ಶನಿವಾರ, ಜುಲೈ 2, 2022
27 °C

ವಿದ್ಯಾರ್ಥಿಗಳಿಗೆ ‘ತಾತ್ಕಾಲಿಕ’ ನೆಮ್ಮದಿ ಸಮಸ್ಯೆ ಇತ್ಯರ್ಥಕ್ಕೆ ಬೇಕಿದೆ ಚಿಂತನೆ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಯುದ್ಧಪೀಡಿತ ಉಕ್ರೇನ್‌ನಿಂದ ಸ್ವದೇಶಕ್ಕೆ ಮರಳಿರುವ ಅಂದಾಜು 700 ವೈದ್ಯಕೀಯ ವಿಜ್ಞಾನ ವಿದ್ಯಾರ್ಥಿಗಳಿಗೆ ರಾಜ್ಯದ 60 ವೈದ್ಯಕೀಯ ಕಾಲೇಜುಗಳಲ್ಲಿ ತಾತ್ಕಾಲಿಕವಾಗಿ ಪ್ರವೇಶ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿರುವುದು ಸ್ವಾಗತಾರ್ಹ. ಇದರಿಂದಾಗಿ ಈ ವಿದ್ಯಾರ್ಥಿಗಳಿಗೆ ವ್ಯಾಸಂಗ ಮುಂದುವರಿಸಲು ಸಾಧ್ಯವಾಗುತ್ತದೆ. ಉಕ್ರೇನ್‌ಗೆ ಅಧ್ಯಯನಕ್ಕಾಗಿ ತೆರಳಿದ್ದ ಇವರು ತಮ್ಮದಲ್ಲದ ತಪ್ಪಿಗೆ ತೊಂದರೆ ಅನುಭವಿಸುತ್ತಿದ್ದಾರೆ. ಈ ವಿದ್ಯಾರ್ಥಿಗಳನ್ನು ರಾಜ್ಯದ ವೈದ್ಯಕೀಯ ಕಾಲೇಜುಗಳಲ್ಲಿ ಮಾಮೂಲಿ ವಿದ್ಯಾರ್ಥಿಗಳಂತೆ ಪರಿಗಣಿಸುವುದಿಲ್ಲವಾದರೂ, ಈಗಿರುವ ನಿಯಮಗಳ ಚೌಕಟ್ಟಿನಲ್ಲಿ ರಾಜ್ಯ ಸರ್ಕಾರವು ಒಳ್ಳೆಯ ಕೆಲಸವನ್ನೇ ಮಾಡಿದೆ ಎನ್ನಲು ಅಡ್ಡಿಯಿಲ್ಲ. ಉಕ್ರೇನ್‌ನಲ್ಲಿ ವೈದ್ಯಕೀಯ ಪದವಿ ಅಧ್ಯಯನ ಮಾಡುತ್ತಿದ್ದ ಭಾರತದ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಕೇಂದ್ರ ಸರ್ಕಾರವೂ ಚಿಂತನೆ ನಡೆಸುತ್ತಿದೆಯಾದರೂ, ಇವರ ಶೈಕ್ಷಣಿಕ ಭವಿಷ್ಯವನ್ನು ಹೇಗೆ ರೂಪಿಸಬೇಕು ಎಂಬ ಬಗ್ಗೆ ಅಧ್ಯಯನ ನಡೆಸಿ, ವರದಿ ನೀಡಲು ಸಮಿತಿಯೊಂದನ್ನು ರಚಿಸುವುದಾಗಿ ರಾಜ್ಯ ಸರ್ಕಾರ ಹೇಳಿದೆ. ಆದರೆ ಈ ವಿಚಾರದಲ್ಲಿ ಇರುವ ಸಂಕೀರ್ಣತೆಗಳನ್ನು ಗಮನಿಸಿದರೆ, ಇದು ಸುಲಭದ ಕೆಲಸವಲ್ಲ ಎಂಬುದು ಸ್ಪಷ್ಟವಾಗುತ್ತದೆ.

ವೈದ್ಯಕೀಯ ಶಿಕ್ಷಣ ಪಡೆಯಲು ಭಾರತದಿಂದ 24 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ತೆರಳಿದ್ದರು. ಇಷ್ಟೂ ಜನರ ಭವಿಷ್ಯ ಈಗ ತೂಗುಯ್ಯಾಲೆಯಲ್ಲಿ ಇದೆ. ಇವರನ್ನು ಒಂದು ಬಾರಿಯ ಕ್ರಮವಾಗಿ ದೇಶದ ವೈದ್ಯಕೀಯ ಕಾಲೇಜುಗಳಲ್ಲಿ ಸೇರಿಸಿಕೊಳ್ಳಬೇಕು ಎಂದು ಭಾರತೀಯ ವೈದ್ಯಕೀಯ ಸಂಘ (ಐಎಂಎ) ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಪತ್ರದಲ್ಲಿ ಹೇಳಿದೆ. ತೊಂದರೆಗೆ ಒಳಗಾದ ವಿದ್ಯಾರ್ಥಿಗಳಿಗೆ, ವಿದೇಶಿ ವೈದ್ಯಕೀಯ ಪದವೀಧರರ ಶಿಕ್ಷಣ (ಎಫ್‌ಎಂಜಿಇ) ಪೂರ್ಣಗೊಳಿಸಿ, ಒಂದು ವರ್ಷದ ಕಡ್ಡಾಯ ಇಂಟರ್ನ್‌ಶಿಪ್‌ ಅನ್ನು ಭಾರತದಲ್ಲಿ ಕೈಗೊಳ್ಳಲು ರಾಷ್ಟ್ರೀಯ ವೈದ್ಯಕೀಯ ಆಯೋಗವು ಅವಕಾಶ ಕಲ್ಪಿಸಿದೆ. ಆದರೆ ಇದು ವ್ಯಾಸಂಗವನ್ನು ಪೂರ್ಣಗೊಳಿಸಿರುವ ವಿದ್ಯಾರ್ಥಿಗಳಿಗೆ ಮಾತ್ರಅನ್ವಯವಾಗುತ್ತದೆ.

ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡಿ, ಮಧ್ಯದಲ್ಲಿ ಭಾರತಕ್ಕೆ ಬಂದ ವಿದ್ಯಾರ್ಥಿಗಳಿಗೆ ದೇಶದ ಕಾಲೇಜುಗಳಲ್ಲಿ ಪೂರ್ಣಾವಧಿಗೆ ಸೇರಿಕೊಳ್ಳಲು ಅವಕಾಶ ಕಲ್ಪಿಸುವ ಯತ್ನಕ್ಕೆ ಕಾನೂನು ಸಮಸ್ಯೆ ಎದುರಾಗಬಹುದು. ಏಕೆಂದರೆ, ‘ನೀಟ್’ನಲ್ಲಿ ಉತ್ತಮ ಅಂಕ ಗಳಿಸಿದ್ದರೂ ದುಬಾರಿ ಶಿಕ್ಷಣ ವೆಚ್ಚ ಅಥವಾ ಅರ್ಹತಾ ಅಂಕಗಳ (ಕಟಾಫ್ ಅಂಕಗಳು) ಕಾರಣದಿಂದಾಗಿ ವೈದ್ಯಕೀಯ ಕೋರ್ಸ್‌ಗೆ ಪ್ರವೇಶ ‍ಪಡೆದುಕೊಳ್ಳಲು ಆಗದವರು ತಮಗೂ ಪ್ರವೇಶ ಬೇಕು ಎಂದು ಕೇಳಬಹುದು. ಸಾಂಕ್ರಾಮಿಕದ ಕಾರಣದಿಂದಾಗಿ ಚೀನಾ ಹಾಗೂ ಫಿಲಿಪ್ಪೀನ್ಸ್‌ನಿಂದ ಭಾರತಕ್ಕೆ ಮರಳಿದ ವಿದ್ಯಾರ್ಥಿಗಳು ತಮ್ಮನ್ನು ಕೂಡ ಉಕ್ರೇನ್‌ನಿಂದ ಮರಳಿರುವ ವಿದ್ಯಾರ್ಥಿಗಳಂತೆಯೇ ಪರಿಗಣಿಸಬೇಕು ಎಂದು ಆಗ್ರಹಿಸಿದ್ದಾರೆ. ಇಂತಹ ವಿದ್ಯಾರ್ಥಿಗಳ ಒಟ್ಟು ಸಂಖ್ಯೆಯು 60 ಸಾವಿರ ಎಂಬ ಅಂದಾಜು ಇದೆ. ದೇಶದಲ್ಲಿ ಈಗಿರುವ ವೈದ್ಯಕೀಯ ಕಾಲೇಜುಗಳು ಇಷ್ಟು ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಲು ಅಗತ್ಯವಿರುವ ಮೂಲಸೌಕರ್ಯ ಹೊಂದಿಲ್ಲ ಎಂದು ಹಲವು ರಾಜ್ಯಗಳಲ್ಲಿನ ವೈದ್ಯಕೀಯ ಸಂಘಗಳು ಬಹಿರಂಗವಾಗಿ ಹೇಳಿವೆ. ಈ ವಿದ್ಯಾರ್ಥಿಗಳು ಉಕ್ರೇನ್ ಮತ್ತು ಚೀನಾ ದೇಶಗಳಿಗೆ ತೆರಳಲು ಇಲ್ಲಿನ ದುಬಾರಿ ವೈದ್ಯಕೀಯ ಶಿಕ್ಷಣ ವೆಚ್ಚವೂ ಒಂದು ಕಾರಣ ಆಗಿತ್ತು. ಹೀಗಿರುವಾಗ ಈಗ ಇವರು ಇಲ್ಲಿನ ವೆಚ್ಚವನ್ನು ಭರಿಸಲು ಸಾಧ್ಯವೇ ಎಂಬ ಪ್ರಶ್ನೆ ಇದೆ.

ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ನೀಡುವ ಪ್ರಕ್ರಿಯೆಯು ಸುಪ್ರೀಂ ಕೋರ್ಟ್‌ ನೀಡಿರುವ ಕೆಲವು ತೀರ್ಪುಗಳಿಗೆ ಅನುಗುಣವಾಗಿ ಆಗಬೇಕು. ಹಾಗಾಗಿ, ವಿದ್ಯಾರ್ಥಿಗಳ ಭವಿಷ್ಯದ ಹಿತ ಕಾಯುವ ಉದ್ದೇಶದಿಂದ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತೀರ್ಮಾನ ಕೈಗೊಳ್ಳುವ ಮುನ್ನ ನ್ಯಾಯಾಲಯಗಳ ಜೊತೆ ಸಮಾಲೋಚನೆ ನಡೆಸಬೇಕು. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದಾದರೆ ಸರ್ಕಾರವು ವೈದ್ಯಕೀಯ ಶಿಕ್ಷಣಕ್ಕೆ ಇರುವ ಬೇಡಿಕೆ ಹಾಗೂ ಶಿಕ್ಷಣ ನೀಡುವ ಸಾಮರ್ಥ್ಯದ ನಡುವಿನ ಅಂತರವನ್ನು ಮುಚ್ಚಬೇಕು. ದೇಶದಲ್ಲಿ ಇರುವ ಎಂಬಿಬಿಎಸ್‌ ಸೀಟುಗಳ ಸಂಖ್ಯೆ 84 ಸಾವಿರ ಮಾತ್ರ. ಆದರೆ, ಪ್ರತಿವರ್ಷ ವೈದ್ಯಕೀಯ ಕೋರ್ಸ್‌ಗೆ ಸೇರುವ ಬಯಕೆಯಿಂದ 16 ಲಕ್ಷಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ನೀಟ್ ಬರೆಯುತ್ತಾರೆ. ಸರ್ಕಾರಗಳು ಈ ಸಮಸ್ಯೆಯನ್ನು ಸಮಗ್ರ ದೃಷ್ಟಿಕೋನದಿಂದ ನೋಡಬೇಕು. ದೂರಗಾಮಿ ಪರಿಣಾಮಗಳನ್ನು ಗ್ರಹಿಸಿ ತೀರ್ಮಾನ ಕೈಗೊಳ್ಳಬೇಕು. ಸಂಬಂಧಪಟ್ಟ ಎಲ್ಲರ ಜೊತೆ ಸಮಾಲೋಚನೆ ನಡೆಸಬೇಕು. ಈ ಕ್ಷೇತ್ರದಲ್ಲಿ ಹೆಚ್ಚಿನ ಸಂಪನ್ಮೂಲ ವಿನಿಯೋಗಿಸಲು ಸಿದ್ಧವಾಗಬೇಕು. ವೈದ್ಯಕೀಯ ಶಿಕ್ಷಣ ಹಾಗೂ ದೇಶಕ್ಕೆ ಅಗತ್ಯವಿರುವ ಸಂಖ್ಯೆಯಲ್ಲಿ ವೈದ್ಯರನ್ನು ಸಜ್ಜಾಗಿಸಲು ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಲು ಇವು ಅಗತ್ಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು