ಮಂಗಳವಾರ, ಆಗಸ್ಟ್ 16, 2022
20 °C

ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆಪರೀಕ್ಷಾ ‍ಪ್ರಾಧಿಕಾರವೇ ಫೇಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪದವಿಪೂರ್ವ ಕಾಲೇಜು ಉಪನ್ಯಾಸಕರ ಹುದ್ದೆಗಾಗಿ ನಡೆದ ಅರ್ಹತಾ ಪರೀಕ್ಷೆಗಾಗಿ ಸಿದ್ಧಪಡಿಸಿದ ‘ಕೀ ಉತ್ತರ’ಗಳಲ್ಲಿ ತಪ್ಪುಗಳು ಕಂಡುಬಂದಿರುವುದು, ನೇಮಕಾತಿಯ ನಿರೀಕ್ಷೆಯಲ್ಲಿದ್ದ ಅಭ್ಯರ್ಥಿಗಳಲ್ಲಿ ಸಹಜವಾಗಿಯೇ ಆತಂಕ ಉಂಟುಮಾಡಿದೆ. ತಪ್ಪು ಉತ್ತರಗಳು ಪ್ರಕಟವಾಗಿರುವುದು ಇದು ಮೊದಲೇನಲ್ಲ. ಇದಕ್ಕೂ ಮೊದಲು ಎರಡು ಬಾರಿ ಪ್ರಕಟಿಸಿದ ಉತ್ತರಗಳಲ್ಲಿ ಲೋಪಗಳಿವೆ ಎನ್ನುವ ಕಾರಣಕ್ಕಾಗಿ ಮೂರನೇ ಬಾರಿ ಪರಿಷ್ಕರಿಸಿ ಪ್ರಕಟಿಸಿದ ಕೀ ಉತ್ತರಗಳಲ್ಲೂ ತಪ್ಪುಗಳು ಉಳಿದುಕೊಂಡಿವೆ. ಈ ತಪ್ಪುಗಳ ಸರಮಾಲೆಯು ನೇಮಕಾತಿ ಪರೀಕ್ಷೆಯನ್ನು ನಡೆಸುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಬದ್ಧತೆ ಹಾಗೂ ದಕ್ಷತೆಯ ಬಗ್ಗೆ ಅನುಮಾನ ಮೂಡಿಸಿದೆ. ನೇಮಕಾತಿಗೆ ಅಧಿಸೂಚನೆ ಹೊರಡಿಸಿದ ನಾಲ್ಕೂವರೆ ವರ್ಷಗಳ ನಂತರ ಆಯ್ಕೆ ಪ್ರಕ್ರಿಯೆ ಅಂತಿಮಘಟ್ಟ ಮುಟ್ಟಿದೆ. ಈ ಸಂದರ್ಭದಲ್ಲಿ ಕೀ ಉತ್ತರಗಳೇ ಸರಿಯಾಗಿಲ್ಲದಿರುವುದು ಬೆಳಕಿಗೆ ಬಂದಿದೆ.

‘ದೂರು ಕೊಟ್ಟ ನಂತರವೂ ತಜ್ಞರ ತಂಡ ತಪ್ಪುಗಳನ್ನು ಸರಿಪಡಿಸಿಲ್ಲ. ಕೀ ಉತ್ತರವನ್ನೇ ಪರಿಗಣಿಸುವುದಾದರೆ ಸರಿ ಉತ್ತರ ಬರೆದವರಿಗೆ ಅನ್ಯಾಯವಾಗುತ್ತದೆ’ ಎನ್ನುವ ಅಳಲನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಪ್ರಶ್ನೆಪತ್ರಿಕೆ ಹಾಗೂ ಉತ್ತರಗಳನ್ನು ಸಿದ್ಧಪಡಿಸುವಲ್ಲಿ ಕೆಇಎ ಬೇಜವಾ ಬ್ದಾರಿಯಿಂದ ನಡೆದುಕೊಂಡಿರುವುದು ಸ್ಪಷ್ಟ. ಮೂರನೇ ಬಾರಿ ‘ಕೀ ಉತ್ತರ’ಗಳನ್ನು ಪ್ರಕಟಿಸಿದ ನಂತರವೂ ಇತಿಹಾಸದಲ್ಲಿ 16, ಕನ್ನಡದಲ್ಲಿ 10, ರಾಜ್ಯಶಾಸ್ತ್ರದಲ್ಲಿ 8 ಹಾಗೂ ಸಮಾಜಶಾಸ್ತ್ರ ದಲ್ಲಿ 8 ತಪ್ಪುಗಳು ಉಳಿದಿವೆ ಎಂದು ಕೆಲವು ಅಭ್ಯರ್ಥಿಗಳು ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಮೊರೆ ಹೋಗಿದ್ದಾರೆ. ಈ ವಿಷಯಗಳನ್ನು ಹೊರತುಪಡಿಸಿ ಉಳಿದ ವಿಷಯಗಳಲ್ಲೂ ತಪ್ಪುಗಳು ಉಳಿದಿರಬಹುದಾದ ಸಾಧ್ಯತೆ ಇಲ್ಲದಿಲ್ಲ. 

ಈ ಮುನ್ನ ಪದವಿಪೂರ್ವ ಉಪನ್ಯಾಸಕರ ನೇಮಕಾತಿಯ ಹೊಣೆಯನ್ನು ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ) ನಿರ್ವಹಿಸುತ್ತಿತ್ತು. ಆಯ್ಕೆ ಪ್ರಕ್ರಿಯೆ ತೀರಾ ವಿಳಂಬವಾಗು ತ್ತಿದೆ ಎನ್ನುವ ಕಾರಣಕ್ಕಾಗಿ ಉಪನ್ಯಾಸಕರ ನೇಮಕಾತಿ ಹೊಣೆಯು ಕೆಪಿಎಸ್‌ಸಿ ಕೈತಪ್ಪಿ ಕೆಇಎ ಹೆಗಲಿಗೇರಿದೆ. ಈ ಬದಲಾವಣೆಯಿಂದ ಸಕಾರಾತ್ಮಕ ಬದಲಾವಣೆ ಕಾಣಿಸಬೇಕಾಗಿತ್ತು. ಆದರೆ, ಆಗುತ್ತಿರುವುದು ಒಂದರ ಹಿಂದೊಂದು ವಿವಾದಗಳ ಸೃಷ್ಟಿಯಷ್ಟೆ. ನೇಮಕಾತಿ ಪ್ರಕ್ರಿಯೆಯನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸುವ ಭರವಸೆಯನ್ನೂ ಪ್ರಾಧಿಕಾರ ಉಳಿಸಿಕೊಂಡಿಲ್ಲ. 2015ರ ಮೇ ತಿಂಗಳಲ್ಲಿ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದ್ದು, 2018ರ ಡಿಸೆಂಬರ್‌ನಲ್ಲಿ ಅರ್ಹತಾ ಪರೀಕ್ಷೆ ನಡೆಸಲಾಗಿದೆ.

ಪರೀಕ್ಷೆ ನಡೆದು 9 ತಿಂಗಳ ನಂತರವೂ ಅಭ್ಯರ್ಥಿಗಳ ಪಟ್ಟಿ ಅಂತಿಮವಾಗಿಲ್ಲ ಹಾಗೂ ವಿವಾದಗಳಿಂದ ಮುಕ್ತವಾಗುವುದು ಕೆಇಎಗೆ ಸಾಧ್ಯವಾಗಿಲ್ಲ. ಈ ‘ಪಂಚವಾರ್ಷಿಕ ಯೋಜನೆ’ಯ ಆಮೆಗತಿ, ಪರೀಕ್ಷಾ ಪ್ರಾಧಿಕಾರದ ಹೊಣೆಗೇಡಿತನಕ್ಕೆ ಉದಾಹರಣೆಯಂತಿದೆ. ‘ತಪ್ಪುಗಳಿದ್ದರೆ ಸರಿ‍ಪ ಡಿಸುತ್ತೇವೆ. ಅನ್ಯಾಯ ಆಗಲು ಬಿಡುವುದಿಲ್ಲ’ ಎಂದು ಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ಹೇಳಿದ್ದಾರೆ.

ತಪ್ಪುಗಳನ್ನು ಸರಿಪಡಿಸಿದರಷ್ಟೇ ಸಾಲದು, ತಪ್ಪು ಮಾಡಿದವರಿಗೆ ಕಠಿಣ ಶಿಕ್ಷೆಯೂ ಆಗಬೇಕು ಹಾಗೂ ಇಂತಹ ತಪ್ಪುಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು. ತಪ್ಪು ಉತ್ತರ ಗಳನ್ನು ಈ ಕೂಡಲೇ ಸರಿಪಡಿಸುವಂತೆ ಹಾಗೂ ಮತ್ತೆ ತಪ್ಪುಗಳಾಗದಂತೆ ಕೆಇಎಯ ಕಿವಿ ಹಿಂಡುವ ಕೆಲಸ ನಡೆಯಬೇಕು. ಶಿಕ್ಷಣ ಇಲಾಖೆಯಲ್ಲಿನ ಅದಕ್ಷತೆ– ಭ್ರಷ್ಟತೆ ಇಡೀ ಸಮಾಜದ ನೈತಿಕತೆಯ ಮೇಲೆ ಪರಿಣಾಮ ಬೀರುವಂತಹದ್ದು. ಉಪನ್ಯಾಸಕರನ್ನು ನೇಮಕ ಮಾಡುವಲ್ಲಿಯೇ ತಪ್ಪುಗಳಾದರೆ, ಆ ಆಯ್ಕೆಯ ಮೂಲಕ ಹೊರಹೊಮ್ಮುವವರಿಂದ ಗುಣಾತ್ಮಕ ಬೋಧನೆಯನ್ನು ನಿರೀಕ್ಷಿಸುವುದು ಹೇಗೆ?

ವಿಶ್ವವಿದ್ಯಾಲಯಗಳ ಕುಲಪತಿಗಳ ಆಯ್ಕೆಯಲ್ಲಿ ಪಾರದರ್ಶಕತೆ ತರಲು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಉತ್ಸುಕರಾಗಿದ್ದಾರೆ. ಆದರೆ, ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆಯೇ ಹಳ್ಳ ಹಿಡಿದಿರುವಾಗ ಕುಲಪತಿಗಳ ನೇಮಕಾತಿ ಬಗ್ಗೆ ಮಾತನಾಡುವುದು ವಿರೋಧಾಭಾಸವಾಗಿ ಕಾಣಿಸುತ್ತದೆ. ಶಿಕ್ಷಣ ಇಲಾಖೆಯ ಪ್ರತಿ ಹಂತದಲ್ಲೂ ಪಾರದರ್ಶಕತೆ ಹಾಗೂ ದಕ್ಷತೆಯನ್ನು ಉಳಿಸಿಕೊಳ್ಳುವುದು ಅಪೇಕ್ಷಣೀಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು