ಮಹಾಮೈತ್ರಿಗೆ ಉತ್ಸಾಹವಷ್ಟೇ ಸಾಲದುವಾಸ್ತವಿಕ ಕಾರ್ಯತಂತ್ರವೂ ಬೇಕು

7

ಮಹಾಮೈತ್ರಿಗೆ ಉತ್ಸಾಹವಷ್ಟೇ ಸಾಲದುವಾಸ್ತವಿಕ ಕಾರ್ಯತಂತ್ರವೂ ಬೇಕು

Published:
Updated:
Deccan Herald

ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಂತೆ ಬಿಜೆಪಿಯೇತರ ಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನವನ್ನು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ಚುರುಕುಗೊಳಿಸಿದ್ದಾರೆ. ಕರ್ನಾಟಕದ ಮೂರು ಲೋಕಸಭಾ ಕ್ಷೇತ್ರಗಳು ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಜೆಡಿಎಸ್‌– ಕಾಂಗ್ರೆಸ್‌ ಮೈತ್ರಿಕೂಟವು ಒಂದು ಲೋಕಸಭಾ ಕ್ಷೇತ್ರ ಹೊರತುಪಡಿಸಿ ಉಳಿದವುಗಳನ್ನು ಗೆದ್ದುಕೊಂಡಿರುವುದು ಎನ್‌ಡಿಎಯಿಂದ ಹೊರಗಿರುವ ಪಕ್ಷಗಳ ಉತ್ಸಾಹವನ್ನು ಇಮ್ಮಡಿಗೊಳಿಸಿದೆ.

ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ರಾಜ್ಯದಲ್ಲಿ ಮೈತ್ರಿ ಸರ್ಕಾರ ರಚನೆಯಾದ ದಿನವೇ ರಾಷ್ಟ್ರಮಟ್ಟದಲ್ಲಿ ವಿರೋಧ ಪಕ್ಷಗಳು ಒಗ್ಗೂಡುವ ಒಲವು ವ್ಯಕ್ತವಾಗಿತ್ತು. ಉಪಚುನಾವಣೆಗಳ ಫಲಿತಾಂಶ ಈ ಸಾಧ್ಯತೆಯನ್ನು ಇನ್ನಷ್ಟು ನಿಚ್ಚಳವಾಗಿಸಿದೆ. ದೇಶ ಮತ್ತು ಪ್ರಜಾತಂತ್ರದ ಉಳಿವಿಗಾಗಿ ಬಿಜೆಪಿ ವಿರೋಧಿ ಶಕ್ತಿಗಳನ್ನು ಒಗ್ಗೂಡಿಸಲು ಕಸರತ್ತು ನಡೆಸುತ್ತಿರುವುದಾಗಿ ನಾಯ್ಡು ಹೇಳಿದ್ದಾರೆ. ಸದ್ಯಕ್ಕೆ ನರೇಂದ್ರ ಮೋದಿ ಮತ್ತು ಅಮಿತ್‌ ಶಾ ಅವರ ನೇತೃತ್ವದಲ್ಲಿ ಬಿಜೆಪಿ ಪ್ರಬಲ ಪಕ್ಷವಾಗಿರುವುದಂತೂ ದಿಟ. ಇದಕ್ಕೆ ಸಮಾನ ಪೈ‍ಪೋಟಿ ನೀಡುವ ಶಕ್ತಿಯನ್ನು ವಿರೋಧ ಪಕ್ಷಗಳು ಪ್ರದರ್ಶಿಸಬೇಕಾದ ಅನಿವಾರ್ಯ ಇದೆ.

ಈ ನಿಟ್ಟಿನಲ್ಲಿ ಎಲ್ಲ ವಿರೋಧ ಪಕ್ಷಗಳು ಒಗ್ಗೂಡುವುದು ಸ್ವಾಗತಾರ್ಹ ಬೆಳವಣಿಗೆ. ಚುನಾವಣೆ ದೃಷ್ಟಿಯಿಂದ ಮಾತ್ರವಲ್ಲ, ಎಲ್ಲ ರೀತಿಯಿಂದಲೂ ಇದು ಆಗಬೇಕಾದ ಕೆಲಸ. ಏಕೆಂದರೆ, ವಿರೋಧ ಪಕ್ಷಗಳು ದುರ್ಬಲವಾದರೆ ಜನತಂತ್ರವೂ ದುರ್ಬಲವಾಗುವ ಅಪಾಯವಿದೆ. ಹಿಂದೆ ಕಾಂಗ್ರೆಸ್‌ ವಿರುದ್ಧ ಅಂದರೆ, ಇಂದಿರಾ ಗಾಂಧಿ ಮತ್ತು ರಾಜೀವ್‌ ಗಾಂಧಿ ವಿರುದ್ಧ ವಿರೋಧ ಪಕ್ಷಗಳು ಒಗ್ಗೂಡಿದ್ದವು. ಈಗ ಮೋದಿ ವಿರುದ್ಧ ಒಗ್ಗಟ್ಟಿನ ಮಂತ್ರ ಕೇಳಿಬರುತ್ತಿದೆ. ಇತ್ತೀಚಿನವರೆಗೂ ಎನ್‌ಡಿಎ ಭಾಗವೇ ಆಗಿದ್ದ ನಾಯ್ಡು ಈ ಪ್ರಯತ್ನಕ್ಕೆ ಕೈಹಾಕಿರುವುದು ಮಹತ್ವದ ಬೆಳವಣಿಗೆ. ಆದರೆ, ರಾಜ್ಯ ಮಟ್ಟದಲ್ಲಿ ಪ್ರತಿಸ್ಪರ್ಧಿಗಳಾಗಿರುವ ಪ‍್ರಾದೇಶಿಕ ಪಕ್ಷಗಳು ಹೇಗೆ ಒಗ್ಗೂಡಲಿವೆ ಎಂಬುದು ಕುತೂಹಲದ ಸಂಗತಿ.

ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಹಾಗೂ ಎಡಪಕ್ಷಗಳು ಬದ್ಧ ವೈರಿಗಳು. ಹಾಗೆಯೇ ಉತ್ತರ ‍ಪ್ರದೇಶದಲ್ಲಿ ಬಿಎಸ್‌ಪಿ ಹಾಗೂ ಸಮಾಜವಾದಿ ಪಕ್ಷ ರಾಜಕೀಯ ಎದುರಾಳಿಗಳು. ಲೋಕಸಭೆ ಮತ್ತು ವಿಧಾನಸಭೆ ಉಪಚುನಾವಣೆಗಳಲ್ಲಿ ಇವೆರಡೂ ಪಕ್ಷಗಳ ನಡುವೆ ಅಲ್ಲಿ ಸಹಕಾರ ಸಾಧ್ಯವಾಗಿತ್ತು. ಆದರೆ ಮಾಯಾವತಿ ಅವರು ಕಾಂಗ್ರೆಸ್‌ನಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಇಂತಹ ನಡೆ ಮತದಾರರಲ್ಲಿ ಗೊಂದಲ ಮೂಡಿಸಬಹುದು. ವಿರೋಧ ಪಕ್ಷಗಳು ಅವಕಾಶವಾದಿ ರಾಜಕಾರಣವನ್ನು ಬದಿಗಿಟ್ಟು ದೃಢ ಮನಸ್ಸಿನಿಂದ ಒಗ್ಗೂಡದಿದ್ದರೆ ಮತದಾರರು ಅವರನ್ನು ನಂಬುವುದು ಕಷ್ಟ. ಹಿಂದೊಮ್ಮೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಿಜೆ‍ಪಿ ಹಾಗೂ ಕಾಂಗ್ರೆಸ್‌ ಹೊರತುಪಡಿಸಿದ ಮಹಾಮೈತ್ರಿ ರಚಿಸಬೇಕೆಂದು ಹೇಳಿದ್ದರು. ಇದೇ ಅಭಿಪ್ರಾಯವನ್ನು ಮಾಯಾವತಿ ಅವರೂ ವ್ಯಕ್ತಪಡಿಸಿದ್ದರು. ಆದರೆ, ಕಾಂಗ್ರೆಸ್‌ ಪಕ್ಷವನ್ನು ಹೊರಗಿಟ್ಟು, ರಾಷ್ಟ್ರಮಟ್ಟದಲ್ಲಿ ಪರ್ಯಾಯ ರಾಜಕೀಯ ರಂಗ ರಚನೆ ಕಷ್ಟ ಎಂದು ಚಂದ್ರಬಾಬು ನಾಯ್ಡು, ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಮತ್ತಿತರರು ಪ್ರತಿಪಾದಿಸುತ್ತಿದ್ದಾರೆ. ವಿರೋಧ ಪಕ್ಷಗಳು ಒಂದಾಗದಿದ್ದರೆ ಬಿಜೆಪಿಯ ಓಟಕ್ಕೆ ತಡೆಯೊಡ್ಡುವುದು ಕಷ್ಟ. ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ದೊರೆಯದಿರಬಹುದು, ಉಪಚುನಾವಣೆಗಳಲ್ಲಿ ಬಿಜೆಪಿ ಬಲ ಕುಗ್ಗಿರಬಹುದು. ಆದರೆ, ಇದನ್ನೇ ಮುಂದಿನ ಲೋಕಸಭಾ ಚುನಾವಣೆಯ ದಿಕ್ಸೂಚಿ ಎಂದು ಭಾವಿಸಲಾಗದು.

ಬರಹ ಇಷ್ಟವಾಯಿತೆ?

 • 6

  Happy
 • 1

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !