ಶುಕ್ರವಾರ, ಜುಲೈ 30, 2021
28 °C
ರೋಗವನ್ನು ರಾಜಕೀಯ ಅಸ್ತ್ರವಾಗಿ ಪ್ರಯೋಗಿಸಿದ ನಿದರ್ಶನಗಳು ಇತಿಹಾಸದಲ್ಲಿ ಸಿಗುತ್ತವೆ

ವಿಶ್ಲೇಷಣೆ | ಸಾಂಕ್ರಾಮಿಕ ರೋಗ ಮತ್ತು ಇತಿಹಾಸದ ಪಲ್ಲಟ

ಪ್ರೊ. ಮುಜಾಫ್ಫರ್‌ ಅಸ್ಸಾದಿ Updated:

ಅಕ್ಷರ ಗಾತ್ರ : | |

ಜಗತ್ತಿನಾದ್ಯಂತ ವೇಗವಾಗಿ ಹರಡುತ್ತಿರುವ ಕೊರೊನಾ ವೈರಸ್ ಕುರಿತು ಜಾಲತಾಣವೊಂದರಲ್ಲಿ ಕೆಲವು ದಿನಗಳ ಹಿಂದೆ ವಿಚಿತ್ರ ಕಥನವೊಂದು ಹರಿದಾಡುತ್ತಿತ್ತು. ಇದನ್ನು ಬರೆದವನು, ಚೀನಾದ ಮಿಲಿಟರಿ ಗುಪ್ತಚರನೆಂದು ಹೇಳಿಕೊಳ್ಳುವ ವ್ಯಕ್ತಿ. ಕಥನದ ಸಾರಾಂಶವಿಷ್ಟೇ: ರಾಜಕೀಯ ಕಾರಣಕ್ಕಾಗಿ ಈ ವೈರಸ್‌ ಅನ್ನು ಚೀನಾ ಸೃಷ್ಟಿಸಬೇಕಾಗಿತ್ತು. ಹಾಂಗ್‌ಕಾಂಗ್‍ನಲ್ಲಿ ಪ್ರಜಾಪ್ರಭುತ್ವ ಪರ ಹೋರಾಟಗಳನ್ನು ಹತ್ತಿಕ್ಕಲು ಚೀನಾಕ್ಕೆ ಒಂದು ಅಸ್ತ್ರ ಬೇಕಿತ್ತು. ಪ್ರಯೋಗಶಾಲೆಯಲ್ಲಿ ಸಂಶೋಧಿಸಿದ ವೈರಸ್‌ ಅನ್ನು ಪ್ರಥಮ ಬಾರಿಗೆ ಉಪಯೋಗಿಸಿದ್ದು ಉಯಿಗರ್‌ ಪ್ರತ್ಯೇಕತಾವಾದಿಗಳ ಮೇಲೆ. ಪ್ರಯೋಗದ ಪರಿಣಾಮ ತೀರಾ ಭೀಕರವಾಗಿದ್ದ ಕಾರಣ, ಈ ಪ್ರಯೋಗವನ್ನು ಅದು ಹಾಂಗ್‍ಕಾಂಗ್ ಪ್ರತಿಭಟನಕಾರರ ಮೇಲೆ ಪ್ರಯೋಗಿಸಲಿಲ್ಲ. ಮುಂದೆ ವುಹಾನ್ ಪ್ರಾಣಿ ಸಂಗ್ರಹಾಲಯದ ಬಳಿ ನಡೆದದ್ದು ಸಿನಿಮೀಯ ರೀತಿಯ ಚಕಮಕಿ. ಈ ವೈರಸ್‍ನ ಸಂಶೋಧಕ ಮತ್ತು ಚೀನಾ ಅಧಿಕಾರಿಗಳ ನಡುವಿನ ಈ ಚಕಮಕಿಯಲ್ಲಿ, ಬಾಟಲಿಯಲ್ಲಿದ್ದ ವೈರಸ್ ಹೊರಬೀಳುತ್ತದೆ. ಇದು, ಒಂದು ಸಾಂಕ್ರಾಮಿಕವಾಗಿ ಕೊರೊನಾದ ಹೆಸರಿನಲ್ಲಿ ಹರಡುತ್ತದೆ. ‘ವಾಟ್ಸ್‌ಆ್ಯಪ್‌‌ ವಿಶ್ವವಿದ್ಯಾಲಯ’ದ ಇಂತಹ ಸಂಶೋಧನೆಗಳನ್ನು ಒರೆಗೆ ಹಚ್ಚದೆ ನಾವು ನಂಬಬೇಕಾಗಿಲ್ಲ ಮತ್ತು ಒಪ್ಪಬೇಕಾಗಿಲ್ಲ.

ಅದಿರಲಿ. ಆದರೆ, ರೋಗವನ್ನು ಒಂದು ರಾಜಕೀಯ ಅಸ್ತ್ರವಾಗಿ, ಯಜಮಾನಿಕೆಯ ಸಾಧನವಾಗಿ ಜನರ ಮೇಲೆ ಪ್ರಯೋಗಿಸಿದ ಅನೇಕ ನಿದರ್ಶನಗಳು ಇತಿಹಾಸದಲ್ಲಿ ಸಿಗುತ್ತವೆ. ಅಮೆರಿಕವು 1960ರ ದಶಕದಲ್ಲಿ ವಿಯೆಟ್ನಾಂ ಜನರ ಮೇಲೆ ಪ್ರಯೋಗಿಸಿದ್ದ ಏಜೆಂಟ್ ಆರೆಂಜ್, ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ನಾಗಸಾಕಿ ಹಾಗೂ ಹಿರೋಶಿಮಾ ಮೇಲೆ ಹಾಕಿದ ಅಣುಬಾಂಬ್‌ ಇದಕ್ಕೆ ನಿದರ್ಶನ.

ಈ ಸಾಂಕ್ರಾಮಿಕ ರೋಗ–ರಾಜಕೀಯ ಆರಂಭಗೊಳ್ಳುವುದೇ ವಸಾಹತು ರಾಜಕಾರಣದೊಂದಿಗೆ. ಬ್ರಿಟಿಷ್, ಪೋರ್ಚುಗೀಸ್, ಸ್ಪೇನ್, ಡಚ್ ವಸಾಹತುಶಾಹಿಗಳು ಜಗತ್ತನ್ನು ಬರೀ ಯುದ್ಧದಿಂದ, ಸೈನಿಕ ಬಲದಿಂದ ತಮ್ಮ ಅಧೀನಕ್ಕೆ ಪಡೆದಿದ್ದವು ಎಂಬ ವಾದ ಸಂಪೂರ್ಣ ಸತ್ಯವಲ್ಲ. ಯುದ್ಧ ಮತ್ತು ಸೈನಿಕ ಬಲ ಅದರ ಒಂದು ಭಾಗವಷ್ಟೇ. ಇದರಲ್ಲಿ ವಸಾಹತುಶಾಹಿಯು ತನ್ನ ಕಾರ್ಯಸೂಚಿಯಾಗಿ ಅಳವಡಿಸಿದ ವಿವಿಧ ಸಾಂಕ್ರಾಮಿಕ ರೋಗಗಳು, ಬಹುಮುಖ್ಯವಾಗಿ ದೇಶಗಳ ಪರಾಧೀನತೆಗೆ ಕಾರಣವಾದವು. ಸಾಂಕ್ರಾಮಿಕ ರೋಗಗಳು ರಾಜಕೀಯ ರೋಗಗಳಾದವು. ಅಮೆರಿಕವು ಹೊಸ ಜಗತ್ತಿಗೆ ಮತ್ತು ಕಗ್ಗತ್ತಲ ಖಂಡ ಆಫ್ರಿಕಾಕ್ಕೆ ಉಡುಗೊರೆಯಾಗಿ ನೀಡಿದ್ದು ತನ್ನ ಖಂಡದ ರೋಗಗಳನ್ನು ಮಾತ್ರ– ಸಿಡುಬು, ಕಾಲರಾ, ಪ್ಲೇಗ್, ಮಲೇರಿಯಾ ಇತ್ಯಾದಿ–ಇವು ವಸಾಹತುಗಳು ಅಭಿವೃದ್ಧಿ ಕಾಣದೇ ಇರುವುದಕ್ಕೆ, ಅವುಗಳ ಪರಾಧೀನತೆಗೆ ಹಾಗೂ ಲಕ್ಷಾಂತರ ಜನರ ಸಾವು-ನೋವಿಗೆ ಕಾರಣವಾದವು.

1492ರಿಂದ ವಸಾಹತುಶಾಹಿಯ ಇತಿಹಾಸ ಆರಂಭಗೊಳ್ಳುತ್ತದೆ. ಸ್ಪೇನ್‍ನ ರಾಣಿಯು ಹೊಸ ಜಗತ್ತಿನ ಅನ್ವೇಷಣೆಗಾಗಿ ಕೊಲಂಬಸ್‍ಗೆ ಸನ್ನದು ನೀಡುವುದರ ಹಿಂದೆ, ಧರ್ಮದ ವಿಸ್ತರಣೆ ಮತ್ತು ವ್ಯಾಪಾರದ ಹೊರತಾಗಿ ಮತ್ತೊಂದು ಬಲವಾದ ಕಾರಣವಿತ್ತು: ಸ್ಪೇನ್‍ನಲ್ಲಿ ಮೂರ್ಸ್ (ಮುಸ್ಲಿಂ) ಆಳ್ವಿಕೆ ಕೊನೆಗೊಂಡ ಸಂತೋಷದ ಉಡುಗೊರೆಯಾಗಿ ಆಕೆ ಸನ್ನದನ್ನು ನೀಡಿದಳು. ಕೊಲಂಬಸ್ ತನ್ನ ಎರಡನೇ ಪ್ರಯಾಣದ ಸಂದರ್ಭದಲ್ಲಿಯೇ ಕೆಲವು ಭೀಕರವಾದ ಸಾಂಕ್ರಾಮಿಕ ರೋಗಗಳನ್ನು ಹೊತ್ತು ತಂದಿದ್ದ ಎಂಬ ಪ್ರತೀತಿ ಇದೆ.

ಹೊಸ ಜಗತ್ತಿನ ಅನ್ವೇಷಣೆಯ ಸಂದರ್ಭದಲ್ಲಿ ಮೂಲನಿವಾಸಿಗಳ ಸಾಮ್ರಾಜ್ಯವನ್ನು ನಾಶ ಮಾಡಲು ಮತ್ತು ಪರಾಧೀನತೆಗೆ ಒಳಪಡಿಸಲು ಸ್ಪ್ಯಾನಿಷರು 1520ರಲ್ಲಿಯೇ ಸಿಡುಬು ರೋಗವನ್ನು ಸಾಧನವಾಗಿ ಉಪಯೋಗಿಸಿದರು. ಇದರ ಫಲಶ್ರುತಿ ಎಂಬಂತೆ, ಮೂಲನಿವಾಸಿಗಳ ಸಾಮ್ರಾಜ್ಯಗಳಾದ ಆಝ್ಟೆಕ್ ಮತ್ತು ಇಂಕಾ ಕೆಲವೇ ವರ್ಷಗಳಲ್ಲಿ ಸಂಪೂರ್ಣವಾಗಿ ನಾಶವಾದವು. ಬ್ರಿಟಿಷ್‌ ನಾವಿಕ ಕ್ಯಾಪ್ಟನ್ ಕುಕ್ 1779ರಲ್ಲಿ ಹವಾಯಿ ಪ್ರಾಂತ್ಯಕ್ಕೆ ಟೈಫಾಯ್ಡ್‌ ರೋಗ ಹರಡಲು ಕಾರಣನಾಗಿದ್ದ. ಮೆಕ್ಸಿಕೊದಂತಹ ದೇಶದ ಮೂಲನಿವಾಸಿಗಳ ಸಂಖ್ಯೆ 25 ಲಕ್ಷದಿಂದ ಬರೀ ಒಂದೂವರೆ ಲಕ್ಷಕ್ಕೆ ಇಳಿಯಿತು. ಫ್ಲಾರಿಡಾ ರಾಜ್ಯದಲ್ಲಿ ಏಳು ಲಕ್ಷಕ್ಕೂ ಹೆಚ್ಚಿದ್ದ ಮೂಲನಿವಾಸಿಗಳ ಸಂಖ್ಯೆ ಎರಡು ಸಾವಿರಕ್ಕೆ ಇಳಿಯಿತು.

ಸಿಡುಬು ರೋಗವನ್ನು ಬ್ರಿಟಿಷ್ ಮತ್ತು ಇನ್ನಿತರ ಐರೋಪ್ಯ ವಸಾಹತುಶಾಹಿಗಳು ರಾಜಕೀಯ ಸಾಧನವಾಗಿ ಉಪಯೋಗಿಸಿದವು. 1518ರಲ್ಲಿ ಹುಟ್ಟಿದ ಈ ರೋಗ, ನಂತರದ ವರ್ಷಗಳಲ್ಲಿ ಒಂದು ದೊಡ್ಡ ಸಾಂಕ್ರಾಮಿಕ ರೋಗವಾಗಿ ಪರಿವರ್ತಿತವಾಯಿತು. ಮಸಾಚುಸೆಟ್ಸ್‌ ರಾಜ್ಯವೊಂದರಲ್ಲಿಯೇ ಲಕ್ಷಗಟ್ಟಲೆ ಮೂಲನಿವಾಸಿಗಳು ನಾಶವಾದರು.

ಅಮೆರಿಕದ ಮೂಲನಿವಾಸಿಗಳನ್ನು ಅಧೀನಕ್ಕೆ ಒಳಪಡಿಸಿಕೊಳ್ಳಲು ಬ್ರಿಟಿಷರು ಉಪಯೋಗಿಸಿದ್ದು ಉಡುಗೊರೆಯ ತಂತ್ರ. ಇದರಲ್ಲಿ ಅವರು ನೀಡಿದ್ದು ಪ್ಲೇಗ್‍ಭರಿತ ಹೊದಿಕೆಗಳನ್ನು. ಇದೇ ರೀತಿಯ ತಂತ್ರವನ್ನು ಸ್ಪ‍್ಯಾನಿಷರು ಉಪಯೋಗಿಸಿದ್ದರು ಎಂಬ ಪ್ರತೀತಿ ಇದೆ. ದುರಂತವೆಂದರೆ, ಆಧುನಿಕ ರೋಗಗಳು ಅಮೆರಿಕದ ಮೂಲನಿವಾಸಿಗಳನ್ನು ಈಗಲೂ ಕಾಡುತ್ತಿರುತ್ತವೆ. ತಮ್ಮ ದೇಶ, ನೆಲ, ಜಲ, ಮನೆಗಳನ್ನು ಕಳೆದುಕೊಂಡು ಮೂಲನಿವಾಸಿಗಳು ಸಾಂಸ್ಕೃತಿಕವಾಗಿ, ರಾಜಕೀಯವಾಗಿ ಪರಾಧೀನರಾಗಿರುವುದು ಅಷ್ಟೇ ವಾಸ್ತವ.

ಈ ಸಾಂಕ್ರಾಮಿಕ ರೋಗಗಳು ಹರಡುವ ಸಂದರ್ಭದಲ್ಲಿ ಮೂರು ಅಂಶಗಳನ್ನು ವಸಾಹತು ಕಡೆಗಣಿಸಿತ್ತು: ಮೊದಲನೆಯದಾಗಿ, ಸಾಮ್ರಾಜ್ಯ ವಿಸ್ತರಣೆಯ ದಾಹದ ಎದುರು ಆರೋಗ್ಯ ಮತ್ತು ರೋಗವು ನೈತಿಕತೆಯ ವಿಷಯವಾಗಿರಲಿಲ್ಲ. ಎರಡನೆಯದಾಗಿ, ದೇಸಿ ಗಿಡಮೂಲಿಕೆಗಳನ್ನು ಜ್ಞಾನಪರಂಪರೆಯ ಭಾಗವಾಗಿ ಪರಿಗಣಿಸಲಿಲ್ಲ. ಮೂರನೆಯದಾಗಿ, ಸಾಂಕ್ರಾಮಿಕ ರೋಗಗಳು ಒಂದು ಅಸ್ತ್ರವಾಗಿ ಉಳಿದವೇ ಹೊರತು ವಸಾಹತುನಿರ್ಮಿತ ದುರಂತವಾಗಿರಲಿಲ್ಲ.

ಭಾರತದ ಸಂದರ್ಭದಲ್ಲಿ ವಸಾಹತುಶಾಹಿಯ ನಡವಳಿಕೆಯು ತೀರಾ ಭಿನ್ನವಾಗೇನೂ ಇರಲಿಲ್ಲ. ಆದರೆ, ಅಧೀನತೆಗೆ ಒಳಪಡಿಸಿಕೊಳ್ಳಲು ಅದು ಸಾಂಕ್ರಾಮಿಕ ರೋಗವನ್ನು ನೇರವಾಗಿ ಉಪಯೋಗಿಸಲಿಲ್ಲವಷ್ಟೆ. ಲಕ್ಷಗಟ್ಟಲೆ ಜನರ ಸಾವು ಅಂದಿನ ಭಾರತವನ್ನು ಬಡಕಲು ಮಾಡುತ್ತಾ ಹೋಯಿತು. ಇದರಿಂದಾಗಿ 1896ರ ನಂತರ, ಅದೂ ಬೊಬೊನಿಕ್ ಸಾಂಕ್ರಾಮಿಕ ರೋಗ ಹರಡಲು ಆರಂಭವಾದ ನಂತರ ವಸಾಹತುಶಾಹಿಗೆ ದೊಡ್ಡ ಮಟ್ಟದ ಪ್ರತಿರೋಧವು ಬರಲೇ ಇಲ್ಲ. ವಸಾಹತುಗಳು ಇದಕ್ಕೆ ತಕ್ಕಂತೆ, ವಿಜ್ಞಾನ, ಔಷಧ, ವೈದ್ಯಕೀಯ ಜ್ಞಾನಪರಂಪರೆ ಮುಂತಾದವುಗಳಲ್ಲಿ ಭಾರತವನ್ನು ಪರಾಧೀನತೆಗೆ ಒಳಪಡಿಸುವ ದಿಸೆಯಲ್ಲಿ ಕೆಲಸ ಮಾಡಿದವು. ಇದಕ್ಕೆ ಪೂರಕವೆಂಬಂತೆ, ಕೋಲ್ಕತ್ತದಲ್ಲಿ ವೈದ್ಯಕೀಯ ಕಾಲೇಜನ್ನು ಸ್ಥಾಪಿಸಲಾಯಿತು, ಪ್ಲೇಗ್ ಕಮಿಷನ್ ಅನ್ನು ನೇಮಿಸಲಾಯಿತು.

ವಸಾಹತುಕಾಲದ ಎರಡು ಪ್ರಮುಖ ಸಾಂಕ್ರಾಮಿಕ ರೋಗಗಳೆಂದರೆ ಕಾಲರಾ ಮತ್ತು ಪ್ಲೇಗ್. ಗುಜರಾತ್‍ನ ಕಛ್ ಪ್ರಾಂತ್ಯದಲ್ಲಿ ಆರಂಭಗೊಂಡ ಪ್ಲೇಗ್, ಕೆಲವೇ ವರ್ಷಗಳಲ್ಲಿ ಭಯಂಕರ ಸಾಂಕ್ರಾಮಿಕ ರೋಗದ ರೂಪವನ್ನು ತಾಳಿತು ಮತ್ತು ಮುಂದೆ ಮೈಸೂರು ಒಳಗೊಂಡಂತೆ ಭಾರತದ ಎಲ್ಲ ಪ್ರಾಂತ್ಯಗಳಿಗೂ ಹರಡಿತು. ಕಾಲರಾ ಸಹ ಈ ಅವಧಿಯಲ್ಲಿ ಭಯಂಕರವಾಗಿ ಹರಡಿತ್ತು. ಇವೆರಡರಿಂದಲೇ ಹೆಚ್ಚುಕಡಿಮೆ 35 ಲಕ್ಷ ಜನ ಸತ್ತರು ಎಂಬ ಲೆಕ್ಕಾಚಾರವಿದೆ.

ಆ ಕಾಲದಲ್ಲಿ ಸಾಕಷ್ಟು ಪ್ಲೇಗ್ ದೊಂಬಿಗಳು, ಕಾಲರಾ ದೊಂಬಿಗಳು ನಡೆದಿದ್ದವು. ವಿಚಿತ್ರವೆಂದರೆ, ಪ್ಲೇಗ್ ಭೇದಭಾವವಿಲ್ಲದೆ ಎಲ್ಲ ಸಮುದಾಯಗಳನ್ನು ಒಗ್ಗೂಡಿಸಿತ್ತು. ಇವತ್ತಿನ ಕೊರೊನಾ ನಮ್ಮಲ್ಲಿ ಅಮೂರ್ತವಾದ ಹೆದರಿಕೆಯನ್ನು, ಬದುಕಿನಲ್ಲಿ ತಲ್ಲಣವನ್ನು ಸೃಷ್ಟಿಸಿದೆ. ಅಭಿವೃದ್ಧಿಯನ್ನು ಸ್ತಬ್ಧಗೊಳಿಸಿದೆ, ಸಾಂಕ್ರಾಮಿಕ ರೋಗವನ್ನು ಜಾಗತೀಕರಣಗೊಳಿಸಿದೆ. ಆದರೆ ಈ ಬಹುದೊಡ್ಡ ಬಿಕ್ಕಟ್ಟು, ಸಮುದಾಯಗಳನ್ನು ಒಗ್ಗೂಡಿಸಿದೆಯೇ? ಈ ಪ್ರಶ್ನೆ ನಮ್ಮನ್ನು ಆತ್ಮಾವಲೋಕನಕ್ಕೆ ಹಚ್ಚಬೇಕು. ಇವುಗಳ ನಡುವೆ, ರೋಗ–ರಾಜಕೀಯದಿಂದ ಹುಟ್ಟಿದ ಪರಾಧೀನತೆಯ ಇತಿಹಾಸವನ್ನು ಮರೆಯಬಾರದು. ಇಲ್ಲವಾದರೆ, ಕೊರೊನಾ ಕೂಡ ಯಾವುದೋ ಒಂದು ಬಗೆಯ ಪರಾಧೀನತೆಯ ಪಲ್ಲಟಕ್ಕೆ ದಾರಿ ಮಾಡಿಕೊಡಬಹುದು. ಇಲ್ಲವೇ ರೋಗ–ರಾಜಕೀಯದ ವಿಸ್ತೃತ ರೂಪವಾಗಿ ಹೊರಹೊಮ್ಮಬಹುದು.


ಪ್ರೊ. ಮುಜಾಫ್ಫರ್‌ ಅಸ್ಸಾದಿ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು