಹಾಗೂ ಅವರ ಸಾಮರ್ಥ್ಯವರ್ಧನೆಗೆ ಯೋಜನೆಗಳನ್ನು ರೂಪಿಸಬಹುದಿತ್ತು. ಅಲ್ಲದೆ, ಕ್ರೀಡಾಕ್ಷೇತ್ರಕ್ಕೆ ಸಲ್ಲಿಸಿದ ಜೀವಮಾನ ಸಾಧನೆಗಾಗಿ ಧ್ಯಾನಚಂದ್ ಹೆಸರಿನ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಈಗಾಗಲೇ ನೀಡುತ್ತಿದೆ. ಈಗ ಧ್ಯಾನಚಂದ್‌ರ ಹೆಸರಿನಿಂದಲೇ ಮತ್ತೊಂದು ಪ್ರಶಸ್ತಿಯನ್ನು ನೀಡಲು ಹೊರಟಿರುವ ಔಚಿತ್ಯ ಪ್ರಶ್ನಾರ್ಹ. ಅಸಂಗತ ತರ್ಕ, ಒತ್ತಾಯಗಳನ್ನು ನಿರ್ಲಕ್ಷಿಸುವುದರಲ್ಲಿ ಸರ್ಕಾರದ ವಿವೇಕ ಮತ್ತು ಪ್ರಶಸ್ತಿಗಳ ಗೌರವ ಅಡಗಿದೆ.

ಕ್ರೀಡಾಪ್ರಶಸ್ತಿಗೆ ರಾಜಕಾರಣಿಯ ಹೆಸರು ಇರುವು ದನ್ನು ವಿರೋಧಿಸುವವರು ವಿಶ್ವದ ಅತಿದೊಡ್ಡ ಕ್ರಿಕೆಟ್‌ ಕ್ರೀಡಾಂಗಣವಾದ ಅಹಮದಾಬಾದ್‌ನ ಮೊಟೇರಾ ಸ್ಟೇಡಿಯಂಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹೆಸರನ್ನು ನಾಮಕರಣ ಮಾಡಿದ್ದನ್ನು ನೆನಪಿಸಿ ಕೊಳ್ಳಬೇಕು. ‘ಗುಜರಾತ್‌ ಸ್ಟೇಡಿಯಂ’ ಎಂದು ಕರೆಸಿಕೊಳ್ಳುತ್ತಿದ್ದ ಕ್ರೀಡಾಂಗಣವನ್ನು 1982ರಲ್ಲಿ ‘ಸರ್ದಾರ್‌ ಪಟೇಲ್‌ ಸ್ಟೇಡಿಯಂ’ ಎಂದು ಹೆಸರಿಸಲಾಗಿತ್ತು. 2015-16ರಲ್ಲಿ ಮತ್ತೊಮ್ಮೆ ಕ್ರೀಡಾಂಗಣದ ಮರು ನಿರ್ಮಾಣಕ್ಕೆ ಚಾಲನೆ ದೊರೆತು, ಇತ್ತೀಚೆಗೆ ಪೂರ್ಣಗೊಂಡ ಅಂಗಳಕ್ಕೆ ನರೇಂದ್ರ ಮೋದಿ ಅವರ ಹೆಸರಿಡಲಾಗಿದೆ. ನರೇಂದ್ರ ಮೋದಿ ಅವರ ಬದಲಾಗಿ ಕ್ರಿಕೆಟ್‌ ಸಾಧಕರೊಬ್ಬರ ಹೆಸರನ್ನು ಕ್ರೀಡಾಂಗಣಕ್ಕೆ ನಾಮಕರಣ ಮಾಡುವ ಮೂಲಕ ಸರ್ಕಾರದ ಗೌರವ ಹೆಚ್ಚಿಸಿಕೊಳ್ಳುವ ಹಾಗೂ ಸಾರ್ವಜನಿಕವಾಗಿ ನೈತಿಕ ಮಾದರಿಯೊಂದಕ್ಕೆ ನಾಂದಿ ಹಾಡುವ ಅವಕಾಶವನ್ನು ಬಿಜೆಪಿ ಬಿಟ್ಟುಕೊಟ್ಟಿತ್ತು. ಪಕ್ಷದ ಮುಖಂಡರ ಹೆಸರುಗಳನ್ನು ಕ್ರೀಡಾಂಗಣಗಳಿಗೆ ಇರಿಸುವ ಕಾಂಗ್ರೆಸ್‌ ಪಕ್ಷದ ನಡವಳಿಕೆಯನ್ನು ವಿರೋಧಿಸಿಕೊಂಡು ಬಂದ ಬಿಜೆಪಿ, ಈಗ ಅಧಿಕಾರದಲ್ಲಿರುವಾಗ ಕಾಂಗ್ರೆಸ್‌ ದಾರಿಯಲ್ಲಿಯೇ ನಡೆದಿದೆ.

ಕೇಂದ್ರ ಸರ್ಕಾರದ‌ ಪುನರ್‌ ನಾಮಕರಣದ ನಿರ್ಧಾರ ರಾಜ್ಯ ಸರ್ಕಾರಗಳಿಗೂ ಮಾದರಿಯಾಗಿ ಒದಗಿಬಂದಿದೆ. ಮುಸ್ಲಿಂ ಆಡಳಿತದ ಸ್ಮೃತಿಗಳನ್ನು ನೆನಪಿಸುವ ಊರುಗಳ ಹೆಸರುಗಳನ್ನು ಬದಲಿಸುವ ಉತ್ಸಾಹವನ್ನು ಬಿಜೆಪಿ ಅಧಿಕಾರದಲ್ಲಿರುವ ರಾಜ್ಯ ಸರ್ಕಾರಗಳು ಪ್ರದರ್ಶಿಸುತ್ತಿವೆ. ಕರ್ನಾಟಕದಲ್ಲಿ ಬಡವರಿಗೆ ಕಡಿಮೆ ದರದಲ್ಲಿ ಆಹಾರ ನೀಡುತ್ತಿರುವ ‘ಇಂದಿರಾ ಕ್ಯಾಂಟೀನ್’ಗಳನ್ನು ಅನ್ನಪೂರ್ಣೇಶ್ವರಿ ಹೆಸರಿನಲ್ಲಿ ಗುರುತಿಸ ಬೇಕೆನ್ನುವ ವಾದವೂ ರಾಜಕೀಯ ಚೇಷ್ಟೆಯಲ್ಲದೆ ಬೇರೇನೂ ಅಲ್ಲ. ಇಂಥ ಬದಲಾವಣೆಗಳು ರಾಜಕೀಯ ಮೇಲಾಟಗಳಿಗೆ ಕಾರಣವಾಗಿ, ಅಧಿಕಾರದಲ್ಲಿರುವ ಪಕ್ಷಗಳು ಬದಲಾಗುತ್ತಾ ಹೋದಂತೆ ಪುನರ್‌ ನಾಮಕರಣ ಪ್ರಹಸನಗಳು ಮತ್ತೆ ಮತ್ತೆ ನಡೆದರೆ ಆಶ್ಚರ್ಯವೇನಿಲ್ಲ. ಯಾವುದೇ ಸರ್ಕಾರ ಮಾಡಬೇಕಾಗಿರುವುದು ಸ್ಮೃತಿಗಳನ್ನು ಬದಲಿಸುವ ಕೆಲಸವನ್ನಲ್ಲ; ಜನಸಾಮಾನ್ಯರ ಬದುಕನ್ನು ಸುಧಾರಿಸುವ ಕೆಲಸ. ಆಡಳಿತದ ವೈಫಲ್ಯವನ್ನು ಮರೆಮಾಚಿ ಜನರ ಗಮನವನ್ನು ಬೇರೆಡೆ ಸೆಳೆಯುವ ತಂತ್ರಗಾರಿಕೆ ಪುನರ್ ನಾಮಕರಣಗಳ ಹಿಂದಿದೆ.

ಕೋವಿಡ್‌ ಎರಡನೇ ಅಲೆಯಿಂದ ಚೇತರಿಸಿಕೊಳ್ಳುವ ಮೊದಲೇ ಮೂರನೇ ಅಲೆಯ ಆತಂಕ ದೇಶವನ್ನು ಕಾಡುತ್ತಿದೆ. ಇಂಥಸಂಕಷ್ಟದ ಸಮಯದಲ್ಲಿ ಆರೋಗ್ಯ ಕ್ಷೇತ್ರವನ್ನು ಬಲಪಡಿಸುವ ಹಾಗೂ ಜನರ ನೈತಿಕ–ಆರ್ಥಿಕ ಶಕ್ತಿಯನ್ನು ಹೆಚ್ಚಿಸಲು ಅಗತ್ಯವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾದ ಸರ್ಕಾರ, ಉನ್ನತ ಪ್ರಶಸ್ತಿಯೊಂದರ ಹೆಸರು ಬದಲಿಸಿದ್ದನ್ನೇ ಸಾಧನೆಯಾಗಿ ಬಿಂಬಿಸಿಕೊಳ್ಳುವ ಮೂಲಕ ಜನರ ಗಮನವನ್ನು ಬೇರೆಡೆ ಸೆಳೆಯಲು ಹೊರಟಂತಿದೆ. ಹೆಸರು ಬದಲಿಸಿದ್ದೇ ಸಾಧನೆ ಎನ್ನುವಂತೆ ಸರ್ಕಾರ ಪ್ರಚಾರ ಪಡೆಯುವುದು ಹಾಗೂ ಅದನ್ನು ವಿರೋಧಿಸುವುದರಲ್ಲೇ ಪ್ರತಿಪಕ್ಷಗಳು ತಮ್ಮೆಲ್ಲ ಸಾಮರ್ಥ್ಯ ಬರಿದು ಮಾಡಿಕೊಳ್ಳುವುದು ಜನರಿಗೆ ಉತ್ತರದಾಯಿತ್ವ ಹೊಂದಿರುವ ರಾಜಕಾರಣದ ಲಕ್ಷಣವಲ್ಲ. ನಾಮಕರಣವೂ ಒಂದು ಸಾಧನೆ; ಪುನರ್ ನಾಮಕರಣವೂ ಒಂದು ಸಾಧನೆ ಎನ್ನುವ ಕೆಟ್ಟ ಮನಃಸ್ಥಿತಿಯಿಂದ ರಾಜಕೀಯ ಪಕ್ಷಗಳು ಹೊರಬರಬೇಕು.ಹೊಸ ಕಾರ್ಯಕ್ರಮಗಳನ್ನು ರೂಪಿಸಿ, ಅವುಗಳಿಗೆ ನಾಮಕರಣ ಮಾಡುವಲ್ಲಿ ಸರ್ಕಾರ ಸೃಜನಶೀಲತೆ ತೋರಿದರೆ, ಅದನ್ನು ಯಾರೂ ಆಕ್ಷೇಪಿ ಸುವುದಿಲ್ಲ. ಅದರ ಬದಲಾಗಿ ಇರುವುದನ್ನು ಮುರಿದು ಕಟ್ಟುವುದರಲ್ಲಿ ಸೃಜನಶೀಲತೆಯೂ ಇಲ್ಲ, ಅದು ಸಾಧನೆಯೂ ಅಲ್ಲ. ಹೆಸರುಗಳಿಗೆ ಸಂಬಂಧಿಸಿದ ಪ್ರಹಸನಗಳನ್ನು ತಪ್ಪಿಸುವ ನಿಟ್ಟಿನಲ್ಲಿ, ಪ್ರಶಸ್ತಿ, ಕಾರ್ಯಕ್ರಮ, ಸಂಸ್ಥೆಗಳಿಗೆ ನಾಮಕರಣ ಮಾಡುವ ಕುರಿತು ಸ್ಪಷ್ಟವಾದ ಮಾರ್ಗಸೂಚಿಯೊಂದು ಅಗತ್ಯ. ಅಂಥ ಮಾರ್ಗಸೂಚಿ ರೂಪಿಸಲು ಪ್ರಸಕ್ತ ಪುನರ್‌ ನಾಮಕರಣ ವಿವಾದ ಪ್ರೇರಣೆಯಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT