ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಚಳವಳಿಯೇ ನನ್ನ ಮನೆ: ಜಾನಪದ ಗಾಯಕ ಪಿಚ್ಚಳ್ಳಿ ಶ್ರೀನಿವಾಸ್‌ ಸಂದರ್ಶನ

Published : 22 ಡಿಸೆಂಬರ್ 2024, 0:27 IST
Last Updated : 22 ಡಿಸೆಂಬರ್ 2024, 0:27 IST
ಫಾಲೋ ಮಾಡಿ
Comments
ಕಾಲಿಗೆ ಗೆಜ್ಜೆಕಟ್ಟಿ ಹೋರಾಟದ ಕಿಚ್ಚು ಹೊತ್ತಿಸಿದ ಈ ಗಾನ ಗಾರುಡಿಗ ದಲಿತ ಸಂಘರ್ಷ ಸಮಿತಿಯ ನಲವತ್ತು ವರ್ಷಗಳ ಒಡನಾಡಿ. ದಸಂಸಗೆ ಕೊರಳದನಿಯಾಗಿ ನಾಡಿನುದ್ದಕ್ಕೂ ಹೋರಾಟದ ಗೀತೆಗಳ ಮೂಲಕ ಮನೆಮಾತಾದವರು ಪಿಚ್ಚಳ್ಳಿ ಶ್ರೀನಿವಾಸ. ಈ ಸಲದ ಕರ್ನಾಟಕದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕತ ಇವರನ್ನು ಡಿ.22ರಂದು ಕೋಲಾರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಹೋರಾಟದ ಹಾಡುಗಾರರ ಬಳಗದಿಂದ ಅಭಿನಂದಿಸಲಾಗುತ್ತಿದೆ. ಹಾಡು, ಸಂವಾದ ಕೂಡ ನಡೆಯಲಿದೆ. ಈ ನೆಪದಲ್ಲಿ ಅವರ ಸಾಂಸ್ಕೃತಿಕ, ಹೋರಾಟ ವ್ಯಕ್ತಿತ್ವ ಕುರಿತ ಮಾತುಕತೆ ಇಲ್ಲಿದೆ.
ಪ್ರ

ದಲಿತ ಸಂಘರ್ಷ ಸಮಿತಿಯು ಐವತ್ತು ವರ್ಷಗಳನ್ನು ಪೂರೈಸಿದೆ. ಹಾಡು ಜನರ ಸಂಕಷ್ಟಕ್ಕೆ ಉಸಿರಾದ ಮೊದಲ ಹೆಜ್ಜೆಯನ್ನು ನೆನಪಿಸಿಕೊಳ್ಳುವುದಾದರೆ...

ನನ್ನೂರು ಕೆಜಿಎಫ್‌ ತಾಲ್ಲೂಕಿನ ಪಿಚ್ಚಳ್ಳಿಯಲ್ಲಿ ರಾಮಮಂದಿರ ಇತ್ತು. ಅಲ್ಲೇ ನನ್ನ ತಂದೆ ನಡಿಪನ್ನ ಮತ್ತು ಸೋದರ ಮಾವ ಮುನಿಗುರುಪ್ಪ ಭಜನೆ ಪದ ಹಾಡೋರು. ಅಲ್ಲಿಂದಲೇ ಹಾಡಿನ ಬೇರು ನನ್ನೊಳಗೆ ಚಿಗುರಿತು. ಮತ್ತೊಂದು ಮಾತು; ನನ್ನ ತಾಯಿ ಸಿದ್ದಮ್ಮ ರಾಗಿ ಹೊಲಗಳಲ್ಲಿ ಕಳೆ ಕೀಳಲು, ಕೊಯ್ಲು ಮಾಡಲು ಕೂಲಿ ಕೆಲಸಕ್ಕೆ ಹೋಗೋರು. ಅಲ್ಲಿ ಮಧ್ಯಾಹ್ನ ರಾಗಿಮುದ್ದೆ ಊಟ ಕೋಡೋರು. ಅದನ್ನು ತಿನ್ನಲು ಶಾಲೆಗೆ ಚಕ್ಕರ್‌ ಹೊಡೆದು ಹೋಗುತ್ತಿದ್ದೆ. ಊಟ ಆದ ಮೇಲೆ ವಿರಾಮದ ಸಮಯದಲ್ಲಿ ಕೂಲಿ ಜನರೆಲ್ಲ ಎಲೆಯಡಿಕೆ ಜಿಗಿಯುತ್ತಾ ನನ್ನ ತಾಯಿ ಸಿದ್ದಮ್ಮ ಹಾಡುತ್ತಿದ್ದ ಕೈವಾರ ತಾತಯ್ಯನ ತತ್ವಪದಗಳನ್ನು ತದೇಕಚಿತ್ತದಿಂದ ಕೇಳೋರು. ಅಲ್ಲಿಂದಲೇ ಹಾಡೋದಕ್ಕೆ ಪ್ರೇರಣೆ ಸಿಕ್ತು.

ಪ್ರ

ನೀವು ದಲಿತ ಸಂಘರ್ಷ ಸಮಿತಿ ತೆಕ್ಕೆಗೆ ಬಂದದ್ದು ಹೇಗೆ?

1977–78ರ ಸಮಯ. ಎಸ್ಸೆಸ್ಸೆಲ್ಸಿಯಲ್ಲಿ ಫೇಲಾದೆ. ದನ–ಕುರಿ ಕಾಯೋಕೆ ಹೋಗುತ್ತಿದ್ದೆ. ನಿರ್ಜನ ಹೊಲಗಳ ಬಯಲು ಪ್ರದೇಶದಲ್ಲಿ ದನ–ಕರು ಮೇಯಿಸುವಾಗ ಒಬ್ಬಂಟಿಯಾಗಿರುತ್ತಿದ್ದೆ. ಆಗ ದಿಗಿಲಿನಿಂದ ಸ್ವರ ಎತ್ತಿ ಹಾಡುತ್ತಿದ್ದೆ. ಪಕ್ಕದ ಹೊಲದ ಎರನಾಗನಹಳ್ಳಿ ರಾಮಚಂದ್ರ ಅನ್ನೋರು ನಾನು ಹಾಡೋದನ್ನು ಗಮನಿಸುತ್ತಿದ್ದರು. ಅವರು ಬಿಇಎಂಎಲ್‌ನಲ್ಲಿ ಕೆಲಸ ಮಾಡುತ್ತಾ ಕಾರ್ಮಿಕ ಚಳವಳಿಯಲ್ಲಿ ಇದ್ದರು. ಅವರು ಕೋಟಿಗಾನಹಳ್ಳಿ ರಾಮಯ್ಯ ಹತ್ರ ಕರ‍್ಕೊಂಡು ಹೋದ್ರು. ರಾಮಯ್ಯ ಅವರು ಕೆಜಿಎಫ್‌ ಕೆನರಾ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದರು. ಸಿದ್ದಲಿಂಗಯ್ಯ ಅವರ ‘ಸಾವಿರಾರು ನದಿಗಳು’ ಪುಸ್ತಕ ಕೊಟ್ಟ ರಾಮಯ್ಯ, ಅದರಲ್ಲಿದ್ದ ‘ನಿನ್ನೆ ದಿನ ನನ್ನ ಜನ ಬೆಟ್ಟದಂತೆ ಬಂದರು, ಕಪ್ಪುಮುಖದ ಬೆಳ್ಳಿಗಡ್ಡ ಉರಿಯುತ್ತಿರುವ ಕಣ್ಣುಗಳು’ ಪದ್ಯ ಹಾಡಲು ಹೇಳಿದರು. ಅಲ್ಲಿಂದ ದಲಿತ ಸಂಘರ್ಷ ಸಮಿತಿ ತೆಕ್ಕೆಗೆ ಬಂದೆ. ನನ್ನ ಮೊದಲ ಹಾಡು ‘ಯಾತಕೋ ಈ ಬಡವರ ಬಾಳು ದುಡಿದರೂ ಸಿಗದಲ್ಲೋ ಕೂಳು. ಹೊಲೆಯರಣ್ಣ, ಮಾದಿಗರಣ್ಣ, ವಡ್ಡರಣ್ಣ, ಕೊರಗರಣ್ಣ, ಬೇಡರಣ್ಣ, ಅಗಸರಣ್ಣ ಕುಲ ಕುಲವು ಎಂದು ಕುದಿಯುತ್ತಿರುವ ಕೂಲಿಯಣ್ಣ ದನಿಯೆತ್ತಿ ಹಾಡುತ್ತಿರುವೆ ಕಿವಿಗೊಟ್ಟು ಕೇಳಿರಣ್ಣ’ ಈ ಹಾಡಿನ ಮುಖೇನ ದಲಿತ ಚಳವಳಿ ಕೂಸಾಗಿ ಬೆಳೆದೆ.

ಪ್ರ

ಹೋರಾಟದ ಹಾಡುಗಳನ್ನು ಎದೆತುಂಬಿ ಹಾಡುವಾಗ...

ಹಾಡು ಒಂದು ಮಾಧ್ಯಮ. ದಲಿತ ಸಂಘರ್ಷ ಸಮಿತಿಯಲ್ಲಿ ದಲಿತ ಕಲಾ ಮಂಡಳಿಯನ್ನು ಕಟ್ಟಿ ನೇತೃತ್ವ ವಹಿಸಿಕೊಂಡೆ. ದಸಂಸ ಹೋರಾಟದ ಹಾಡಾಗಿ ರೂಪಗೊಂಡಿದ್ದು ಹುಣಸೀಕೋಟೆ ಶೇಷಗಿರಿಯಪ್ಪನ ಕೊಲೆ ಪ್ರಕರಣದ ಅನುಸೂಯಮ್ಮ ಕುರಿತ ಹಾಡು. ಆ ಹಾಡು ಮತ್ತು ಚಳವಳಿ ದಸಂಸಗೆ ಇವತ್ತಿಗೂ ಮಾದರಿ.

ಪ್ರ

ಐವತ್ತು ವರ್ಷಗಳ ದಸಂಸ ಹೋರಾಟದ ಪಯಣದಲ್ಲಿ ಅಂಬೇಡ್ಕರ್‌ ಆಶಯ ಈಡೇರಿದೆಯೇ?

ದಸಂಸ ಚಳವಳಿಗಾರರು ಅಂಬೇಡ್ಕರ್‌ ಅವರ ತತ್ವ–ಸಿದ್ಧಾಂತ ಅನುಸರಿಸುತ್ತಿದ್ದಾರೆ. ಆದರೆ, ಬಹುತೇಕ ನೌಕರ ವರ್ಗ ಸಮುದಾಯವನ್ನು ದೂರ ಇಟ್ಟಿದೆ. ಅಂಬೇಡ್ಕರ್‌ ಆಶಯ ಈಡೇರಿಲ್ಲ. ಆದರೆ, ಇದು ಸಂಘಟನೆಗಳ ಸೋಲು ಅಲ್ಲ. ಕೆಲ ಅಪ್ರಾಮಾಣಿಕ ನಾಯಕರು ವೈಯಕ್ತಿಕ ಲಾಭಕ್ಕಾಗಿ ದಾರಿ ತಪ್ಪಿರಬಹುದು.

ಪ್ರ

ಹಾಡುಗಾರನಾಗಿ ಗದ್ದರ್ ಅವರೊಂದಿಗೆ ನಿಮ್ಮ ಒಡನಾಟ...

ಗದ್ದರ್‌ ನನಗೆ ಸಿಕ್ಕಿದ್ದು ಹಾಡುಗಳೇ ಮುಖಾಂತರವೇ ಹೊರತು; ಸೈದ್ಧಾಂತಿಕ ವಿಚಾರಗಳಿಂದ ಅಲ್ಲ. ಕೋಲಾರದ ದಲಿತ ಕಲಾ ಮಂಡಳಿ ಹಾಡುಗಾರರಿಗೆ ಒಮ್ಮೆ ಗದ್ದರ್‌ ಅವರೇ ಹಾಡುಗಳ ತರಬೇತಿ ಕೊಟ್ಟಿದ್ದರು. ಗದ್ದರ್ ಅವರ ಸೈದ್ಧಾಂತಿಕತೆ ಮತ್ತು ದಸಂಸ ವಿಚಾರಧಾರೆಯೇ ಬೇರೆ. ನಮ್ಮದು ಸಂವಿಧಾನ ನೆಲೆಯ ಹೋರಾಟ.

ಪ್ರ

ದಲಿತರ ಮೇಲಿನ ದೌರ್ಜನ್ಯ ನಿಂತಿಲ್ಲ. ಉಳಿದ ಸಮುದಾಯದವರು ದಲಿತರನ್ನು ನೋಡುವ ಕಣ್ಣೋಟ ಬದಲಾಗಿದೆ ಅನಿಸುತ್ತದೆಯೇ?

ಹೌದು; ದಲಿತರ ಮೇಲಿನ ದೌರ್ಜನ್ಯ ನಿಂತಿಲ್ಲ. ಉಳ್ಳೇರಹಳ್ಳಿ ಗುಜ್ಜುಗೋಲು ಪ್ರಕರಣ, ಕೊಪ್ಪಳದಲ್ಲಿ ಹೆಚ್ಚು ಅಟ್ರಾಸಿಟಿ ಪ್ರಕರಣಗಳು ದಾಖಲಾಗಿರೋದು ನಮ್ಮ ಕಣ್ಣು ಮುಂದಿದೆ. ದಲಿತರು ಆರ್ಥಿಕ, ಸಾಮಾಜಿಕವಾಗಿ ಸಬಲರಾದಷ್ಟು ಅಸಹನೆ ಹೆಚ್ಚುತ್ತಲೇ ಇದೆ. ಕೆಲವರಿಗೆ ಅಧಿಕಾರಕ್ಕಾಗಿ ಮಾತ್ರ ಸಂವಿಧಾನ ಬೇಕಾಗಿದೆ.

ಪ್ರ

ದಲಿತ ಚಳವಳಿ ಕರ್ನಾಟಕದ ಇತರ ಚಳವಳಿಗಳಿಗೆ ಪ್ರೇರಣೆ ಆಗಿದೆಯೇ?

ದಲಿತ ಚಳವಳಿ ರಾಜ್ಯದ ಇತರ ಚಳವಳಿಗಳಿಗೆ ತಾಯಿ ಇದ್ದಂತೆ. ವಿದ್ಯಾರ್ಥಿಗಳು, ಮಹಿಳೆಯರು, ರೈತರು ತಮ್ಮ ಹಕ್ಕುಗಳನ್ನು ಕೇಳಲು ಬೀದಿಗಿಳಿದು ಹೋರಾಟ ನಡೆಸಲು ದಸಂಸ ಪ್ರೇರಣೆ. ಪ್ರೊ.ಬಿ.ಕೃಷ್ಣಪ್ಪ ಅವರ ಕಾಲದಲ್ಲಿ ಚಳವಳಿ ತಾಯಿತನದಿಂದ ಕೂಡಿತ್ತು. ಈಗ ತಬ್ಬಲಿತನ ಕಾಡುತ್ತಿದೆ.

ಪ್ರ

ದಲಿತ ಚಳವಳಿಯಲ್ಲಿ ಈಗ ವಿದ್ಯಾರ್ಥಿಗಳು, ಮಹಿಳೆಯರ ಭಾಗವಹಿಸುವಿಕೆ ನಗಣ್ಯವಾಗಿದೆಯಲ್ಲ?

ವಿದ್ಯಾರ್ಥಿಗಳು ಹಾಗೂ ಮಹಿಳೆಯರ ವಿಚಾರದಲ್ಲಿ ಸಂಘಟನೆ ಸಂಪೂರ್ಣ ವೈಫಲ್ಯ ಕಂಡಿದೆ. ವಿದ್ಯಾರ್ಥಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಸೋತಿದ್ದೇವೆ. ಮಹಿಳೆಯರ ವಿಚಾರದಲ್ಲೂ ಕೂಡ ಎಡವಿದ್ದೇವೆ.

ಪ್ರ

ದಲಿತರ ದೇವಸ್ಥಾನ ಪ್ರವೇಶ ಸ್ವಾಭಿಮಾನದ ಹೋರಾಟವೇ ?

ದೇವಸ್ಥಾನ ಸೇರಿದಂತೆ ಎಲ್ಲ ಸಾರ್ವಜನಿಕ ಸ್ಥಳಗಳಿಗೂ ಮುಕ್ತ ಪ್ರವೇಶ ಇರಬೇಕು. ಅದು ಸ್ವಾಭಿಮಾನ ಹೋರಾಟವೇ. ಆದರೆ, ದೇವಸ್ಥಾನಗಳಿಕ್ಕಿಂತ ನಮಗೆ ಶಾಲೆ ಮುಖ್ಯವಾಗಬೇಕು. ನ‌ಮ್ಮೂರಿನ ಶಾಲೆಗಳನ್ನು ಅತ್ಯುತ್ತಮವಾಗಿ ರೂಪಿಸುವ ಕಡೆ ನಾವೆಲ್ಲ ಗಮನ ಕೊಡಬೇಕಿದೆ.

ಪ್ರ

ಒಳಮೀಸಲಾತಿ ವಿಚಾರದ ಬೇಡಿಕೆಗೆ ನಿಮ್ಮ ಒತ್ತಡ ಏನು?

ರಾಜ್ಯದಲ್ಲಿ ಒಳಮೀಸಲಾತಿ ಜಾರಿಯಾಗಲೇಬೇಕು. ಸರ್ಕಾರ ಮಾಡುತ್ತದೆ ಅನ್ನೋ ಭರವಸೆ ಇದೆ. ಆದರೆ, ಸರ್ಕಾರ ತನ್ನ ಗಡುವು ಮೀರಿದರೆ ಕಲಾವಿದನಾಗಿ ಕಾಲಿಗೆ ಗೆಜ್ಜೆ ಕಟ್ಟುತ್ತೇನೆ.

ಪ್ರ

ಜನ ಸಮುದಾಯದ ಹೋರಾಟಕ್ಕೆ ಪ್ರಬಲ ಅಸ್ತ್ರ...

ರಂಗಭೂಮಿ, ಸಿನಿಮಾ, ಜನಪದ ಕಲಾವಿದನಾಗಿ ಕಳೆದ ನಲವತ್ತು ವರ್ಷಗಳಿಂದ ದುಡಿದ, ಕಲಿತ ಅನುಭವ ಇದೆ. ಆದರೆ, ಜನ ಸಮುದಾಯದ ಹೋರಾಟಕ್ಕೆ ಚಳವಳಿಯೇ ಪ್ರಬಲ ಅಸ್ತ್ರ. ಚಳವಳಿಯೇ ನನ್ನ ಮನೆ.

ದಲಿತ ಸಾಹಿತ್ಯವು ಚಳವಳಿಗೆ ಹೃದಯವಾಗಿದ್ದು ಹೇಗೆ ?
ಚಳವಳಿಗೆ ಮುಖ್ಯವಾಗಿ ದೇವನೂರ ಮಹಾದೇವ ಸಿದ್ದಲಿಂಗಯ್ಯ ಕೋಟಿಗಾನಹಳ್ಳಿ ರಾಮಯ್ಯ ಇಂದೂಧರ ಹೊನ್ನಾಪುರ ಎಚ್‌.ಗೋವಿಂದಯ್ಯ ಲಕ್ಷ್ಮಿಪತಿ ಕೋಲಾರ ಸೇರಿದಂತೆ ಹಲವರ ಸಾಹಿತ್ಯದ ಕೊಡುಗೆ ಅಪಾರ. ದಲಿತರ ಬದುಕನ್ನು ಸಿದ್ದಲಿಂಗಯ್ಯ ಹಾಡುಗಳ ಮೂಲಕ ಕಟ್ಟಿಕೊಟ್ಟಿದ್ದಾರೆ. ದೇವನೂರ ಮಹಾದೇವರ ಆದಿಯಾಗಿ ದಲಿತ ಸಾಹಿತಿಗಳು ಕಥೆ ಕವನ ಕಾದಂಬರಿ ಮೂಲಕ ಅನಾವರಣಗೊಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT