ಬುಧವಾರ, ಏಪ್ರಿಲ್ 14, 2021
24 °C
ಸರ್ಕಾರ ಬದಲಾದಾಗ ನೀತಿಯೂ ಬದಲು

ಒಳನೋಟ | ಅಗ್ಗದ ಆಹಾರಕ್ಕೆ ಅನುದಾನ ಬರ: ಇಂದಿರಾ ಕ್ಯಾಂಟೀನ್‌ಗಳ ನಿರ್ವಹಣೆ ಕಗ್ಗಂಟು

ಪ್ರವೀಣ್ ಕುಮಾರ್ ಪಿ.ವಿ. Updated:

ಅಕ್ಷರ ಗಾತ್ರ : | |

ಬೆಂಗಳೂರು: ದುಡಿದು ಉಣ್ಣುವ ಬಡ ಜನರಿಗೆ ಅಗ್ಗದ ದರದಲ್ಲಿ ಊಟೋಪಾಹಾರ ಒದಗಿಸಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಆರಂಭಿಸಿದ್ದ ಮಹತ್ವಾಕಾಂಕ್ಷೆಯ ‘ಇಂದಿರಾ ಕ್ಯಾಂಟೀನ್‌’ ಯೋಜನೆ ಶುರುವಾದ ನಾಲ್ಕೇ ವರ್ಷಗಳಲ್ಲಿ ದುಸ್ಥಿತಿಗೆ ತಲುಪಿದೆ.

ದುರ್ಬಲ ವರ್ಗದ ಶ್ರಮಜೀವಿಗಳು ಹಸಿವಿನಿಂದ ಬಳಲುವ ಪರಿಸ್ಥಿತಿ ಇರಬಾರದು ಎಂಬ ಆಶಯದಿಂದ ಆರಂಭವಾದ ಈ ಯೋಜನೆ ಅಲ್ಪಾವಧಿಯಲ್ಲೇ ಜನರ ಮೆಚ್ಚುಗೆ ಗಳಿಸಿತ್ತು. ಒಪ್ಪೊತ್ತಿನ ಊಟಕ್ಕೆ ದುಬಾರಿ ದರ ತೆರಲಾಗದವರ ಪಾಲಿಗೆ ವರವಾಗಿದ್ದ ಈ ಯೋಜನೆ ವಿಫಲವಾಗುವ ಹಾದಿ ಹಿಡಿಯುತ್ತಿರುವುದು ‘ಇದು ಜನರಿಗೆ ಬೇಡವಾಗಿದೆ’ ಎಂಬ ಕಾರಣಕ್ಕಲ್ಲ; ಸರ್ಕಾರದ ಅನಾದರದಿಂದಾಗಿ. ಸತತ ಮೂರು ವರ್ಷಗಳಿಂದ ಈ ಯೋಜನೆಗೆ ಬಜೆಟ್‌ನಲ್ಲಿ ಅನುದಾನ ನೀಡದೇ, ಸರ್ಕಾರವೇ ಈ ಕ್ಯಾಂಟೀನ್‌ಗಳ ಕತ್ತು ಹಿಸುಕುತ್ತಿದೆ.

‘ನಗರದಲ್ಲಿ ಶೇ 28ರಷ್ಟು ಐದು ವರ್ಷಗಳ ಒಳಗಿನ ಮಕ್ಕಳು, ಶೇ 13ರಷ್ಟು ಮಹಿಳೆಯರು ಹಾಗೂ ಶೇ 10ರಷ್ಟು ಪುರುಷರು ಸರಾಸರಿಗಿಂತ ಕಡಿಮೆ ತೂಕ ಹೊಂದಿದ್ದಾರೆ. ದಕ್ಷಿಣ ಭಾರತದ ಅನ್ಯರಾಜ್ಯಗಳ ನಗರಗಳಿಗೆ ಹೋಲಿಸಿದರೆ, ಎರಡು ಹೊತ್ತು ಊಟ ಸಿಗದೆ ಇರುವ ಜನರ ಸಂಖ್ಯೆ ಬೆಂಗಳೂರಿನಲ್ಲಿ ಜಾಸ್ತಿ. ಹಾಗಾಗಿ ಈ ನಗರದಲ್ಲಿ ಯೋಜನೆಯನ್ನು ಆರಂಭಿಸಲಾಗುತ್ತಿದೆ. ಕ್ಯಾಂಟೀನ್‌ಗಳ ನಿರ್ಮಾಣ ಹಾಗೂ ನಿರ್ವಹಣೆಯ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸಲಿದೆ’ ಎಂದು ಇಂದಿರಾ ಕ್ಯಾಂಟೀನ್‌ ಯೋಜ ನೆಯ ಉದ್ಘಾಟನೆಯ ಸಂದರ್ಭದಲ್ಲಿ ಆಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. 2017ರ ಆ. 16ರಂದು ಬೆಂಗಳೂರಿನಲ್ಲಿ 101 ಇಂದಿರಾ ಕ್ಯಾಂಟೀನ್‌ಗಳನ್ನು ಆರಂಭಿಸಲಾಗಿತ್ತು. ಇದಕ್ಕೆ ದೊರೆತ ಉತ್ತಮ ಪ್ರತಿಕ್ರಿಯೆ ನೋಡಿ ಸರ್ಕಾರ ರಾಜ್ಯದ ಇತರ ನಗರಗಳಿಗೂ ಈ ಯೋಜನೆಯನ್ನು ವಿಸ್ತರಿಸಿತ್ತು. 

ಕಾಂಗ್ರೆಸ್‌ ಸರ್ಕಾರದ ಆಡಳಿತಾವಧಿಯಲ್ಲಿ ಮೊದಲ ಎರಡು ವರ್ಷ ಇಂದಿರಾ ಕ್ಯಾಂಟೀನ್‌ಗಳು ಯಾವುದೇ ಅಡೆತಡೆಗಳಿಲ್ಲದೆಯೇ ನಡೆದವು. ಆದರೆ, ಜೆಡಿಎಸ್‌–ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ಹಾಗೂ ಬಿಜೆಪಿ ನೇತೃತ್ವದ ಸರ್ಕಾರ ಇಂದಿರಾ ಕ್ಯಾಂಟೀನ್‌ಗಳ ನಿರ್ವಹಣೆಗೆ ಬಜೆಟ್‌ನಲ್ಲಿ ಪ್ರತ್ಯೇಕ ಅನುದಾನ ಕಾಯ್ದಿರಿಸದ ಪರಿಣಾಮ ಇವುಗಳ ನಿರ್ವಹಣೆ ಕಗ್ಗಂಟಾಗಿದೆ. ಕೋವಿಡ್‌ ನಿಯಂತ್ರಣಕ್ಕಾಗಿ ಲಾಕ್‌ಡೌನ್‌ ಜಾರಿಯಾದ ಬಳಿಕ ರಾಜ್ಯದ ವಿವಿಧ ಕಡೆಗಳಲ್ಲಿ ಒಂದೊಂದೇ ಕ್ಯಾಂಟೀನ್‌ಗಳನ್ನು ಮುಚ್ಚಲಾಗಿದೆ. ಬೆಂಗಳೂರು ನಗರದಲ್ಲೇ ನಾಲ್ಕು ಕ್ಯಾಂಟೀನ್‌ಗಳು ಈಗ ಕಾರ್ಯನಿರ್ವಹಿಸುತ್ತಿಲ್ಲ. ಇವುಗಳ ಸಿಬ್ಬಂದಿಗೂ ವೇತನ ಕಾಲಕಾಲಕ್ಕೆ ಪಾವತಿ ಆಗುತ್ತಿಲ್ಲ.

ಕೆಲವೆಡೆ ಕ್ಯಾಂಟೀನ್‌ಗಳು ನಡೆಯುತ್ತಿವೆಯಾದರೂ, ಅವುಗಳಲ್ಲಿ ಈ ಹಿಂದಿನಂತೆ ಬಗೆ ಬಗೆಯ ಆಹಾರಗಳನ್ನು ನೀಡುತ್ತಿಲ್ಲ. ಬೆಂಗಳೂರಿನ ಕ್ಯಾಂಟೀನ್‌ಗಳಲ್ಲಿ ಬೆಳಿಗ್ಗೆ ಉಪಾಹಾರಕ್ಕೆ ಇಡ್ಲಿ ಸಾಂಬಾರ್‌ ಹಾಗೂ ಅನ್ನದಿಂದ ತಯಾರಿಸುವ ಬಾತ್‌ಗಳನ್ನು ನೀಡಲಾಗುತ್ತಿತ್ತು. ಇತ್ತೀಚೆಗೆ ಇಡ್ಲಿ ಸಾಂಬಾರ್‌ ಮಾರಾಟವನ್ನು ಸದ್ದಿಲ್ಲದೇ ಸ್ಥಗಿತಗೊಳಿಸಲಾಗಿದೆ. ಮಧ್ಯಾಹ್ನ ಊಟಕ್ಕೆ ಅನ್ನ ಸಾಂಬಾರ್‌, ಪಲಾವ್‌, ಮೊಸರು ಗೊಜ್ಜು, ಪಾಯಸ ನೀಡಲಾಗುತ್ತಿತ್ತು. ಬಹುತೇಕ ಕ್ಯಾಂಟೀನ್‌ಗಳಲ್ಲಿ ಈಗ ಅನ್ನ ಸಾಂಬಾರ್‌ ಮಾತ್ರ ನೀಡಲಾಗುತ್ತಿದೆ. ನೀಡುವ ಆಹಾರದ ಪ್ರಮಾಣವನ್ನು ಕಡಿಮೆ ಮಾಡಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ, ಕ್ಯಾಂಟೀನ್‌ನಲ್ಲಿ ಊಟ ಮಾಡುವ ಅನೇಕರು, ‘ಈಗ ಹಿಂದಿನಷ್ಟು ಪ್ರಮಾಣದ ಆಹಾರ ನೀಡುತ್ತಿಲ್ಲ’ ಎಂದು ದೂರುತ್ತಾರೆ.

ಒಂದೆಡೆ ತರಕಾರಿ, ದಿನಸಿ, ಬೇಳೆ ಕಾಳುಗಳ ದರ ಗಗನಕ್ಕೇರಿದ್ದರೆ, ಇನ್ನೊಂದೆಡೆ ಸರ್ಕಾರ ಸಕಾಲದಲ್ಲಿ ಗುತ್ತಿಗೆದಾರರಿಗೆ ಹಣವನ್ನೂ ಪಾವತಿ ಮಾಡಿಲ್ಲ.

ಗುತ್ತಿಗೆದಾರರಿಗೆ 10 ತಿಂಗಳುಗಳಿಂದ ನಯಾಪೈಸೆ ಪಾವತಿ ಆಗಿಲ್ಲ.

‘ಬಾಕಿ ಹಣ ಬಿಡುಗಡೆ ಮಾಡದಿದ್ದರೆ ಕ್ಯಾಂಟೀನ್‌ಗಳಿಗೆ ಆಹಾರ ಪೂರೈಕೆ ಸ್ಥಗಿತಗೊಳಿಸುತ್ತೇವೆ’ ಎಂದು ಗುತ್ತಿಗೆದಾರರು 15 ದಿನಗಳ ಹಿಂದೆ ಬಿಬಿಎಂಪಿ ಆಯುಕ್ತರಿಗೆ ಸಲ್ಲಿಸಿದ ಮನವಿಯಲ್ಲಿ ಎಚ್ಚರಿಸಿದ್ದಾರೆ.

ನಗರದಲ್ಲಿ ಬೀದಿಬದಿ ಆಹಾರ ಮಾರುವ ತಳ್ಳುಗಾಡಿಗಳಲ್ಲೂ ₹ 25ಕ್ಕಿಂತ ಕಡಿಮೆಗೆ ಒಪ್ಪೊತ್ತಿನ ಊಟ ಸಿಗುವುದಿಲ್ಲ. ಇಂದಿರಾ ಕ್ಯಾಂಟೀನ್‌ಗಳಲ್ಲಿ ಸ್ವಚ್ಛ ಹಾಗೂ ಗುಣಮಟ್ಟದ ಊಟ ಕೇವಲ ₹ 10ಕ್ಕೆ ಸಿಗುತ್ತದೆ. ಹಾಗಾಗಿ ಆಟೊರಿಕ್ಷಾ ಚಾಲಕರು, ವಿದ್ಯಾರ್ಥಿಗಳು, ವಲಸೆ ಕಾರ್ಮಿಕರು ಈಗಲೂ ಇಂದಿರಾ ಕ್ಯಾಂಟೀನ್‌ಗಳ ಕಾಯಂ ಗಿರಾಕಿ ಗಳು. ಆಹಾರದಲ್ಲಿ ವೈವಿಧ್ಯ ಕಡಿಮೆ ಆಗಿರುವ ಬಗ್ಗೆ ಬೇಸರ ವ್ಯಕ್ತಪಡಿಸುವ ಇವರು, ‘ಹಿಂದಿನಂತೆಯೇ ಆಹಾರ ವೈವಿಧ್ಯ ಹೆಚ್ಚಿಸಬೇಕು. ಯಾವುದೇ ಕಾರಣಕ್ಕೂ ಕ್ಯಾಂಟೀನ್‌ಗಳನ್ನು ಮುಚ್ಚಬಾರದು’ ಎಂದು ಒತ್ತಾಯಿಸುತ್ತಾರೆ.

ಅವ್ಯವಹಾರ– ದೂರು ವಜಾ

ಇಂದಿರಾ ಕ್ಯಾಂಟೀನ್‌ಗಳ ಸ್ಥಾಪನೆ ಹಾಗೂ ಆಹಾರ ಪೂರೈಕೆಯಲ್ಲಿ ನಡೆದಿದೆ ಎನ್ನಲಾಗಿದ್ದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತದಲ್ಲೂ ದೂರು ದಾಖಲಾಗಿತ್ತು. ದೂರಿಗೆ ಸಂಬಂಧಿಸಿದಂತೆ ಖಚಿತ ಸಾಕ್ಷಿಗಳಿಲ್ಲ. ರಾಜಕೀಯ ದುರುದ್ದೇಶದಿಂದ ದೂರು ಸಲ್ಲಿಸಲಾಗಿದೆ ಎಂದು ಅದನ್ನು 2020ರ ಜೂನ್‌ನಲ್ಲಿ ವಜಾಗೊಳಿಸಲಾಗಿತ್ತು.

‘ಇಂದಿರಾ’ ಹೆಸರಿಗೆ ಆಕ್ಷೇಪ

ಇಂದಿರಾ ಕ್ಯಾಂಟೀನ್‌ ಹೆಸರಿನ ಬಗ್ಗೆ ಬಿಜೆಪಿಯ ನಾಯಕರು ಆಕ್ಷೇಪ ಎತ್ತಿದ್ದರು. ಈ ಹೆಸರನ್ನು ಬದಲಾಯಿಸಬೇಕು ಎಂದೂ ಒತ್ತಾಯಿಸಿದ್ದರು. ಇದು ವಿವಾದದ ಸ್ವರೂಪ ಪಡೆಯುತ್ತಿದ್ದಂತೆಯೇ, ಸ್ವತಃ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರೇ, ‘ಸರ್ಕಾರದ ಮುಂದೆ ಅಂತಹ ಪ್ರಸ್ತಾವ ಇಲ್ಲ’ ಎಂದು ಸ್ಪಷ್ಟಪಡಿಸಿದ್ದರು.

ಬಡವರ ವಿರೋಧಿ ನಿಲುವು ಬಹಿರಂಗ

ಬಡವರು ಹಸಿವಿನಿಂದ ನರಳಬಾರದು ಎಂಬ ಉದ್ದೇಶದಿಂದ ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಇಂದಿರಾ ಕ್ಯಾಂಟೀನ್‌ ಗಳನ್ನು ಆರಂಭಿಸಲಾಗಿತ್ತು. ಕಡು ಬಡತನದಲ್ಲಿರುವ ಕೂಲಿ ಕಾರ್ಮಿಕರು, ಆಟೊ ಮತ್ತು ಟ್ಯಾಕ್ಸಿ ಚಾಲಕರು, ದೂರದ ಊರುಗಳಿಂದ ಆಸ್ಪತ್ರೆಗಳಿಗೆ ಬರುವ ಬಡವರಿಗೆ ಕಡಿಮೆ ದರದಲ್ಲಿ ಊಟ, ಉಪಾಹಾರ ಪೂರೈಸುವ ವ್ಯವಸ್ಥೆ ಮಾಡಲಾಗಿತ್ತು. ಯೋಜನೆಯಿಂದ ಲಕ್ಷಾಂತರ ಮಂದಿ ಬಡವರು ಅನುಕೂಲ ಪಡೆಯುತ್ತಿದ್ದರು. ವರ್ಷಕ್ಕೆ ₹ 200 ಕೋಟಿ ಯಷ್ಟು ವೆಚ್ಚ ಮಾಡಿದರೆ ಇಂದಿರಾ ಕ್ಯಾಂಟೀನ್‌ಗಳನ್ನು ನಡೆಸಬಹುದು. ಆದರೆ, ಇದು ಬಡವರಿಗಾಗಿ ಮಾಡಿದ ಯೋಜನೆ ಎಂಬ ಕಾರಣಕ್ಕೆ ಬಿಜೆಪಿ ಸರ್ಕಾರ ಅನುದಾನ ಒದಗಿಸಿಲ್ಲ. ನೀರು, ವಿದ್ಯುತ್‌ ಬಿಲ್‌ ಪಾವತಿ ಮಾಡದೇ, ಆಹಾರ ತಯಾರಿಗೂ ಹಣ ಒದಗಿಸದೇ ಇಂದಿರಾ ಕ್ಯಾಂಟೀನ್‌ಗಳನ್ನು ಮುಚ್ಚಲಾಗಿದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹೆಸರಿನಲ್ಲಿ ಬಡವರಿಗಾಗಿ ಆರಂಭಿಸಿದ್ದ ಯೋಜನೆ ಎಂಬುದೂ ಬಿಜೆಪಿ ಸರ್ಕಾರದ ತೀರ್ಮಾನಕ್ಕೆ ಕಾರಣವಾಗಿರಬಹುದು. ಬಿಜೆಪಿ ಹೊಂದಿರುವ ಬಡವರ ವಿರೋಧಿ ನಿಲುವು ಬಹಿರಂಗವಾಗಿದೆ.

–ಸಿದ್ದರಾಮಯ್ಯ, ವಿಧಾನಸಭೆ ವಿರೋಧ ಪಕ್ಷದ ನಾಯಕ

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು