ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಜನಸಂಖ್ಯೆ ಏರಿಕೆ ಪರಿಶೀಲನೆಗೆ ಮೊದಲು ಜನಗಣತಿ ನಡೆಸಿ

Published 7 ಫೆಬ್ರುವರಿ 2024, 19:39 IST
Last Updated 7 ಫೆಬ್ರುವರಿ 2024, 19:39 IST
ಅಕ್ಷರ ಗಾತ್ರ

‘ಜನಸಂಖ್ಯೆ ಹೆಚ್ಚಳ ಮತ್ತು ಜನಸಂಖ್ಯಾ ಸ್ವರೂಪದಲ್ಲಿ ಆಗಿರುವ ಬದಲಾವಣೆ’ಯಿಂದ ಎದುರಾಗಬಹುದಾದ ಸವಾಲುಗಳ ಕುರಿತು ಪರಿಶೀಲನೆ ನಡೆಸಲು ಉನ್ನತಾಧಿಕಾರದ ಸಮಿತಿ ರಚಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಧ್ಯಂತರ ಬಜೆಟ್‌ ಭಾಷಣದಲ್ಲಿ ಹೇಳಿದ್ದಾರೆ. ಇದೊಂದು ಕುತೂಹಲಕರ ಹೇಳಿಕೆ. ಈ ಸಮಿತಿಯ ಕುರಿತು ಹೆಚ್ಚಿನ ವಿವರಗಳು ಲಭ್ಯವಿಲ್ಲ. ಹಾಗೆಯೇ ಈ ಸಮಿತಿಯು ಯಾವ ಕೆಲಸ ಮಾಡಬೇಕು ಎಂಬ ನಿರೀಕ್ಷೆ ಇದೆ ಎಂಬುದೂ ತಿಳಿದಿಲ್ಲ. ಜನಸಂಖ್ಯೆಯು ವೇಗವಾಗಿ ಬೆಳೆಯುತ್ತಿದೆ ಎಂದಾದರೆ ಅದು ತುರ್ತಾಗಿ ಗಮನಹರಿಸಬೇಕಾದ ಸವಾಲು ಎಂಬ ಭಾವನೆ ಇದೆ. ಭಾರತವು ಚೀನಾವನ್ನು ಹಿಂದಿಕ್ಕಿ ಜಗತ್ತಿನ ಅತ್ಯಂತ ಹೆಚ್ಚು ಜನಸಂಖ್ಯೆ ಇರುವ ದೇಶ ಎಂಬ ಸ್ಥಾನವನ್ನು ಪಡೆದುಕೊಂಡಿದೆ ಎಂಬುದು ನಿಜ. ಆದರೆ, ಭಾರತದ ಜನಸಂಖ್ಯೆಯು ಸ್ಥಿರಗೊಳ್ಳುತ್ತಿದೆ ಎಂಬುದು ವಾಸ್ತವ. ಹತ್ತು ವರ್ಷಕ್ಕೊಮ್ಮೆ ನಡೆಸಲಾಗುವ ಜನಗಣತಿಯು 2011ರಲ್ಲಿ ನಡೆದಿತ್ತು. ಆದರೆ, ಸರ್ಕಾರ ಈವರೆಗೂ ಅದನ್ನು ನಡೆಸಿಲ್ಲ. ಹಾಗಾಗಿ, ಜನಸಂಖ್ಯೆ ಎಷ್ಟಿದೆ ಎಂಬುದರ ಅಧಿಕೃತ ಮಾಹಿತಿ ಇಲ್ಲ. ಸರ್ಕಾರವು ಸದ್ಯದಲ್ಲಿ ಜನಗಣತಿ ನಡೆಸುವ ಯೋಚನೆಯನ್ನೂ ಮಾಡಿರುವಂತೆ ಕಾಣುತ್ತಿಲ್ಲ. ಜನಗಣತಿಯಿಂದ ದೊರೆಯುವ ಜನಸಂಖ್ಯೆ ಕುರಿತ ಅಧಿಕೃತ ಮಾಹಿತಿ ಇಲ್ಲದಿರುವುದು ನೀತಿ ನಿರೂಪಣೆ ಮತ್ತು ಯೋಜನೆಗಳ ರೂಪಿಸುವಿಕೆ ಮೇಲೆ ಪ್ರತಿಕೂಲ ಪರಿಣಾಮ ಉಂಟುಮಾಡುತ್ತದೆ. 

ಮಾದರಿ ನೋಂದಣಿ ವ್ಯವಸ್ಥೆಯ 2020ರ ವರದಿ ಮತ್ತು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ–5ರ ವರದಿ (2019–21) ಪ್ರಕಾರ, ದೇಶದಲ್ಲಿ ಒಟ್ಟು ಫಲವಂತಿಕೆ ದರವು (ಟಿಎಫ್‌ಆರ್‌) 2.0ಗೆ ಇಳಿದಿದೆ. ಇದು, ಜನಸಂಖ್ಯೆಯ ಮಟ್ಟ ಕಾಯ್ದುಕೊಳ್ಳಲು ಬೇಕಿರುವ ದರವಾದ 2.1ಕ್ಕಿಂತಲೂ ಕಡಿಮೆ. ಉತ್ತರಪ್ರದೇಶ, ಬಿಹಾರದಂತಹ ಕೆಲವು ರಾಜ್ಯಗಳಲ್ಲಿ ಮಾತ್ರ ಟಿಎಫ್‌ಆರ್‌ ಹೆಚ್ಚು ಇದೆ. ಈ ರಾಜ್ಯ ಗಳಲ್ಲಿಯೂ ಟಿಎಫ್‌ಆರ್‌ ಕುಸಿಯುತ್ತಿದೆ. ದಕ್ಷಿಣದ ರಾಜ್ಯಗಳಲ್ಲಿ ಆರೋಗ್ಯ, ಶಿಕ್ಷಣ ಮುಂತಾದ ಕ್ಷೇತ್ರ
ಗಳಲ್ಲಿನ ಪ್ರಗತಿಯಿಂದಾಗಿ ಜನಸಂಖ್ಯೆ ಏರಿಕೆ ದರವು ಕುಸಿಯುತ್ತಲೇ ಬಂದಿದೆ. ಸಮುದಾಯಗಳನ್ನು ನೋಡುವುದಾದರೆ, ಮುಸ್ಲಿಂ ಸಮುದಾಯದಲ್ಲಿ ಒಂದು ಕಾಲದಲ್ಲಿ ಜನಸಂಖ್ಯೆ ಏರಿಕೆ ದರವು ಹೆಚ್ಚು ಇತ್ತು. ಆದರೆ ಈಗ, ಜನಸಂಖ್ಯೆ ಏರಿಕೆ ದರವು ಕುಸಿಯುತ್ತಿರುವ ಪ್ರಮಾಣವು ಈ ಸಮುದಾಯ ದಲ್ಲಿಯೇ ಹೆಚ್ಚು. ಕೆಲವು ಪ್ರದೇಶಗಳಲ್ಲಿ ಅಂತೂ ಜನಸಂಖ್ಯೆ ಮಟ್ಟ ಕಾಯ್ದುಕೊಳ್ಳಲು ಬೇಕಾದ ಅಪೇಕ್ಷಣೀಯ ದರಕ್ಕಿಂತ ಕೆಳಗೆ ಇದೆ. ಸಾಮಾಜಿಕ ಮತ್ತು ಆರ್ಥಿಕ ಕಾರಣಗಳಿಂದಾಗಿ ಹೀಗೆ ಆಗಿದೆ. ಆದ್ದರಿಂದ, ಜನಸಂಖ್ಯೆ ಏರಿಕೆಯು ದೇಶವು ಎದುರಿಸುತ್ತಿರುವ ಗಂಭೀರವಾದ ಸಮಸ್ಯೆ ಎಂದು ಪರಿಗಣಿಸಿ ರೂಪಿಸಬಹುದಾದ ಯಾವುದೇ ನೀತಿ ಅಥವಾ ನಿರ್ಧಾರವು ತಪ್ಪುಗ್ರಹಿಕೆಯಿಂದ ಕೂಡಿದ್ದಾಗಿ ರುತ್ತದೆ. ಜನಸಂಖ್ಯೆ ಏರಿಕೆಯು ದೇಶದ ಮುಂದಿರುವ ಗಂಭೀರ ಸವಾಲು ಎಂದು ಕೆಲವು ಗುಂಪುಗಳು ಮಾಡುತ್ತಿರುವ ಪ್ರತಿಪಾದನೆ ಸ್ವಹಿತಾಸಕ್ತಿಯದ್ದಾಗಿದೆ. 

ದೇಶದಲ್ಲಿ ಜನಸಂಖ್ಯೆಯ ಏರಿಕೆಯು ಈಗಿನ ದರದಲ್ಲಿಯೇ ಇದ್ದರೆ, ಜನಸಂಖ್ಯೆ ನಿಯಂತ್ರಣಕ್ಕಾಗಿ ಬಲವಂತದ ಕ್ರಮಗಳನ್ನು ಕೈಗೊಳ್ಳುವ ಅಗತ್ಯ ಇಲ್ಲ. ಕೆಲವು ದೇಶಗಳಲ್ಲಿ ಕೆಲವು ವರ್ಷಗಳ ಹಿಂದೆ, ಸರ್ಕಾರಗಳೇ ಮಧ್ಯಪ್ರವೇಶಿಸಿ ಜನಸಂಖ್ಯೆ ನಿಯಂತ್ರಣದ ಕ್ರಮಗಳನ್ನು ಕೈಗೊಂಡಿವೆ. ಆದರೆ, ಅವು ಅಲ್ಲಿನ ಜನಸಂಖ್ಯಾ ಸ್ವರೂಪದ ಮೇಲೆ ಪ್ರತಿಕೂಲ ಪರಿಣಾಮ ಬೀರಿವೆ. ಜನಸಂಖ್ಯೆ ನಿಯಂತ್ರಣದ ಕೆಟ್ಟ
ಪರಿಣಾಮಗಳಿಂದಾಗಿ ಕೆಲವು ದೇಶಗಳು ನಿಯಂತ್ರಣದ ನೀತಿಯ ಬದಲಿಗೆ ಜನಸಂಖ್ಯೆ ಹೆಚ್ಚಳದ ನೀತಿಗೆ ಒತ್ತು ನೀಡಬೇಕಾಗಿ ಬಂದದ್ದೂ ಇದೆ. ಇದಕ್ಕೆ ಒಂದು ಉದಾಹರಣೆ ಚೀನಾ. ಕುಟುಂಬದ ಗಾತ್ರದ ಆಧಾರದಲ್ಲಿ ಪ್ರಜಾಸತ್ತಾತ್ಮಕ ಹಕ್ಕುಗಳು, ಕಲ್ಯಾಣ ಯೋಜನೆಗಳು ಇತ್ಯಾದಿ ಲಭ್ಯ ಎಂಬ ನಿಯಮ ರೂಪಿಸುವುದು ಕೆಟ್ಟ ನೀತಿ. ಇಂತಹ ಸಲಹೆಗಳು ಹಿಂದೆ ಕೇಳಿಬಂದಿದ್ದವು. ಮುಸ್ಲಿಂ ಸಮುದಾಯದ ಜನಸಂಖ್ಯೆಯು ವೇಗವಾಗಿ ಬೆಳೆಯುತ್ತಿದೆ; ಹೀಗಾಗಿ, ಮುಂದೊಂದು ದಿನ ಈ ದೇಶದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಲಿದ್ದಾರೆ ಎಂಬ ಸಂಕಥನವನ್ನು ಬಹಳ ಹಿಂದಿನಿಂದಲೂ ಪ್ರಚುರಪಡಿಸಲಾಗುತ್ತಿದೆ. ಆದರೆ, ಇದು ಸಂಪೂರ್ಣವಾಗಿ ಆಧಾರರಹಿತ ಎಂದು ಜನಸಂಖ್ಯಾಶಾಸ್ತ್ರಜ್ಞರು ಮತ್ತು ಪರಿಣತರು ಹೇಳಿದ್ದಾರೆ. ಹೊಸದಾಗಿ ರಚನೆ ಆಗಲಿರುವ ಸಮಿತಿಯು ಇಂತಹ ಯೋಚನೆಗಳ ಆಧಾರದಲ್ಲಿ ಕೆಲಸ ಮಾಡಲಾರದು ಎಂದು ಆಶಿಸೋಣ. ಸಮಿತಿಯ ಕುರಿತ ವಿವರಗಳನ್ನು ಸರ್ಕಾರವು ಬಹಿರಂಗ‍ಪಡಿಸ
ಬೇಕು. ಆದರೆ, ಎಲ್ಲಕ್ಕಿಂತ ಮುಖ್ಯವಾಗಿ, ಜನಸಂಖ್ಯೆ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳುವುದಕ್ಕಾಗಿ ಜನಗಣತಿಯನ್ನು ಮೊದಲಿಗೆ ನಡೆಸಬೇಕು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT