ಭಾರತದ ಸಿಲಿಕಾನ್ ಸಿಟಿ, ಉದ್ಯಾನ ನಗರಿ, ಹೊಸ ಸಂಶೋಧನೆಗಳ ಕೇಂದ್ರ, ಇತ್ಯಾದಿ ವಿಶೇಷಣಗಳಿಂದ ದೇಶದ ಗಮನಸೆಳೆದಿರುವ ಬೆಂಗಳೂರು ಮಹಾನಗರವನ್ನು ‘ನಿವೃತ್ತ ನಾಗರಿಕರ ಸ್ವರ್ಗ’ ಎಂದೂ ಇತ್ತೀಚಿನವರೆಗೂ ಹೇಳಲಾಗುತ್ತಿತ್ತು. ಆದರೆ, ಅಭಿವೃದ್ಧಿಯ ನಾಗಾಲೋಟದ ಕಾರಣದಿಂದಾಗಿ, ಹಿರಿಯ ನಾಗರಿಕರ ಪಾಲಿಗೆ ನೆಮ್ಮದಿಯ ತಾಣವಾಗಿ ಬೆಂಗಳೂರು ಇದೀಗ ಉಳಿದಿಲ್ಲ. ಅಷ್ಟು ಮಾತ್ರವಲ್ಲ, ಹಿರಿಯ ನಾಗರಿಕರಿಗೆ ಸೂಕ್ತವಾದ ‘ಸಾರ್ವಜನಿಕ ವೈದ್ಯಕೀಯ ಸೇವೆ’ಯೂ ಇಲ್ಲಿ ಲಭ್ಯವಿಲ್ಲ ಎನ್ನುವುದನ್ನು ‘ಅಖಿಲ ಕರ್ನಾಟಕ ವಯೋವೃದ್ಧರ ಒಕ್ಕೂಟ’ದ ಇತ್ತೀಚಿನ ಸಮೀಕ್ಷೆ ಬಹಿರಂಗಪಡಿಸಿದೆ. ಹಿಂದೊಮ್ಮೆ ನಗರದ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದ್ದ ನಾಗರಿಕರು, ತಮ್ಮ ಜೀವನಸಂಧ್ಯೆಯಲ್ಲಿ ಉತ್ತಮ ಚಿಕಿತ್ಸೆ ಪಡೆಯಲು ಪರದಾಡಬೇಕಾದ ಸ್ಥಿತಿ ಬೆಂಗಳೂರಿನ ವರ್ಚಸ್ಸನ್ನು ಮಸುಕುಗೊಳಿಸುವಂತಹದ್ದು. ತೀರಾ ಪ್ರಾಥಮಿಕ ವೈದ್ಯಕೀಯ ಸವಲತ್ತುಗಳನ್ನು ಪಡೆಯುವುದು ಕೂಡ ವೃದ್ಧರಿಗೆ ಕಷ್ಟಕರ ಎನ್ನುವ ಕಹಿಸತ್ಯವನ್ನು ಸಮೀಕ್ಷೆ ಗುರ್ತಿಸಿದೆ. ಕೆಲವು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ‘ನಮ್ಮ ಕ್ಲಿನಿಕ್’ಗಳು ಹಿರಿಯರು ಸುಲಭವಾಗಿ ಪತ್ತೆ ಮಾಡಲಾಗದ ಸ್ಥಳಗಳಲ್ಲಿವೆ. ವಯಸ್ಸಾದವರು ಹತ್ತಲು ಸಾಧ್ಯವಾಗದ ಕಡಿದಾದ ಮೆಟ್ಟಿಲುಗಳು ಹಾಗೂ ಉಪಯೋಗಿಸಲಾಗದ ಸ್ಥಿತಿಯಲ್ಲಿರುವ ರ್ಯಾಂಪ್ಗಳನ್ನು ಹೊಂದಿರುವ ಮಹಡಿಗಳ ಮೇಲೆಯೂ ಕೆಲವು ಆರೋಗ್ಯ ಕೇಂದ್ರಗಳಿವೆ. ಹಿರಿಯ ನಾಗರಿಕರು, ವಿಶೇಷವಾಗಿ ಬಡತನ ರೇಖೆಯ ಕೆಳಗೆ ಇರುವ ಕುಟುಂಬಗಳಿಗೆ ಸೇರಿದವರು ಮತ್ತು ಅಸಂಘಟಿತ ವಲಯಗಳ ನಿವೃತ್ತ ನೌಕರರಿಗೆ ವೈದ್ಯಕೀಯ ಸೇವೆಗಳು ಕೈಗೆಟುಕದಂತೆಇರುವುದು ಅನನುಕೂಲ ಮಾತ್ರವಾಗಿರದೆ, ಅನುದಿನದ ಬದುಕಿನಲ್ಲಿ ಅಸ್ತಿತ್ವಕ್ಕಾಗಿ ಎದುರಿಸಬೇಕಾದ ಸಂಕಷ್ಟವೂ ಆಗಿದೆ.

‘ನಮ್ಮ ಕ್ಲಿನಿಕ್’ಗಳಿಗೆ ಸಂಬಂಧಿಸಿದಂತೆ ಸಮೀಕ್ಷೆ ಹೊರಗೆಡವಿರುವ ಸಂಗತಿಗಳು ಆತಂಕಕಾರಿಯಾಗಿವೆ. ಕೆಲವು ಕ್ಲಿನಿಕ್ಗಳು, ರಕ್ತದೊತ್ತಡ ಮತ್ತು ಮಧುಮೇಹದಂತಹ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಉಚಿತ ಔಷಧಿಗಳನ್ನು ನೀಡುತ್ತವೆಯಾದರೂ, ಅಲ್ಲಿನ ದಾಸ್ತಾನು 15 ದಿನಗಳಿಗಷ್ಟೇ ಸೀಮಿತವಾಗಿರುವ ಉದಾಹರಣೆಗಳೇ ಹೆಚ್ಚು. ತಿಂಗಳಿಗೆ ಅಗತ್ಯವಾದಷ್ಟು ಔಷಧ ಪೂರೈಕೆಯ ಮನವಿಗಳು ಸಾಮಾನ್ಯವಾಗಿ ತಿರಸ್ಕೃತಗೊಳ್ಳುವುದರಿಂದಾಗಿ, ಹಿರಿಯ ನಾಗರಿಕರ ಅನಾರೋಗ್ಯ ಉಲ್ಬಣಗೊಳ್ಳುವುದಿದೆ. ಕೆಲವು ಪ್ರದೇಶಗಳಲ್ಲಿನ ಕ್ಲಿನಿಕ್ಗಳ ಮೇಲೆ ವಿಪರೀತ ಒತ್ತಡವಿದ್ದರೆ, ಮತ್ತೆ ಕೆಲವೆಡೆ ಕನಿಷ್ಠ ಪ್ರಮಾಣದ ರೋಗಿಗಳೂ ಇಲ್ಲದಿರುವುದು ‘ನಮ್ಮ ಕ್ಲಿನಿಕ್’ಗಳನ್ನು ಸ್ಥಾಪಿಸುವಲ್ಲಿ ಆಗಿರುವ ಯೋಜನೆಯ ಲೋಪವನ್ನು ಸೂಚಿಸುವಂತಿದೆ. ಸರ್ಕಾರದ ಡಿಜಿಟಲೀಕರಣ ವ್ಯವಸ್ಥೆ ಒಳ್ಳೆಯ ಉದ್ದೇಶವನ್ನು ಒಳಗೊಂಡಿದ್ದರೂ, ವೃದ್ಧರ ಪಾಲಿಗೆ ಅದು ಮತ್ತೊಂದು ಕಿರಿಕಿರಿಯೇ ಆಗಿದೆ. ಎಲ್ಲ ಹಿರಿಯ ನಾಗರಿಕರೂ ಸ್ಮಾರ್ಟ್ ಫೋನ್ ಹಾಗೂ ಅಂತರ್ಜಾಲ ಸೌಲಭ್ಯ ಹೊಂದಿರುತ್ತಾರೆಂದು ನಿರೀಕ್ಷಿಸಲಾಗದು. ಕ್ಯುಆರ್ ಕೋಡ್ ಆಧರಿತ ನೋಂದಣಿ ವ್ಯವಸ್ಥೆ, ಕೆಲವೊಮ್ಮೆ ಚಿಕಿತ್ಸೆ ವಿಳಂಬಗೊಳ್ಳಲು ಕಾರಣವಾಗುತ್ತದೆ. ವೈದ್ಯರನ್ನು ಸಂದರ್ಶಿಸಲು ಅಗತ್ಯವಾದ ಟೋಕನ್ ಪಡೆಯುವುದಕ್ಕಾಗಿಯೇ ತೊಂಬತ್ತು ನಿಮಿಷ ಕಾಯಬೇಕಾದ ಸ್ಥಿತಿ ಇರುವುದನ್ನೂ ಸಮೀಕ್ಷೆ ಗುರ್ತಿಸಿದೆ. ವಯಸ್ಸು ಅಥವಾ ದೈಹಿಕ ಅಂಗವೈಕಲ್ಯಕ್ಕೆ ಸಂಬಂಧಿಸಿದಂತೆ ಪ್ರಮಾಣಪತ್ರಗಳನ್ನು ನೀಡಲು ಬಿಪಿಎಲ್ ಕಾರ್ಡ್ದಾರರನ್ನು ಲಂಚಕ್ಕೆ ಒತ್ತಾಯಿಸುವ ನಿದರ್ಶನಗಳೂ ಇವೆ. ಇದು ಅನೈತಿಕತೆ ಮಾತ್ರವಲ್ಲ, ಅಮಾನವೀಯ ನಡವಳಿಕೆಯೂ ಹೌದು.

ತಮ್ಮ ಯೌವನದ ದಿನಗಳಲ್ಲಿ ಮಹಾನಗರದ ಬೆಳವಣಿಗೆಗೆ ಕೊಡುಗೆ ನೀಡಿರುವ ಹಿರಿಯ ನಾಗರಿಕರನ್ನು ವ್ಯವಸ್ಥೆ ಗೌರವ ಹಾಗೂ ಕೃತಜ್ಞತೆಯಿಂದ ಕಾಣಬೇಕೇ ಹೊರತು, ನಿರ್ಲಕ್ಷಿಸಬಾರದು. ವಯೋವೃದ್ಧರ ಒಕ್ಕೂಟದ ಸಮೀಕ್ಷೆಯಲ್ಲಿ ಬೆಳಕಿಗೆ ಬಂದಿರುವ ಕೊರತೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ವೈದ್ಯಕೀಯ ಸಿಬ್ಬಂದಿಗೆ ತರಬೇತಿ, ಹೊರ ರೋಗಿಗಳ ವಿಭಾಗ ಸಂಜೆಯೂ ಲಭ್ಯವಿರುವುದು, ಮೂಲ ಸೌಕರ್ಯಗಳ ಲಭ್ಯತೆ ಸೇರಿದಂತೆ ಹಿರಿಯ ನಾಗರಿಕರಿಗೆ ಅಗತ್ಯವಾದ ಎಲ್ಲ ವೈದ್ಯಕೀಯ ಸವಲತ್ತುಗಳನ್ನು ದೊರಕಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕಾಗಿದೆ. ಇಳಿ ವಯಸ್ಸಿನಲ್ಲಿ ಎದುರಾಗುವ ಮಾನಸಿಕ ಅನಾರೋಗ್ಯ ಸಮಸ್ಯೆಗಳ ನಿರ್ವಹಣೆ ಮತ್ತು ಆರೈಕೆಗೆ ಸಂಬಂಧಿಸಿದಂತೆ, ‘ವಯೋಮಾನಸ ಸಂಜೀವಿನಿ ಗೃಹ ಯೋಜನೆ’ಯನ್ನು ‘ನಿಮ್ಹಾನ್ಸ್’ ಆರಂಭಿಸಿದೆ. ಈ ಸ್ವಾಗತಾರ್ಹ ಪ್ರಯೋಗ ದೈಹಿಕ ಸಮಸ್ಯೆಗಳಿಗೆ ಸಂಬಂಧಿಸಿದಂತೆಯೂ ರೂಪುಗೊಳ್ಳಬೇಕಾದ ಅಗತ್ಯವಿದೆ. ಡಿಜಿಟಲ್ ಕ್ಷೇತ್ರದ ಯಶಸ್ಸು ಅಥವಾ ಗಗನಚುಂಬಿ ಕಟ್ಟಡಗಳಷ್ಟೇ ಮಹಾನಗರವೊಂದರ ಬೆಳವಣಿಗೆಯ ಸಂಕೇತ ಆಗಲಾರವು. ಹಿರಿಯರು ಹಾಗೂ ದುರ್ಬಲರನ್ನು ವ್ಯವಸ್ಥೆ ಹೇಗೆ ನಡೆಸಿಕೊಳ್ಳುತ್ತದೆ ಎನ್ನುವುದೂ ಅಭಿವೃದ್ಧಿಯ ಪ್ರಮುಖ ಮಾನದಂಡ ಆಗಿರುತ್ತದೆ. ಹಿರಿಯ ನಾಗರಿಕರನ್ನು ನಿರ್ಲಕ್ಷಿಸುವ ಸಮಾಜ ನೈತಿಕತೆಯ ಕೇಂದ್ರದಿಂದ ದೂರ ಆಗುತ್ತಿರುತ್ತದೆ. ತನ್ನ ತಳಹದಿ ಭದ್ರಪಡಿಸಿದವರ ಬಗ್ಗೆ ಬೆಂಗಳೂರು ಮಹಾನಗರ ಕೃತಘ್ನವಾಗಬಾರದು. ಹಿರಿಯ ನಾಗರಿಕರನ್ನು ಗೌರವ, ಅನುಭೂತಿಯಿಂದ ನಡೆಸಿಕೊಳ್ಳುವುದರ ಜೊತೆಗೆ, ಅವರ ಸಂಧ್ಯಾಕಾಲ ನೆಮ್ಮದಿ ಹಾಗೂ ಘನತೆಯಿಂದ ಕೂಡಿರುವಂತೆ ನೋಡಿಕೊಳ್ಳಬೇಕಾದುದು ಮಹಾನಗರ ನಿರ್ವಹಿಸಲೇಬೇಕಾದ ಕರ್ತವ್ಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.