ಶುಕ್ರವಾರ, ಮಾರ್ಚ್ 31, 2023
22 °C
‘ಭಾರತವನ್ನು ಅನುಸರಿಸಿ’ ಎಂದು ವಿದೇಶಗಳಿಗೆ ಕಿವಿಮಾತು ಹೇಳುವ ಮುನ್ನ...

3 ನಿಮಿಷದ ಭಾಷಣದಲ್ಲಿ ಭೂಮಿಯ ಭವಿಷ್ಯ

ಟಿ.ಆರ್.ಅನಂತರಾಮು Updated:

ಅಕ್ಷರ ಗಾತ್ರ : | |

ಅಮೆರಿಕದ ನ್ಯೂಯಾರ್ಕ್‌ನಲ್ಲಿ ಕಳೆದ ತಿಂಗಳ 23ರಂದು ವಿಶ್ವಸಂಸ್ಥೆ ಏರ್ಪಡಿಸಿದ್ದ ಹವಾಗುಣ ಬದಲಾವಣೆ ಶೃಂಗಸಭೆಯಲ್ಲಿ 165 ದೇಶಗಳು ಭಾಗವಹಿಸಲು ಉತ್ಸಾಹ ತೋರಿದವಾದರೂ ಅವಕಾಶವಿರಲಿಲ್ಲ. ‘ನಾವೂ ಮಾತನಾಡುವುದಿದೆ’ ಎಂದು ಗೋಗರೆದ 100 ದೇಶಗಳ ಮನವಿಯನ್ನೂ ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್ ಪುರಸ್ಕರಿಸಲಿಲ್ಲ. ಅವಕಾಶ ಸಿಕ್ಕಿದ್ದು 90 ದೇಶಗಳಿಗೆ ಮಾತ್ರ. ಅದೂ ಒಂದು ಪುಟ್ಟ ಸೂಚನೆಯ ಮೇರೆಗೆ. ‘ನೀವು ಉದ್ದುದ್ದ ಭಾಷಣ ಮಾಡಬೇಡಿ. ಭೂಮಿಯ ಉಷ್ಣತೆಯನ್ನು ತಗ್ಗಿಸಲು ನೀವು ಯಾವ ಕ್ರಮ ಯೋಚಿಸಿದ್ದೀರಿ, ಅಷ್ಟು ಹೇಳಿ ಸಾಕು’ ಎಂದಿದ್ದರು. ಅವರ ಸಾತ್ವಿಕ ಕೋಪಕ್ಕೆ ಕಾರಣವೂ ಇತ್ತು. 2015ರ ಪ್ಯಾರಿಸ್ ಒಪ್ಪಂದದ ಪ್ರಕಾರ, 2022ರ ಒಳಗೆ ವಾಯುಗೋಳದ ಉಷ್ಣತೆಯನ್ನು ಈಗಿನದಕ್ಕಿಂತ 1.5 ಡಿಗ್ರಿ ಸೆಲ್ಸಿಯಸ್ ಇಳಿಸಲೇಬೇಕು ಎಂದು ಹಳೆಯ ನಿರ್ಧಾರವನ್ನು ಪುನರುಚ್ಚರಿಸಿದ್ದರು. ಏಕೆಂದರೆ ಇಂತಹ ನಿರ್ಣಯಗಳು ಬರೀ ಕಾಗದದ ಮೇಲೆ ಉಳಿದಿವೆ. ಅದರಲ್ಲೂ ವಾತಾವರಣ ಮಾಲಿನ್ಯದಲ್ಲಿ ಅಮೆರಿಕ ಎರಡನೇ ಅತಿ ದೊಡ್ಡ ದೇಶ. ಆದರೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ‘ಭೂತಾಪ ಏರಿಕೆಯು ವಿಜ್ಞಾನಿಗಳ ಕಿತಾಪತಿ’ ಎಂದಷ್ಟೇ ಹೇಳಿ ಗೇಲಿ ಮಾಡಿದ್ದರು. ಜೊತೆಗೆ ಪ್ಯಾರಿಸ್ ಶೃಂಗಸಭೆಯ ನಿರ್ಣಯಗಳಿಗೆ ಅಮೆರಿಕ ಬದ್ಧವಲ್ಲ ಎಂದು ಅಪದ್ಧವನ್ನೂ ನುಡಿದಿದ್ದರು.

ವಿಶ್ವಸಂಸ್ಥೆ ಈ ಬಾರಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಶೃಂಗಸಭೆಗೆ ಎರಡು ದಿನ ಮೊದಲೇ ಯುವಜನ ‘ಹವಾಗುಣ ಶೃಂಗಸಭೆ’ಯನ್ನು ಏರ್ಪಡಿಸಿತ್ತು. ತರುಣರಲ್ಲಿ ಭೂಮಿ ಸಮಸ್ಯೆ ಕುರಿತು ಯಾವ ಹೊಸ ನಿವಾರ
ಣೋಪಾಯಗಳಿವೆಯೋ ಎಂದು ತಿಳಿಯಲು ಮಾಡಿದ ಮೊದಲ ಪ್ರಯೋಗದಲ್ಲೇ ಕಕ್ಕಾಬಿಕ್ಕಿಯಾಯಿತು. ‘ನಾವು ಗೆಲ್ಲಬಹುದಾದ ಸ್ಪರ್ಧೆ- ಗೆಲ್ಲಲೇಬೇಕಾದ ಸ್ಪರ್ಧೆ’ ಎಂಬ ಘೋಷ ಮೊಳಗಿಸಿತು ನಿಜ. ಆದರೆ ಯುವಜನರ ಮಿಡಿತವೇ ಬೇರೆ ಇತ್ತು. 8ರಿಂದ 17 ವರ್ಷದ ಮಕ್ಕಳು, ಬ್ರೆಜಿಲ್, ಫ್ರಾನ್ಸ್, ಜರ್ಮನಿ, ಅರ್ಜೆಂಟೀನಾ, ಟರ್ಕಿ ದೇಶಗಳ ಮೇಲೆ ವಿಶ್ವಸಂಸ್ಥೆಯಲ್ಲೇ ದಾವೆ ಹೂಡಿದರು. ಈ ದೇಶಗಳಿಗೆ ಕಾರ್ಬನ್ ಉತ್ಸರ್ಜನೆ ತರುವ ದುರಂತ ತಿಳಿದಿದೆ. ಆದರೂ ದುಸ್ಸಾಹಸ ಮಾಡಿವೆ ಎಂದು ದೂರು. ಚೋದ್ಯವೆಂದರೆ ಇದಕ್ಕೂ ಒಂದು ದಿನ ಮೊದಲು ಜಗತ್ತಿನಾದ್ಯಂತ ಮಕ್ಕಳು ಪರಿಸರ ಮಾಲಿನ್ಯದ ಕುರಿತು ದಂಗೆ ಏಳುವಂತೆ ಮಾಡಿದ್ದು ಸ್ವೀಡನ್ನಿನ 16ರ ತರುಣಿ ಗ್ರೆಟಾ ಥನ್‌ಬರ್ಗ್. ಈಕೆ ಈಗ ಜಗತ್ತಿನ ಕಣ್ಮಣಿ, ಪರಿಸರ ನಾಶದ ವಿರುದ್ಧ ಕ್ರಾಂತಿಯ ಕಹಳೆ ಊದಿದವಳು. ಶೃಂಗಸಭೆಗೆ ಆಹ್ವಾನಿತಳಾದ ಇವಳು ಯಾವ ಮುಲಾಜೂ ನೋಡದೆ ‘ನಮ್ಮ ಬಾಲ್ಯದಲ್ಲಿ ಕಂಡ ಕನಸುಗಳನ್ನೆಲ್ಲ ನಾಶ ಮಾಡಿಬಿಟ್ಟಿದ್ದೀರಿ. ಭೂಮಿಯನ್ನು ಹೊಲಸು ಮಾಡಲು ನಿಮಗೆ ಎಷ್ಟು ಧೈರ್ಯ’ ಎಂದು ನೋವಿನ ಜೊತೆಯಲ್ಲಿ ಕೋಪವನ್ನೂ ತುಂಬಿಕೊಂಡು, ಹಾಜರಿದ್ದವರನ್ನೆಲ್ಲ ತರಾಟೆಗೆ ತೆಗೆದುಕೊಂಡಳು. ಆಹ್ವಾನಿತ ರಾಷ್ಟ್ರಗಳು ಚಪ್ಪಾಳೆ ಹೊಡೆದು ಸ್ವಾಗತಿಸಿದವು. ಅವಳು ಇವರಿಗೇ ಛೀಮಾರಿ ಹಾಕಿದಳೆಂಬುದು ಕೂಡ ಅವರಿಗೆ ತಿಳಿಯಲಿಲ್ಲ.

ಈ ಶೃಂಗಸಭೆಯಲ್ಲಿ ಮಾತನಾಡಲು 45 ದೇಶಗಳ ಪ್ರತಿನಿಧಿಗಳಿಗೆ ಅವಕಾಶ ಕೊಟ್ಟಿದ್ದು ಬರೀ ಮೂರು ನಿಮಿಷ, ಶಾಲೆಗಳಲ್ಲಿನ ಆಶು ಭಾಷಣ ಸ್ಪರ್ಧೆಯಂತೆ. ವಾತಾವರಣದ ಮಾಲಿನ್ಯದಲ್ಲಿ ಮೊದಲ ಸ್ಥಾನ ಗಿಟ್ಟಿಸಿರುವ ಚೀನಾ ‘ನಾವೂ ಭೂಉಷ್ಣತೆ ಇಳಿಸಲು ಪ್ರಯತ್ನಿಸುತ್ತೇವೆ’ ಎಂದಿತೇ ಹೊರತು ಬೇರೆ ಯಾವ ಬ್ಲೂಪ್ರಿಂಟ್ ಇರಲಿಲ್ಲ. ಏಕೆಂದರೆ ಅಮೆರಿಕದೊಂದಿಗಿನ ವಾಣಿಜ್ಯ ವ್ಯವಹಾರದ ಸಮರಕ್ಕೆ ಅದರ ಆದ್ಯತೆ. ‘ಅಮೆಜಾನ್ ಕಾಡಿಗೆ ಬಿದ್ದಿರುವ ಬೆಂಕಿಯಿಂದ ಇಡೀ ನಮ್ಮ ದೇಶವೇ ತತ್ತರಿಸುತ್ತಿದೆ. ನಾನೋ ಗಾಲಿ ಕುರ್ಚಿಯಲ್ಲಿ ಕುಳಿತಿದ್ದೇನೆ. ಶೃಂಗಸಭೆಗೆ ಬರಲಾರೆ’ ಎಂದು ಬ್ರೆಜಿಲ್‍ನ ಅಧ್ಯಕ್ಷ ಜೈರ್ ಬೊಲ್‍ಸೊನಾರೊ ಗೈರುಹಾಜರಾದರು. ಪ್ಯಾರಿಸ್ ಒಪ್ಪಂದಕ್ಕೆ ಬದ್ಧವಾಗಿರದ ದೇಶಗಳೊಂದಿಗೆ ಹೊಸತಾಗಿ ಯಾವ ವ್ಯವಹಾರವನ್ನೂ ಫ್ರಾನ್ಸ್ ಮಾಡಿಕೊಳ್ಳುವುದಿಲ್ಲ ಎಂಬ ದಿಟ್ಟ ನಿಲುವನ್ನು ಅಧ್ಯಕ್ಷ ಇಮ್ಯಾನುವೆಲ್‌ ಮ್ಯಾಕ್ರನ್ ತೋರಿದರು. ಹವಾಗುಣ ಶೃಂಗಸಭೆಗೆ ತಮ್ಮ ದೇಶದ ಪ್ರತಿನಿಧಿಯನ್ನು ಕಳಿಸುವ ಬದಲು ಖುದ್ದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂದಾಗ, ಆಹ್ವಾನಿತರಾದವರೆಲ್ಲ ಕರತಾಡನ ಮಾಡಿದರು. ಆದರೆ ಟ್ರಂಪ್ ಬಂದದ್ದು ಪ್ರಧಾನಿ ನರೇಂದ್ರ ಮೋದಿ ಮತ್ತು ಜರ್ಮನಿಯ ಚಾನ್ಸಲರ್ ಏಂಜೆಲಾ ಮರ್ಕೆಲ್ ಅವರ ಭಾಷಣ ಕೇಳಲು. ಇದ್ದದ್ದು ಏಳೇ ನಿಮಿಷ, ಎದ್ದು ಹೋದರು.

ಮೋದಿಯವರ ಒಂದು ವಾಕ್ಯ ಪ್ರಶಂಸೆ ಗಿಟ್ಟಿಸಿತು- ‘ಮಾತನಾಡಿದ್ದು ಸಾಕು, ಏನಿದ್ದರೂ ಈಗ ಅನುಷ್ಠಾನ ಮಾಡಬೇಕು’. ಭಾರತ ಈಗಾಗಲೇ ಇದನ್ನು ಸಾಧಿಸಿ ತೋರಿಸಿದೆ ಎಂಬುದನ್ನು ಹೇಳಲು ಅಂಕಿಅಂಶ ಕೊಟ್ಟರು. 2022ಕ್ಕೆ ಭಾರತ ನವೀಕರಿಸಬಹುದಾದ ಶಕ್ತಿಯನ್ನು ಗರಿಷ್ಠ ಪ್ರಮಾಣದಲ್ಲಿ ಉತ್ಪಾದಿಸುತ್ತದೆ ಎಂದು ಪ್ಯಾರಿಸ್‌ನಲ್ಲಿ ಘೋಷಿಸಿದ್ದೆವು. ಈಗ ನಿಗದಿತ ಅವಧಿಗೆ ಮೊದಲೇ 175 ಗಿಗಾ ವ್ಯಾಟ್ ಸೌರಶಕ್ತಿಯನ್ನು ಉತ್ಪಾದಿಸುತ್ತಿದ್ದೇವೆ. ಮುಂದಿನ ನಮ್ಮ ಗುರಿ 450 ಗಿಗಾ ವ್ಯಾಟ್‌ ಎಂದು ಸಭೆಯ ಗಮನಕ್ಕೆ ತಂದರು. ಅಂತಿಮವಾಗಿ ಹೊರಬಂದ ಸತ್ಯವೆಂದರೆ, 90 ರಾಷ್ಟ್ರಗಳ ಪೈಕಿ 77 ರಾಷ್ಟ್ರಗಳು 2050ರ ಹೊತ್ತಿಗೆ ತಮ್ಮ ದೇಶದಿಂದ ಶೂನ್ಯ ಮಾಲಿನ್ಯವನ್ನು ನಿರೀಕ್ಷಿಸಬಹುದು ಎಂದು ಹೇಳಿದವು. ಡೆಡ್‌ಲೈನ್ ಇರುವುದೇ ಅದನ್ನು ಮುಂದಕ್ಕೆ ಹಾಕಲೆಂದೇ?

ಮೋದಿಯವರೇನೋ ಭಾರಿ ಚಪ್ಪಾಳೆ ಗಿಟ್ಟಿಸಿದರು. ಆದರೆ ಭಾರತದ ಸಂದರ್ಭದಲ್ಲಿ ಉಷ್ಣವರ್ಧಕ ಅನಿಲಗಳ ಉತ್ಪಾದನೆಯನ್ನು ತಗ್ಗಿಸಲು ನೂರೆಂಟು ಒಳಗಂಟುಗಳಿವೆ. ಏಕೆಂದರೆ ಅವರು ಪ್ರತಿಪಾ
ದಿಸಿದ್ದು ನವೀಕರಿಸಬಹುದಾದ ಇಂಧನದ ಬಗ್ಗೆ, ವಿಶೇಷವಾಗಿ ಸೌರಶಕ್ತಿಯ ಬಗ್ಗೆ. ನಮ್ಮ ದೇಶದಲ್ಲೇ ನೂರಕ್ಕೂ ಮಿಕ್ಕಿ ಕಲ್ಲಿದ್ದಲು ಆಧಾರಿತ ಉಷ್ಣಸ್ಥಾವರಗಳಿವೆ. ದೇಶದ ಶೇ 65 ಭಾಗ ಶಕ್ತಿ ಬರುತ್ತಿರುವುದೇ ಈ ಮೂಲದಿಂದ. ನಮ್ಮ ರಾಯಚೂರಿನ ಎಂಟು ಉಷ್ಣಶಕ್ತಿ ಘಟಕಗಳಿಗೆ ದಿನವೊಂದಕ್ಕೆ 20,000 ಮೆಟ್ರಿಕ್ ಟನ್ ಕಲ್ಲಿದ್ದಲು ಬೇಕು. ಇನ್ನೂ 150 ವರ್ಷಗಳಿಗಾಗುವಷ್ಟು ಸಂಪನ್ಮೂಲವಿದೆ. ಇದನ್ನೇ ಉರಿಸುತ್ತಾ ಹೋದರೆ
ವಿಶ್ವಸಂಸ್ಥೆಯಲ್ಲಿ ತೋರಿರುವ ನಮ್ಮ ಬದ್ಧತೆಯನ್ನುಉಳಿಸಿಕೊಳ್ಳುವುದೆಂತು? ಈಗಾಗಲೇ ನಮ್ಮ ಕಾರ್ಬನ್ ಪಾಪದ ಲೆಕ್ಕ ವಾರ್ಷಿಕ 25 ಲಕ್ಷ ಟನ್‍ಗೆ ಏರಿದೆ. ಸದ್ಯಕ್ಕಂತೂ ಇದರಿಂದ ಹೊರಬರುವ ಸ್ಥಿತಿಯಲ್ಲಿಲ್ಲ. ಹಂತಹಂತವಾಗಿ ಪರಮಾಣು ಸ್ಥಾವರಗಳ ಸಂಖ್ಯೆಯನ್ನು ಇಳಿಸುವ ಬದಲು ಈಗಿರುವ 22 ಸ್ಥಾವರಗಳ ಜೊತೆಗೆ ಮತ್ತೆ ಏಳು ಸ್ಥಾವರಗಳನ್ನು ಸ್ಥಾಪಿಸುವ ಯೋಜನೆ ಸರ್ಕಾರಕ್ಕಿದೆ. ವಾಸ್ತವವಾಗಿ ಈ ಮೂಲದ ಕೊಡುಗೆ ಒಟ್ಟಾರೆ ಶಕ್ತಿಯ ಶೇ 3.2 ಭಾಗ ಮಾತ್ರ. ಸದ್ಯ ವಾರ್ಷಿಕ ಸುಮಾರು 1,000 ಲಕ್ಷ ಟನ್ ತೈಲವನ್ನು ಭಾರತ ಬಳಸುತ್ತಿದೆ. ಅದೇ ಉತ್ಸಾಹದಲ್ಲಿ ವಾಹನಗಳ ಉತ್ಪಾದನೆಯನ್ನೂ ಹೆಚ್ಚಿಸುತ್ತಿದೆ.

ಸೌರಶಕ್ತಿಗೆ ಕೊಟ್ಟ ಆದ್ಯತೆಯನ್ನು ಉಳಿದ ನವೀಕರಿಸಬಹುದಾದ ಇಂಧನಕ್ಕೂ ವಿಸ್ತರಿಸಬೇಕು. ನಮ್ಮ ದೇಶದಲ್ಲಿ ಗಾಳಿಶಕ್ತಿಯ ಯಂತ್ರಗಳ ಸ್ಥಾಪಿತ ಸಾಮರ್ಥ್ಯ 302 ಗಿಗಾ ವ್ಯಾಟ್‌. ನಾವು ಉತ್ಪಾದಿಸುತ್ತಿರುವುದು
ಸದ್ಯ ಕೇವಲ 36 ಗಿಗಾ ವ್ಯಾಟ್‌. ಪೆಟ್ರೋಲ್ ಜೊತೆ ಬೆರೆಸುವ ಎಥೆನಾಲನ್ನು ಈಗಿನ ಶೇ 2 ರಿಂದ ಶೇ 5ಕ್ಕೆ ಏರಿಸಲು 2030ರವರೆಗೆ ಕಾಯುವ ಸ್ಥಿತಿ ಬಂದಿದೆ. ಇವೆಲ್ಲ ಪರಿಹರಿಸಲಾಗದ ಸಮಸ್ಯೆಗಳೇನಲ್ಲ. ‘ಭಾರತವನ್ನು ಅನುಸರಿಸಿ’ ಎಂದು ವಿದೇಶಗಳಿಗೆ ಕಿವಿಮಾತು ಹೇಳುವ ಮುನ್ನ ನಾವು ಕ್ರಮಿಸಬೇಕಾದ ದೂರವನ್ನು ಒಮ್ಮೆ ಕಣ್ಣಮುಂದೆ ತಂದುಕೊಳ್ಳಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು