ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಂಕ ಹೆಚ್ಚಳದ ಕ್ರಮ ಬಾಂಧವ್ಯ ವೃದ್ಧಿಗೆ ಅಡ್ಡಿಯಾಗದಿರಲಿ

Last Updated 16 ಜೂನ್ 2019, 19:45 IST
ಅಕ್ಷರ ಗಾತ್ರ

ಅಮೆರಿಕದ 28 ಸರಕುಗಳ ಮೇಲೆ ಹೆಚ್ಚುವರಿ ಕಸ್ಟಮ್ಸ್‌ ಸುಂಕ ವಿಧಿಸುವ ನಿರ್ಧಾರವನ್ನು ಭಾರತ ಕೊನೆಗೂ ಕೈಗೊಂಡಿದೆ. ಎಂಟು ಬಾರಿ ಗಡುವು ವಿಸ್ತರಿಸಿದ ಬಳಿಕ ಅಂತಿಮವಾಗಿ ಈ ತೀರ್ಮಾನ ಹೊರಬಿದ್ದಿದ್ದು, ಈ ತಿಂಗಳ 16ರಿಂದಲೇ ಆದೇಶ ಜಾರಿಗೆ ಬಂದಿದೆ. ಭಾರತಕ್ಕೆ ನೀಡಿದ್ದ ರಫ್ತು ಉತ್ತೇಜನಾ ಕೊಡುಗೆಯನ್ನು ಅಮೆರಿಕ ರದ್ದು ಮಾಡಿದೆ. ಆದಕಾರಣ ಭಾರತದ ಸರಕುಗಳಿಗೆ ಸುಂಕ ವಿನಾಯಿತಿ ಕೈತಪ್ಪಿದೆ.ಇದಕ್ಕೆ ಪ್ರತೀಕಾರ ಎಂಬಂತೆ ಭಾರತ ಕೂಡ ಅಮೆರಿಕದಿಂದ ಆಮದಾಗುವ ಸರಕುಗಳಿಗೆ ಸುಂಕ ಹೆಚ್ಚಿಸಿದೆ. ಇದರಿಂದ ಉಭಯ ದೇಶಗಳ ನಡುವಣ ರಾಜತಾಂತ್ರಿಕ, ರಕ್ಷಣಾ ಮತ್ತು ವಾಣಿಜ್ಯ ಬಾಂಧವ್ಯದ ಮೇಲೆ ಕರಿನೆರಳು ಬೀಳಲಿದೆ. ಈ ಬೆಳವಣಿಗೆಯನ್ನು ವಾಣಿಜ್ಯ ಸಮರ ಎಂದೇನೂ ಅರ್ಥೈಸಬೇಕಾಗಿಲ್ಲ. ಹಿತಾಸಕ್ತಿ ರಕ್ಷಣೆಗಾಗಿ ಹೂಡಿರುವ ಒತ್ತಡದ ತಂತ್ರ–ಪ್ರತಿತಂತ್ರ ಅಷ್ಟೇ. ಸುಂಕ ಇಳಿಸುವಂತೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಒತ್ತಡ ಹೇರುತ್ತಲೇ ಇದ್ದಾರೆ.

ಹಾರ್ಲಿ ಡೇವಿಡ್‌ಸನ್‌ ಬೈಕ್‌ ಮೇಲೆ ಭಾರತ ದುಬಾರಿ ಸುಂಕ ವಿಧಿಸಿದೆ ಎಂದು ಅವರು ಪದೇ ಪದೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹೀಗಿರುವಾಗ, ‘ನಾವೇಕೆ ಸುಂಕ ರಿಯಾಯಿತಿ ಕೊಟ್ಟು ಮೂರ್ಖರಾಗಬೇಕು’ ಎಂಬುದು ಅವರ ವಾದ.ಉಕ್ಕು ಮತ್ತು ಅಲ್ಯೂಮಿನಿಯಂನ ಕೆಲ ಉತ್ಪನ್ನಗಳ ಆಮದಿನ ಮೇಲೆ ಕ್ರಮವಾಗಿ ಶೇ 25 ಮತ್ತು ಶೇ 10ರಷ್ಟು ಸುಂಕ ವಿಧಿಸುವ ದೇಶಗಳ ಸಾಲಿಗೆ ಭಾರತವನ್ನೂ ಸೇರಿಸಿದ್ದಾರೆ. ಭಾರತದ ಜತೆಗಿನ ಆದ್ಯತಾ ವ್ಯಾಪಾರ ಒಪ್ಪಂದವನ್ನು (ಜಿಎಸ್‌ಪಿ) ರದ್ದುಗೊಳಿಸಿದ ಪರಿಣಾಮವಾಗಿ ಭಾರತದ ವಾಣಿಜ್ಯ ಹಿತಾಸಕ್ತಿಗೆ ಧಕ್ಕೆ ಒದಗಿದೆ. ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ₹ 38,500 ಕೋಟಿ ಮೊತ್ತದ ಸರಕುಗಳಿಗೆ ಇದರ ಬಿಸಿ ತಟ್ಟಿದೆ.

ಟ್ರಂಪ್‌ ಆಡಳಿತದ ಇಚ್ಛೆಗೆ ಅನುಗುಣವಾಗಿ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕೆ ಅಂಕಿತ ಹಾಕುವಂತೆ ಭಾರತದ ಮೇಲೆ ಅಮೆರಿಕ ಒತ್ತಡ ಹೇರುತ್ತಲೇ ಇದೆ. ಜಿಎಸ್‌ಪಿ ರದ್ದುಗೊಳಿಸಿದ ಕ್ರಮ ಕೂಡ ಈ ಕಾರ್ಯತಂತ್ರದ ಭಾಗವಾಗಿದೆ ಎಂಬ ಅನುಮಾನ ಇದೆ. ಅಮೆರಿಕವು ಭಾರತದಿಂದ ಬೇರೆ ಬೇರೆ ಬಗೆಯ ರಿಯಾಯಿತಿಗಳನ್ನೂ ಬಯಸುತ್ತಿದೆ. ಇ–ಕಾಮರ್ಸ್‌ಗೆ ಸಂಬಂಧಿಸಿದಂತೆ ಭಾರತ ಸಿದ್ಧಪಡಿಸಿರುವ ಕರಡು ನೀತಿಯ ಬಗ್ಗೆ ಅಮೆರಿಕ ತಕರಾರು ತೆಗೆದಿದೆ. ಭಾರತದಲ್ಲಿ ವಹಿವಾಟು ವಿಸ್ತರಣೆಗೆ ಮುಂದಾಗಿರುವ ಅಮೆರಿಕದ ದೈತ್ಯ ಸಂಸ್ಥೆಗಳಾದ ಅಮೆಜಾನ್‌ ಮತ್ತು ವಾಲ್‌ಮಾರ್ಟ್‌ನ ಹಿತಾಸಕ್ತಿಗೆ ಈ ನೀತಿಯು ತೊಡಕಾಗಲಿದೆ ಎಂದು ಅಮೆರಿಕ ಭಾವಿಸಿದೆ.

ದತ್ತಾಂಶಗಳನ್ನು ಸ್ಥಳೀಯವಾಗಿ ಕಾಯ್ದಿಡುವ, ಬೌದ್ಧಿಕ ಆಸ್ತಿ ಹಕ್ಕುಗಳ ವರ್ಗಾವಣೆ ಮೇಲೆ ನಿರ್ಬಂಧ ವಿಧಿಸುವ ಭಾರತದ ಧೋರಣೆ ಕೂಡ ಅದಕ್ಕೆ ಪಥ್ಯವಾಗಿಲ್ಲ. ಹೀಗಾಗಿ, ಭಾರತದ ವಿರುದ್ಧ ಕಠಿಣ ವಾಣಿಜ್ಯ ನೀತಿ ಅನುಸರಿಸುತ್ತಿದೆ. ತಮ್ಮ ದೇಶದ ಉದ್ದಿಮೆಗಳನ್ನು ರಕ್ಷಿಸಲು, ವಿದೇಶಗಳ ಸ್ಪರ್ಧೆ ಎದುರಿಸಲು ಟ್ರಂಪ್‌ ಅವರು ಸಂರಕ್ಷಣಾ ನೀತಿಗೆ ಮೊರೆ ಹೋಗಿದ್ದಾರೆ. ಇತರ ದೇಶಗಳ ಜತೆಗಿನ ವ್ಯಾಪಾರ ಅಸಮತೋಲನ ಸರಿಪಡಿಸಲೂ ಕಠಿಣ ಕ್ರಮಗಳನ್ನು ಕೈಗೊಂಡಿದ್ದಾರೆ.

ಇದು ಜಾಗತಿಕ ವಾಣಿಜ್ಯ ಕ್ಷೇತ್ರದಲ್ಲಿಯೂ ಕಂಪನ ಮೂಡಿಸಿದೆ. ವಿಶ್ವದಾದ್ಯಂತ ಗ್ರಾಹಕರಿಗೆ ಅಮೆರಿಕದ ಸರಕುಗಳು ತುಟ್ಟಿಯಾಗಲಿವೆ. ಭಾರತದ ಆಮದು– ರಫ್ತು ವಹಿವಾಟಿಗೂ ಧಕ್ಕೆ ಒದಗಲಿದೆ. ಇಡೀ ವಿಶ್ವ ಒಪ್ಪಿಕೊಂಡಿರುವ ಮುಕ್ತ ವ್ಯಾಪಾರ ನೀತಿಗೂ ಅಮೆರಿಕದ ನಿಲುವು ವಿರುದ್ಧವಾಗಿದೆ. ಪರಸ್ಪರ ಮಾತುಕತೆ ಮೂಲಕ ಹಾಗೂ ವಿಶ್ವ ವ್ಯಾಪಾರ ಸಂಘಟನೆಯ ವೇದಿಕೆಯಲ್ಲಿ ಈ ವಾಣಿಜ್ಯ ಸಂಘರ್ಷವನ್ನು ಬಗೆಹರಿಸಿಕೊಳ್ಳಲು ಎರಡೂ ದೇಶಗಳು ಮುಂದಾಗಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT