ಶನಿವಾರ, ಜುಲೈ 2, 2022
20 °C
ಮಳೆಕಾಡು ನಾಶವಾದಂತೆಲ್ಲ ಹೆಚ್ಚುತ್ತಿವೆ ಮಂಗನಕಾಯಿಲೆಯಂಥ ಪ್ರಾಣಿಜನ್ಯ ರೋಗಗಳು!

ವಿಶ್ಲೇಷಣೆ: ಮಲೆನಾಡಿನಲ್ಲಿ ಮರ್ಕಟ ನರ್ತನ

ಕೇಶವ ಎಚ್. ಕೊರ್ಸೆ Updated:

ಅಕ್ಷರ ಗಾತ್ರ : | |

ಚೀನಾದಲ್ಲಿ ಪತ್ತೆಯಾಗಿರುವ ಕೊರೊನಾ ವೈರಸ್ಸಿನಿಂದಾಗಿ (2019-nCoV), ಸಾಮಾನ್ಯ ನೆಗಡಿ–ಜ್ವರವೂ ಸಾವಿಗೆ ದಾರಿಯಾಗುತ್ತಿರುವುದನ್ನು ಕಂಡು ಜಗವೀಗ ಬೆಚ್ಚಿ ಕುಳಿತಿದೆ. ಆಹಾರಕ್ಕಾಗಿ ಸಂಸ್ಕರಿಸಿದ ಸಮುದ್ರಜೀವಿಗಳಿಂದಲೇ ಇದು ಬಂದಿರಬಹುದೆಂಬುದು ವಿಜ್ಞಾನಿಗಳ ತರ್ಕ. ಪ್ರಾಣಿಲೋಕದ ರೋಗಾಣುಗಳು ಮನುಷ್ಯನಿಗೆ ಬಂದೆರಗುವುದಕ್ಕೆ ತಾಜಾ ಉದಾಹರಣೆ ಇದು. ಮಲೆನಾಡಿನ ತೀರ್ಥಹಳ್ಳಿಯಲ್ಲಿ ಇತ್ತೀಚೆಗಷ್ಟೇ ಮತ್ತೊಬ್ಬರನ್ನು ಬಲಿ ತೆಗೆದುಕೊಂಡ ಮಂಗನಕಾಯಿಲೆಯೂ ಅಂಥದ್ದೊಂದು ಪ್ರಾಣಿಜನ್ಯ ವೈರಸ್ ಕಾಯಿಲೆಯೇ.

ಮಲೆನಾಡು ಹಾಗೂ ಕರಾವಳಿಯ ಜನರಿಗೆ, ಚಳಿಗಾಲ ಬಂತೆಂದರೆ ಈ ರೋಗದ ಭಯ ಇದ್ದದ್ದೇ. ಕಳೆದ ಬೇಸಿಗೆಯಲ್ಲಂತೂ ಶಿವಮೊಗ್ಗ ಜಿಲ್ಲೆಯ ಲಿಂಗನಮಕ್ಕಿ ಜಲಾಶಯದಂಚಿನ ಅರಲಗೋಡು ಗ್ರಾಮದಲ್ಲಿ ಇದು ತೀಕ್ಷ್ಣವಾಗಿತ್ತು. ಈ ಪಂಚಾಯಿತಿಯ ಬಹುಪಾಲು ಜನರನ್ನು ಈ ವೈರಸ್ ಒಮ್ಮೆಲೇ ಬಾಧಿಸಿತು. ಅಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಸತತವಾಗಿ ಚಿಕಿತ್ಸೆ ನೀಡಿದರಾದರೂ ತೀವ್ರ ಬಾಧೆಗೆ ಒಳಗಾದ ನೂರಾರು ರೋಗಿಗಳು ಮಣಿಪಾಲದ ಆಸ್ಪತ್ರೆ ಸೇರಬೇಕಾಯಿತು. ಹಲವರು ತಾತ್ಕಾಲಿಕ ಶಿಬಿರಗಳಲ್ಲಿ ದಿನವೆಣಿಸಬೇಕಾಯಿತು. ಉಳಿದವರು ಜೀವಭಯದಿಂದಾಗಿ ಭತ್ತ, ಅಡಿಕೆ, ತೆಂಗು ತುಂಬಿದ್ದ ಜಮೀನನ್ನು ಬಿಟ್ಟು, ಪ್ರೀತಿಯಿಂದ ಸಾಕಿದ ದನಕರುಗಳನ್ನೂ ತೊರೆದು, ಅಸಹಾಯಕರಾಗಿ ಊರು ತೊರೆದರು! ಎಳೆಯ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು, ದುಡಿಯುವ ಯುವಕರು, ವಯೋವೃದ್ಧರು– ಎಲ್ಲರನ್ನೂ ಆಕ್ರಮಿಸಿತು ಈ ರೋಗ.

ಆರೋಗ್ಯ ಇಲಾಖೆಯು ಲಸಿಕೆ ಹಾಕಿ, ವ್ಯಾಪಕ ಜಾಗರೂಕತೆ ವಹಿಸಿದ ಹೊರತಾಗಿಯೂ ಮಲೆನಾಡಿನಲ್ಲಿ ಘಟಿಸಿದ ಮಾನವ ದುರಂತವಿದು. ನಾಲ್ಕು ತಿಂಗಳ ಅವಧಿಯಲ್ಲಿ ಕನಿಷ್ಠ 20 ಜನರು ಸಾವನ್ನಪ್ಪಿದರು. ಈ ಭಾರಿ ಆಘಾತದಿಂದ ಚೇತರಿಸಿಕೊಳ್ಳುವ ಮುನ್ನವೇ, ಇದೀಗ ಈ ರೋಗ ಪುನಃ ಅಲ್ಲಿ ತೀವ್ರವಾಗುತ್ತಿದೆ! ಆರ್ಥಿಕವಾಗಿ ಹಾಗೂ ಮಾನಸಿಕವಾಗಿ ಕುಸಿದುಹೋಗಿರುವ ಇಲ್ಲಿನ ನೂರಾರು ಕುಟುಂಬಗಳಿಗೆ ಕನಿಷ್ಠ ಹಣಕಾಸಿನ ನೆರವನ್ನಾದರೂ ಸರ್ಕಾರ ನೀಡಬೇಕಿದೆ.

ಫ್ಲಾವಿವೈರಸ್ ಪ್ರಭೇದದ ವೈರಸ್, ಮಂಗವನ್ನು ಸಾಯಿಸುವ ರೋಗವೇ ಮಂಗನಕಾಯಿಲೆ. ಕಾಡಿನಲ್ಲಿ ಇದ್ದಕ್ಕಿದ್ದಂತೆ ಮಂಗಗಳು ಸಾಯತೊಡಗಿದರೆ ಈ ರೋಗ ಬಂತೆಂದು ಲೆಕ್ಕ. ರೋಗಪೀಡಿತ ಮಂಗಗಳನ್ನು ಕಚ್ಚುವ ಹೀಮೋಫೈಸಾಲಿಸ್ ಸ್ಪಿನಿಗೆರಾ ಎಂಬ ಉಣ್ಣೆಹುಳು ಈ ರೋಗಾಣುವನ್ನು ಪಸರಿಸುವ ಮಾಧ್ಯಮ. ಕಾಡಿಗೆ ಮೇಯಲು ಬಂದ ದನಗಳ ಮೈಯೇರಿ ಎಲ್ಲೆಡೆ ಹರಡುವ ಈ ಉಣ್ಣೆಹುಳು, ಸಂಪರ್ಕಕ್ಕೆ ಬಂದ ಮನುಷ್ಯರಿಗೂ ರೋಗ ತರುತ್ತದೆ. ಆಕಳು- ಎಮ್ಮೆಯಲ್ಲಿರುವ ರೋಗನಿರೋಧಕ ಶಕ್ತಿ ಮಾನವನಿಗೆ ಇರದಿರುವುದರಿಂದ, ಆಂತರಿಕ ರಕ್ತಸ್ರಾವವಾಗಿ ಮಂಗನಕಾಯಿಲೆ ಆವರಿಸುತ್ತದೆ. ವನವಾಸಿಗಳು, ಕಾಡುಉತ್ಪನ್ನ ಸಂಗ್ರಹಿಸುವ ರೈತರು ಹಾಗೂ ಕೂಲಿಕಾರರಿಗೆ ಈ ಉಣ್ಣೆಹುಳು ಕಚ್ಚುವ ಸಾಧ್ಯತೆ ಹೆಚ್ಚು. ಪೋಷಕಾಂಶ ಕೊರತೆಯುಳ್ಳವರು ಹಾಗೂ ನಿಶ್ಶಕ್ತಿಯುಳ್ಳವರಂತೂ ಸುಲಭವಾಗಿ ಇದಕ್ಕೆ ತುತ್ತಾಗುತ್ತಾರೆ. ಸಹ್ಯಾದ್ರಿಯ ಕಾಡಿನ ಬಡಜನರ ಗೋಳಿದು.

ಶಿವಮೊಗ್ಗ ಜಿಲ್ಲೆಯ ಕ್ಯಾಸನೂರಿನಲ್ಲಿ ಮಂಗನಕಾಯಿಲೆ ಮೊದಲು ಕಾಣಿಸಿಕೊಂಡು ಅರವತ್ತು ವರ್ಷಗಳೇ ಕಳೆದಿವೆ. ಆನಂತರದಲ್ಲಿ ಮಲೆನಾಡು ಹಾಗೂ ಕರಾವಳಿಯ ಬಹುತೇಕ ಜಿಲ್ಲೆಗಳಿಗೆ ಅದು ವ್ಯಾಪಿಸಿತು. ಅರ್ಧ ಶತಮಾನದಿಂದ ಶಿವಮೊಗ್ಗವೂ ಸೇರಿದಂತೆ ಪಶ್ಚಿಮಘಟ್ಟದಲ್ಲಿ ಮಳೆಕಾಡು ತೀವ್ರವಾಗಿ ನಾಶವಾಗಿದ್ದೇ ಈ ವೈರಸ್ ಕ್ರಿಯಾಶೀಲವಾಗಲು ಕಾರಣವೆಂದು ಅಧ್ಯಯನಗಳು ದೃಢಪಡಿಸಿವೆ. ಅಣೆಕಟ್ಟು, ನೆಡುತೋಪು, ಗಣಿಗಾರಿಕೆ, ಕೃಷಿ ವಿಸ್ತರಣೆ, ಅಭಿವೃದ್ಧಿ ಯೋಜನೆಗಳು, ವ್ಯಾಪಕವಾದ ಅರಣ್ಯ ಅತಿಕ್ರಮಣ- ಇವೆಲ್ಲವುಗಳಿಂದಾಗಿ ದಟ್ಟ ನಿತ್ಯಹರಿದ್ವರ್ಣ ಕಾಡು ನಾಶವಾಯಿತಷ್ಟೆ. ಜೀವವೈವಿಧ್ಯಭರಿತ ಈ ಸಂಕೀರ್ಣ ಪರಿಸರದಲ್ಲಿ ಹುದುಗಿದ್ದ ಅದೆಷ್ಟೋ ನೈಸರ್ಗಿಕ ಚಕ್ರೀಯ ವ್ಯವಸ್ಥೆ ಹಾಗೂ ಆಹಾರ ಸರಪಣಿಗಳು ತುಂಡುತುಂಡಾದವು. ಬ್ಯಾಕ್ಟೀರಿಯಾ, ವೈರಸ್ ಸೇರಿದಂತೆ ಕಾಡಿನಂಗಳದ ಅಸಂಖ್ಯ ಸೂಕ್ಷ್ಮಾಣುಜೀವಿಗಳ ಜೀವನಪಥ ಬದಲಾಯಿತು.

ಸಾಮಾನ್ಯವಾಗಿ ಸೂಕ್ಷ್ಮಾಣುಜೀವಿಯೊಂದು ನಿರ್ದಿಷ್ಟ ಜೀವಪ್ರಭೇದಗಳಲ್ಲಿ ಮಾತ್ರ ರೋಗ ತರುತ್ತದೆ. ಆದರೆ, ಜೀವವಿಕಾಸದಲ್ಲಿ ಈವರೆಗೆ ಪರಿಸರದಲ್ಲಿ ಕಾಣದಿದ್ದ ಈ ಹಠಾತ್ ವಿಪ್ಲವಗಳಿಂದಾಗಿ, ಪ್ರಾಣಿಗಳಲ್ಲಿನ ಕೆಲವು ಸೂಕ್ಷ್ಮಾಣುಜೀವಿಗಳು ಒಮ್ಮೆಲೇ ಮನುಷ್ಯನನ್ನೂ ಆಕ್ರಮಿಸುವ ಸಾಧ್ಯತೆಗಳನ್ನು ಜಗತ್ತಿನ ಉಷ್ಣವಲಯದ ಕಾಡುಗಳ ಹಲವೆಡೆ ವಿಜ್ಞಾನಿಗಳು ಗುರುತಿಸಿದ್ದಾರೆ. ಪ್ರಾಣಿಮೂಲದ ರೋಗಾಣುಗಳು ಮನುಷ್ಯನಿಗೆ ತರುವ ರೋಗಗಳಿಗೆ ಝೂನೋಸಸ್ ಕಾಯಿಲೆಗಳೆಂದು ಹೆಸರು. ಎಬೋಲಾ, ಲೆಶ್ಮಾನಿಯಾಸಿಸ್, ಈಗಿನ ಕೊರೊನಾ ವೈರಸ್ ಮತ್ತು ಈ ಮಂಗನಕಾಯಿಲೆ- ಎಲ್ಲವೂ ಇಂಥ ರೋಗಗಳೆ.  ಎಲ್ಲ ವೈರಸ್ ಕಾಯಿಲೆಗಳಂತೆ ಮಂಗನಕಾಯಿಲೆಗೂ ಔಷಧಿಯಿಲ್ಲ. ರೋಗ ಬರದಂತೆ ಲಸಿಕೆ ಹಾಕುವುದೊಂದೇ ದಾರಿ. ತ್ವರಿತವಾಗಿ ವಂಶವಾಹಿನಿ ಬದಲಿಸುವ ವೈರಸ್ ಕೆಲವೊಮ್ಮೆ ಲಸಿಕೆಗೂ ಬಗ್ಗುವುದಿಲ್ಲ. ಇನ್ನುಳಿದಂತೆ, ಉಣ್ಣೆಹುಳು ನಿರೋಧಕ ತೈಲಗಳನ್ನು ಹಚ್ಚಿಕೊಂಡು, ಅವು ಕಚ್ಚದಂತೆ ಕಾಳಜಿ ವಹಿಸುವುದೇ ಜನರ ಮುಂದಿರುವ ಆಯ್ಕೆ. ಹೀಗಾಗಿ, ಕೇರಳದಿಂದ ಮಹಾರಾಷ್ಟ್ರದವರೆಗಿನ ಸಹ್ಯಾದ್ರಿಯ ವನವಾಸಿಗರನ್ನು ಕಾಡುತ್ತಿರುವ ಈ ರೋಗಕ್ಕೆ ಮದ್ದು ಅಭಿವೃದ್ಧಿಪಡಿಸಲೇಬೇಕಿದೆ. ಸೀಮಿತ ಪ್ರದೇಶದಲ್ಲಿರುವ ಈ ರೋಗದ ಕುರಿತು ಖಾಸಗಿ ಕ್ಷೇತ್ರವು ಆಸಕ್ತಿ ವಹಿಸುವ ಸಾಧ್ಯತೆ ಇರದಿರುವುದರಿಂದ, ಸರ್ಕಾರವೇ ಇದನ್ನು ಕೈಗೆತ್ತಿಕೊಳ್ಳಬೇಕಿದೆ.

ಹಾಗೆಂದು ಇದು ಪ್ರಯೋಗಾಲಯದಲ್ಲಿ ಮಾಡಿ ಮುಗಿಸಬಲ್ಲ ಸರಳ ಸಂಶೋಧನೆಯಲ್ಲ. ವೈರಾಣುವಿನ ಜೀವನಚಕ್ರದ ವೈವಿಧ್ಯಮಯ ಸ್ವರೂಪ ಹಾಗೂ ಅದರ ಕಾಯಂ ನೆಲೆಗಳ ಕುರಿತು ಇನ್ನೂ ಅರಿತುಕೊಳ್ಳಬೇಕಾಗಿದೆ. ಮಂಗನ ಹೊರತಾಗಿ, ಹಂದಿ, ಮುಳ್ಳುಹಂದಿ, ಅಳಿಲು, ಹೆಗ್ಗಣದಂಥವೂ ಇದಕ್ಕೆ ಆಶ್ರಯ ಕೊಟ್ಟಿರಬಹುದು. ಮಲೆನಾಡನ್ನು ಆಕ್ರಮಿಸಿರುವ ಕ್ರೋಮೋಲಿನಾದಂಥ ಕಳೆಗಳು ಉಣ್ಣೆಹುಳುಗಳ ವೃದ್ಧಿಯಲ್ಲಿ ವಹಿಸುತ್ತಿರುವ ಪಾತ್ರವನ್ನೂ ಅರ್ಥಮಾಡಿಕೊಳ್ಳಬೇಕಿದೆ. ಇನ್ನುಳಿದ ರೋಗವಾಹಕಗಳಿವೆಯೇ ಎಂದೂ ಪರಿಶೀಲಿಸಬೇಕಾಗಿದೆ. ಉಳಿದ ಜೀವಸಂಕುಲ, ಮಣ್ಣು, ನೀರು, ಹವಾಮಾನ- ಇವೆಲ್ಲ ಈ ವೈರಸ್ಸನ್ನು ಪ್ರಭಾವಿಸುವ ಪರಿಯನ್ನು ಗ್ರಹಿಸಬೇಕಾಗಿದೆ. ಹೀಗಾಗಿ, ಆಳವಾದ ಅಂತರ್‌ಶಿಸ್ತೀಯ ಸಂಶೋಧನೆಯನ್ನು ಬೇಡುವ ಸವಾಲಿದು. ವೈದ್ಯಕೀಯ ಪರಿಣತರ ಜೊತೆ ವನ್ಯಜೀವಿಶಾಸ್ತ್ರಜ್ಞರು, ಸಾಂಕ್ರಾಮಿಕ ರೋಗತಜ್ಞರು, ಪಶುವೈದ್ಯರು, ಪರಿಸರಶಾಸ್ತ್ರಜ್ಞರೂ ಜೊತೆಯಾಗಬೇಕಾಗಿದೆ. ರೋಗಚಕ್ರದ ಪಾರಿಸರಿಕ ಹಾಗೂ ಸಾಮಾಜಿಕ ಆಯಾಮಗಳು ಅರ್ಥವಾದರೆ ಮಾತ್ರ, ಮದ್ದು ಹುಡುಕುವ ಕಾರ್ಯ ಸುಲಭವಾಗಬಹುದು ಅಲ್ಲವೇ?

ಇದೀಗ, ಇಂಗ್ಲೆಂಡಿನ ವೈದ್ಯಕೀಯ ಸಂಶೋಧನಾ ಪರಿಷತ್ ಪ್ರಾಯೋಜಿಸಿರುವ ಸಂಶೋಧನೆಯನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ (ICMR), ರಾಜ್ಯ ಆರೋಗ್ಯ ಇಲಾಖೆಯ ಜೊತೆಯಾಗಿ ಕೈಗೊಂಡಿದೆ. ಅವರ ತಜ್ಞತೆ ಹಾಗೂ ಸಂಶೋಧನೆಯ ಫಲಶ್ರುತಿಯನ್ನೂ ಒಳಗೊಂಡು ಸಮಗ್ರ ಹಾಗೂ ಪಾರದರ್ಶಕ ಸಂಶೋಧನಾ ಯೋಜನೆಯೊಂದಕ್ಕೆ ಸರ್ಕಾರ ಮುಂದಾಗಲೇಬೇಕಿದೆ. ಶಿವಮೊಗ್ಗದಲ್ಲಿರುವ ‘ವೈರಾಣು ಪತ್ತೆ ಪ್ರಯೋಗಾಲಯ’ವು ಪಿಸಿಆರ್ ಹಾಗೂ ಎಲಿಸಾ ತಂತ್ರಜ್ಞಾನಗಳನ್ನು ಬಳಸಿಕೊಂಡು ರೋಗಾಣು ಪತ್ತೆ ಹಚ್ಚುವ ಸೇವೆಯೊಂದಿಗೆ ರೋಗಿಗಳ ಸಹಾಯಕ್ಕೆ ಬಂದೊದಗಿದೆ. ಅದನ್ನು ಸಂಶೋಧನೆಗೂ ಬಳಸಿಕೊಳ್ಳುವಂತೆ ಮೇಲ್ದರ್ಜೆಗೇರಿಸುವ ಅಗತ್ಯವೂ ಇದೆ.

ನಿಸರ್ಗನಾಶದ ಹೆಜ್ಜೆಗಳೆಲ್ಲವೂ ಮಾನವ ದುರಂತದಲ್ಲೇ ಕೊನೆಗೊಳ್ಳುತ್ತವೆಂದು ಸಾರುತ್ತಿದೆ ಮಂಗನಕಾಯಿಲೆಯ ಮರ್ಕಟನರ್ತನ. ಬೇಸಿಗೆಯ ಮುನ್ನವೇ ಕಾಲಿಟ್ಟಿರುವ ಈ ರೋಗದಿಂದ ಬಳಲುತ್ತಿರುವವರಿಗೆ ಆಸರೆಗೋಲಾಗುತ್ತಿರುವ ಸಮುದಾಯ ಹಾಗೂ ಪರಿಸರ ಕಾರ್ಯಕರ್ತರ ಪ್ರಯತ್ನಗಳಿಗೆ, ಸರ್ಕಾರದ ಆಸರೆಯ ಕೈ ಕೂಡ ಜೊತೆಯಾಗಬೇಕಿದೆ.

ಲೇಖಕ: ನಿರ್ದೇಶಕ, ಸಂರಕ್ಷಣಾ ಜೀವಶಾಸ್ತ್ರ ಮತ್ತು ಸುಸ್ಥಿರ ಅಭಿವೃದ್ಧಿ ಅಧ್ಯಯನ ಕೇಂದ್ರ, ಶಿರಸಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು