ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂದರ್ಶನ | ಮುಖ್ಯಮಂತ್ರಿ ಮೋದಿಯ ಮಾತನ್ನು ಪ್ರಧಾನಿ ಕೇಳಲಿ: ಸುರ್ಜೇವಾಲಾ

Last Updated 21 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ವಿವಿಧ ವಿಚಾರಗಳ ಬಗ್ಗೆ ಕಾಂಗ್ರೆಸ್‌ ನಿಲುವುಗಳ ಪ್ರತಿಪಾದನೆಯಲ್ಲಿ ಮುನ್ನೆಲೆಯಲ್ಲಿ ಇರುವವರು ಆ ‍ಪಕ್ಷದ‌ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲಾ. ಕೃಷಿ ಉತ್ಪನ್ನ ಮಾರಾಟಕ್ಕೆ ಕನಿಷ್ಠ ಬೆಂಬಲ ಬೆಲೆಯೇ ಏಕೈಕ ಮಾನದಂಡ ಆಗಿರಬೇಕು ಎಂದು ನರೇಂದ್ರ ಮೋದಿಯವರು ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗ ಹೇಳಿದ್ದನ್ನು ಜಾರಿಗೆ ತರಲು ಇದು ಸಕಾಲ ಎಂದು ಪ್ರಜಾವಾಣಿ ಸಂದರ್ಶನದಲ್ಲಿ ಸುರ್ಜೇವಾಲಾ ಹೇಳಿದ್ದಾರೆ.

* ಜನ ಚಳವಳಿಗಳು ರಾಜಕೀಯ ಪಕ್ಷಗಳನ್ನು ದೂರ ಇರಿಸುತ್ತಿರುವುದು ಏಕೆ? ಮೊದಲಿಗೆ, ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆಯಲ್ಲಿ, ಈಗ ರೈತರ ಪ್ರತಿಭಟನೆಯಲ್ಲಿ?
ರೈತ ವಿರೋಧಿಯಾದ ಮೂರು ಕರಾಳ ಕಾಯ್ದೆಗಳನ್ನು ಕೇಂದ್ರ ಸಚಿವ ಸಂಪುಟದಲ್ಲಿ ರಹಸ್ಯವಾಗಿ ಅಂಗೀಕರಿಸಲಾಗಿದೆ. ರಾಜ್ಯಸಭೆಯಲ್ಲಿ ಅಗತ್ಯ ಬೆಂಬಲ ಇಲ್ಲದೇ ಇದ್ದರೂ ಕಾಂಗ್ರೆಸ್‌ ಮತ್ತು ವಿರೋಧ ಪಕ್ಷಗಳ ಸದಸ್ಯರನ್ನು ಅಮಾನತು ಮಾಡಿ ಕಾಯ್ದೆಗಳಿಗೆ ಧ್ವನಿಮತದ ಅಂಗೀಕಾರ ಪಡೆಯಲಾಗಿದೆ. ರೈತರ ಒಂದೇ ಒಂದು ಸಂಘಟನೆಯಾಗಲಿ, ಯಾವುದೇ ರಾಜಕೀಯ ಪಕ್ಷವಾಗಲಿ ಇಂತಹ ಕಾಯ್ದೆಗಳಿಗೆ ಬೇಡಿಕೆ ಇರಿಸಿರಲಿಲ್ಲ. ಪ್ರತಿಯೊಂದು ಪ್ರಾಮಾಣಿಕವಾದ ಪ್ರತಿಭಟನೆಯನ್ನು ಕೂಡ ಬಿಜೆಪಿ ರಾಜಕೀಯಗೊಳಿಸಿ, ಮಸಿ ಬಳಿಯುತ್ತದೆ ಎಂಬ ಕಾರಣಕ್ಕೆ ರಾಜಕೀಯ ಪಕ್ಷಗಳು ಧರಣಿಯಲ್ಲಿ ಭಾಗವಹಿಸಬಾರದು ಎಂಬುದು ರೈತ ಸಂಘಟನೆಗಳ ಆಗ್ರಹ. ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ರೈತ ಸಂಘಟನೆಗಳ ಆಗ್ರಹವನ್ನು ಗೌರವಿಸಿ, ಧರಣಿಯಿಂದ ದೂರ ಉಳಿದಿವೆ. ಆದರೆ, ನಮ್ಮ ನೈತಿಕ ಮತ್ತು ರಾಜಕೀಯ ಬೆಂಬಲ ಈ ಪ್ರತಿಭಟನೆಗೆ ಇದೆ.

* ಕೃಷಿ ಕಾಯ್ದೆಗಳ ಪರ ನಡೆಸುತ್ತಿರುವ ಪ್ರಚಾರದಲ್ಲಿ ವಿರೋಧ ಪಕ್ಷಗಳನ್ನು ಬಿಜೆಪಿ ಗುರಿ ಮಾಡಿಕೊಳ್ಳುತ್ತಿರುವುದು ಏಕೆ?
ಖಲಿಸ್ತಾನಿಗಳು, ತುಕ್ಡೆ ತುಕ್ಡೆ ಗ್ಯಾಂಗ್,‌ ನಗರ ನಕ್ಸಲರು, ಭಯೋತ್ಪಾದಕರು, ಚೀನಾ ಮತ್ತು ಪಾಕಿಸ್ತಾನದ ಏಜೆಂಟರು ಎಂದು ಹೇಳುವ ಮೂಲಕ ರೈತರು ಮತ್ತು ಕೃಷಿ ಕಾರ್ಮಿಕರನ್ನು ಸರ್ಕಾರವು ಅವಮಾನಿಸಿದೆ. ₹25 ಲಕ್ಷ ಕೋಟಿಗೂ ಹೆಚ್ಚು ವಹಿವಾಟಿನ ಕೃಷಿ ಉತ್ಪನ್ನ ವ್ಯಾಪಾರವನ್ನು ತನ್ನ ನಾಲ್ವರು ಬಂಡವಾಳಶಾಹಿ ಗೆಳೆಯರಿಗೆ ನೀಡಲು ಬಿಜೆಪಿ ಮತ್ತುಮೋದಿ ನೇತೃತ್ವದ ಸರ್ಕಾರವು ಬಯಸಿದೆ. ವಿರೋಧ ಪಕ್ಷಗಳು ರೈತರ ಜತೆಗೆ ಗಟ್ಟಿಯಾಗಿ ನಿಂತಿವೆ. ಹಾಗಾಗಿಯೇ ರಾಹುಲ್‌ ಗಾಂಧಿ ಮತ್ತು ಕಾಂಗ್ರೆಸ್‌ ಪಕ್ಷವನ್ನು ಬಿಜೆಪಿ ಗುರಿಯಾಗಿಸಿಕೊಂಡಿದೆ. ರಾಹುಲ್‌ ಗಾಂಧಿಯ ವಿರುದ್ಧ, ಕಾಂಗ್ರೆಸ್‌ ವಿರುದ್ಧ ಎಷ್ಟು ಬೇಕಿದ್ದರೂ ವಾಗ್ದಾಳಿ ನಡೆಸಿ; ನಮ್ಮನ್ನೆಲ್ಲ ಜೈಲಿಗೆ ಹಾಕಿ. ಆದರೆ, ರೈತರ ಜೀವನೋಪಾಯವನ್ನು ಉಳಿಸಿ. ಮೂರು ಕರಾಳ ಕಾಯ್ದೆಗಳನ್ನು ರದ್ದುಪಡಿಸಿ ದೇಶದ ಆಹಾರ ಭದ್ರತೆಯನ್ನು ರಕ್ಷಿಸಿ.

* ಇಂತಹುದೇ ಸುಧಾರಣೆಗಳ ಪ್ರಸ್ತಾವ 2019ರ ಲೋಕಸಭಾ ಚುನಾವಣೆಯ ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಇತ್ತು, ಈಗ ಏಕೆ ವಿರೋಧ?
ಇದು ಬಿಜೆಪಿ ಹಬ್ಬಿಸುತ್ತಿರುವ, ಸುಳ್ಳು. ಎಪಿಎಂಸಿಗಳನ್ನು ‘ರೈತ ಮಾರುಕಟ್ಟೆ’ ಎಂದು ಮರು ನಾಮಕರಣ ಮಾಡಲು ಕಾಂಗ್ರೆಸ್‌ ಬಯಸಿತ್ತು. ಗ್ರಾಮಗಳ ಗುಂಪುಗಳನ್ನು ರೈತ ಮಾರುಕಟ್ಟೆಗಳಾಗಿ ಪರಿವರ್ತಿಸುವುದು ಪಕ್ಷದ ಇಚ್ಛೆಯಾಗಿತ್ತು. ಕೃಷಿ ಉತ್ಪನ್ನ ಮಾರುಕಟ್ಟೆಗಳ ಸಂಖ್ಯೆಯನ್ನು ಎರಡು ‍ಲಕ್ಷಕ್ಕೆ ಏರಿಸಲು ಬಯಸಿದ್ದೆವು. ಕೇಂದ್ರ ಸರ್ಕಾರವು ಎಪಿಎಂಸಿಯನ್ನೇ ರದ್ದು ಮಾಡಲು ಮುಂದಾಗಿದೆ. ಇದು ಮೂಲಭೂತವಾದ ವ್ಯತ್ಯಾಸ. ಎಪಿಎಂಸಿ ಮೂಲಕ ಕೃಷಿ ಉತ್ಪನ್ನಗಳ ಖರೀದಿ ನಿಂತ ಬಳಿಕ ಮೋದಿಯವರ ನಾಲ್ವರು ಬಂಡವಾಳಶಾಹಿ ಗೆಳೆಯರು ರೈತರಿಂದ ಅಗ್ಗದ ದರದಲ್ಲಿ ಉತ್ಪನ್ನ ಖರೀದಿಸಿ, ಅತಿಯಾದ ಬೆಲೆಗೆ ಗ್ರಾಹಕರಿಗೆ ಮಾರಾಟ ಮಾಡಲಿದ್ದಾರೆ. ಇದುವೇ ಈ ಕಾಯ್ದೆಗಳ ಬಗ್ಗೆ ಇರುವ ಮುಖ್ಯ ಆಕ್ಷೇಪ.

* ಎಂಎಸ್‌ಪಿಯ ಖಾತರಿ ನೀಡಿದರೆ ಪ್ರತಿಭಟನೆ ಕೊನೆಯಾಗುತ್ತದೆಯೇ?
ಪ್ರಧಾನಿ ಮೋದಿಯವರಿಗೆ ನಮ್ಮ ಸರಳ ಪ್ರಶ್ನೆ ಏನೆಂದರೆ, ಮುಖ್ಯಮಂತ್ರಿ ಮೋದಿಯವರ ಮಾತನ್ನು ಪ್ರಧಾನಿ ಮೋದಿ ಏಕೆ ಆಲಿಸುತ್ತಿಲ್ಲ? ‘ಯಾವೆಲ್ಲ ಉತ್ಪನ್ನಗಳಿಗೆ ಎಂಎಸ್‌ಪಿ ನಿಗದಿಯಾಗಿದೆಯೇ ಆ ಉತ್ಪನ್ನಗಳನ್ನು ಎಂಎಸ್‌ಪಿಗಿಂತ ಕಡಿಮೆ ಬೆಲೆಗೆ ಖರೀದಿ ಮಾಡುವಂತಿಲ್ಲ’ ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದ ವರದಿಯನ್ನು ಮೋದಿಯವರು ಮುಖ್ಯಮಂತ್ರಿಯಾಗಿದ್ದಾಗ ನೀಡಿದ್ದರು. ಕೃಷಿ ಉತ್ಪನ್ನಗಳ ಖರೀದಿಗೆ ಎಂಎಸ್‌ಪಿಯೇ ಏಕೈಕ ಮಾನದಂಡ, ಅದಕ್ಕಿಂತ ಕಡಿಮೆಗೆ ಖರೀದಿಸಿದವರನ್ನು ಶಿಕ್ಷಿಸಲಾಗುವುದು ಎಂದು ಪ್ರಧಾನಿ ಲಿಖಿತ ಖಾತರಿ ನೀಡಲಿ. ರೈತರು ಸಂತೃಪ್ತರಾಗುತ್ತಾರೆ. ತಮ್ಮ ಲಿಖಿತ ಭರವಸೆಗೇ ಪ್ರಧಾನಿ ಬೆಲೆ ನೀಡುವುದಿಲ್ಲ ಎಂದಾದರೆ, ದೇಶದ ರೈತರು ಪ್ರಧಾನಿಯನ್ನು ಏಕೆ ನಂಬಬೇಕು?

* ಎಪಿಎಂಸಿ ಮುಚ್ಚುವುದಿಲ್ಲ, ಕನಿಷ್ಠ ಬೆಂಬಲ ಬೆಲೆಯೂ (ಎಂಎಸ್‌ಪಿ) ಇರಲಿದೆ. ಆದರೆ, ವಿರೋಧ ಪಕ್ಷಗಳು ರೈತರನ್ನು ದಾರಿ ತಪ್ಪಿಸುತ್ತಿವೆ ಎಂದು ಸರ್ಕಾರ ಹೇಳುತ್ತಿದೆಯಲ್ಲ?
ಸುಳ್ಳುಗಳ ಪ್ರತಿಪಾದನೆಯನ್ನು ಬಿಜೆಪಿ ಮುಂದುವರಿಸಿದೆ. ಎಂಎಸ್‌ಪಿ ಮುಂದುವರಿಯಲಿದೆ ಎಂಬುದು ಮೊದಲ ಸುಳ್ಳು. ಎಪಿಎಂಸಿ ಬಂದ್‌ ಆದ ಮರುಗಳಿಗೆಯೇ ಈ ಖಾತರಿಯು ರದ್ದಾಗಲಿದೆ. ರೈತರು ತಮ್ಮ ಉತ್ಪನ್ನಗಳನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು ಎಂದು ಪ್ರಧಾನಿ ಹೇಳುತ್ತಿರುವುದು ಎರಡನೆಯ ಸುಳ್ಳು. ಖಾಸಗಿ ಕೈಗಾರಿಕೋದ್ಯಮಿಗಳು ಉತ್ತಮ ಬೆಲೆ ಕೊಡುತ್ತಾರೆ ಎಂಬುದು ಮೂರನೆಯ ಸುಳ್ಳು. ಈಗಲೂ, ವ್ಯಾಪಾರಿಗಳು ಕೃಷಿ ಉತ್ಪನ್ನ ಮಾರುಕಟ್ಟೆಗೆ ಬಂದು ಎಂಎಸ್‌ಪಿಯಲ್ಲಿ ಉತ್ಪನ್ನ ಖರೀದಿಸಬಹುದು. ಹೀಗಿರುವಾಗ, ಎಪಿಎಂಸಿಯ ಪ್ರಯೋಜನಗಳು ಇಲ್ಲದ ಖಾಸಗಿ ಮಳಿಗೆಗಳಿಗೆ ರೈತರು ಏಕೆ ಹೋಗಬೇಕು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT