ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಪಾದಕೀಯ: ಆರ್ಥಿಕತೆಯ ಮೇಲೆ ಕರಿಮೋಡ ಪರಿಣಾಮ ಬೀರಲಿದೆ ಹಿಂಜರಿತ

Last Updated 10 ಅಕ್ಟೋಬರ್ 2022, 20:04 IST
ಅಕ್ಷರ ಗಾತ್ರ

ಈ ವರ್ಷದ ಆರಂಭದಲ್ಲಿ ಕಾಣಿಸಿಕೊಂಡ ಮೂರನೆಯ ಅಲೆಯ ನಂತರದಲ್ಲಿ ಕೋವಿಡ್‌ ಸಾಂಕ್ರಾಮಿಕದ ತೀವ್ರತೆ ಕಡಿಮೆ ಆಗುತ್ತ ಬಂದಿದೆ. ಇದಾದ ನಂತರದಲ್ಲಿ ದೇಶದ ಅರ್ಥ ವ್ಯವಸ್ಥೆಯಲ್ಲಿ ಚೇತರಿಕೆಯ ಲಕ್ಷಣಗಳು ಕಾಣಿಸಿಕೊಂಡವು. ಆದರೆ ಈಗ ಅರ್ಥ ವ್ಯವಸ್ಥೆಯ ಮುನ್ನೋಟವು ತೀರಾ ಆಶಾದಾಯಕವಾಗಿ ಇಲ್ಲ. ದೇಶದ ಒಟ್ಟು ಆಂತರಿಕ ಉತ್ಪಾದನೆಯ (ಜಿಡಿಪಿ) ಬೆಳವಣಿಗೆ ದರದ ಅಂದಾಜನ್ನು ವಿಶ್ವ ಬ್ಯಾಂಕ್‌ ಕಳೆದ ವಾರ ತಗ್ಗಿಸಿದೆ. ಜಿಡಿಪಿ ಬೆಳವಣಿಗೆ ದರ ಶೇಕಡ 7.5ರಷ್ಟು ಇರಲಿದೆ ಎಂದು ಈ ಮೊದಲು ಹೇಳಿದ್ದ ವಿಶ್ವ ಬ್ಯಾಂಕ್ ಈಗ ಅದನ್ನು ಶೇ 6.5ಕ್ಕೆ ಇಳಿಕೆ ಮಾಡಿದೆ. ವಿಶ್ವ ಬ್ಯಾಂಕ್ ಮಾತ್ರವೇ ಅಲ್ಲದೆ, ಇತರ ಹಲವು ಹಣಕಾಸು ಸಂಸ್ಥೆಗಳು ಕೂಡ ಜಿಡಿಪಿ ಬೆಳವಣಿಗೆ ದರದ ಅಂದಾಜನ್ನು ಕಡಿಮೆ ಮಾಡಿವೆ. ಭಾರತೀಯ ರಿಸರ್ವ್‌ ಬ್ಯಾಂಕ್ (ಆರ್‌ಬಿಐ), ಏಷ್ಯಾ ಅಭಿವೃದ್ಧಿ ಬ್ಯಾಂಕ್ ಮತ್ತು ಫಿಚ್ ರೇಟಿಂಗ್ಸ್ ಕೂಡ ಅಂದಾಜನ್ನು ಶೇ 7ಕ್ಕೆ ತಗ್ಗಿಸಿವೆ. ಬೆಳವಣಿಗೆ ದರ ಹೆಚ್ಚಿನ ಪ್ರಮಾಣದಲ್ಲಿ ಇರಲಿದೆ ಎಂದು ಹೇಳಿದ್ದವರೂ, ಈಗ ಬೆಳವಣಿಗೆಯ ವೇಗ ತಗ್ಗಿದೆ ಎಂದು ಹೇಳುತ್ತಿದ್ದಾರೆ. ವೇಗ ಕಡಿಮೆ ಆಗುತ್ತಿರುವುದು ಸಹಜ ಪ್ರಮಾಣದಲ್ಲಿ ಇಲ್ಲ. ಅರ್ಥ ವ್ಯವಸ್ಥೆಯಲ್ಲಿ ಪುನಶ್ಚೇತನವು ಈಗಲೂ ಕಾಣುತ್ತಿದೆ. ಆದರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ವಿಷಮಗೊಳ್ಳುವ ಸಾಧ್ಯತೆಯನ್ನು ಹಣಕಾಸು ಸಂಸ್ಥೆಗಳು ಅಲ್ಲಗಳೆದಿಲ್ಲ. ಮುಂದಿನ ವರ್ಷದಲ್ಲಿ ಬೆಳವಣಿಗೆ ದರವು ಶೇ 5.8ರಿಂದ ಶೇ 6ರ ಮಟ್ಟಕ್ಕೆ ಬರುವ ಸಾಧ್ಯತೆಯೂ ಇದೆ.

ಜಿಡಿಪಿ ಬೆಳವಣಿಗೆ ಅಂದಾಜನ್ನು ತಗ್ಗಿಸಿರುವುದಕ್ಕೆ ಜಾಗತಿಕ ಹಾಗೂ ದೇಶದೊಳಗಿನ ಕಾರಣಗಳು ಇವೆ. ಆದರೆ, ಇದರಲ್ಲಿ ಹೆಚ್ಚಿನ ಪಾಲು ಇರುವುದು ಜಾಗತಿಕ ಪರಿಸ್ಥಿತಿಯದ್ದು. ಜಗತ್ತಿನ ಎಲ್ಲೆಡೆ ಕೇಂದ್ರೀಯ ಬ್ಯಾಂಕ್‌ಗಳು ಬಿಗಿ ಹಣಕಾಸು ನೀತಿಯನ್ನು ಅಪ್ಪಿಕೊಳ್ಳು ತ್ತಿರುವುದು ಹಾಗೂ ಉಕ್ರೇನ್–ರಷ್ಯಾ ಯುದ್ಧದ ‍ಪರಿಣಾಮಗಳು ‘ಭಾರತದ ಆರ್ಥಿಕ ಮುನ್ನೋಟದ ಮೇಲೆ ಪ್ರಭಾವ ಬೀರಲಿವೆ’ ಎಂದು ವಿಶ್ವ ಬ್ಯಾಂಕ್ ಹೇಳಿದೆ. ಸರಕು ರಫ್ತು 2021ರ ಫೆಬ್ರುವರಿ ನಂತರದಲ್ಲಿ ಸೆಪ್ಟೆಂಬರ್‌ನಲ್ಲಿ ಇದೇ ಮೊದಲ ಬಾರಿಗೆ ಕಡಿಮೆ ಆಗಿದೆ. ಆಮದು ಬೆಳವಣಿಗೆ ಪ್ರಮಾಣ ಕೂಡ ಕಡಿಮೆ ಆಗಿದೆ. ಇದು ದೇಶಿ ಮಾರುಕಟ್ಟೆಯಲ್ಲಿ ಬೇಡಿಕೆ ತಗ್ಗುತ್ತಿರುವುದರ ಸೂಚನೆ ಎಂದು ವ್ಯಾಖ್ಯಾನಿಸಲಾಗಿದೆ. ಕಚ್ಚಾ ತೈಲ ಬೆಲೆ ಮತ್ತೆ ಹೆಚ್ಚಳ ಆಗುತ್ತಿದೆ. ಈಗಾಗಲೇ ಮಿತಿಯನ್ನು ಮೀರಿ ಬೆಳೆದಿರುವ ಚಿಲ್ಲರೆ ಹಣದುಬ್ಬರ ದರವು ಮುಂದಿನ ದಿನಗಳಲ್ಲಿಯೂ ಹೆಚ್ಚಿನ ಮಟ್ಟದಲ್ಲಿಯೇ ಉಳಿಯಬಹುದು. ಬ್ಯಾಂಕ್‌ ಬಡ್ಡಿ ದರ ಹೆಚ್ಚಾಗುತ್ತಿರುವುದು ದೇಶಿ ಮಾರುಕಟ್ಟೆಯಲ್ಲಿ ಬೇಡಿಕೆಯ ಮೇಲೆ ನಕಾರಾತ್ಮಕ ಪರಿಣಾಮ ಉಂಟುಮಾಡಬಹುದು. ಜಾಗತಿಕ ಮಟ್ಟದಲ್ಲಿ ಆರ್ಥಿಕತೆಯು ಮಂದಗತಿಗೆ ತಿರುಗಿರುವುದು ಹಾಗೂ ಅಮೆರಿಕ ಮತ್ತು ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಆರ್ಥಿಕ ಹಿಂಜರಿತ ಎದುರಾಗುವ ಸಾಧ್ಯತೆಯು ದೇಶದ ರಫ್ತುಗಳ ಮೇಲೆ ಕೆಟ್ಟ ಪರಿಣಾಮ ಉಂಟುಮಾಡಲಿವೆ. ಜಾಗತಿಕ ಮಟ್ಟದಲ್ಲಿ ವಾಣಿಜ್ಯ ವಹಿವಾಟಿನ ಬೆಳವಣಿಗೆ ಅಂದಾಜನ್ನು ವಿಶ್ವ ವ್ಯಾಪಾರ ಸಂಘಟನೆಯು (ಡಬ್ಲ್ಯುಟಿಒ) ಶೇ 1ಕ್ಕೆ ತಗ್ಗಿಸಿದೆ. ಈ ಮೊದಲು ಈ ಅಂದಾಜು ಶೇ 3.4ರಷ್ಟು ಇತ್ತು. ಎಲ್ಲ ಕೆಟ್ಟ ಅಂಶಗಳ ಪ್ರಭಾವವು ಅಕ್ಟೋಬರ್‌–ಡಿಸೆಂಬರ್ ತ್ರೈಮಾಸಿಕದಲ್ಲಿ ಅರಿವಿಗೆ ಬರಲಿದ್ದು, ಆರ್ಥಿಕ ಹಿಂಜರಿತ ಶುರುವಾಗಬಹುದು ಎಂದು ವಿಶ್ವ ಬ್ಯಾಂಕ್ ಅಂದಾಜು ಮಾಡಿದೆ.

ದೇಶದ ಅರ್ಥ ವ್ಯವಸ್ಥೆಯು ಕೋವಿಡ್‌ ಪೂರ್ವದ ಸ್ಥಿತಿಯನ್ನು ತಲುಪಿರಬಹುದಾದರೂ, ಅರ್ಥ ವ್ಯವಸ್ಥೆಯ ಬಹುದೊಡ್ಡ ಭಾಗಗಳು ಈಗಲೂ ಸಂಕಷ್ಟದಲ್ಲಿ ಇವೆ. ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳು (ಎಂಎಸ್‌ಎಂಇ) ಇಂದಿಗೂ ಹೆಣಗಾಡುತ್ತಿವೆ. ವಾಸ್ತವದಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿ ಜನರಿಗೆ ಉದ್ಯೋಗ ಕಲ್ಪಿಸಿರುವುದು ಈ ವಲಯದ ಉದ್ಯಮಗಳೇ. ನಗರ ಪ್ರದೇಶಗಳಲ್ಲಿ ಕಾರ್ಮಿಕ ವರ್ಗದ ಭಾಗವಹಿಸುವಿಕೆಯ ಪ್ರಮಾಣವು ಕೋವಿಡ್‌ ಪೂರ್ವದ ಮಟ್ಟಕ್ಕಿಂತ ಕಡಿಮೆ ಇದೆ ಎಂದು ಸಮೀಕ್ಷೆಯೊಂದು ಈಚೆಗೆ ಹೇಳಿದೆ. ಗ್ರಾಮೀಣ ಪ್ರದೇಶಗಳಲ್ಲಿಯೂ ಕಾರ್ಮಿಕ ಮಾರುಕಟ್ಟೆಯು ದುರ್ಬಲವಾಗಿದೆ. ಅರ್ಥ ವ್ಯವಸ್ಥೆಯಲ್ಲಿ ಖಾಸಗಿ ಹೂಡಿಕೆಯು ಚೇತರಿಕೆ ಕಾಣುತ್ತಿರುವ ಸೂಚನೆಗಳು ಇಲ್ಲ. ಬೇಡಿಕೆಯ ಮೇಲೆ ನಕಾರಾತ್ಮಕ ಪರಿಣಾಮಗಳು ಮುಂದುವರಿಯಲಿವೆ. ಸರ್ಕಾರಗಳ ಹಣಕಾಸು ವೆಚ್ಚ ಸಾಮರ್ಥ್ಯದ ಮೇಲಿನ ಹೊರೆ ಈಗಾಗಲೇ ಅಪಾರವಾಗಿದೆ. ಸಾರ್ವಜನಿಕ ವೆಚ್ಚಗಳನ್ನು ಹೆಚ್ಚಿಸಿ, ಆ ಮೂಲಕ ಬೆಳವಣಿಗೆಗೆ ಪುಷ್ಟಿ ನೀಡುವ ಸ್ಥಿತಿಯಲ್ಲಿ ಸರ್ಕಾರಗಳು ಇಲ್ಲ. ಭಾರತದ ಅರ್ಥ ವ್ಯವಸ್ಥೆಯು ಈಗಲೂ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಅರ್ಥ ವ್ಯವಸ್ಥೆಗಳ ಪೈಕಿ ಒಂದಾಗಿರಬಹುದು. ಆದರೂ ಆರ್ಥಿಕ ಹಿಂಜರಿತದ ಕೆಟ್ಟ ಪರಿಣಾಮಗಳು ದೇಶದ ಮೇಲೆ ಆಗಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT