ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನುಡಿ ಬೆಳಗು: ಬಲೇ ತಮಾಷೆ ಇದು!

Published : 9 ನವೆಂಬರ್ 2023, 23:30 IST
Last Updated : 9 ನವೆಂಬರ್ 2023, 23:30 IST
ಫಾಲೋ ಮಾಡಿ
Comments

ಈ ಅನೆ ಇದೆಯಲ್ಲ, ಅದು ಸಣ್ಣ ಮರಿಯಾಗಿರುವಾಗ ಮಾವುತರು ಅದನ್ನು ಒಂದು ಮರದ ಗೂಟಕ್ಕೆ ಕಟ್ಟಿಹಾಕುತ್ತಾರೆ. ಗೂಟ ಅಂದರೆ ಬಹಳ ದೊಡ್ಡದೇನಲ್ಲ ಅದು. ಒಂದರ್ಧವೂ ಮುಕ್ಕಾಲೋ ಅಡಿ ದಪ್ಪ, ಒಂದು ಮೂರ್ನಾಲ್ಕು ಅಡಿ ಎತ್ತರದ ಮರದ ಗೂಟ ಅದು. ಆನೆಯ ಕಾಲಿಗೆ ಒಂದು ಹಗ್ಗ ಕಟ್ಟಿ ಅದನ್ನು ಆ ಗೂಟಕ್ಕೆ ಬಿಗಿಯುತ್ತಾರೆ. ಅಷ್ಟು ಚಿಕ್ಕದಿರುವಾಗ ಆನೆಗೆ ಆ ಗೂಟ ಮುರಿಯಲು ಸಾಧ್ಯವಾಗುವುದಿಲ್ಲ.

ಅಚ್ಚರಿ ಮತ್ತು ತಮಾಷೆಯೇನೆಂದರೆ ಆನೆ ದೊಡ್ಡದಾದ ಮೇಲೂ ಅದೇ ಗೂಟಕ್ಕೆ ಕಟ್ಟಿಹಾಕುತ್ತಾರೆ. ಆಗಲೂ ಆನೆ ಆ ಗೂಟವನ್ನು ಮುರಿಯುವುದಿಲ್ಲ. ಮುರಿಯಲು ಪ್ರಯತ್ನ ಮಾಡುವುದೂ ಇಲ್ಲ. ಕಾಡಿನಲ್ಲಿ ದೊಡ್ಡ ದೊಡ್ಡ ಮರಗಳನ್ನೇ ಅಲ್ಲಾಡಿಸಿ ಮುರಿದು ಬಿಸಾಕುವ ಆನೆ ಈ ಮೂರಡಿ ಗೂಟವನ್ನು ಮಾತ್ರ ಮುರಿಯುವುದಿಲ್ಲ. ಯಾಕೆ? ಉತ್ತರ, ನಿಮಗೂ ಗೊತ್ತಿದ್ದೀತು. ಆನೆ ಅದರ ಚಿಕ್ಕಂದಿನಲ್ಲಿ ಒಮ್ಮೆಯೋ ಇಮ್ಮೆಯೋ ಆ ಗೂಟವನ್ನು ಮುರಿಯಲು ಕಾಲು ಝಾಡಿಸಿದ್ದಿರಬಹುದು, ಆ ವಯಸ್ಸಿನ ಅದರ ಶಕ್ತಿಗೆ ಆ ಗೂಟ ಮುರಿಯುವುದಿಲ್ಲ. ಆಗ ಆನೆ ಮರಿಗೆ ಆ ಗೂಟವನ್ನು ತನ್ನಿಂದ ಮುರಿಯಲು ಸಾಧ್ಯವಿಲ್ಲ ಎಂದು ಮನದಟ್ಟಾಗುತ್ತದೆ. ಯಾವಾಗ ಅದು ತನ್ನಿಂದ ಮುರಿಯಲಾಗದ ಗೂಟ ಎಂಬುದು ಆನೆಯ‌ಮರಿಗೆ ದೃಢವಾಗಿಬಿಡುತ್ತದೆಯೋ ಆಗಿನಿಂದ ಅದು- ದೊಡ್ಡದಾಗಿ ಬೆಳೆದ ಮೇಲೆ ಕೂಡಾ- ಆ ಗೂಟವನ್ನು ಮುರಿಯಲು ಯೋಚನೆ ಕೂಡಾ ಮಾಡುವುದಿಲ್ಲ.

ಬಹುಶಃ ನಮ್ಮಲ್ಲಿ ಬಹುಮಂದಿ ಇರುವುದು ಹೀಗೆಯೇ. ಯಾವುದೋ ಅಭಿಪ್ರಾಯ, ನಂಬಿಕೆ, ನಿಲುವಿನ ಗೂಟಕ್ಕೆ ಕಾಲುಕಟ್ಟಿಕೊಂಡು ಅಲ್ಲೇ ಬಿದ್ದಿರುತ್ತೇವೆ. ಆ ಗೂಟ ಮುರಿದಲ್ಲದೆ ನಮಗೆ ಬಿಡುಗಡೆ ಸಾಧ್ಯವೇ ಇಲ್ಲ.

ಜಗತ್ತಿನಲ್ಲಿ ನಾವು ಕಾಣುವ ಎಷ್ಟೋ ಸಾಧಕರು ಈ ಗೂಟ ಮುರಿದವರು. ‘ನಾವು ಕುರುಡರು ಸಾರ್, ಯಾವುದೋ ಜನ್ಮದ ಶಾಪ ಸಾರ್ ಇದು...’ ಅಂತ ಅಲವತ್ತುಕೊಂಡು ಹಲುಬುವ ಜನರು ನಮ್ಮ ಸುತ್ತ ಬೇಕಾದಷ್ಟು ಮಂದಿ ಇದ್ದಾರೆ. ಆದರೆ ಬೆನ್ನೋ ಜೆಫಿನ್, ಅಜಿತ್ ಕುಮಾರ್ ಯಾದವ್, ಪ್ರಾಂಜಲ್ ಪಾಟೀಲ್, ಹೀನಾ ರಾತಿ, ಪೂರ್ಣ ಸುಂದರಿ, ಆಯುಷಿ, ಇವರೆಲ್ಲಾ ಅಂಧರೇ. ಆದರೆ ಅಂಧರು ಏನೂ ಸಾಧಿಸಲಾರರು ಎಂಬ ನಂಬಿಕೆಯ ಗೂಟ ಮುರಿದವರು. ಅವರೆಲ್ಲರೂ ಯುಪಿಎಸ್‌ಸಿ ಪರೀಕ್ಷೆ ಪಾಸು ಮಾಡಿ ಈಗ ನಮ್ಮ ದೇಶದಲ್ಲಿ ಉನ್ನತ ಅಧಿಕಾರಿಗಳಾಗಿದ್ದಾರೆ. ಮಕ್ಕಳಿಲ್ಲದವರ ಬಾಳು ಹಾಳು ಎನ್ನುವವರ ಮಧ್ಯೆಯೇ ಮಕ್ಕಳನ್ನು ಸಾಕಲಾಗದಿದ್ದರೇನು ಮರಗಿಡಗಳನ್ನು ಸಾಕಿಯೂ ನಾಲ್ಕು ಜನರ ಬಾಳಿಗೆ ನೆರಳು ಕೊಡಬಹುದಲ್ಲಾ ಎಂದುಕೊಂಡು ಅಸಾಧ್ಯವನ್ನು ಸಾಧಿಸಿದವಳು ವೃಕ್ಷಮಾತೆ ಸಾಲುಮರದ ತಿಮ್ಮಕ್ಕ. ಕಾಲು ಕಳೆದುಕೊಂಡ ಮೇಲೆ ಬದುಕೇ ಮುಗಿಯಿತು ಎನ್ನುವವರ ನಡುವೆಯೇ ಮರದ ಕಾಲು ಕಟ್ಟಿಕೊಂಡು ಮಹಾನ್ ನೃತ್ಯಗಾರ್ತಿ, ನಟಿ ಆದವಳು ಸೋದರಿ ಸುಧಾಚಂದ್ರನ್. ಹೊತ್ತಿನ‌ ಊಟಕ್ಕೂ ಕಷ್ಟಪಟ್ಟವರು ಮಹಾನ್ ವಿಜ್ಞಾನಿ, ರಾಷ್ಟ್ರಪತಿ, ದಾರ್ಶನಿಕರಾದವರು ಕೀರ್ತಿಶೇಷ ಡಾ. ಎ.ಪಿ.ಜೆ.ಅಬ್ದುಲ್ ಕಲಾಂ.

ಎಷ್ಟು ಉದಾಹರಣೆಗಳು ಬೇಕು? ಇವರೆಲ್ಲರೂ ಆ ಗೂಟ ಮುರಿದವರೇ. ನಾವೀಗ ನಮ್ಮನ್ನು ಕಟ್ಟಿಹಾಕಿರುವ ಗೂಟದ ಕಡೆ ನೋಡೋಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT