ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂದರ್ಶನ| 'ಪುಟಿನ್‌ ಯುದ್ಧವು ಉಕ್ರೇನ್‌–ರಷ್ಯಾಕ್ಕೆ ಸೀಮಿತವಲ್ಲ...'

Last Updated 27 ಮಾರ್ಚ್ 2022, 19:30 IST
ಅಕ್ಷರ ಗಾತ್ರ

ಉಕ್ರೇನ್‌ ಯುದ್ಧಕ್ಕಾಗಿ ಹಣ ಮತ್ತು ಶಸ್ತ್ರಾಸ್ತ್ರ ಸಹಾಯವನ್ನು ಚೀನಾದಿಂದ ರಷ್ಯಾ ಕೇಳಿದೆ ಎಂಬುದು ಈಗ ರಹಸ್ಯವಾಗಿ ಉಳಿದಿಲ್ಲ. ಇದು ರಷ್ಯಾ ಮತ್ತು ಚೀನಾ ನಡುವಣ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ. ಇಂತಹ ಬದಲಾವಣೆಯು ಅಮೆರಿಕಕ್ಕೂ ಭಾರತಕ್ಕೂ ಅಪಾಯಕಾರಿ ಎನ್ನುತ್ತಾರೆ ಚೆನ್ನೈನಲ್ಲಿರುವ ಅಮೆರಿಕ ಕಾನ್ಸುಲ್‌ ಜನರಲ್‌ ಜುಡಿತ್‌ ರೇವಿನ್‌. ಉಕ್ರೇನ್‌ ಮೇಲೆ ರಷ್ಯಾ ದಾಳಿಗೆ ಸಂಬಂಧಿಸಿದಂತೆ ಜುಡಿತ್‌ ಅವರ ಜತೆಗೆ ಹಮೀದ್‌ ಕೆ. ನಡೆಸಿದ ಇ–ಮೇಲ್‌ ಸಂದರ್ಶನ ಇಲ್ಲಿದೆ

l ಉಕ್ರೇನ್‌ ಮೇಲೆ ರಷ್ಯಾದ ಅತಿಕ್ರಮಣವು ಶೀತಲ ಯುದ್ಧ ನಂತರದ ಯುಗದಲ್ಲಿನ ಅತ್ಯಂತ ದೊಡ್ಡ ಬಿಕ್ಕಟ್ಟಾಗಿದೆ. ಈ ಬಿಕ್ಕಟ್ಟು ಅಮೆರಿಕದ ವಿದೇಶಾಂಗ ನೀತಿಯನ್ನು ಮಾರ್ಪಡಿಸುವ ಸಾಧ್ಯತೆ ಇದೆಯೇ? ಮಾರ್ಪಾಡು ಆದರೆ ಅದು ಮಿತ್ರ ರಾಷ್ಟ್ರಗಳು ಮತ್ತು ಪ್ರತಿಕೂಲ ರಾಷ್ಟ್ರಗಳ ಮೇಲೆ ಯಾವ ಪರಿಣಾಮ ಉಂಟು ಮಾಡಬಹುದು?

ಹಿಂದೂ ಮಹಾಸಾಗರ–ಪೆಸಿಫಿಕ್‌ ಪ್ರದೇಶದ ಸಹಭಾಗಿತ್ವಕ್ಕೆ ಅಮೆರಿಕದ ಬದ್ಧತೆ ಅತ್ಯಂತ ಬಲವಾದುದು. ಹಿಂದೂ ಮಹಾಸಾಗರ–ಪೆಸಿಫಿಕ್‌ಗೆ ಸಂಬಂಧಿಸಿ ಅಮೆರಿಕದ ಕಾರ್ಯತಂತ್ರವು ಈ ಪ್ರದೇಶವನ್ನು ಮುಕ್ತ, ನಿರ್ಬಂಧರಹಿತ, ಪರಸ್ಪರ ಸಂಪರ್ಕಿತ, ಸಮೃದ್ಧ, ಸುರಕ್ಷಿತವಾಗಿ ಇರಿಸುವುದಕ್ಕೆ ಬದ್ಧವಾಗಿದೆ. ಈ ಪ್ರದೇಶದ ಸ್ವರೂಪವನ್ನು ಹಿಂದಿನ ಸ್ಥಿತಿಗೆ ಮರಳಿಸುವುದಕ್ಕೂ ಅಮೆರಿಕ ಬದ್ಧ. ಪುಟಿನ್‌ ಅವರ ಯುದ್ಧವು ಉಕ್ರೇನ್ ಮತ್ತು ರಷ್ಯಾಕ್ಕೆ ಸೀಮಿತವಾದುದಲ್ಲ.

ಯುರೋಪ್‌, ಹಿಂದೂ ಮಹಾಸಾಗರ–ಪೆಸಿಫಿಕ್‌ ಪ್ರದೇಶ ಮತ್ತು ಜಗತ್ತಿನಾದ್ಯಂತ ಸಾರ್ವತ್ರಿಕವಾಗಿ ಅನ್ವಯವಾಗುವ ತತ್ವಗಳಿಗೆ ಅಪಾಯ ಎದುರಾಗಿದೆ. ನಮ್ಮ ಮಿತ್ರರು ಮತ್ತು ಸಹಭಾಗಿಗಳು ರಕ್ಷಿಸಲು ಯತ್ನಿಸುತ್ತಿರುವ ಪ್ರಮುಖ ತತ್ವಗಳು ಇವೇ ಆಗಿವೆ: ತನ್ನ ವಿದೇಶಾಂಗ ನೀತಿಯನ್ನು ನಿರ್ಧರಿಸುವ ಹಕ್ಕು ಪ್ರತಿಯೊಂದು ದೇಶಕ್ಕೂ ಇದೆ. ಮೈತ್ರಿ ಮತ್ತು ಸಹಭಾಗಿತ್ವಕ್ಕೆ ಸಂಬಂಧಿಸಿ ಯಾರ ಜತೆಗೆ ಇರಬೇಕು ಎಂಬುದನ್ನು ನಿರ್ಧರಿಸುವ ಹಕ್ಕೂ ಇದೆ.

l ‘ಹಾರಾಟ ನಿಷೇಧ ವಲಯ’ ಘೋಷಣೆ ಮಾಡಿ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಅವರು ಪದೇ ಪದೇ ಮಾಡಿಕೊಂಡ ಮನವಿಗೆ ಅಮೆರಿಕವು ಪೂರಕವಾಗಿ ಯಾಕೆ ಸ್ಪಂದಿಸಲಿಲ್ಲ?

ಪುಟಿನ್ ಆರಂಭಿಸಿದ ಯುದ್ಧವನ್ನು ಕೊನೆಗಾಣಿಸಲು ನಾವು ಯತ್ನಿಸುತ್ತಿದ್ದೇವೆಯೇ ಹೊರತು, ಮತ್ತೊಂದು ದೊಡ್ಡ ಯುದ್ಧವನ್ನು ಆರಂಭಿಸಲು ಅಲ್ಲ. ಅಮೆರಿಕವು ಉಕ್ರೇನ್‌ಗೆ ಭದ್ರತಾ ನೆರವನ್ನು ನೀಡುತ್ತಿದೆ. ಆದರೆ, ‘ಹಾರಾಟ ನಿಷೇಧ ವಲಯ’ ಘೋಷಣೆ ಮಾಡಲು ಅಮೆರಿಕದ ಸೇನೆಯು ಉಕ್ರೇನ್‌ ಪ್ರವೇಶಿಸಿದರೆ, ಅದು ಅಮೆರಿಕ ಮತ್ತು ರಷ್ಯಾ ನಡುವಣ ನೇರ ಸಂಘರ್ಷಕ್ಕೆ ಕಾರಣವಾಗುತ್ತದೆ ಮತ್ತು ಅಮೆರಿಕ ಸೇನೆಯು ರಷ್ಯಾ ವಿರುದ್ಧ ಯುದ್ಧ ಮಾಡಬೇಕಾಗುತ್ತದೆ. ಹೀಗೆ ಆಗಬಾರದು ಎಂಬುದು ಅಧ್ಯಕ್ಷ ಜೋ ಬೈಡನ್ ಅವರ ಸ್ಪಷ್ಟ ನಿಲುವು.

ಯುದ್ಧ ಆರಂಭವಾಗುವುದಕ್ಕೂ ಮುನ್ನ ಉಕ್ರೇನ್‌ಗೆ ನೆರವು ನೀಡುವಲ್ಲಿ ನಾವು, ನಮ್ಮ ಪಾಲುದಾರರು ಮತ್ತು ಮಿತ್ರರಾಷ್ಟ್ರಗಳ ಜತೆಗೆ ಕೆಲಸ ಮಾಡಿದ್ದೆವು. ಯುದ್ಧ ಆರಂಭವಾದ ನಂತರವೂ ಇದನ್ನು ಮುಂದುವರಿಸಿದ್ದೇವೆ. ಸೋವಿಯತ್ ಮತ್ತು ಸೋವಿಯತೋತ್ತರ ರಷ್ಯಾ ನಿರ್ಮಿತ ಯುದ್ಧವಿಮಾನ ನಿರೋಧಕ ವ್ಯವಸ್ಥೆ, ಅಗತ್ಯ ಮದ್ದುಗುಂಡುಗಳನ್ನು ಉಕ್ರೇನ್‌ಗೆ ಒದಗಿಸಲು ದುಡಿಯುತ್ತಿದ್ದೇವೆ. ಈ ವ್ಯವಸ್ಥೆಗಳ ಬಳಕೆಯಲ್ಲಿ ಉಕ್ರೇನ್‌ ಸೇನೆಯು ಈಗಾಗಲೇ ತರಬೇತಿ ಪಡೆದಿದೆ.

ಅಮೆರಿಕ ನಿರ್ಮಿತ ಯುದ್ಧಸಲಕರಣೆಗಳನ್ನು ಉಕ್ರೇನ್‌ಗೆ ನೀಡಲು ನಮ್ಮ 14 ಪಾಲುದಾರರಿಗೆ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್ ಅನುಮತಿ ನೀಡಿದ್ದಾರೆ. ವಿಶ್ವದಾದ್ಯಂತ 30ಕ್ಕೂ ಹೆಚ್ಚು ದೇಶಗಳು ಉಕ್ರೇನ್‌ಗೆ ಭದ್ರತಾ ನೆರವು ನೀಡಿವೆ. ಉಕ್ರೇನ್‌ಗೆ ಯಾವ ಶಸ್ತ್ರಾಸ್ತ್ರ ಅಗತ್ಯವಿದೆಯೋ ಅವನ್ನು ಒದಗಿಸಲು, ರಕ್ಷಣಾ ಇಲಾಖೆ ಮತ್ತು ಸಂಬಂಧಪಟ್ಟ ಬೇರೆ ಇಲಾಖೆಗಳು ಒಟ್ಟಿಗೇ ಕೆಲಸ ಮಾಡುತ್ತಿವೆ.

l ರಷ್ಯಾದ ಆಕ್ರಮಣವು ಯುರೋಪ್‌ನ ರಾಷ್ಟ್ರಗಳ ಜತೆಗಿನ ಅಮೆರಿಕದ ಸಂಬಂಧವನ್ನು ಗಟ್ಟಿಗೊಳಿಸಿದೆ; ಏಷ್ಯಾದ ದೇಶಗಳ ಜತೆಗಿನ ಸಂಬಂಧವನ್ನು ಉತ್ತಮಪಡಿಸಿದೆ. ಆದರೆ, ಇದು ರಷ್ಯಾ, ಚೀನಾ, ಇರಾನ್‌ ಮುಂತಾದ ಕೆಲವು ದೇಶಗಳ ನಡುವಣ ಸಂಬಂಧವನ್ನು ಮರುರೂಪಿಸಬಹುದು. ಇಂತಹ ಸನ್ನಿವೇಶ ಎದುರಾದರೆ ಅಮೆರಿಕ ವಹಿಸಬಹುದಾದ ಪಾತ್ರ ಏನು?

ಉಕ್ರೇನ್‌ ಯುದ್ಧಕ್ಕಾಗಿ ಹಣ ಮತ್ತು ಶಸ್ತ್ರಾಸ್ತ್ರ ಸಹಾಯವನ್ನು ಚೀನಾದಿಂದ ರಷ್ಯಾ ಕೇಳಿದೆ ಎಂಬುದು ಈಗ ರಹಸ್ಯವಾಗಿ ಉಳಿದಿಲ್ಲ. ಇದು ರಷ್ಯಾ ಮತ್ತು ಚೀನಾ ನಡುವಣ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ. ಇಂತಹ ಬದಲಾವಣೆಯು ಅಮೆರಿಕಕ್ಕೂ ಭಾರತಕ್ಕೂ ಅಪಾಯಕಾರಿ.

ರಷ್ಯಾ ಮತ್ತು ಚೀನಾ ಇಂತಹ ಪ್ರಯತ್ನಗಳನ್ನು ಇನ್ನಷ್ಟು ತೀವ್ರಗೊಳಿಸಲಿವೆ ಎಂಬುದೇ ನಿಜವಾದ ಕಳವಳ. ನೆರೆಯ ದೇಶವನ್ನು ಆರ್ಥಿಕವಾಗಿ ಅಥವಾ ಸೇನಾ ಬಲದಲ್ಲಿ ಹೇಗೆ ಹಣಿಯಬಹುದು ಎಂಬುದನ್ನು ಅವರು ಪರಸ್ಪರರಿಂದ ಕಲಿಯಲಿದ್ದಾರೆ; ವಿಶ್ವಸಂಸ್ಥೆಯ ವ್ಯವಸ್ಥೆಯನ್ನು ಅಸ್ಥಿರಗೊಳಿಸುವುದು ಹೇಗೆ ಮತ್ತು ಸಂಕಷ್ಟದಿಂದ ಪಾರಾಗಲು ಪರಸ್ಪರರ ಸೇನೆಗಳಿಗೆ ಆರ್ಥಿಕ ನೆರವನ್ನು ಹೇಗೆ ನೀಡಬೇಕು ಎಂಬುದನ್ನೂ ಕಲಿತುಕೊಳ್ಳಲಿದ್ದಾರೆ. ಈ ಎಲ್ಲವೂ ಕಳವಳದ ವಿಚಾರಗಳೇ. ಹಾಗಿದ್ದರೂ ಪ್ರಜಾಪ್ರಭುತ್ವ ದೇಶಗಳಿಗೆ ಚೈತನ್ಯ ತುಂಬುವ ಕ್ಷಣ ಇದು. ಏಕೆಂದರೆ, ನಾವು ಯಾವುದರ ವಿರುದ್ಧ ಇದ್ದೇವೆ ಎಂಬುದು ಈಗ ಸ್ಪಷ್ಟವಾಗಿದೆ.

ಯಾವತ್ತಿನಂತೆ ಈಗಲೂ ಸಂಘರ್ಷದ ಲಾಭ ಪಡೆಯಲು ಚೀನಾ ಯತ್ನಿಸುತ್ತಿದೆ. ಆದರೆ, ಚೀನಾದ ಜನರಿಗೆ ಚೀನಾದ ಕಮ್ಯುನಿಸ್ಟ್ ಪಕ್ಷವು ನೀಡುವುದಕ್ಕಿಂತ ಭಿನ್ನವಾದ ಜೀವನ ವಿಧಾನವನ್ನು ತಮ್ಮ ಜನರಿಗೆ ಒದಗಿಸುವ ಮುಕ್ತ ಮತ್ತು ನಿರ್ಬಂಧರಹಿತ ದೇಶಗಳು ಚೀನಾಕ್ಕೆ ದೊಡ್ಡ ಬೆದರಿಕೆಗಳಾಗಿವೆ. ಇತ್ತೀಚಿನ ವಾರಗಳಲ್ಲಿ, ಉಕ್ರೇನ್‌ಗೆ ಬೆಂಬಲ ನೀಡುವುದಕ್ಕಾಗಿ ಜಾಗತಿಕ ಸಮುದಾಯವು– ಯುರೋಪ್‌, ಉತ್ತರ ಅಮೆರಿಕ, ಏಷ್ಯಾದ ದೇಶಗಳು – ಎಷ್ಟು ಸಕ್ರಿಯವಾಗಿ ಒಟ್ಟಾಗುತ್ತಿದೆ ಎಂಬುದನ್ನು ಗಮನಿಸಿದ್ದೇವೆ. ರಷ್ಯಾದ ಮೇಲೆ ನಿರ್ಬಂಧಗಳನ್ನು ಹೇರುತ್ತಿವೆ ಮತ್ತು ಈ ರೀತಿಯ (ರಷ್ಯಾದ ಅತಿಕ್ರಮಣ) ಆಕ್ರಮಣವು ಸರಿಯಲ್ಲ ಎಂದು ವಿಶ್ವಸಂಸ್ಥೆಯಲ್ಲಿ ಮತ್ತು ಇತರೆಡೆ ವಿವಿಧ ದೇಶಗಳು ಹೇಳುತ್ತಿವೆ. ಚೀನಾದ ಬಲಪ್ರಯೋಗದಿಂದ ರಕ್ಷಣೆ ಪಡೆಯಲು ಇದೇ ರೀತಿಯ ರಚನೆಗಳು ಮತ್ತು ವ್ಯವಸ್ಥೆಗಳನ್ನು ನಾವು ರೂಪಿಸಬೇಕಾದ ಅಗತ್ಯ ಇದೆ.

l ನ್ಯಾಟೊದಿಂದ ತಮ್ಮ ದೇಶಕ್ಕೆ ಅಪಾಯ ಇದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಮತ್ತು ಆ ದೇಶದ ಅಧಿಕಾರಿಗಳು ಹೇಳುತ್ತಿದ್ದಾರೆ. ನ್ಯಾಟೊದ ವಿಸ್ತರಣವಾದವೇ ಉಕ್ರೇನ್‌ ಮೇಲಿನ ದಾಳಿಗೆ ಒಂದು ಕಾರಣ ಎಂದೂ ಆರೋಪಿಸಲಾಗಿದೆ. ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು?

ಈ ಸಂಘರ್ಷದುದ್ದಕ್ಕೂ, ಉಕ್ರೇನ್‌ ಮತ್ತು ನ್ಯಾಟೋದಿಂದ ತನಗೆ ಅಪಾಯವಿದೆ ಎಂದು ರಷ್ಯಾ ಆರೋಪ ಮಾಡುತ್ತಿದೆ. ರಷ್ಯಾ ಜತೆಗೆ ಸಂಘರ್ಷಕ್ಕೆ ಇಳಿಯುವ ಬಯಕೆ ಅಥವಾ ಉದ್ದೇಶ ಅಮೆರಿಕಕ್ಕಾಗಲೀ, ನ್ಯಾಟೊಗಾಗಲೀ ಇಲ್ಲ. ನ್ಯಾಟೊ, ತನ್ನ ಸದಸ್ಯ ರಾಷ್ಟ್ರಗಳಿಗೆ ಭದ್ರತೆ ಒದಗಿಸುವ ಉದ್ದೇಶ ಹೊಂದಿರುವ ಒಂದು ರಕ್ಷಣಾತ್ಮಕ ಒಕ್ಕೂಟವಷ್ಟೆ.

‘ಒಕ್ಕೂಟವು ರಷ್ಯಾದೊಂದಿಗೆ ಮುಖಾಮುಖಿಯಾಗುವ ಮತ್ತು ರಷ್ಯಾಕ್ಕೆ ಅಪಾಯ ಒಡ್ಡುವ ಉದ್ದೇಶ ಹೊಂದಿಲ್ಲ’ ಎಂದು 2021ರ ಜೂನ್‌ನಲ್ಲಿ ನಡೆದ ನ್ಯಾಟೊ ಶೃಂಗಸಭೆಯಲ್ಲಿ ನಿರ್ಣಯ ಘೋಷಿಸಲಾಗಿತ್ತು. ರಷ್ಯಾವನ್ನು ನ್ಯಾಟೊ ಸುತ್ತುವರಿದಿಲ್ಲ. ರಷ್ಯಾದ ನೆಲಗಡಿಯ ಉದ್ದ 20,000 ಕಿ.ಮೀ. ಅದರಲ್ಲಿ ನ್ಯಾಟೊ ದೇಶಗಳ ಜತೆ ಹಂಚಿಕೊಂಡಿರುವ ನೆಲಗಡಿಯ ಉದ್ದ ಕೇವಲ 1,215 ಕಿ.ಮೀ. ರಷ್ಯಾ 14 ದೇಶಗಳ ಜತೆಗೆ ಗಡಿ ಹಂಚಿಕೊಂಡಿದೆ. ಅವುಗಳಲ್ಲಿ ಐದು ಮಾತ್ರ ನ್ಯಾಟೊ ಸದಸ್ಯತ್ವ ಹೊಂದಿವೆ. ಸಾರ್ವಭೌಮ ರಾಷ್ಟ್ರಗಳು ತಮ್ಮ ಇಚ್ಛೆಯ ಒಕ್ಕೂಟವನ್ನು ಆಯ್ಕೆ ಮಾಡಿಕೊಳ್ಳಬಹುದು ಮತ್ತು ತಮ್ಮ ಭದ್ರತೆಗೆ ಸಂಬಂಧಿಸಿದಂತೆ, ತಮ್ಮದೇ ನಿರ್ಧಾರ ತೆಗೆದುಕೊಳ್ಳಬಹುದು ಎಂದು ನಾವು ಹೇಳುತ್ತಲೇ ಬಂದಿದ್ದೇವೆ. ಉಕ್ರೇನ್‌ ಆಗಲೀ ಬೇರೆ ದೇಶವೇ ಆಗಲಿ, ನ್ಯಾಟೊವನ್ನು ಸೇರಬೇಕು ಎಂದು ಒತ್ತಡ ಹೇರುತ್ತಿಲ್ಲ ಎಂದು ನಾವು ಹೇಳುತ್ತಲೇ ಬಂದಿದ್ದೇವೆ. ಸತ್ಯ ತುಂಬಾ ಸರಳವಾಗಿದೆ: ಉಕ್ರೇನ್‌ ಅನ್ನು ಅತಿಕ್ರಮಿಸಿದ್ದು ರಷ್ಯಾ, ನ್ಯಾಟೊ ಅಲ್ಲ.

lಉಕ್ರೇನ್‌ ಮೇಲೆ ರಷ್ಯಾದ ಆಕ್ರಮಣದ ವಿಚಾರದಲ್ಲಿ ವಿಶ್ವ ಸಂಸ್ಥೆಯಲ್ಲಿ ಭಾರತವು ತಟಸ್ಥ ನಿಲುವು ತಳೆದಿರುವುದನ್ನು ಅಮೆರಿಕ ಹೇಗೆ ಪರಿಗಣಿಸುತ್ತದೆ?

ಉಕ್ರೇನ್‌ ಮೇಲೆ ರಷ್ಯಾದ ದಾಳಿಯು ಉಕ್ರೇನ್‌ನ ಸಾರ್ವಭೌಮತ್ವ ಮತ್ತು ಭೌಗೋಳಿಕ ಸಮಗ್ರತೆಯ ಉಲ್ಲಂಘನೆ ಎಂಬುದು ಸ್ಪಷ್ಟ. ನಿಯಮ ಆಧಾರಿತವಾದ ಅಂತರರಾಷ್ಟ್ರೀಯ ವ್ಯವಸ್ಥೆ ಇರಬೇಕು ಎಂದು ಬಯಸುವ ಎಲ್ಲ ದೇಶಗಳಿಗೂ ಇದು ಅತೀವ ಕಳವಳದ ವಿಚಾರವಾಗಿದೆ.

l ಕಚ್ಚಾ ತೈಲ ಮತ್ತು ಇತರ ಸರಕುಗಳನ್ನು ರಿಯಾಯಿತಿ ದರದಲ್ಲಿ ಪಡೆದುಕೊಳ್ಳುವ ಹಾಗೂ ರೂಪಾಯಿ–ರೂಬಲ್‌ನಲ್ಲಿ ಪಾವತಿ ವ್ಯವಹಾರ ನಡೆಸುವ ಪ್ರಸ್ತಾವವನ್ನು ಭಾರತ ಪರಿಶೀಲಿಸುತ್ತಿದೆ. ಈ ಕುರಿತು ಅಮೆರಿಕದ ನಿಲುವು ಏನು? ಉಕ್ರೇನ್‌ ಯುದ್ಧದ ನಂತರದ ದಿನಗಳಲ್ಲಿ ಭಾರತ–ಅಮೆರಿಕ ಸಂಬಂಧದ ಮೇಲೆ ಇದು ಯಾವ ಪರಿಣಾಮ ಬೀರಬಹುದು?

ಇಂಧನಕ್ಕಾಗಿ ರಷ್ಯಾದ ಮೇಲೆ ಕಡಿಮೆ ಅವಲಂಬನೆ ಹೊಂದಿರುವ ಅಮೆರಿಕ ಮತ್ತು ಇತರ ಹಲವು ದೇಶಗಳಿಗೆ, ರಷ್ಯಾದಿಂದ ತೈಲ ಆಮದು ಕಡಿತಗೊಳಿಸುವುದು ತುಲನಾತ್ಮಕವಾಗಿ ನೇರವಾಗಿ ತೆಗೆದುಕೊಳ್ಳಬಹುದಾದ ನಿರ್ಧಾರ. ಯುರೋಪ್‌ ಮತ್ತು ಜಗತ್ತಿನ ಇತರ ಭಾಗಗಳ ಕೆಲವು ದೇಶಗಳಿಗೆ ಇದೊಂದು ಪಲ್ಲಟದ ವಿಚಾರ. ಈ ದೇಶಗಳು ರಷ್ಯಾದ ಮೇಲಿನ ತೈಲ ಮತ್ತು ಅನಿಲ ಅವಲಂಬನೆಯಿಂದ ನಿಧಾನವಾಗಿ ದೂರ ಸರಿಯಬೇಕಾಗುತ್ತದೆ. ಈ ಸ್ಥಿತಿಯು ನಮಗೆ ಅರ್ಥವಾಗುತ್ತದೆ.

l ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರು ರಷ್ಯಾದ ಮೇಲೆ ಕಠಿಣ ನಿರ್ಬಂಧಗಳನ್ನು ಹೇರಿದ್ದಾರೆ ಮತ್ತು ಉಕ್ರೇನ್‌ಗೆ ಸೇನಾ ಸಲಕರಣೆಗಳನ್ನು ಒದಗಿಸಿದ್ದಾರೆ. ಇದು ಅಗತ್ಯ ಕ್ರಮವೇ ಆಗಿದ್ದರೂ ಬೇಕಾದಷ್ಟು ಅಲ್ಲ ಎಂದು ಹಲವು ದೇಶಗಳು ಭಾವಿಸಿವೆ. ಉಕ್ರೇನ್‌ ಅನ್ನು ಅಮೆರಿಕವು ಕೈಬಿಟ್ಟಿತು ಎಂಬ ಭಾವನೆಯೂ ಇದೆ. ಈ ಕುರಿತು ಏನೆನ್ನುವಿರಿ?

ಉಕ್ರೇನ್‌ನ ಮೇಲೆ ರಷ್ಯಾ ನಡೆಸಿದ ಅಪ್ರಚೋದಿತ ಮತ್ತು ನ್ಯಾಯಸಮ್ಮತವಲ್ಲದ ಅತಿಕ್ರಮಣಕ್ಕೆ ಮಾರ್ಚ್‌ 24ರಂದು ಒಂದು ತಿಂಗಳು ತುಂಬಿದೆ. ಆ ಸಂದರ್ಭದಲ್ಲಿ ಬೈಡನ್ ಅವರು, ಬ್ರಸೆಲ್ಸ್‌ನಲ್ಲಿ ನ್ಯಾಟೊ ನಾಯಕರನ್ನು ಭೇಟಿ ಮಾಡಿದ್ದರು. ಉಕ್ರೇನ್‌ಗೆ ನಮ್ಮ ಬೆಂಬಲವಿದೆ ಎಂಬುದನ್ನು ಒತ್ತಿ ಹೇಳುವ, ಈ ಯುದ್ಧದ ಸಂಪೂರ್ಣ ಹೊಣೆಯನ್ನು ರಷ್ಯಾ ಹೊರಬೇಕು ಎಂದು ಆಗ್ರಹಿಸುವ ಮತ್ತು ನ್ಯಾಟೊವನ್ನು ಬಲಪಡಿಸಬೇಕು ಎಂಬ ನಮ್ಮ ಧ್ಯೇಯವನ್ನು ಒತ್ತಿ ಹೇಳುವ ಉದ್ದೇಶದಿಂದ ಈ ಸಭೆ ನಡೆಸಲಾಗಿತ್ತು. ಅಲ್ಲದೆ ಕೆಲವಾರಗಳ ಹಿಂದೆ ಅಮೆರಿಕವು ಉಕ್ರೇನ್‌ಗೆ ಭದ್ರತಾ ಸಹಾಯಕ್ಕಾಗಿ ಎಂದು ನೂರು ಕೋಟಿ ಡಾಲರ್‌ (ಸುಮಾರು ₹7,500 ಕೋಟಿ) ನೆರವು ಘೋಷಿಸಿದೆ. ಯುದ್ಧವಿಮಾನ ನಿರೋಧಕ ವ್ಯವಸ್ಥೆ, ಗುಂಡುನಿರೋಧಕ ವಾಹನ ನಿರೋಧಕ ವ್ಯವಸ್ಥೆ, ಡ್ರೋನ್‌, ಕೋಟ್ಯಂತರ ಸಂಖ್ಯೆಯ ಮದ್ದುಗುಂಡುಗಳನ್ನು ಈ ನೆರವಿನಡಿ ನೀಡಲಾಗಿದೆ. ಉಕ್ರೇನ್‌ನಲ್ಲಿ ರಷ್ಯಾದ ಅತಿಕ್ರಮಣದಿಂದ ಆಗಿರುವ ಹಾನಿಯನ್ನು ಸರಿಪಡಿಸಲು ಮತ್ತೆ ನೂರು ಕೋಟಿ ಡಾಲರ್‌ಗಿಂತಲೂ ಹೆಚ್ಚು ನೆರವನ್ನು ಮಾನವೀಯ ನೆಲೆಯಲ್ಲಿ ನೀಡುವುದಾಗಿ ಮಾರ್ಚ್‌ 24ರ ಸಭೆಯಲ್ಲಿ ಅಧ್ಯಕ್ಷ ಬೈಡನ್ ಘೋಷಿಸಿದ್ದಾರೆ. ರಷ್ಯಾ ಅತಿಕ್ರಮಣದಿಂದ ಮುಂದಿನ ದಿನಗಳಲ್ಲಿ ಉಕ್ರೇನ್‌ ಮತ್ತು ಜಗತ್ತಿನ ಹಲವೆಡೆ ಆಹಾರದ ಅಭದ್ರತೆ ಉಂಟಾಗಲಿದೆ. ಈ ನೆರವಿನ ಮೂಲಕ ಆಹಾರ ಪದಾರ್ಥ, ವಸತಿ, ಶುದ್ಧ ನೀರು, ವೈದ್ಯಕೀಯ–ಔಷಧೀಯ ಸೇವೆಯನ್ನು ಒದಗಿಸಲಾಗುತ್ತದೆ.

ಈಗ ಉಕ್ರೇನ್‌ಗೆ ನಾವು ನೀಡುತ್ತಿರುವ ನೆರವು ಮುಂದುವರಿಯಲಿದೆ. ಉಕ್ರೇನ್‌ ತನ್ನನ್ನು ತಾನು ರಕ್ಷಿಸಿಕೊಳ್ಳಲು ಮತ್ತು ಅಂದಾಜು 37 ಲಕ್ಷ ನಿರಾಶ್ರಿತರಿಗೆ ನೆಲೆ ಕಲ್ಪಿಸಲು ಅಗತ್ಯವಿರುವ ಎಲ್ಲಾ ನೆರವನ್ನು ಅಮೆರಿಕವು ನೀಡಲಿದೆ. ರಷ್ಯಾದ ಸೈಬರ್ ಅತಿಕ್ರಮಣಗಳು ಮತ್ತು ಸುಳ್ಳುಸುದ್ದಿಗಳನ್ನು ನಿಗ್ರಹಿಸಲು ಪ್ರಾದೇಶಿಕ ಸಹಕಾರವನ್ನು ಅಮೆರಿಕವು ಉತ್ತೇಜಿಸಲಿದೆ. ಈ ಸಂಘರ್ಷದ ಸಂದರ್ಭದಲ್ಲಿ ಉಕ್ರೇನ್‌ನ ವಿದ್ಯುತ್ ಪೂರೈಕೆ ಸ್ಥಿರವಾಗಿ ಇರುವಂತೆ ನೋಡಿಕೊಳ್ಳಲು ಎಚ್ಚರವಹಿಸಿದ್ದೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT