ವಿಧಾನಸಭೆಯ ಆಡಳಿತದ ಸಾಲಿನಲ್ಲಿ ಘಟಾನುಘಟಿ ನಾಯಕರೇ ಇದ್ದಾರೆ. ಸಿದ್ದರಾಮಯ್ಯ ಜತೆ ನಿಮ್ಮ ಸಂಬಂಧವೂ ಚೆನ್ನಾಗಿದೆ. ಹೀಗಿದ್ದಾಗ ವಿಪಕ್ಷ ನಾಯಕನ ಸ್ಥಾನ ನಿಭಾಯಿಸುವುದು ಕಷ್ಟವಲ್ಲವೇ?
ಯಾವ ಹುದ್ದೆಯನ್ನು ನಿರ್ವಹಿಸುತ್ತೇವೆಯೋ ಅದಕ್ಕೆ ತಕ್ಕಂತೆ ಇರಬೇಕು. ಗೃಹ ಸಚಿವನಾಗಿದ್ದಾಗ ನಿಷ್ಠುರವಾಗಿಯೇ ಕೆಲಸ ಮಾಡಿದ್ದೆ. ಕಂದಾಯ ಸಚಿವನಾಗಿದ್ದಾಗ ರಾಜ್ಯದ ಉದ್ದಗಲ ಓಡಾಡಿ ಜನರ ಸಣ್ಣಪುಟ್ಟ ಸಮಸ್ಯೆಗಳಿಗೂ ಸ್ಪಂದಿಸಿದ್ದೆ. ಹೋರಾಟದ ಹಿನ್ನೆಲೆ ಇರುವ ಯಾವುದೇ ವ್ಯಕ್ತಿಗೆ ಯಾರ ಎದುರು ನಿಂತು ಮಾತನಾಡಲು ಅಳುಕು, ಅಂಜಿಕೆ ಇರುವುದಿಲ್ಲ. ವಿಪಕ್ಷ ನಾಯಕ ಎಂದರೆ ಗದರಿಸುವುದು– ಅಬ್ಬರಿಸುವುದಲ್ಲ. ಗಟ್ಟಿ ಮಾತುಗಳಲ್ಲಿ ಸರ್ಕಾರದ ಕಿವಿ ಹಿಂಡಬೇಕು. ನಮ್ಮ ಎದುರು ಯಾರಿದ್ದಾರೆ ಎನ್ನುವುದು ಮುಖ್ಯ ಅಲ್ಲ. ವಿರೋಧಿ ಸ್ಥಾನದಲ್ಲಿ ಗೆಳೆಯರು, ಗುರುಗಳು, ಸ್ನೇಹಿತರು, ಬಂಧು– ಬಳಗ ಯಾರೇ ಇದ್ದರೂ ಧೈರ್ಯಗೆಡದೇ ಹೋರಾಡು ಎಂದು ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಹೇಳಿದ್ದಾನೆ. ಆ ಮಾತುಗಳೇ ನನಗೆ ಮಾರ್ಗದರ್ಶನ. ಯಾರ ಜತೆಗೂ ಹೊಂದಾಣಿಕೆ ಪ್ರಶ್ನೆಯೇ ಇಲ್ಲ.
ನಿಮ್ಮ ಮತ್ತು ಅಧ್ಯಕ್ಷರ ಸ್ಥಾನದ ಆಯ್ಕೆ ಬಗ್ಗೆ ಪಕ್ಷದಲ್ಲಿ ದೊಡ್ಡ ಪ್ರಮಾಣದಲ್ಲಿ ಅಸಮಾಧಾನ ಹುಟ್ಟು ಹಾಕಿದೆಯಲ್ಲವೇ? ಇದನ್ನು ಹೇಗೆ ತಣ್ಣಿಸುತ್ತೀರಿ?
ನನಗೆ ನೀಡಿದ ಹುದ್ದೆಯ ಬಗ್ಗೆ ಯಾರೂ ಅಸಮಾಧಾನ ವ್ಯಕ್ತಪಡಿಸಿಲ್ಲ. ನನ್ನ ಹಿರಿತನವನ್ನು ಎಲ್ಲರೂ ಒಪ್ಪಿದ್ದಾರೆ. ಅಸಮಾಧಾನಗೊಂಡವರನ್ನು ಮಾತನಾಡಿಸಿ, ಸಮಾಧಾನ ಪಡಿಸುವ ಕೆಲಸ ನಾನು ಮತ್ತು ಅಧ್ಯಕ್ಷರಾದ ಬಿ.ವೈ.ವಿಜಯೇಂದ್ರ ಒಟ್ಟಿಗೆ ಮಾಡುತ್ತಿದ್ದೇವೆ. ನನ್ನ ಮತ್ತು ವಿಜಯೇಂದ್ರ ಮಧ್ಯೆ ಉತ್ತಮ ಬಾಂಧವ್ಯವಿದೆ. ನಮ್ಮ ಜೋಡಿ ಡಿಕೆಶಿ– ಸಿದ್ದರಾಮಯ್ಯ ಜೋಡಿಯಂತಲ್ಲ. ನಮ್ಮದು ಹಳೇ ಬೇರು ಹೊಸ ಚಿಗುರು. ನಮ್ಮ ಅಧ್ಯಕ್ಷರಿಂದ ಕಾರ್ಯಕರ್ತರ ಪಡೆ ಉತ್ಸಾದಿಂದ ಪುಟಿದೆದ್ದಿದೆ.
ಜೆಡಿಎಸ್ ಜತೆಗೆ ಹೊಂದಾಣಿಕೆ ಹೇಗಿರುತ್ತದೆ?
ಜೆಡಿಎಸ್–ಬಿಜೆಪಿಯ 20–20 ಸರ್ಕಾರ ಅತ್ಯುತ್ತಮ ಸರ್ಕಾರವಾಗಿತ್ತು. ಎರಡೂ ಪಕ್ಷಗಳ ಮಧ್ಯೆ ಉತ್ತಮ ಬಾಂಧವ್ಯವಿತ್ತು. ಈಗಲೂ ಅದು ಮುಂದುವರೆಯುತ್ತದೆ. ಲೋಕಸಭೆ ಚುನಾವಣೆಯಲ್ಲಿ ಎರಡೂ ಪಕ್ಷಗಳು ಸೇರಿ 28 ಸ್ಥಾನ ಗೆಲ್ಲುವ ವಿಶ್ವಾಸವಿದೆ. ನಮ್ಮದ ಸಹಜ ಮೈತ್ರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.