ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಡಸಾಲೆ | ಬರಿಯ ಮಿಂಚು ಮಾಯೆ ಅಷ್ಟೆಯೆ?

Last Updated 26 ಜೂನ್ 2020, 20:15 IST
ಅಕ್ಷರ ಗಾತ್ರ

ಕವಿ ತನ್ನ ಕಾವ್ಯದ ಮೂಲಕ ಒಂದು ತಲೆಮಾರಿನ ತವಕ ತಲ್ಲಣಗಳಿಗೆ ಮಾತು ಕೊಡುತ್ತಾನೆ. ಕಾಲದ ಬಿಕ್ಕಟ್ಟುಗಳನ್ನು ಅರ್ಥ ಮಾಡಿಕೊಳ್ಳಲು ಅಗತ್ಯವಾದ ಅರಿವಿನ ಮಾರ್ಗದಲ್ಲಿ ಕಾವ್ಯದ ಮತಾಪನ್ನು ಉರಿಸುತ್ತಾನೆ. ಪಂಪ, ಕುಮಾರವ್ಯಾಸ, ಅಲ್ಲಮ, ಬಸವಣ್ಣನಿಂದ ಕುವೆಂಪು, ಬೇಂದ್ರೆ, ಅಡಿಗರವರೆಗಿನ ಗಣ್ಯಕವಿಗಳು ನಮಗೆ ಮುಖ್ಯವೆನ್ನಿಸುವುದು ಅವರು ತಂತಮ್ಮ ಕಾಲ–ಧರ್ಮಕ್ಕೆ ದನಿಯಾದುದರಿಂದ ಹಾಗೂ ಎಲ್ಲ ಕಾಲಕ್ಕೂ ಸಲ್ಲಬಲ್ಲ ಮಾತುಗಳನ್ನು ಕೊಟ್ಟಿದ್ದರಿಂದ.

ಒಂದು ಸಮಾಜ ತನ್ನ ಪರಂಪರೆಯಿಂದ ಮಾತು ಗಳನ್ನು ಪಡೆಯುವುದರ ಜೊತೆಗೆ, ಸಮಕಾಲೀನವಾಗಿ ಕೂಡ ಒಂದಷ್ಟು ಹೊಸ ಮಾತುಗಳನ್ನು ಪಡೆದುಕೊಳ್ಳಬೇಕಾಗುತ್ತದೆ. ಅಂಥ ಮಾತು–ಮಾರ್ಗದ ಪರಂಪರೆಯನ್ನು ನಂಜುಂಡಸ್ವಾಮಿ, ಅನಂತಮೂರ್ತಿ, ಲಂಕೇಶ್, ತೇಜಸ್ವಿಯಂಥವರು ಸಮರ್ಥವಾಗಿ ಬೆಳೆಸಿದರು. ಹಾಗೆ ಹೊಸ ಮಾತುಗಳನ್ನಾಡುವವರ ಕೊರತೆ ನಮ್ಮ ಕಾಲದ ದೌರ್ಭಾಗ್ಯಗಳಲ್ಲೊಂದು. ಹಾಗೆಂದು ಮಾತುಗಾರರಿಗೆ ಬರದ ಕಾಲ ಇದಲ್ಲ. ಮಾತನ್ನೇ ವೃತ್ತಿಯನ್ನಾಗಿಸಿಕೊಂಡಿರುವವರು ನಮ್ಮ ನಡುವೆ ಸಾಕಷ್ಟಿದ್ದಾರೆ. ಆದರೆ ಅವರ ಮಾತುಗಳು ಮನಸ್ಸುಗಳನ್ನು ಬೆಚ್ಚಗಾಗಿಸುತ್ತಿಲ್ಲ, ಸಮುದಾಯಕ್ಕೆ ಬೆಳಕಾಗುತ್ತಿಲ್ಲ. ಮಾತು ಹೆಚ್ಚಾದಷ್ಟೂ ಮನಸ್ಸುಗಳು ಒಡೆಯುತ್ತಿವೆಯಷ್ಟೇ.

ಕವಿಯೊಬ್ಬ ತನ್ನ ಕಾಲಕ್ಕೆ ಮಾತಾಗುವುದಕ್ಕೆ ಉದಾ ಹರಣೆಯಾಗಿ ಸಿದ್ಧಲಿಂಗಯ್ಯನವರನ್ನು ಗಮನಿಸಬಹುದು. ಅವರ ಚೊಚ್ಚಿಲ ಸಂಕಲನ ‘ಹೊಲೆ ಮಾದಿಗರ ಹಾಡು’ (1975) ನಲವತ್ತೈದು ವರ್ಷಗಳ ಹಿಂದೆ ಪ್ರಕಟಗೊಂಡಾಗ ಕಾವ್ಯಲೋಕದಲ್ಲಿ, ವಿಶೇಷವಾಗಿ ದಲಿತ ವಲಯದಲ್ಲಿ ಹಬ್ಬದ ಉತ್ಸಾಹ ಮೂಡಿತ್ತು; ದಲಿತ ಸಾಹಿತ್ಯದ ನಾಂದಿಕೃತಿಗಳಲ್ಲಿ ಒಂದೆಂದು ಆ ಕೃತಿ ಹೆಸರಾಯಿತು. ವಯ್ಯಾಕರಣಿಗಳ ಸ್ಕೇಲು–ಕೋನ ಮಾಪನಗಳ ಅಳತೆಗೆ ಸಿಗದ ‘ಇಕ್ರಲಾ ವದೀರ‍್ಲಾ / ಈ ನನ್ ಮಕ್ಕಳ ಚರ್ಮ ಎಬ್ರಲಾ’ ಎನ್ನುವಂತಹ ಸಾಲುಗಳು ದಲಿತವರ್ಗದ ಒಡಲುರಿಯೇ ಮಾತಿನ ರೂಪು ಪಡೆದಂತೆ ಕಾಣಿಸಿದ್ದವು. ಡಿ.ಆರ್. ನಾಗರಾಜ್ ಹೇಳುವಂತೆ ‘ಹೊಲೆ ಮಾದಿಗರ ಹಾಡು’ಗಳು ಬೆಂಕಿಯ ಉಂಡೆಗಳು. ‘ದಲಿತರಾಗ ಗುನುಗುತಿದೆ ಗೋರಿಯ ಬಿರುಕಿನಲಿ/ ಶೋಷಣೆಯಲೆ ಶೃಂಗಾರವು ಆಯಿತೆನ್ನ ಹೆಣಕೆ/ ಸುಲಿದವರನು ಸುಲಿವದಿನ ಬಂದಿತೆಂದು ಹಿಗ್ಗುತಿದೆ/ ಸುಡುಗಾಡಿನ ಬಿರುಗಾಳಿಯು ಕ್ರಾಂತಿಗೀತೆ ಹಾಡಿ’ ಎನ್ನುವ ‘ಕ್ರಾಂತಿಪದ’, ‘ಬಡ್ಡೀಮಕ್ಳನ್ನ ಕ್ರಾಂತಿಕಾರಿ ಗಳ ಕೋರ್ಟಿಗೆಳೀತೀನಿ/ ಮಾರ್ಕ್ಸ್‌ನಿಂದ ಜಡ್ಜ್‌ಮೆಂಟ್ ಕೊಡುಸ್ತೀನಿ’ ಎನ್ನುವ ‘ಹಬ್ಬ’ದುತ್ಸಾಹ ಆ ಕಾಲಕ್ಕೆ ಹೊಸತಾಗಿದ್ದವು. ‘ಎಪ್ಪತ್ತು ಮತ್ತು ಎಂಬತ್ತರ ದಶಕದಲ್ಲಿ ಸಿದ್ಧಲಿಂಗಯ್ಯನವರ ಕಾವ್ಯ ಮತ್ತು ದಲಿತ ಚಳವಳಿಗಳು ಪರಸ್ಪರ ರೂಪಿಸಿಕೊಂಡಿದ್ದವು... ಈ ಕವಿಯ ಪ್ರತಿಭಾ ಸಂಕಲ್ಪದಲ್ಲಿ ಕನ್ನಡ ದಲಿತ ಜನಾಂಗ ಒಂದು ನಿರ್ದಿಷ್ಟ ರೀತಿಯಲ್ಲಿ ನಿರ್ಮಿತವಾಯಿತು. ಹಾಡು ಜನಾಂಗವನ್ನು ಕಟ್ಟಿತು’ ಎನ್ನುವ ಡಿ.ಆರ್. ಅವರ ವಿಶ್ಲೇಷಣೆ ಸಿದ್ಧಲಿಂಗಯ್ಯನವರ ಕಾವ್ಯದ ಚಾರಿತ್ರಿಕ ಮಹತ್ವವನ್ನು ಸೂಚಿಸುವಂತಿದೆ.

ಹೊಲೆ ಮಾದಿಗರ ಹಾಡುಗಳನ್ನು ದಲಿತರಷ್ಟೇ ತಮ್ಮ ದಾಗಿಸಿಕೊಳ್ಳಲಿಲ್ಲ. ಆ ಗೀತೆಗಳನ್ನು ಕಾರ್ಮಿಕರು, ರೈತರು, ಕೂಲಿಕಾರರು ಒಕ್ಕೊರಲಿನಿಂದ ಹಾಡಿದ್ದರು. ‘ಇಕ್ರಲಾ ವದೀರ್ಲಾ’ ಎನ್ನುವ ಹಾಡನ್ನು ಇಕ್ಕಿಸಿಕೊಳ್ಳಬೇಕಾದ ಸಮುದಾಯಕ್ಕೆ ಸೇರಿದವರೇ ಸಂಭ್ರಮದಿಂದ ಹಾಡಿದ್ದೂ ಇದೆ. ಅಂಥ ಹಾಡುಗಳು, ಅಂಥ ಸಂಭ್ರಮ ಈಗೇಕೆ ರೂಪುಗೊಳ್ಳುತ್ತಿಲ್ಲ?

ಇತ್ತೀಚಿನ ವರ್ಷಗಳಲ್ಲಿ, ಪ್ರತೀ ವರ್ಷ ಜೂನ್ ಕೊನೆಯ ಭಾಗದಲ್ಲಿ, ತುರ್ತು ಪರಿಸ್ಥಿತಿ ಸಂದರ್ಭದ ಕರಾಳ ನೆನಪುಗಳ ಕುರಿತು ಲೇಖನಗಳ ಸರಮಾಲೆಯೇ ಸೃಷ್ಟಿಯಾಗುತ್ತದೆ. ಇಲ್ಲೊಂದು ವೈರುಧ್ಯ ಗಮನಿಸಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಿದ ತುರ್ತು ಪರಿಸ್ಥಿತಿ, ದಲಿತರಿಗೆ ನ್ಯಾಯ ಒದಗಿಸುವ ಸಂದರ್ಭವೂ ಆಗಿತ್ತು. ನಾಗರಿಕ ಹಕ್ಕುಗಳನ್ನು ಮೊಟಕುಗೊಳಿಸಿದ ಆ ಸಂದರ್ಭ, ಜಮೀನ್ದಾರಿ ಪದ್ಧತಿಯನ್ನು ಹತ್ತಿಕ್ಕುವ, ದಲಿತರನ್ನು ಋಣಮುಕ್ತಗೊಳಿಸುವ, ಜೀತಪದ್ಧತಿ ಕೊನೆಗೊಳಿಸುವ, ಹಿಂದುಳಿದ ವರ್ಗದವರಿಗೆ ಸೂರು ಒದಗಿಸುವ ಪ್ರಯತ್ನಗಳಿಗೆ ಬಳಕೆಯಾಯಿತು. ‘ಹೊಲೆ ಮಾದಿಗರ ಹಾಡು’ ಪ್ರಕಟಗೊಂಡು ಜನರ ನಾಲಗೆಗಳಲ್ಲಿ ನಲಿಯತೊಡಗಿದ್ದು ತುರ್ತು ಪರಿಸ್ಥಿತಿ ಹೇರಿಕೆಯಾದ ಸಂದರ್ಭದಲ್ಲಿಯೇ. ಸಿದ್ಧಲಿಂಗಯ್ಯನವರ ಕವನಗಳು ದಲಿತರಲ್ಲಿ ಆತ್ಮಸ್ಥೈರ್ಯ ಮೂಡಿಸಿದಂತೆಯೇ, ತುರ್ತು ಪರಿಸ್ಥಿತಿ ಸಮಯದಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿದ ‘ಸಮಗ್ರ ಕ್ರಾಂತಿ’ ಹೆಸರಿನ ಇಪ್ಪತ್ತು ಅಂಶಗಳ ಕಾರ್ಯಕ್ರಮಗಳೂ ದೀನ–ದಲಿತರ ಪಾಲಿಗೆ ಬಿಡುಗಡೆಯ ರೂಪದಲ್ಲಿ ಪರಿಣಮಿಸಿದ್ದವು.

ಇವತ್ತಿನ ಸಂದರ್ಭ ನೋಡಿ. ಪ್ರಜಾಪ್ರಭುತ್ವದ ‘ಆದರ್ಶ ಮಾದರಿ’ ದೇಶದಲ್ಲಿ ಸಾಕಾರಗೊಂಡಿದೆಯೆಂದು ಭಾವಿಸುತ್ತ, ನಾಲ್ಕೂವರೆ ದಶಕಗಳ ಹಿಂದಿನ ತುರ್ತು ಪರಿಸ್ಥಿತಿ ಹೇರಿಕೆಯ ರಾಜಕಾರಣವನ್ನು ಟೀಕಿಸುತ್ತೇವೆ. ಪ್ರಜಾಪ್ರಭುತ್ವದ ಬಗ್ಗೆ ನಂಬಿಕೆಯುಳ್ಳವರೆಲ್ಲರೂ ಆ ಟೀಕೆಗಳನ್ನು ಸ್ವಾಗತಿಸಲೇಬೇಕು. ಇಲ್ಲಿ ನಾವು ನೆನಪಿಸಿಕೊಳ್ಳಬೇಕಾದ ಸಂಗತಿಯೊಂದಿದೆ. ಅದೆಂದರೆ, ಅಂದಿನ ತುರ್ತು ಪರಿಸ್ಥಿತಿ ರೈತರಿಗೆನ್ಯಾಯವನ್ನೊದಗಿಸಿ, ದಲಿತರ ಆರ್ಥಿಕ- ಸಾಮಾಜಿಕ ಪರಿಸ್ಥಿತಿಯ ಸುಧಾರಣೆಗೆ ಮುನ್ನುಡಿ ಬರೆದರೆ, ತುರ್ತು ಪರಿಸ್ಥಿತಿ ಇಲ್ಲದಿರುವ ಇಂದಿನ ಸಂದರ್ಭ, ಭೂಮಿ ಮತ್ತು ರೈತರ ನಡುವೆ ಬಂಡವಾಳವನ್ನು ತರಾತುರಿಯಲ್ಲಿ ತರಲು ಹೊರಟಿದೆ; ‘ದಲಿತ’ ಎನ್ನುವ ಪದಬಳಕೆಯನ್ನು ಸರ್ಕಾರಿ ವ್ಯವಹಾರಗಳಿಂದ ಹೊರಗಿಡಲಾಗಿದೆ. ಕೋಟ್ಯಂತರ ಕಾರ್ಮಿಕರು ಉದ್ಯೋಗಗಳನ್ನು ಕಳೆದುಕೊಂಡು ಪರಿತಪಿಸುತ್ತಿದ್ದಾರೆ. ಹಾಗಾದರೆ, ತುರ್ತು ಪರಿಸ್ಥಿತಿ ಯಾವುದು?

ಬದಲಾದ ಸಂದರ್ಭದಲ್ಲಿ ತುರ್ತು ಪರಿಸ್ಥಿತಿ ಎನ್ನುವುದು ರಾಜಕಾರಣದ ಹೇರಿಕೆಯಾಗದೆ, ಸಮಾಜ ದೊಳಗೆ ಸಹಜವಾಗಿಯೇ ರೂಪುಗೊಂಡಿರುವ ವಿದ್ಯಮಾನವಾಗಿರುವಂತಿದೆ. ಈ ಸಂಕೀರ್ಣ ಕಾಲಘಟ್ಟವನ್ನು ಅರ್ಥೈಸಿಕೊಳ್ಳಲಿಕ್ಕೆ ನಮಗೆ ಬೇಕಾದ ಮಾತುಗಳನ್ನು ಕೊಡಬೇಕಾದ ಕವಿ ಎಲ್ಲಿದ್ದಾನೆ? ‘ಮಾತುಗಳು ಹತವಾಗುತಿವೆ ಜನಪಥಗಳು ಮೂಡುತಿವೆ, ಅಸಮಾನತೆ ಆಗುತ್ತಿದೆ ಕ್ರಾಂತಿಗೆ ಸೋಪಾನ’ ಎನ್ನುವ ಬದಲಾವಣೆಯ ಹಂಬಲದ ಸಾಲುಗಳನ್ನು ಬರೆದ, ‘ನಿಮ್ಗ್ ಕೇಳ್ಸಲ್ವೇನ್ರಲೇ ನಮ್ ಕೂಳಿಲ್ಲದ ಕೂಗು’ ಎಂದು ಜೋರು ಮಾಡಿದ, ‘ನಾ ಮೂಳೆ, ನಾ ಇಂಗೇ ಇರಲ್ಲ/ ಕೂಗ್ತಿನಿ, ಸಿಡಿತಿನಿ, ಮನುಷ ಆಯ್ತಿನಿ’ ಎಂದು ಹಂಬಲಿಸಿದ ಕವಿಯೇ ಸ್ವತಃ ತನ್ನ ಕಾವ್ಯದ ಬಗ್ಗೆ ನಂಬಿಕೆ ಕಳೆದುಕೊಂಡಿರುವ ಕಾಲವಿದು. ಕವಿ ಮಾತು ಕಳೆದುಕೊಂಡರೆ, ನಾಡು ನಾಲಗೆಯನ್ನೇ ಕಳೆದುಕೊಳ್ಳುತ್ತದೆ.

ಸಿದ್ಧಲಿಂಗಯ್ಯನವರು ‘ಹೊಲೆ ಮಾದಿಗರ ಹಾಡು’ ಗಳನ್ನು ಸ್ಮಶಾನದಲ್ಲಿ ಕುಳಿತುಕೊಂಡು ಬರೆದರಂತೆ. ಅದೆಷ್ಟು ರಮ್ಯ ಕಾಲ! ಈಗ ಕವಿತೆ ಬರೆಯುವುದಿರಲಿ; ದಲಿತರ ಅಂತ್ಯಸಂಸ್ಕಾರಕ್ಕೂ ಸ್ಮಶಾನದಲ್ಲಿ ಜಾಗ ದೊರೆಯುವುದು ಕಷ್ಟವಾಗಿರುವ ಕಾಲ.

‘ಅಡಗೂಲಜ್ಜಿಯ ಕಥೆ’ ಎನ್ನುವ ಕವಿತೆಯಲ್ಲಿ ಸಿದ್ಧಲಿಂಗಯ್ಯನವರು ಹೇಳುವ ಕಥೆಯಲ್ಲಿ, ‘ಅಪರೂಪದ ಕಾರೊಂದು ಹಿಮಾಲಯದಿಂದ/ ದಬಕ್ಕನೆ ಕ್ಯಳೀಕ್ ಬಿದ್ದು ಇತ್ ಕಡೀಕ್ ಬತ್ತಾ ಅದೆ/ ಅದರ್ವಳಗೆ ಅಡುಗೂಲಜ್ಜಿ ಕುಂತವ್ಳೆ. ಅರೀದ್ಹುಡುಗ ಅದನ್ನೋಡ ಸ್ತದೆ/ ಕಚ್ಚೇ ಬೊಜ್ಜು ಟೋಪಿಯೋರು ಅದರಿಂದೆ ಜೈಕಾರಕ್ಯಾಕ ಹಾಕ್ಕಂಡ್/ ಓಡೋಡ್ ಬತ್ತಾ ಅವ್ರೆ. ಕೆಟ್ರೆ ರಿಪೇರಿ ಮಾಡ್ಕಂಡು/ ನಿಂತ್ರೆ ನೂಕ್ಕಂಡು ದಿಗ್ವಿಜಯಕ್ವಂಟವ್ರೆ’. ಈಗಲೂ ಆ ಅಡಗೂಲಜ್ಜಿಯದೋ ಅಜ್ಜನದೋ ಕಾರಿನ ಪಯಣ ನಿಂತಿಲ್ಲ. ಇವತ್ತಿನ ಆ ಪಯಣ ಹೇಗಿದೆ? ದಿಗ್ವಿಜಯ ಎಲ್ಲಿಗೆ ಬಂದಿದೆ ಎಂದು ಹೇಳಬೇಕಾದ ಕವಿ ಎಲ್ಲಿದ್ದಾನೆ?

ನಾವು ಚಿಂತಿಸಬೇಕಾಗಿರುವುದು ಓರ್ವ ವ್ಯಕ್ತಿ ಅಥವಾ ಕವಿಯ ಬದಲಾವಣೆಯ ಕುರಿತಾಗಿಯಲ್ಲ; ಆ ಬದಲಾವಣೆಯ ಮೂಲಕ ಸವಕಲಾದ ಮೌಲ್ಯ ಹಾಗೂ ‘ಖಡ್ಗವಾಗುತ್ತದೆ ಕಾವ್ಯ, ಜನರ ನೋವಿಗೆ ಮಿಡಿವ ಪ್ರಾಣಮಿತ್ರ’ ಎನ್ನುವ ನಂಬಿಕೆಯನ್ನು ಕಳೆದುಕೊಳ್ಳುತ್ತಿರುವುದರ ಬಗ್ಗೆ ಆತಂಕಪಡಬೇಕಾಗಿದೆ. ‘ನಾಡನಡುವಿನಿಂದ ಸಿಡಿದ/ ನೋವಿನ ಕೂಗೇ/ ಆಕಾಶದ ಅಗಲಕ್ಕೂ/ ನಿಂತ ಆಲವೇ’ ಎಂದು ಅಂಬೇಡ್ಕರ್‌ ಅವರನ್ನು ಬಣ್ಣಿಸುವ ಕವಿ, ‘ಮಳೆಯನೇಕೆ ತಾರಲಿಲ್ಲ/ ಮಿಂಚು ಮಾಯೆ ಅಷ್ಟೆಯೆ’ ಎಂದು ಪ್ರಶ್ನಿಸುವ ದಿಟ್ಟತನವನ್ನೂ ತೋರುತ್ತಾರೆ. ‘ಮಿಂಚು ಮಾಯೆ ಅಷ್ಟೆಯೆ’ ಎನ್ನುವ ಆ ಉದ್ಗಾರ ಸಿದ್ಧಲಿಂಗಯ್ಯನವರನ್ನೂ ಒಳಗೊಂಡಂತೆ ಈ ಹೊತ್ತಿನ ಕನ್ನಡ ಸಾಹಿತ್ಯ ಸಮುದಾಯ ಉತ್ತರಿಸಬೇಕಾದ, ತನ್ನನ್ನು ವಿಮರ್ಶೆಯ ನಿಕಷಕ್ಕೊಡ್ಡಿಕೊಳ್ಳಬೇಕಾದ ಪ್ರಶ್ನೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT