ಸೋಮವಾರ, ಏಪ್ರಿಲ್ 19, 2021
23 °C

ಸಂಪಾದಕೀಯ: ನಕ್ಸಲರ ಅಟ್ಟಹಾಸ ನಿಗ್ರಹಿಸಿ ಜನರ ವಿಶ್ವಾಸ ಗಳಿಸಿ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಛತ್ತೀಸಗಡದ ಬಸ್ತಾರ್ ಪ್ರದೇಶದಲ್ಲಿ 10 ದಿನಗಳ ಅಂತರದಲ್ಲಿ ನಡೆದ ಮಾವೊವಾದಿ ಉಗ್ರರ ಎರಡು ದಾಳಿಗಳಲ್ಲಿ ಅರೆಮಿಲಿಟರಿ ಮತ್ತು ಭದ್ರತಾ ಪಡೆಗಳ 27 ಯೋಧರು ಹುತಾತ್ಮರಾಗಿದ್ದಾರೆ. ಮಾರ್ಚ್ 23ರಂದು ನಡೆದ ಮಾವೊವಾದಿಗಳ ದಾಳಿಯಲ್ಲಿ ಜಿಲ್ಲಾ ಮೀಸಲು ಪಡೆಯ ಐವರು ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದರು. ಏಪ್ರಿಲ್ 3ರಂದು ಮಾವೊವಾದಿ ಉಗ್ರರು ಇನ್ನೂ ದೊಡ್ಡ ಮಟ್ಟದ ದಾಳಿ ನಡೆಸಿದಾಗ ಅರೆಮಿಲಿಟರಿ ಪಡೆಗಳ 22 ಯೋಧರು ಮೃತರಾಗಿದ್ದಾರೆ.

ಸುಕ್ಮಾ ಜಿಲ್ಲೆಯಲ್ಲಿ ನಡೆದ ಈ ದಾಳಿಯಲ್ಲಿ ಒಬ್ಬ ಯೋಧ ಕಣ್ಮರೆಯಾಗಿ, 32 ಜನ ಗಾಯಗೊಂಡಿರುವುದು ಈ ಪ್ರದೇಶದಲ್ಲಿ ಮಾವೊವಾದಿಗಳ ಅಟ್ಟಹಾಸ ಮಿತಿ ಮೀರಿರುವುದನ್ನು ಎತ್ತಿ ತೋರಿಸುತ್ತದೆ. ಛತ್ತೀಸಗಡದಲ್ಲಿ ಮಾವೊವಾದಿಗಳು ಹಾಗೂ ಭದ್ರತಾ ಪಡೆಗಳ ನಡುವಣ ಘರ್ಷಣೆಗೆ ಐದು ದಶಕಗಳ ದೀರ್ಘ ಇತಿಹಾಸವೇ ಇದೆ. ಕಳೆದ ಶತಮಾನದ 70ರ ದಶಕದಲ್ಲಿ ಈ ಪ್ರದೇಶದಲ್ಲಿ ಹುಟ್ಟಿಕೊಂಡ ನಕ್ಸಲ್ ಚಳವಳಿಯನ್ನು ಮಟ್ಟ ಹಾಕಲು ಸರ್ಕಾರ ಬಹಳಷ್ಟು ಶ್ರಮ ಪಟ್ಟಿದೆ.

ಸಶಸ್ತ್ರ ಕಾರ್ಯಾಚರಣೆ ಮಾತ್ರವಲ್ಲ, ಉಗ್ರರ ಮನವೊಲಿಸುವಿಕೆ, ದಟ್ಟ ಅರಣ್ಯದ ಒಳಭಾಗದಲ್ಲಿ ನೆಲೆಸಿರುವ ಆದಿವಾಸಿಗಳ ಅಭಿವೃದ್ಧಿಗಾಗಿ ವಿಶೇಷ ಕಾರ್ಯಕ್ರಮಗಳ ಜಾರಿ ಮುಂತಾಗಿ ಎಲ್ಲ ರೀತಿಯ ಪ್ರಯತ್ನಗಳನ್ನೂ ನಡೆಸಿದೆ. ಇದರಿಂದ ನಕ್ಸಲ್ ಚಳವಳಿ ಸ್ವಲ್ಪಮಟ್ಟಿಗೆ ದುರ್ಬಲಗೊಂಡಿತ್ತು. ಆದರೆ 2004ರ ಬಳಿಕ ಈ ಪ್ರದೇಶದಲ್ಲಿ ಮಾವೊವಾದಿ ಚಳವಳಿ ಇನ್ನಷ್ಟು ಉಗ್ರಗೊಂಡಿರುವುದು ಸ್ಪಷ್ಟ. ಸುಕ್ಮಾ ಜಿಲ್ಲೆಯಲ್ಲಿ ಅರೆಮಿಲಿಟರಿ ಪಡೆಗಳ ಜೊತೆ ನಡೆಸಿದ ಗುಂಡಿನ ದಾಳಿಯಲ್ಲಿ 400ಕ್ಕೂ ಹೆಚ್ಚು ಮಾವೊವಾದಿಗಳು ಪಾಲ್ಗೊಂಡಿದ್ದರು ಎನ್ನುವುದು ಈ ಆದಿವಾಸಿ ಪ್ರದೇಶದಲ್ಲಿ ಮಾವೊವಾದಿಗಳು ಹೊಂದಿರುವ ಹಿಡಿತಕ್ಕೆ ಸಾಕ್ಷಿ. 2000ದಿಂದ ಈಚೆಗೆ ಮಾವೊವಾದಿಗಳು ಮತ್ತು ನಮ್ಮ ಭದ್ರತಾ ಪಡೆಗಳ ನಡುವೆ ನಡೆದಿರುವ ಹಲವು ಘರ್ಷಣೆಗಳಲ್ಲಿ 10 ಸಾವಿರಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿ ದ್ದಾರೆ ಎನ್ನುವುದು ಪರಿಸ್ಥಿತಿಯ ತೀವ್ರತೆಯನ್ನು ತೋರಿಸುತ್ತದೆ.

ಈ ಪ್ರದೇಶದಲ್ಲಿ ಸರ್ಕಾರವು ಗುಪ್ತಚರ ಜಾಲವನ್ನು ಮತ್ತಷ್ಟು ಬಲಗೊಳಿಸುವ ಅಗತ್ಯವಿದೆ ಎನ್ನುವುದು ಸ್ಪಷ್ಟ. ಸುಕ್ಮಾ ಜಿಲ್ಲೆಯಲ್ಲಿ ನಡೆದ ದಾಳಿಯಲ್ಲಿ 22 ಮಂದಿ ಯೋಧರು ಪ್ರಾಣ ಕಳೆದುಕೊಳ್ಳಲು ಗುಪ್ತಚರ ವಿಭಾಗದ ವೈಫಲ್ಯವೇ ಕಾರಣ ಎಂಬ ಆರೋಪ ಇದೆ. ಮಾವೊವಾದಿಗಳ ವಿರುದ್ಧ ದೊಡ್ಡ ಮಟ್ಟದ ಕಾರ್ಯಾಚರಣೆಯನ್ನು ಕೈಗೊಳ್ಳುವ ಮುನ್ನ ಅರೆಮಿಲಿಟರಿ ಪಡೆಯ ಅಧಿಕಾರಿಗಳು ಹೆಲಿಕಾಪ್ಟರ್‌ಗಳಲ್ಲಿ ತಿರುಗಾಡುತ್ತಿದ್ದುದು ಮಾವೊವಾದಿಗಳಿಗೆ ದಾಳಿಯ ಮುನ್ಸೂಚನೆಯನ್ನು ಒದಗಿಸಿರಬಹುದು ಎಂಬ ವರದಿಗಳಿವೆ.

ನಮ್ಮ ಭದ್ರತಾ ಪಡೆಗಳಿಗೆ ಸಿಕ್ಕಿದ ಗುಪ್ತಚರ ಮಾಹಿತಿ ದಾರಿ ತಪ್ಪಿಸುವಂತೆ ಇದ್ದುದು ಕೂಡಾ, ಮಾವೊವಾದಿಗಳ ಜಾಲದ ಮಧ್ಯೆ ಯೋಧರು ಸಿಲುಕಿ ಬೀಳಲು ಕಾರಣವಾಗಿರಬೇಕು ಎಂದು ಶಂಕಿಸಲಾಗಿದೆ. ಸಶಸ್ತ್ರ ಪಡೆಗಳ ಜೊತೆಗೆ ನಕ್ಸಲೀಯರು ಸತತ ಐದು ಗಂಟೆಗಳ ಕಾಲ ಗುಂಡಿನ ಚಕಮಕಿ ನಡೆಸಿದ್ದರು. ಈ ಸಂದರ್ಭದಲ್ಲಿ ಇನ್ನಷ್ಟು ಅರೆಮಿಲಿಟರಿ ಪಡೆಗಳನ್ನು ಸ್ಥಳಕ್ಕೆ ಕಳುಹಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಆದಿವಾಸಿ ಪ್ರದೇಶಗಳಲ್ಲಿ ಜನರ ಜೀವನಮಟ್ಟವನ್ನು ಎತ್ತರಿಸುವ ಮತ್ತು ಮೂಲ ಸೌಕರ್ಯಗಳನ್ನು ಕಲ್ಪಿಸುವ ದಿಸೆಯಲ್ಲಿ ಛತ್ತೀಸಗಡ ಸರ್ಕಾರ ಇನ್ನಷ್ಟು ವ್ಯಾಪಕ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯವಿದೆ.

ಆದಿವಾಸಿಗಳಲ್ಲಿ ಸರ್ಕಾರದ ಯೋಜನೆಗಳ ಬಗ್ಗೆ ವಿಶ್ವಾಸ ಮೂಡಿಸುವ ಕೆಲಸವನ್ನು ಅಧಿಕಾರಿಗಳು ಹೆಚ್ಚು ಶ್ರಮಪಟ್ಟು ಮಾಡಬೇಕಿದೆ. ಹಾಗಾದರೆ ಮಾತ್ರ ಮಾವೊವಾದಿಗಳ ಬಲ ಕುಂದಿಸಲು ಸಾಧ್ಯವಾಗಬಹುದು. ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲದ, ಹಿಂಸೆಯ ಮೂಲಕವೇ ಮಾತನಾಡಲು ಯತ್ನಿಸುವ ಮಾವೊವಾದಿಗಳನ್ನು ಉಕ್ಕಿನ ಮುಷ್ಟಿಯಿಂದ ನಿಯಂತ್ರಿಸ ಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ನಕ್ಸಲರ ಬಂದೂಕಿನ ಮೊರೆತಕ್ಕೆ ಭದ್ರತಾ ಪಡೆಗಳ ಮೂಲಕ ಉತ್ತರ ಕೊಡುವುದರ ಜೊತೆಯಲ್ಲೇ, ನಕ್ಸಲ್‌ಪೀಡಿತ ಪ್ರದೇಶಗಳ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿರುವುದೂ ಅಗತ್ಯವಾಗಿ ಆಗಬೇಕಿರುವ ಕೆಲಸ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು