ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾಪ್ಟನ್‌ ಗೋಪಿನಾಥ್ ‘ವಿಶ್ಲೇಷಣೆ’| ನಕಲಿ ಸೆಕ್ಯುಲರ್‌ಗಳು, ನಕಲಿ ಹಿಂದೂಗಳು!

ಬಹುತ್ವವನ್ನು ಸಂಭ್ರಮಿಸುವ ಮನಃಸ್ಥಿತಿಯನ್ನು ನಾವು ಮತ್ತೆ ಪಡೆದುಕೊಳ್ಳೋಣ
ಅಕ್ಷರ ಗಾತ್ರ

ಸೆಕ್ಯುಲರ್, ಉದಾರವಾದಿ, ಬುದ್ಧಿಜೀವಿ ಎಂಬ ಆದರ್ಶದ ಪದಗಳನ್ನು ವಿರೂಪಗೊಳಿಸಲಾಗಿದೆ. ಅವುಗಳ ಬದಲಿಗೆ ಸಿಕ್ಯುಲರ್, ಲಿಬ್ಟಾರ್ಡ್‌, ನಗರವಾಸಿ ನಕ್ಸಲ್ ಎಂಬ ಪದಗಳನ್ನು ನಗರವಾಸಿ ಮಧ್ಯಮ ವರ್ಗಕ್ಕೆ ಸೇರಿದ ಹಲವರು ಬೇರೆಯವರನ್ನು ನಿಂದಿಸಲು ಬಳಸುತ್ತಿದ್ದಾರೆ. ಹೀಗೆ ನಿಂದಿಸುವವರನ್ನು ಹಿಂದೂ ಬೂರ್ಜ್ವಾಗಳು ಎನ್ನಬಹುದು. ಆದರೆ ನಾನು ಅವರನ್ನು ‘ನಕಲಿ ಹಿಂದೂ’ಗಳು ಎನ್ನುತ್ತೇನೆ. ಇವರು ಕೇಸರಿ ಧರಿಸುವುದಿಲ್ಲ; ಆದರೆ ಇಂಥವರನ್ನು ದೂರದಿಂದಲೇ ಗುರುತಿಸಬಹುದು. ಮತಾಂತರ ನಡೆಸುವವರಿಗಿಂತಲೂ ಜಿಹಾದಿ ಮುಲ್ಲಾಗಳಿಗಿಂತಲೂ ಇಂದು ನಕಲಿ ಹಿಂದೂಗಳೇ ಹಿಂದೂಧರ್ಮಕ್ಕೆ ದೊಡ್ಡ ಅಪಾಯವೇ? ನಕಲಿ ಹಿಂದೂಗಳಿಂದ ಹಿಂದೂಧರ್ಮ ದಾಳಿಗೆ ತುತ್ತಾಗಿದೆಯೇ? ಆ ಬಗ್ಗೆ ಆಮೇಲೆ ಪರಿಶೀಲಿಸೋಣ. ಅದಕ್ಕೂ ಮೊದಲು ನಕಲಿ ಸೆಕ್ಯುಲರ್‌ಗಳು ಹಾಗೂ ಅವರು ಮಾಡಿರುವ ತಪ್ಪುಗಳ ಮೇಲೊಂದು ನೋಟ.

ಕ್ಯಾಪ್ಟನ್ ಜಿ.ಆರ್. ಗೋಪಿನಾಥ್

ನಕಲಿ ಸೆಕ್ಯುಲರ್‌ಗಳು ನಮ್ಮ ನಡುವೆ ಹಲವರಿದ್ದಾರೆ. ಇಂಥವರನ್ನು ಗುರುತಿಸುವುದು ಕಷ್ಟವಲ್ಲ. ನಕಲಿ ಸೆಕ್ಯುಲರ್‌ಗಳು ತಮ್ಮ ಬುದ್ಧಿವಂತಿಕೆಗಿಂತಲೂ ಹೆಚ್ಚಿನ ನಿಷ್ಠೆಯನ್ನು ಒಂದು ಪಕ್ಷಕ್ಕೆ, ಅದರ ರಾಜಕೀಯಕ್ಕೆ, ಮೃತ ಸಿದ್ಧಾಂತವೊಂದಕ್ಕೆ ತೋರಿದ ಕಾರಣದಿಂದಾಗಿ ಸೆಕ್ಯುಲರ್ ಪದ ಇಂದು ಬೇರೆ ಅರ್ಥ ಧ್ವನಿಸಲಾರಂಭಿಸಿದೆ.
ನಕಲಿ ಸೆಕ್ಯುಲರ್‌ಗಳು ದಲಿತರನ್ನು ಮೇಲೆತ್ತುವುದಾಗಿ ಹೇಳಿದರು. ಆದರೆ ಅವರ ಧಾರ್ಮಿಕ ನಂಬಿಕೆಗಳನ್ನು ಕೇವಲವಾಗಿ ಕಂಡರು. ಅವರು ಕೆಟ್ಟ ಮಾತು ಆಡಿದ್ದು ಬಡವರು ಮತ್ತು ಕೆಳವರ್ಗಗಳಿಗೆ ಸೇರಿದವರ ಸಂಸ್ಕೃತಿ, ಸಂಪ್ರದಾಯಗಳ ಬಗ್ಗೆ ಮಾತ್ರವೇ ಅಲ್ಲ; ಹಿಂದೂಗಳೆಲ್ಲರ ನಂಬಿಕೆಗಳನ್ನೂ ನಿಂದಿಸಿದರು. ಅಲ್ಪಸಂಖ್ಯಾತರ ಹಕ್ಕುಗಳನ್ನು ಎತ್ತಿಹಿಡಿಯುವ ಭರದಲ್ಲಿ ಇಸ್ಲಾಮಿಕ್ ಜಿಹಾದಿಗಳ ಭಯೋತ್ಪಾದನೆಯ ಬಗ್ಗೆ ಕುರುಡಾಗಿದ್ದರು. ಭಯೋತ್ಪಾದಕರ ಕೃತ್ಯಗಳನ್ನು, ರಾಜಕೀಯ ಪಕ್ಷಗಳ ಮತಬ್ಯಾಂಕ್ ರಾಜಕಾರಣವನ್ನು ಖಂಡಿಸಲಿಲ್ಲ. ಚುಟುಕಾಗಿ ಹೇಳಬೇಕೆಂದರೆ ಇವರು ಸೆಕ್ಯುಲರ್ ಮೂಲಭೂತವಾದಿಗಳಾದರು. ಆ ಮೂಲಕ, ಬಹುಸಂಖ್ಯಾತರ ಕಡೆಯಿಂದ ಪ್ರಬಲ ಸಾಮಾಜಿಕ ಪ್ರತಿಕ್ರಿಯೆಗಳು ಬರುವುದಕ್ಕೆ ಭೂಮಿಕೆ ಸಿದ್ಧಪಡಿಸಿದರು.

ನಕಲಿ ಸೆಕ್ಯುಲರ್‌ಗಳು ಇಂದು ಬಹುತೇಕ ಅಪ್ರಸ್ತುತ ರಾಗಿದ್ದಾರೆ. ನೈಜ ಉದಾರವಾದಿಗಳೂ ಸೆಕ್ಯುಲರ್‌ ಕೂಡ ಆಗಿರುವವರು ಇದನ್ನು ಒಪ್ಪುತ್ತಾರೆ. ಇಂಥವರು ಹಲವರಿದ್ದಾರೆ. ನೈಜ ಸೆಕ್ಯುಲರ್‌ಗಳೇ ನಮ್ಮ ಮೌಲ್ಯ, ಸಂಸ್ಕೃತಿ ಮತ್ತು ಸಂಪ್ರದಾಯಗಳ ಟ್ರಸ್ಟಿಗಳು. ಹಾಗೆಯೇ ಅವರು ಬಹುದೊಡ್ಡ ಸುಧಾರಕರು ಕೂಡ. ಈಗ ನಕಲಿ ಹಿಂದೂಗಳ ಬಗ್ಗೆ ಗಮನಹರಿಸೋಣ.

ಹಿಂದೂಧರ್ಮಕ್ಕೆ ಅಪಾಯ ಎದುರಾಗಿರುವುದು ರಾಜಕೀಯ ಪಕ್ಷಗಳು, ನಕಲಿ ಸೆಕ್ಯುಲರ್‌ಗಳು ಅಥವಾ ಮುಸ್ಲಿಮರಿಂದ ಅಲ್ಲ. ಅದಕ್ಕೆ ಅಪಾಯ ಇರುವುದು ಒಳಗಿನಿಂದಲೇ. ಹಿಂದೂಧರ್ಮಕ್ಕೆ ನಮ್ಮ ದೇಶದಲ್ಲಿ ಹಾಗೂ ವಿದೇಶಗಳಲ್ಲಿ ಅಪಾಯ ಇರುವುದು ನಕಲಿ ಹಿಂದೂಗಳಿಂದ.

ಸಮಾಜದ ಸಾಮಾನ್ಯ ಜನ ದ್ವೇಷದ ಕಡೆ ಮುಖ ಮಾಡಿದಾಗ, ಸುಳ್ಳುಗಳನ್ನು ಪ್ರಸಾರ ಮಾಡುತ್ತ ಕುಳಿತಾಗ ನಾಗರಿಕತೆ ಹಾಗೂ ಅದು ಪ್ರತಿನಿಧಿಸುವ ಮೌಲ್ಯಗಳಿಗೆ ಅಪಾಯ ಒದಗುತ್ತದೆ. ವಿವಿಧ ಧರ್ಮಗಳ ನಡುವಿನ ಸಂಘರ್ಷ, ಧಾರ್ಮಿಕ ಪಂಗಡಗಳ ನಡುವಿನ ಯುದ್ಧಕ್ಕೆ ಎರಡು ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸವಿದೆ. ಹೊಸ ಬಗೆಯ ದಡಾರವೊಂದು ಜಗತ್ತಿನ ಹಲವು ಕಡೆ ಜನರ ಮೇಲೆ ದಾಳಿ ನಡೆಸಿದೆ. ಇದು ಭಾರತದಲ್ಲಿ ಹೆಚ್ಚು ಅಪಾಯಕಾರಿಯಾಗಿದೆ. ಇದು ದೇಶದ ಆತ್ಮವನ್ನೇ ನಾಶ ಮಾಡುತ್ತಿದೆ. ಈ ರೋಗವು ಕೊರೊನಾ ವೈರಾಣುವಿಗಿಂತಲೂ ಕೆಟ್ಟದ್ದಾಗಿದೆ. ‘ಮತ ಮತ್ತು ರಾಷ್ಟ್ರೀಯತೆ ಮನುಕುಲವನ್ನು ಕಾಡುವ ದಡಾರ’ ಎಂದು ಐನ್‌ಸ್ಟೀನ್‌ ಮತ್ತು ವಾಲ್ಟರ್ ಹೇಳಿದ್ದರು.

ಕೋಮು ಭಾವನೆ ಕೆರಳಿಸುವ ಹಾಗೂ ವಿಷ ಕಾರುವ ಸಂದೇಶಗಳು ನಮ್ಮನ್ನು ತಲುಪದ ದಿನವೇ ಇಲ್ಲ. ಅವುಗಳನ್ನು ಕಳುಹಿಸಿದವರು ಅಪರಿಚಿತರಾಗಿದ್ದರೆ
ಅದನ್ನು ನಿರ್ಲಕ್ಷಿಸಲಾಗುತ್ತದೆ. ಆದರೆ, ಬಾಲ್ಯದ ಸಹಪಾಠಿಗಳು, ಸಂಬಂಧಿಕರು, ಸ್ನೇಹಿತರು ಅಂತಹ ಸಂದೇಶಗಳನ್ನು ಕಳುಹಿಸಿದರೆ ನಿಮಗೆ ನಿರಾಸೆಯ ಮಡುವಿನಲ್ಲಿ ಬಿದ್ದಂತೆ ಅನ್ನಿಸುತ್ತದೆ.

ಬ್ರಿಟನ್ನಿನ ಹಲವು ನಗರಗಳಲ್ಲಿ ಆಗಿರುವಂತೆಯೇ ಭಾರತದಲ್ಲಿ ಕೂಡ 2050ರ ವೇಳೆಗೆ ಮುಸ್ಲಿಂ ಜನಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿರುತ್ತದೆ, ಆಗ ಹಿಂದೂಗಳು ಅಲ್ಪಸಂಖ್ಯಾತರಾಗುತ್ತಾರೆ, ಹಿಂದೂಗಳು ಎದ್ದುನಿಲ್ಲಬೇಕು ಎಂಬ ವೈರಲ್ ಸಂದೇಶವು ಆಧಾರ ಇಲ್ಲದ್ದು, ಅದು ಕಿಡಿಗೇಡಿತನದ್ದು, ಅಂತಹ ಸಂದೇಶಗಳಲ್ಲಿ ನೀಡಿರುವ ಅಂಕಿ–ಅಂಶಗಳು ತಪ್ಪು ಎಂದು ಅದನ್ನು ಕಳುಹಿಸಿದ ಎನ್‌ಆರ್‌ಐಗೆ ಹೇಳಿದರೆ ಯಾವ ಉತ್ತರವೂ ಬರುವುದಿಲ್ಲ. ‘ಹಿಂದೂಗಳು ಎದ್ದುನಿಲ್ಲಬೇಕು’ ಅಂದರೇನು ಎಂಬ ಪ್ರಶ್ನೆಗೂ ಉತ್ತರ ಸಿಗುವುದಿಲ್ಲ.

ನಾವೆಲ್ಲ ಹಿಂದೆ ಕಾಣುತ್ತಿದ್ದ ಸಂತಸ, ಬೆಚ್ಚಗಿನ ಭಾವ ಅಥವಾ ವಿಶ್ವಾಸ ಈಗ ಮರೆಯಾಗಿದೆ. ಹಿಂದೂಗಳಲ್ಲಿ ಅತ್ಯಂತ ಶ್ರೇಷ್ಠರೆನಿಸಿದ ಶಂಕರಾಚಾರ್ಯ, ಮೀರಾ, ಮಹಾತ್ಮ ಗಾಂಧಿ, ಟ್ಯಾಗೋರ್, ಯೋಗಿ ಅರವಿಂದ, ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ಬಸವಣ್ಣ, ತಿರುವಳ್ಳುವರ್ ಮತ್ತು ಇನ್ನೂ ಅನೇಕರ ಮಾತುಗಳಲ್ಲಿ ಸಮಾನವಾಗಿ ಕಾಣುವ ಅಂಶವೊಂದಿದೆ. ಪ್ರೀತಿ ಮತ್ತು ಅನುಕಂಪದ ಮೂಲಕ ಅವರೆಲ್ಲ ಏಕತೆಯ ಬಗ್ಗೆ ಮಾತನಾಡಿದರು. ರಾಷ್ಟ್ರಕವಿ ಕುವೆಂಪು ಅವರ ವಿಶ್ವಮಾನವ ತತ್ವದ ರೀತಿಯದ್ದು ಅದು. ಹೀಗಿರುವಾಗ, ಅಹಿಂಸೆಯನ್ನೇ ತನ್ನ ಪಥವನ್ನಾಗಿಸಿಕೊಂಡ ದುರ್ಬಲ ದೇಹದ ವೃದ್ಧ ಹಿಂದೂವನ್ನು ಮತಾಂಧ ಹಿಂದೂವೊಬ್ಬ ಗುಂಡಿಕ್ಕಿ ಸಾಯಿಸುವುದನ್ನು ಕಲ್ಪಿಸಿಕೊಳ್ಳುವುದಾದರೂ ಹೇಗೆ? ಐನ್‌ಸ್ಟೀನ್‌ ಈ ವೃದ್ಧ ಹಿಂದೂವನ್ನು ಯೇಸು ಕ್ರಿಸ್ತನಿಗೆ, ಬುದ್ಧನಿಗೆ ಹೋಲಿಸಿದ್ದರು. ಇವರ ಮೇಲೆ ಆ ಮತಾಂಧ ಮೂರು ಗುಂಡು ಹಾರಿಸಿದ. ಜೀವ ಹಾರಿಹೋಯಿತು.

ಮರ್ಯಾದಾ ಪುರುಷೋತ್ತಮ ಶ್ರೀರಾಮ ಇಂದು ಅದೃಶ್ಯವಾಗಿ ಓಡಾಡಿಕೊಂಡಿದ್ದು, ರಾಜಕೀಯ ನಾಯಕನೊಬ್ಬ ರಾಮನ ಹೆಸರಿನಲ್ಲಿ ‘ಗೋಲಿ ಮಾರೋ ಸಾಲೋಂಕೊ’ ಎಂದು ಅರಚಿದ್ದನ್ನು ಕೇಳಿಸಿಕೊಂಡಿದ್ದರೆ, ತಲೆಬಿಸಿ ಮಾಡಿಕೊಂಡು ‘ಹೀಗೆ ಹೇಳುವವರು ಹಿಂದೂಗಳಲ್ಲ; ನಕಲಿ ಹಿಂದೂಗಳು’ ಎನ್ನುತ್ತಿದ್ದ. ರಾಮ ಮಾತ್ರವೇ ಅಲ್ಲ, ರಾವಣ ಕೂಡ ಇದೇ ಅಭಿಪ್ರಾಯ ತಾಳುತ್ತಿದ್ದ. ಹೀಗೆ ಘೋಷಣೆ ಕೂಗುವುದನ್ನೆಲ್ಲ ಮಾನಸಿಕವಾಗಿ ಅಸ್ವಸ್ಥ ವ್ಯಕ್ತಿಗಳ ಕೃತ್ಯ ಎನ್ನಬಹುದು. ಆದರೆ, ಇವರಿಗೆ ಕೆಲವು ಹಿರಿಯರಿಂದ ಸಿಗುವ ಬೆಂಬಲ ಹಾಗೂ ಇನ್ನೊಂದಿಷ್ಟು ಜನ ಇವರ ಘೋಷಣೆಗೆ ದನಿಗೂಡಿಸುವುದನ್ನು ಕಂಡು ಆಘಾತವಾಗುತ್ತದೆ.

ಹಿಂದೂಧರ್ಮ ಅಪಾಯದಲ್ಲಿದೆಯೇ? ನನ್ನ ಪ್ರಕಾರ ಅಂತಹ ಸ್ಥಿತಿ ಇಲ್ಲ. ಮೂರು ಸಾವಿರ ವರ್ಷಗಳಿಂದ ನಡೆದ ದಾಳಿಗಳನ್ನು, ಬಾಹ್ಯ ಪ್ರಭಾವಗಳನ್ನು ಇದು ಎದುರಿಸಿ ನಿಂತಿದೆ. ವೇದಕಾಲದ ಚಾರ್ವಾಕರು ಲೌಕಿಕ ಮಾರ್ಗದವರಾಗಿದ್ದರು. ನಂತರ ಬೌದ್ಧರು ಮತ್ತು ಜೈನರು ವೈದಿಕ ಆಚರಣೆಗಳನ್ನು ತಿರಸ್ಕರಿಸಿದರು. ಇವರೆಲ್ಲರನ್ನೂ ಹಿಂದೂಧರ್ಮ ತನ್ನೊಳಗೆ ಸೇರಿಸಿಕೊಂಡಿತು. ನಕಲಿ ಹಿಂದೂಗಳ ಕಾರಣದಿಂದಾಗಿ ಹಿಂದೂಧರ್ಮವು ತಾನು ಬದಲಾಗಿ, ಮಧ್ಯಯುಗದ ಇಸ್ಲಾಮಿಕ್‍ಪ್ರಭುತ್ವಗಳನ್ನು ಹೋಲುವ ರೀತಿಯಲ್ಲಿ ಸಂಕುಚಿತ ದೃಷ್ಟಿಕೋನ
ವನ್ನು ತನ್ನದಾಗಿಸಿಕೊಳ್ಳಲಿದೆಯೇ? ನಮ್ಮ ಮಹಾನ್ ನದಿಗಳಾದ ಗಂಗಾ, ಬ್ರಹ್ಮಪುತ್ರಾ, ನರ್ಮದಾ ಮತ್ತು ಕಾವೇರಿಯನ್ನು ಹೋಲುತ್ತದೆ ಹಿಂದೂಧರ್ಮ. ಈ ನದಿಗಳು ಯಾವಾಗಲೂ ಬದಲಾಗುತ್ತಿರುತ್ತವೆ, ತಮ್ಮನ್ನು ತಾವು ಶುದ್ಧೀಕರಿಸಿಕೊಳ್ಳುತ್ತ ಇರುತ್ತವೆ. ತಮ್ಮ ಹಾದಿಯಲ್ಲಿ ಬರುವ ಒಳಿತನ್ನೂ ಕೆಡುಕನ್ನೂ ಹೀರಿಕೊಳ್ಳುತ್ತವೆ. ಆದರೆ ತಾವು ತಾವಾಗಿಯೇ ಉಳಿದುಕೊಳ್ಳುತ್ತವೆ. ವೈರಾಣುವೊಂದು ನಮ್ಮ ಸಮಾಜವನ್ನು ಅಸ್ಥಿರಗೊಳಿಸುತ್ತಿರುವ ಭಾವನೆ ಮೂಡುತ್ತಿದೆ. ವಸುಧೈವ ಕುಟುಂಬಕಂ ಎಂಬ ತತ್ವದಲ್ಲಿ ನಂಬಿಕೆಯಿರುವ ಹಿಂದೂಗಳು ಈ ವೈರಾಣುವಿಗೆ ಬಲಿಯಾಗಬಾರದು.

ಅಮೂಲ್ಯವಾದ ಏನನ್ನೋ ಕಳೆದುಕೊಂಡಂತೆ ಅನಿಸುತ್ತಿದೆ. ಹಳೆಯ ಆ ಸಂತಸವನ್ನು, ಒಟ್ಟಾಗಿರುವುದರಲ್ಲಿ ಸಿಗುತ್ತಿದ್ದ ಬೆಚ್ಚಗಿನ ಭಾವವನ್ನು, ಬಹುತ್ವವನ್ನು ಸಂಭ್ರಮಿಸುವ ಮನಃಸ್ಥಿತಿಯನ್ನು ನಾವು ಮತ್ತೆ ಪಡೆದುಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT