ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ರೈತರ ಪ್ರತಿಭಟನೆಗೆ ಮಣಿದು ಸರ್ಕಾರವು 1,777 ಎಕರೆ ಜಮೀನನ್ನು ಭೂಸ್ವಾಧೀನದಿಂದ ಕೈಬಿಟ್ಟಿದೆ. ಇದು ರೈತರ ಹೋರಾಟಕ್ಕೆ ಸಂದ ಜಯ ಎಂದು ಹಲವರು ವ್ಯಾಖ್ಯಾನಿಸುತ್ತಿದ್ದರೆ, ಕೈಗಾರಿಕಾಭಿವೃದ್ಧಿಗೆ ಆದ ಹಿನ್ನಡೆ ಎಂದು ಕೆಲವರು ವಿಶ್ಲೇಷಿಸುತ್ತಿದ್ದಾರೆ. ಈ ಕುರಿತು ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರು ‘ಪ್ರಜಾವಾಣಿ’ ಸಂದರ್ಶನದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ
ದೇವನಹಳ್ಳಿ ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗಿದ್ದು ಬಿಜೆಪಿ ಸರ್ಕಾರದ ಕಾಲದಲ್ಲಿ. ಆಗ ಕಾಂಗ್ರೆಸ್ ಪಕ್ಷ ಇದನ್ನು ವಿರೋಧಿಸಿತ್ತು. ಈಗ ನೀವು ಕೈಗಾರಿಕೆಗಳಿಗೆ ಭೂಮಿ ಬೇಕು ಎನ್ನುತ್ತೀರಿ. ಯಾಕೆ ಈ ವಿರೋಧಾಭಾಸ?
ರಾಜಕಾರಣ ಮತ್ತು ಅಭಿವೃದ್ಧಿ ಎರಡನ್ನೂ ಪರಸ್ಪರ ಬೆರೆಸುವ ಪ್ರವೃತ್ತಿ ಒಳ್ಳೆಯದಲ್ಲ. ಆದರೆ, ನಮ್ಮಲ್ಲಿ ಇಂಥದ್ದಕ್ಕೇ ಹೆಚ್ಚು ಪ್ರಚಾರ ಸಿಗುತ್ತಿದೆ. ನನಗೆ ಗೊತ್ತಿರುವ ಹಾಗೆ ಅಧಿಸೂಚನೆಯನ್ನು ಪಕ್ಷ ಸಂಪೂರ್ಣ ವಿರೋಧಿಸಿರಲಿಲ್ಲ. ಹೀಗೆ ವಿರೋಧ ಮಾಡುತ್ತ ಹೋದರೆ, ಕೊನೆಗೆ ಏನೂ ಆಗುವುದಿಲ್ಲ. ಅಲ್ಲಿ ರೈತರು ಧರಣಿ ಕುಳಿತಿದ್ದಾಗ ಸಿದ್ದರಾಮಯ್ಯನವರು ಹೋಗಿದ್ದು ನಿಜ. ಜೊತೆಗೆ, ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಈ ಭೂಸ್ವಾಧೀನ ವಿಚಾರವನ್ನು ಮರುಪರಿಶೀಲಿಸುವ ಭರವಸೆಯನ್ನೂ ಕೊಟ್ಟಿದ್ದರು. ಸಂಪೂರ್ಣ ರದ್ದುಪಡಿಸಿಯೇ ಬಿಡುತ್ತೇವೆ ಎಂದೇನೂ ಹೇಳಿರಲಿಲ್ಲ. ಇದಕ್ಕೆ ತಕ್ಕಂತೆ ನೀರಾವರಿ, ಕೃಷಿ, ವಸತಿ ಈ ಮೂರು ಅಂಶಗಳನ್ನು ಪರಿಗಣಿಸಿ ಚನ್ನರಾಯಪಟ್ಟಣ, ಮಟ್ಟಬಾರ್ಲು, ಶ್ರೋತ್ರೀಯ ತೆಲ್ಲೋಹಳ್ಳಿಗೆ ಸೇರಿದ 495 ಎಕರೆ ಜಮೀನನ್ನು ನಾವು ಸ್ವಾಧೀನದಿಂದ ಕೈಬಿಟ್ಟೆವು. ಜೊತೆಗೆ, ಚನ್ನರಾಯಪಟ್ಟಣ ಹೋಬಳಿಯಲ್ಲಿ ಇನ್ನು ಮುಂದೆ ಕೈಗಾರಿಕೆಗಳಿಗಾಗಿ ಜಮೀನು ಸ್ವಾಧೀನ ಮಾಡಿಕೊಳ್ಳುವುದಿಲ್ಲ ಎಂದೂ ಹೇಳಿದೆವು. ಸರ್ಕಾರ ಅಂದ ಮೇಲೆ, ಉತ್ತರದಾಯಿತ್ವ ಇರುತ್ತದೆ. ನಾವಿಲ್ಲಿ ಒಮ್ಮುಖವಾಗಿ ಯೋಚಿಸಲು ಸಾಧ್ಯವಿಲ್ಲ. ರೈತರ ಬಗ್ಗೆಯೂ ಯೋಚಿಸಬೇಕು, ಕೈಗಾರಿಕೆಗಳ ಬಗ್ಗೆಯೂ ಯೋಚಿಸಬೇಕು. ಹಾಗೆಂದು, ಕೈಚೆಲ್ಲಿ ಕುಳಿತುಕೊಳ್ಳಲೂ ಸಾಧ್ಯವಿಲ್ಲ. ಎಲ್ಲೋ ಒಂದು ಕಡೆ ಸುವರ್ಣ ಮಧ್ಯಮವನ್ನು ಕಂಡುಕೊಳ್ಳಬೇಕಾಗುತ್ತದೆ. ಸರ್ಕಾರ ಅಂದ ಮೇಲೆ, ಸಮಷ್ಟಿ ಹಿತ ನೋಡಬೇಕಾಗುತ್ತದೆ.
ರೈತರಲ್ಲೇ ಕೆಲವರು 449 ಎಕರೆ ಭೂಮಿ ಕೊಡಲು ಮುಂದೆ ಬಂದರು. ಕೆಲವರು ಭೂಸ್ವಾಧೀನ ಬೇಡವೆಂದರು. ರೈತರ ನಡುವೆ ಸರ್ಕಾರ ಒಡಕು ಮೂಡಿಸಲು ಯತ್ನಿಸಿತ್ತಾ?
ಮುಖ್ಯಮಂತ್ರಿ ಸಿದ್ದರಾಮಯ್ಯನವರಾಗಲಿ, ನಾನಾಗಲಿ, ನಾವೆಲ್ಲರೂ ರೈತಾಪಿ ಹಿನ್ನೆಲೆಯಿಂದ ಬಂದಿರುವವರೇ. ರೈತರ ಕಷ್ಟ-ನಷ್ಟಗಳು ಏನೆಂದು ನಮಗೂ ಗೊತ್ತು. ರೈತರ ವಿರುದ್ಧವಾಗಿ ನಾವು ಯಾವತ್ತೂ ಹೋಗಿಲ್ಲ. ಅತ್ಯಾಧುನಿಕ ರಕ್ಷಣೆ ಮತ್ತು ವೈಮಾಂತರಿಕ್ಷ (ಏರೋಸ್ಪೇಸ್) ಪಾರ್ಕ್ ವಿಚಾರದಲ್ಲಿ ಮೊದಲು ಅಧಿಸೂಚನೆ ಹೊರಬಿದ್ದಿದ್ದೇ ಈ 449 ಎಕರೆ ಜಮೀನಿಗೆ. ಅವರು ತಾವಾಗಿಯೇ ಜಮೀನು ಬಿಟ್ಟುಕೊಡಲು ಬಂದರು. ಈ ಮಧ್ಯೆ, ಸರ್ಕಾರ ಅಂತಿಮ ತೀರ್ಮಾನಕ್ಕೆ ಬರಲು ಹತ್ತು ದಿನ ಅವಕಾಶ ಕೇಳಿತ್ತಷ್ಟೆ. ಏಕೆಂದರೆ, ಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಬಿದ್ದ ಮೇಲೆ ಅದನ್ನು ರದ್ದುಪಡಿಸುವುದು ಸುಲಭವಲ್ಲ. ಅದೊಂದು ಜಟಿಲ ವಿದ್ಯಮಾನ. ಆರೋಪ ಮಾಡುವುದು ಸುಲಭ. ಆದರೆ, ಈ ಬಗ್ಗೆ ಸುಪ್ರೀಂ ಕೋರ್ಟ್ ಏನು ಹೇಳಿದೆ ಎನ್ನುವುದು ಟೀಕಾಕಾರರಿಗೆ ಗೊತ್ತಿಲ್ಲ.
ರೈತರ ಹೋರಾಟ ದಿಢೀರ್ ಬೇರೆ ಸ್ತರಕ್ಕೆ ಹೋಯಿತು. ರೈತರ ಪರ ಸಾಹಿತಿಗಳು, ಕಲಾವಿದರು, ನಟರು, ಉತ್ತರ ಭಾರತದವರೆಲ್ಲ ಕಾಣಿಸಿಕೊಂಡರು. ಇದನ್ನು ಹೇಗೆ ನೋಡುತ್ತೀರಿ?
ಪ್ರಜಾಪ್ರಭುತ್ವ ಅಂದಮೇಲೆ ಎಲ್ಲರಿಗೂ ಹೋರಾಡುವ, ಆಗ್ರಹಿಸುವ, ಪತ್ರ ಬರೆಯುವ ಹಕ್ಕುಗಳಿವೆ. ನಾನೂ ಹೋರಾಟಗಾರನೇ. ಆದರೆ, ದೇವನಹಳ್ಳಿ ಹೋರಾಟದಲ್ಲಿ ಒಂದು ಅಸಂಗತ ಅಂಶವಿತ್ತು. ಅದೇನೆಂದರೆ, ರೈತರ ಕಳವಳಕ್ಕೆ ನಾವು ಸ್ಪಂದಿಸಿ, ಉನ್ನತ ಮಟ್ಟದ ಸಭೆಗಳನ್ನು ಮಾಡಿ, 495 ಎಕರೆಯನ್ನು ಭೂಸ್ವಾಧೀನದಿಂದ ಬಿಟ್ಟ ಮೇಲೆ, ನೀವು ಹೇಳಿದಂತೆ ಆಯಿತು. ಇದರ ಹಿಂದೆ ಸ್ಥಾಪಿತ ಹಿತಾಸಕ್ತಿಗಳಿದ್ದವು. ಆ ಬಗ್ಗೆ ಸಮಯ ಬಂದಾಗ ಮಾತನಾಡುತ್ತೇನೆ. ಕೈಗಾರಿಕಾ ಉದ್ದೇಶಕ್ಕೆ ಭೂಸ್ವಾಧೀನ ನಡೆಯಲೇಬೇಕು. ಹಿಂದೆ ನಮ್ಮಲ್ಲಿ ಐಐಎಸ್‌ಸಿ, ಎಚ್‌ಎಎಲ್, ಬಿಇಎಲ್, ಬಿಎಚ್‌ಇಎಲ್, ಇಸ್ರೊ, ಎಚ್‌ಎಂಟಿ ಎಲ್ಲವೂ ಬಂದಿರುವುದು ಹೀಗೆಯೇ. ಭೂಮಿಯ ಬಳಕೆಯ ಉದ್ದೇಶಗಳ ರೂಪಾಂತರ ಎಲ್ಲ ಕಡೆಗಳಲ್ಲೂ ಆಗುತ್ತಲೇ ಬಂದಿದೆ. ಇಂತಹ ಪ್ರಕ್ರಿಯೆ ಆಂಧ್ರ ಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಗುಜರಾತ್, ತೆಲಂಗಾಣ ಹೀಗೆ ಎಲ್ಲ ಕಡೆಗಳಲ್ಲೂ ನಡೆಯುತ್ತಿದೆ. ಅಮೆರಿಕ-ಯೂರೋಪ್‌ನಲ್ಲೂ ಇದೇ ನಡೆಯುತ್ತಿರುವುದು. ದೇವನಹಳ್ಳಿಯಲ್ಲೇನೋ ಹೋರಾಟ ನಡೆಯಿತು. ತಮಿಳುನಾಡು, ಆಂಧ್ರದಲ್ಲೇಕೆ ಇಂಥ ಹೋರಾಟ ಎಲ್ಲೂ ಕಾಣುತ್ತಿಲ್ಲ? ಇಂತಹ ದ್ವಂದ್ವಗಳ ಬಗ್ಗೆ ಚರ್ಚೆ ಆಗಬೇಕು.
ಅಲ್ಲಿ ರಾಜಕಾರಣಿಗಳು, ಬಿಲ್ಡರ್‌ಗಳ ಜಮೀನು ಕೂಡ ಇದೆ ಎಂದು ನೀವು ಹೇಳುತ್ತಿದ್ದೀರಿ; ಯಾರದ್ದು?
ನಿಜವಾದ ರೈತರೆಷ್ಟಿದ್ದಾರೆ, ಬಿಲ್ಡರ್‌ಗಳು ಎಷ್ಟಿದ್ದಾರೆ ಎಲ್ಲವೂ ನನಗೆ ಗೊತ್ತಿದೆ. ಸಮಯ ಬಂದಾಗ ಎಲ್ಲವನ್ನೂ ಹೇಳುತ್ತೇನೆ.
ಸರ್ಕಾರದಿಂದ ಜಮೀನು ಬಿಡಿಸಿಕೊಂಡು, ರಿಯಲ್ ಎಸ್ಟೇಟ್ ಕೆಲಸ ಆರಂಭಿಸಿದರೆ ಏನು ಮಾಡುತ್ತೀರಿ?
ಒಂದಂತೂ ಸ್ಪಷ್ಟವಾಗಿ ಹೇಳುತ್ತೇನೆ. ಅಲ್ಲಿ ಯಾವುದೇ ರಿಯಲ್ ಎಸ್ಟೇಟ್ ವ್ಯವಹಾರಗಳಿಗೆ ಅವಕಾಶವೇ ಇರುವುದಿಲ್ಲ. ಅಂತಹ ಯೋಚನೆ ಇದ್ದವರು ನಿರಾಶರಾಗುವುದು ಖಚಿತ. ಅಂಥವರ ಉದ್ದೇಶ ಫಲಿಸದಂತೆ ನೋಡಿಕೊಳ್ಳುತ್ತೇವೆ.
ದೇವನಹಳ್ಳಿಯಲ್ಲಿ ಭೂಸ್ವಾಧೀನವನ್ನು ಸಂಪೂರ್ಣ ಕೈಬಿಡುತ್ತೀರಾ?
ಹೌದು. ಆದರೆ, ನಾವೊಂದು ಮುಕ್ತ ಅವಕಾಶವನ್ನೂ ಕೊಟ್ಟಿದ್ದೇವೆ. ಅಂದರೆ, ರೈತರು ಸರ್ಕಾರಕ್ಕೆ ಜಮೀನು ಬಿಟ್ಟು ಕೊಡಲು ಸ್ವಯಂ ಮುಂದಾದರೆ ಅಂಥವರ ಜಮೀನು ತೆಗೆದುಕೊಳ್ಳುತ್ತೇವೆ. ಅದರಲ್ಲೇನೂ ತಪ್ಪಿಲ್ಲ. ಅದಕ್ಕೆ 2013ರ ಕಾಯ್ದೆ ಪ್ರಕಾರ ನ್ಯಾಯಬದ್ಧ ಪರಿಹಾರ ಕೊಡುತ್ತೇವೆ. ರೈತರು ಈಗ ಹೆಚ್ಚಿನ ಪರಿಹಾರ ಕೇಳುತ್ತಿದ್ದಾರೆ. ಅದರ ಸಾಧಕಬಾಧಕಗಳನ್ನೂ ಪರಿಶೀಲಿಸುತ್ತೇವೆ. ಕೃಷಿ ಮತ್ತು ಕೈಗಾರಿಕೆ ಒಂದು ರಥದ ಚಕ್ರಗಳ ತರಹ. ಒಂದಿಲ್ಲದೆ ಇನ್ನೊಂದಿಲ್ಲ. ಈಗ ಕೃಷಿ ಉತ್ಪನ್ನಗಳನ್ನು ಆಧರಿಸಿದ ಉದ್ಯಮಗಳೂ ಬರುತ್ತಿವೆ. ಇದರಿಂದ ರೈತರಿಗೆ ಲಾಭವಿದೆ. ಹಾಗೆಯೇ, ಏರೋಸ್ಪೇಸ್ ರೀತಿಯದ್ದೂ ಬರಬೇಕು. ಕರ್ನಾಟಕದಲ್ಲಿ ಕೈಗಾರಿಕಾ ಸಂಸ್ಕೃತಿ ಬೆಳೆದು ಬಂದಿರುವುದೇ ಹೀಗೆ. ಇದರಿಂದಾಗಿಯೇ ನಾವಿಂದು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದೇವೆ. ತೀರಾ ಇದಮಿತ್ಥಂ ಎಂದು ಹೋದರೆ, ಕೇರಳ ಮತ್ತು ಪಶ್ಚಿಮ ಬಂಗಾಳಕ್ಕೆ ಬಂದ ದುರ್ಗತಿಯೇ ನಮಗೂ ಬಂದುಬಿಡುತ್ತದೆ.
ಸರ್ಕಾರದ ಈಗಿನ ತೀರ್ಮಾನದಿಂದ ಉದ್ಯಮಿಗಳಿಗೆ ನಕಾರಾತ್ಮಕ ಸಂದೇಶ ಹೋದಂತಾಗುವುದಿಲ್ಲವೇ? ಅವರು ಆಂಧ್ರ, ತಮಿಳುನಾಡು ಮತ್ತಿತರ ರಾಜ್ಯಗಳಿಗೆ ಹೋಗಬಹುದೇ?
ಹೌದು, ಸಹಜವಾಗಿಯೇ ಹೀಗೆಲ್ಲ ಸ್ವಲ್ಪಮಟ್ಟಿಗೆ ಆಗುತ್ತದೆ. ನೀವೇ ನೋಡಿ, ನಮ್ಮ ಸರ್ಕಾರದ ತೀರ್ಮಾನ ಹೊರಬಿದ್ದ ಕೂಡಲೇ ಆಂಧ್ರದ ಸಚಿವ ನಾರಾ ಲೋಕೇಶ್, ಇಲ್ಲಿನ ಉದ್ಯಮಿಗಳನ್ನು ತಮ್ಮಲ್ಲಿಗೆ ಆಹ್ವಾನಿಸಿ ಟ್ವೀಟ್ ಮಾಡಿದರು. ಆದರೆ, ನಾವು ಇಲ್ಲಿಂದ ಒಂದು ಸಣ್ಣ ಉದ್ಯಮವೂ ಹೊರಹೋಗಲು ಬಿಡುವುದಿಲ್ಲ. ಅಲ್ಲಿ ಭೂಮಿ ಕೊಡಬಹುದು. ಆದರೆ, ನಮ್ಮಲ್ಲಿರುವ ಕಾರ್ಯ ಪರಿಸರ ಭಾರತದಲ್ಲೆಲ್ಲೂ ಇಲ್ಲ. ಈ ದೃಷ್ಟಿಯಲ್ಲಿ ನಾವು ಜಾಗತಿಕವಾಗಿ ತೃತೀಯ ಸ್ಥಾನದಲ್ಲಿದ್ದೇವೆ. ದೇಶದಲ್ಲಿ ನಡೆಯುವ ರಕ್ಷಣಾ ಮತ್ತು ವೈಮಾಂತರಿಕ್ಷ ವಹಿವಾಟಿನಲ್ಲಿ ರಾಜ್ಯದ ಪಾಲು ಶೇಕಡ 65ರಷ್ಟು. ಉದ್ಯಮಿಗಳು ಕೇಳಿದ ಜಾಗದಲ್ಲಿ, ಅವರಿಗೆ ಅಗತ್ಯವಿರುವಷ್ಟು ಭೂಮಿ ಕೊಡುತ್ತೇವೆ. ಜೊತೆಗೆ ನೀರು, ವಿದ್ಯುತ್, ಸಂಪರ್ಕ ರಸ್ತೆ ಹೀಗೆ ಎಲ್ಲವನ್ನೂ ಒದಗಿಸುತ್ತೇವೆ. ಏಕೆಂದರೆ, ನೆರೆ ರಾಜ್ಯಗಳಿಂದ ನಮಗಿರುವ ಸ್ಪರ್ಧೆಯ ತೀವ್ರತೆ ಏನೆಂಬುದು ನನಗೆ ಗೊತ್ತಿದೆ.
ಫಲವತ್ತಾದ ಕೃಷಿ ಭೂಮಿ ಉಳಿಸಿಕೊಂಡು, ಕೃಷಿ ಇಲ್ಲದ ಕಡೆಗಳಲ್ಲಿ ಉದ್ಯಮಗಳಿಗೆ ಭೂಮಿ ಕೊಡಬಹುದಲ್ಲವೇ?
ನಿಜ, ಒಂದು ಆದರ್ಶವಾಗಿ ಇದು ಚೆನ್ನಾಗಿದೆ. ಒಂದು ಕೈಗಾರಿಕಾ ಯೋಜನೆ ಅಂದರೆ, ಅದು ಒಂದು ದಿನದಲ್ಲಿ ಬಂದುಬಿಡುವುದಿಲ್ಲ. ಇದೊಂದು ದೀರ್ಘ ಪ್ರಕ್ರಿಯೆ. ಇದಕ್ಕೆ ಏನಿಲ್ಲವೆಂದರೂ ಮೂರ್ನಾಲ್ಕು ವರ್ಷಗಳು ಬೇಕಾಗುತ್ತದೆ. ಹಾಗೆಯೇ, ಎಲ್ಲ ಕಡೆಗಳಲ್ಲೂ ಎಲ್ಲ ರೀತಿಯ ಉದ್ಯಮಗಳೂ ಹೋಗಲು ಸಾಧ್ಯವಿಲ್ಲ. ಇದರಲ್ಲಿ ಕಾರ್ಯಪರಿಸರ, ಸಂಶೋಧನೆ ಮತ್ತು ಅಭಿವೃದ್ಧಿ, ಉತ್ಪಾದನಾ ವಾತಾವರಣ, ರಫ್ತು ವಹಿವಾಟಿನ ಸೌಲಭ್ಯ, ಹೆದ್ದಾರಿ, ವಿಮಾನ ನಿಲ್ದಾಣ, ಕೌಶಲ ಇರುವ ಮಾನವ ಸಂಪನ್ಮೂಲ, ಜಾಗತಿಕ ವಿದ್ಯಮಾನ, ಹೂಡಿಕೆದಾರರ ಆದ್ಯತೆ, ಉದ್ಯೋಗಸೃಷ್ಟಿ ಎಲ್ಲವೂ ಮುಖ್ಯವಾಗುತ್ತವೆ. ಉದಾಹರಣೆಗೆ, ಇಡೀ ಭಾರತದಲ್ಲೇ ರಕ್ಷಣೆ ಮತ್ತು ವೈಮಾಂತರಿಕ್ಷ ಕ್ಷೇತ್ರ ಚೆನ್ನಾಗಿರುವುದು ನಮ್ಮ ಬೆಂಗಳೂರಿನಲ್ಲೆ. ಅಂದಮೇಲೆ, ಇದಕ್ಕೆ ಸಂಬಂಧಿಸಿದ ಹೂಡಿಕೆ, ಉದ್ಯಮ ಎರಡೂ ಇಲ್ಲೇ ಆಗಬೇಕು. ಆಗ ಅದು ರಾಜ್ಯದ ಬೊಕ್ಕಸಕ್ಕೂ ಲಾಭದಾಯಕ. ನೀವು ರಕ್ಷಣಾ ಕೈಗಾರಿಕೆಯನ್ನು ಇಲ್ಲಿಂದ 500 ಮೈಲಿಯಾಚೆ ಮಾಡಲು ಸಾಧ್ಯವಿಲ್ಲ. ಕೃಷಿ ಉತ್ಪನ್ನ ಆಧರಿತ ಉದ್ಯಮಗಳೂ ಅಷ್ಟೇ, ಅವುಗಳಿಗೆ ಬೇಕಾದ ಕಚ್ಚಾಸಾಮಗ್ರಿ ಇತ್ಯಾದಿ ಎಲ್ಲಿದೆಯೋ ಅಲ್ಲಿಯೇ ನೆಲೆಯೂರಬೇಕು. ಇದೊಂದು ತಾರ್ಕಿಕ ಮತ್ತು ವಸ್ತುನಿಷ್ಠ ಚಿಂತನೆ. ರಕ್ಷಣಾ ಉದ್ಯಮವನ್ನು ನೀವು ಶಿರಸಿಯಲ್ಲೋ ಶಿರಹಟ್ಟಿಯಲ್ಲೋ ಹಾಸನದಲ್ಲೋ ಮಾಡಲು ಸಾಧ್ಯವಿಲ್ಲ.
ಈ ಭೂಸ್ವಾಧೀನ ಕೈಬಿಟ್ಟಿದ್ದರಿಂದ ಎಷ್ಟು ಪ್ರಮಾಣದ ಹೂಡಿಕೆ ತಕ್ಷಣಕ್ಕೆ ಕೈತಪ್ಪಿದಂತಾಯಿತು?
ನೋಡಿ, ಇಲ್ಲಿ ರೈತರೇ ಸ್ವಯಂಪ್ರೇರಿತರಾಗಿ ಜಮೀನು ಕೊಟ್ಟರೆ ಹಾನಿಯ ಪ್ರಮಾಣ ಕಡಿಮೆ ಆಗಬಹುದು. ಆದರೆ, ಒಟ್ಟಾರೆ ಈ ಜಾಗವನ್ನು ಕೈಗಾರಿಕೋದ್ಯಮಕ್ಕೆ ಕೊಟ್ಟಿದ್ದರೆ ಅಂದಾಜು ₹50 ಸಾವಿರ ಕೋಟಿಯಿಂದ ₹60 ಸಾವಿರ ಕೋಟಿ ಹೂಡಿಕೆ ಬರುತ್ತಿತ್ತು; ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ ಆಗುತ್ತಿತ್ತು.
ನಿಮ್ಮ ಮುಂದಿನ ಹೆಜ್ಜೆ ಏನು?
ನಾವು ಸೀಮಿತ ಆಲೋಚನೆಗಳಿಂದ ಹೊರಬರಬೇಕು. ಇಲ್ಲಿ ಎಲ್ಲದರ ಬಗ್ಗೆಯೂ ಪ್ರಾಮಾಣಿಕವಾದ ಸಂವಾದ ನಡೆಯಬೇಕು. ಕೈಗಾರಿಕೆಗಳು ಬೇಡವೆನ್ನುವ ಸ್ಥಿತಿಯಲ್ಲಿ ನಾವಿದ್ದೇವೇಯೇ? ಖಂಡಿತವಾಗಿಯೂ ಇಲ್ಲ. ಅಂದಮಾತ್ರಕ್ಕೆ, ನನಗೆ ರೈತವಿರೋಧಿ ಎಂದು ಹಣೆಪಟ್ಟಿ ಹಾಕಬಾರದು. ಕೃಷಿ ಮತ್ತು ಕೈಗಾರಿಕೆ ಒಟ್ಟೊಟ್ಟಿಗೆ ಸಾಗಬೇಕು ಎನ್ನುವುದು ನನ್ನ ಕಳಕಳಿ. ಅಭಿವೃದ್ಧಿ ಹಳಿ ತಪ್ಪಬಾರದು, ಅದು ಸ್ಥಗಿತಗೊಳ್ಳಬಾರದು. ಅದು ಪ್ರತಿಗಾಮಿ ನೀತಿಗೆ ದಾರಿ ಮಾಡಿಕೊಡಬಾರದು. ನಮಗೆ ಬರುತ್ತಿರುವ ಎಫ್‌ಡಿಐ, ನಮ್ಮಲ್ಲಿ ನಡೆಯುತ್ತಿರುವ ಆವಿಷ್ಕಾರಗಳು, ಪ್ರಸ್ತಾವನೆಯ ಹಂತದಲ್ಲಿರುವ ಯೋಜನೆಗಳು ಎಲ್ಲವೂ ಮುಂದುವರಿಯಬೇಕು. ಕರ್ನಾಟಕ ಹಿಂದಕ್ಕೆ ಹೋಗಬಾರದು. ಅದು ಎತ್ತರಕ್ಕೆ ಬೆಳೆಯಬೇಕು. ಇದನ್ನು ಸಾಧಿಸಬೇಕೆನ್ನುವುದು ಮುಖ್ಯಮಂತ್ರಿಯವರ, ನನ್ನ ಮತ್ತು ಒಟ್ಟಾರೆ ಸರ್ಕಾರದ ಸಂಕಲ್ಪ. ಅದನ್ನು ಮಾಡುವ ವಿಶ್ವಾಸ ನಮಗಿದೆ.
ಫಲವತ್ತಾದ ಕೃಷಿ ಭೂಮಿ ಉಳಿಸಿಕೊಂಡು ಕೃಷಿ ಇಲ್ಲದ ಕಡೆಗಳಲ್ಲಿ ಉದ್ಯಮಗಳಿಗೆ ಭೂಮಿ ಕೊಡಬಹುದಲ್ಲವೇ?
ನಿಜ ಒಂದು ಆದರ್ಶವಾಗಿ ಇದು ಚೆನ್ನಾಗಿದೆ. ಒಂದು ಕೈಗಾರಿಕಾ ಯೋಜನೆ ಅಂದರೆ ಅದು ಒಂದು ದಿನದಲ್ಲಿ ಬಂದುಬಿಡುವುದಿಲ್ಲ. ಇದೊಂದು ದೀರ್ಘ ಪ್ರಕ್ರಿಯೆ. ಇದಕ್ಕೆ ಏನಿಲ್ಲವೆಂದರೂ ಮೂರ್ನಾಲ್ಕು ವರ್ಷಗಳು ಬೇಕಾಗುತ್ತದೆ. ಹಾಗೆಯೇ ಎಲ್ಲ ಕಡೆಗಳಲ್ಲೂ ಎಲ್ಲ ರೀತಿಯ ಉದ್ಯಮಗಳೂ ಹೋಗಲು ಸಾಧ್ಯವಿಲ್ಲ. ಇದರಲ್ಲಿ ಕಾರ್ಯಪರಿಸರ ಸಂಶೋಧನೆ ಮತ್ತು ಅಭಿವೃದ್ಧಿ ಉತ್ಪಾದನಾ ವಾತಾವರಣ ರಫ್ತು ವಹಿವಾಟಿನ ಸೌಲಭ್ಯ ಹೆದ್ದಾರಿ ವಿಮಾನ ನಿಲ್ದಾಣ ಕೌಶಲ ಇರುವ ಮಾನವ ಸಂಪನ್ಮೂಲ ಜಾಗತಿಕ ವಿದ್ಯಮಾನ ಹೂಡಿಕೆದಾರರ ಆದ್ಯತೆ ಉದ್ಯೋಗಸೃಷ್ಟಿ ಎಲ್ಲವೂ ಮುಖ್ಯವಾಗುತ್ತವೆ. ಉದಾಹರಣೆಗೆ ಇಡೀ ಭಾರತದಲ್ಲೇ ರಕ್ಷಣೆ ಮತ್ತು ವೈಮಾಂತರಿಕ್ಷ ಕ್ಷೇತ್ರ ಚೆನ್ನಾಗಿರುವುದು ನಮ್ಮ ಬೆಂಗಳೂರಿನಲ್ಲೆ. ಅಂದಮೇಲೆ ಇದಕ್ಕೆ ಸಂಬಂಧಿಸಿದ ಹೂಡಿಕೆ ಉದ್ಯಮ ಎರಡೂ ಇಲ್ಲೇ ಆಗಬೇಕು. ಆಗ ಅದು ರಾಜ್ಯದ ಬೊಕ್ಕಸಕ್ಕೂ ಲಾಭದಾಯಕ. ನೀವು ರಕ್ಷಣಾ ಕೈಗಾರಿಕೆಯನ್ನು ಇಲ್ಲಿಂದ 500 ಮೈಲಿಯಾಚೆ ಮಾಡಲು ಸಾಧ್ಯವಿಲ್ಲ. ಕೃಷಿ ಉತ್ಪನ್ನ ಆಧರಿತ ಉದ್ಯಮಗಳೂ ಅಷ್ಟೇ ಅವುಗಳಿಗೆ ಬೇಕಾದ ಕಚ್ಚಾಸಾಮಗ್ರಿ ಇತ್ಯಾದಿ ಎಲ್ಲಿದೆಯೋ ಅಲ್ಲಿಯೇ ನೆಲೆಯೂರಬೇಕು. ಇದೊಂದು ತಾರ್ಕಿಕ ಮತ್ತು ವಸ್ತುನಿಷ್ಠ ಚಿಂತನೆ. ರಕ್ಷಣಾ ಉದ್ಯಮವನ್ನು ನೀವು ಶಿರಸಿಯಲ್ಲೋ ಶಿರಹಟ್ಟಿಯಲ್ಲೋ ಹಾಸನದಲ್ಲೋ ಮಾಡಲು ಸಾಧ್ಯವಿಲ್ಲ.
ಸರ್ಕಾರದ ಈಗಿನ ತೀರ್ಮಾನದಿಂದ ಉದ್ಯಮಿಗಳಿಗೆ ನಕಾರಾತ್ಮಕ ಸಂದೇಶ ಹೋದಂತಾಗುವುದಿಲ್ಲವೇ? ಅವರು ಆಂಧ್ರ ತಮಿಳುನಾಡು ಮತ್ತಿತರ ರಾಜ್ಯಗಳಿಗೆ ಹೋಗಬಹುದೇ?
ಹೌದು ಸಹಜವಾಗಿಯೇ ಹೀಗೆಲ್ಲ ಸ್ವಲ್ಪಮಟ್ಟಿಗೆ ಆಗುತ್ತದೆ. ನೀವೇ ನೋಡಿ ನಮ್ಮ ಸರ್ಕಾರದ ತೀರ್ಮಾನ ಹೊರಬಿದ್ದ ಕೂಡಲೇ ಆಂಧ್ರದ ಸಚಿವ ನಾರಾ ಲೋಕೇಶ್ ಇಲ್ಲಿನ ಉದ್ಯಮಿಗಳನ್ನು ತಮ್ಮಲ್ಲಿಗೆ ಆಹ್ವಾನಿಸಿ ಟ್ವೀಟ್ ಮಾಡಿದರು. ಆದರೆ ನಾವು ಇಲ್ಲಿಂದ ಒಂದು ಸಣ್ಣ ಉದ್ಯಮವೂ ಹೊರಹೋಗಲು ಬಿಡುವುದಿಲ್ಲ. ಅಲ್ಲಿ ಭೂಮಿ ಕೊಡಬಹುದು. ಆದರೆ ನಮ್ಮಲ್ಲಿರುವ ಕಾರ್ಯ ಪರಿಸರ ಭಾರತದಲ್ಲೆಲ್ಲೂ ಇಲ್ಲ. ಈ ದೃಷ್ಟಿಯಲ್ಲಿ ನಾವು ಜಾಗತಿಕವಾಗಿ ತೃತೀಯ ಸ್ಥಾನದಲ್ಲಿದ್ದೇವೆ. ದೇಶದಲ್ಲಿ ನಡೆಯುವ ರಕ್ಷಣಾ ಮತ್ತು ವೈಮಾಂತರಿಕ್ಷ ವಹಿವಾಟಿನಲ್ಲಿ ರಾಜ್ಯದ ಪಾಲು ಶೇಕಡ 65ರಷ್ಟು. ಉದ್ಯಮಿಗಳು ಕೇಳಿದ ಜಾಗದಲ್ಲಿ ಅವರಿಗೆ ಅಗತ್ಯವಿರುವಷ್ಟು ಭೂಮಿ ಕೊಡುತ್ತೇವೆ. ಜೊತೆಗೆ ನೀರು ವಿದ್ಯುತ್ ಸಂಪರ್ಕ ರಸ್ತೆ ಹೀಗೆ ಎಲ್ಲವನ್ನೂ ಒದಗಿಸುತ್ತೇವೆ. ಏಕೆಂದರೆ ನೆರೆ ರಾಜ್ಯಗಳಿಂದ ನಮಗಿರುವ ಸ್ಪರ್ಧೆಯ ತೀವ್ರತೆ ಏನೆಂಬುದು ನನಗೆ ಗೊತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.