ಅಪೂರ್ವ ಅರಣ್ಯ ಪ್ರದೇಶ, ಜೀವವೈವಿಧ್ಯ ಹಾಗೂ ವಿಶ್ವಪ್ರಸಿದ್ಧ ಜೋಗ ಜಲಪಾತ ಒಳಗೊಂಡಿರುವ ಶಿವಮೊಗ್ಗ ಜಿಲ್ಲೆಯ ಶರಾವತಿ ಕಣಿವೆಯ ಪ್ರದೇಶ, ‘ಅಭಿವೃದ್ಧಿಯೋ ಸಂರಕ್ಷಣೆಯೋ’ ಎನ್ನುವ ಆಯ್ಕೆಯ ಸಂಘರ್ಷಕ್ಕೆ ಮತ್ತೊಮ್ಮೆ ಗುರಿಯಾಗಿದೆ. ‘ಕರ್ನಾಟಕ ವಿದ್ಯುತ್ ನಿಗಮ ನಿಯಮಿತ’ (ಕೆಪಿಸಿಎಲ್) ಯೋಜಿಸಿರುವ, ‘ಶರಾವತಿ ಪಂಪ್ಡ್ ಸ್ಟೋರೇಜ್ ಪ್ರಾಜೆಕ್ಟ್’ (ಪಿಎಸ್ಪಿ) ಅನುಷ್ಠಾನಕ್ಕೆ ಸ್ಥಳೀಯರು ಹಾಗೂ ಪರಿಸರವಾದಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಯೋಜನೆಯ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಪರಿಸರ ಸಾರ್ವಜನಿಕ ಅಹವಾಲು ಸಭೆಯಲ್ಲಿ ಯೋಜನೆಯನ್ನು ವಿರೋಧಿಸಿ ಸುಮಾರು 10 ಸಾವಿರ ಅಹವಾಲುಗಳು ಸಲ್ಲಿಕೆಯಾಗಿವೆ. 2000 ಮೆ.ವಾ ಸಾಮರ್ಥ್ಯದ ಈ ಜಲವಿದ್ಯುತ್ ಯೋಜನೆಯು ರಾಜ್ಯಕ್ಕೆ ಶುದ್ಧ ಇಂಧನ ಹಾಗೂ ಗ್ರಿಡ್ ಸ್ಥಿರತೆಯನ್ನು ಒದಗಿಸಲಿದೆ ಎನ್ನುವುದು ‘ಕೆಪಿಸಿಎಲ್’ ನೀಡುತ್ತಿರುವ ಭರವಸೆ. ಸೌರಶಕ್ತಿ ಅಥವಾ ಪವನಶಕ್ತಿಯನ್ನು ಬಳಸುವ ಮೂಲಕ ಗೇರುಸೊಪ್ಪ ಜಲಾಶಯದಿಂದ ಮೇಲಿನ ತಲಕಳಲೆ ಜಲಾಶಯಕ್ಕೆ ನೀರನ್ನು ಪಂಪ್ ಮಾಡಿ, ಆ ನೀರನ್ನು ಟರ್ಬೈನ್ಗಳ ಮೂಲಕ ಹಾಯಿಸಿ ವಿದ್ಯುತ್ ಉತ್ಪಾದಿಸಲಾಗುವುದು; ಆ ಮೂಲಕ ಅತ್ಯಧಿಕ ಬೇಡಿಕೆ ಇರುವ ಸಮಯದಲ್ಲಿ ಗುಣಮಟ್ಟದ ವಿದ್ಯುತ್ ಪೂರೈಸುವುದು ಸಾಧ್ಯವಾಗಲಿದೆ ಎಂದು ಹೇಳಲಾಗುತ್ತಿದೆ. ಕಾಗದದ ಮೇಲೇನೋ ಉದ್ದೇಶಿತ ಯೋಜನೆ ಆಕರ್ಷಕವಾಗಿ ಕಾಣಿಸುತ್ತಿದೆ. ಲಭ್ಯ ಮೂಲ ಸೌಕರ್ಯಗಳನ್ನು ಬಳಸಿಕೊಂಡು ಹಾಗೂ ಜಲವಿದ್ಯುತ್ ಅವಲಂಬನೆಯ ಮೂಲಕ ರಾಜ್ಯದ ವಿದ್ಯುತ್ ಜಾಲವನ್ನು ಬಲಪಡಿಸುವ ಆಶ್ವಾಸನೆಯ ಜೊತೆಗೆ, ಪಳೆಯುಳಿಕೆ ಇಂಧನಗಳನ್ನು ಸುಡದಿರುವ ಭರವಸೆಯನ್ನೂ ಯೋಜನೆ ನೀಡುತ್ತಿದೆ.

‘ಪಿಎಸ್ಪಿ’ ಯೋಜನೆಗೆ ಸಂಬಂಧಿಸಿದಂತೆ ಸಾಕಷ್ಟು ಭರವಸೆ ಗಳನ್ನು ಕೆಪಿಸಿಎಲ್ ನೀಡುತ್ತಿದೆ ಯಾದರೂ, ಆ ಭರವಸೆಗಳ ಹಿಂದೆ ನಿರ್ಲಕ್ಷಿಸಲಾಗದಷ್ಟು ಗಂಭೀರವಾದ ಸಂಗತಿಗಳಿವೆ. ಯುನೆಸ್ಕೊದ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿರುವ ಪಶ್ಚಿಮ ಘಟ್ಟಗಳ ವ್ಯಾಪ್ತಿಗೆ ಸೇರಿದ ‘ಸಿಂಹ ಬಾಲದ ಸಿಂಗಳೀಕಗಳ ಅಭಯಾರಣ್ಯ’ ಪ್ರದೇಶದಲ್ಲಿ ಉದ್ದೇಶಿತ ಯೋಜನೆ ಅಸ್ತಿತ್ವಕ್ಕೆ ಬರಲಿದೆ. ವಿದ್ಯುತ್ ಯೋಜನೆಗಾಗಿ ಸುರಂಗ ನಿರ್ಮಾಣ, ಸ್ಫೋಟದಂಥ ಚಟುವಟಿಕೆಗಳು ಹಾಗೂ 16 ಸಾವಿರಕ್ಕೂ ಹೆಚ್ಚು ಅಮೂಲ್ಯ ಮರಗಳನ್ನು ಕಡಿಯುವುದು ಈ ಭಾಗದ ಸೂಕ್ಷ್ಮ ಪರಿಸರ ಹಾಗೂ ಜೀವವೈವಿಧ್ಯದ ಮೇಲೆ ಉಂಟು ಮಾಡಬಹುದಾದ ದುಷ್ಪರಿಣಾಮಗಳ ಬಗ್ಗೆ ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಯೋಜನೆಗೆ ಸಂಬಂಧಿಸಿದ ಪರಿಸರ ಪರಿಣಾಮ ಮೌಲ್ಯಮಾಪನ ದೋಷಗಳಿಂದ ಕೂಡಿದೆ ಹಾಗೂ ಪಾರದರ್ಶಕವಾಗಿಲ್ಲ ಎಂದು ಪರಿಸರವಾದಿಗಳು ಆರೋಪಿಸಿದ್ದಾರೆ. ಪ್ರಸಕ್ತ ಯೋಜನೆಯು ಹಳೆಯ ಗಾಯಗಳನ್ನು ಕೆದಕುವ ಪ್ರಯತ್ನವಾಗಿದೆ; 1960ರ ದಶಕದಲ್ಲಿ ಲಿಂಗನಮಕ್ಕಿ ಜಲಾಶಯ ನಿರ್ಮಾಣದ ಸಂದರ್ಭದಲ್ಲಿ ನಿರ್ವಸಿತರಾಗಿದ್ದ ಕುಟುಂಬವರ್ಗಗಳಿಗೆ ಸೇರಿದವರು ಮತ್ತೊಮ್ಮೆ ಅಂತಹುದೇ ಸವಾಲನ್ನು ಎದುರಿಸಬೇಕಾಗುತ್ತದೆ ಎಂದು ಹೇಳಲಾಗುತ್ತಿದೆ. ಲಿಂಗನಮಕ್ಕಿ ಜಲಾಶಯ ನಿರ್ಮಾಣದಲ್ಲಿ ಭೂಮಿ ಕಳೆದುಕೊಂಡವರಿಗೆ ದೊರೆಯಬೇಕಿದ್ದ ನ್ಯಾಯಯುತ ಪರಿಹಾರ ಹಾಗೂ ಮೂಲಸೌಕರ್ಯಗಳ ಭರವಸೆಗಳು ಪೂರ್ಣ ಪ್ರಮಾಣದಲ್ಲಿ ಈಡೇರಿಲ್ಲ. ಭೂಮಿಯನ್ನು ಕಳೆದುಕೊಂಡಿದ್ದರ ಜೊತೆಗೆ, ನಂಬಿಕೆದ್ರೋಹಕ್ಕೂ ಒಳಗಾದ ನೋವು ಅವರದು. ಹಳೆಯ ಗಾಯಗಳು ಮಾಯದಿರುವ ಸಮುದಾಯಗಳನ್ನು ಮತ್ತೊಮ್ಮೆ ತ್ಯಾಗ ಮಾಡುವಂತೆ ಒತ್ತಾಯಿಸಲಾಗುತ್ತಿದೆ ಹಾಗೂ ಹಳೆಯ ತಪ್ಪುಗಳು ಮರುಕಳಿಸುವುದಿಲ್ಲ ಎಂದು ಹೇಳಲಾಗುತ್ತಿದೆ.

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ಕೈಬಿಡುವುದೇ ಸೂಕ್ತ ಎಂದು ಪರಿಸರವಾದಿಗಳು ಅಭಿಪ್ರಾಯಪಟ್ಟಿದ್ದಾರೆ. ಬ್ಯಾಟರಿ ಶಕ್ತಿ ಶೇಖರಣಾ ವ್ಯವಸ್ಥೆ, ಸೌರಶಕ್ತಿಯಿಂದ ತಾರಸಿ ವಿದ್ಯುತ್ ಯೋಜನೆ ಹಾಗೂ ಸೂಕ್ಷ್ಮ ಜಲವಿದ್ಯುತ್ ಯೋಜನೆಯಂಥ ಪರ್ಯಾಯಗಳನ್ನು ಕಂಡುಕೊಳ್ಳುವ ಸಲಹೆಗಳೂ ವ್ಯಕ್ತವಾಗಿವೆ. ವಿದ್ಯುತ್ ಉತ್ಪಾದನೆಯ ಹೆಸರಿನಲ್ಲಿ ಭವಿಷ್ಯದಲ್ಲಿ ಬೆಂಗಳೂರಿಗೆ ನೀರು ಸಾಗಿಸುವ ಯೋಜನೆ ಇದಾಗಲಿದೆ ಎನ್ನುವ ಶಂಕೆಯೂ ಜನರಲ್ಲಿದೆ. ಒಂದು ವೇಳೆ, ಯೋಜನೆಯನ್ನು ಜಾರಿಗೊಳಿಸುವುದೇ ಆದಲ್ಲಿ, ಯೋಜನೆಯಿಂದ ಪರಿಸರದ ಮೇಲಾಗುವ ಪರಿಣಾಮಗಳ ಕುರಿತಂತೆ ಸ್ವತಂತ್ರ ಪರಿಸರ ಮೌಲ್ಯಮಾಪನವನ್ನು ಸರ್ಕಾರ ಹೊಸತಾಗಿ ನಡೆಸುವುದು ಅಗತ್ಯ. ಜೀವವೈವಿಧ್ಯ ತಾಣಗಳನ್ನು ಸಂರಕ್ಷಿಸುವ ಬದ್ಧತೆಯೊಂದಿಗೆ ಮುಕ್ತ ಸಮಾಲೋಚನೆ ನಡೆಯಬೇಕಾಗಿದೆ. ಎಲ್ಲಕ್ಕಿಂತಲೂ ಮುಖ್ಯವಾಗಿ, ಭೂಸ್ವಾಧೀನ, ಪುನರ್ವಸತಿ ಮತ್ತು ಪುನರ್ ವ್ಯವಸ್ಥೆ ಕಾಯ್ದೆ 2013ರ ಅನ್ವಯ ಸಂತ್ರಸ್ತ ಕುಟುಂಬಗಳಿಗೆ ನ್ಯಾಯಯುತ ಪರಿಹಾರ ದೊರಕಿಸಿಕೊಡುವುದರ ಜೊತೆಗೆ ಜೀವನೋಪಾಯಕ್ಕೆ ಅಗತ್ಯವಾದ ಎಲ್ಲ ನೆರವು ನೀಡಬೇಕಾಗಿದೆ. ಗುಣಮಟ್ಟದ ವಿದ್ಯುತ್ನ ಅಗತ್ಯ ರಾಜ್ಯಕ್ಕಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ, ಈ ಅಗತ್ಯ ಪೂರೈಕೆಗಾಗಿ ಅಮೂಲ್ಯ ಪರಿಸರ ಹಾಗೂ ನಾಗರಿಕರ ಘನತೆಯ ಬೆಲೆ ತೆರುವಂತೆ ಆಗಬಾರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.