ಸೋಮವಾರ, ಅಕ್ಟೋಬರ್ 18, 2021
25 °C

ಒಳನೋಟ: ‘ಕಲ್ಯಾಣ’ ಮರೆಯಿತೇ ಮಕ್ಕಳ ಸಮಿತಿ?

ಕೆ.ನರಸಿಂಹಮೂರ್ತಿ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಲೈಂಗಿಕ ದೌರ್ಜನ್ಯ ಸೇರಿದಂತೆ ಹಲವು ಬಗೆಯ ಶೋಷಣೆಗೆ ಒಳಗಾದ ದಿಕ್ಕಿಲ್ಲದ ಮಕ್ಕಳಿಗೆ ಕಾನೂನು ಬಲ, ಆರ್ಥಿಕ ಸಹಾಯ, ಪುನರ್‌ವಸತಿ, ಆಪ್ತ ಸಮಾಲೋಚನೆ ನೀಡಿ ಮುಖ್ಯವಾಹಿನಿಗೆ ತರಬೇಕಾದ ಮಕ್ಕಳ ಕಲ್ಯಾಣ ಸಮಿತಿಗಳು ಮೂಲ ಉದ್ದೇಶವನ್ನೇ ಮರೆತಂತಿವೆ.

‘ಮಗುವಿನ ಹಿತಾಸಕ್ತಿ’ಗಿಂತ ಸಮಿತಿ ಸದಸ್ಯರ ನಿರ್ಲಕ್ಷ್ಯ ಧೋರಣೆ, ಭಿನ್ನಾಭಿಪ್ರಾಯ, ಸ್ವಂತ ಹಿತಾಸಕ್ತಿಯೇ ಮುಖ್ಯವಾಗಿ, ಸಮರ್ಪಕ ನಿರ್ಧಾರ ಕೈಗೊಳ್ಳದ ಹಲವು ಪ್ರಕರಣಗಳು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಗಮನಕ್ಕೆ ಬಂದಿದ್ದರೂ, ಪ್ರಯೋಜನವಾಗಿಲ್ಲ.

ಏಕೆಂದರೆ, ಆಯೋಗಕ್ಕೆ ಕ್ರಮ ಕೈಗೊಳ್ಳುವ ಅಧಿಕಾರವೇ ಇಲ್ಲ. ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಶಿಫಾರಸು ಮಾಡುವ ಅಧಿಕಾರವಷ್ಟೇ ಇರುವುದರಿಂದ ಅದೂ ಅಸಹಾಯಕ
ವಾಗಿದೆ. ಆಯೋಗ ಅಸ್ತಿತ್ವಕ್ಕೆ ಬಂದ 11 ವರ್ಷಗಳ ಅವಧಿಯಲ್ಲಿ ಈವರೆಗೆ ಎರಡು ಸಮಿತಿಗಳ ವಿರುದ್ಧವಷ್ಟೇ ಎಫ್‌ಐಆರ್‌ ದಾಖಲಾಗಿದೆ.

ಸಮಿತಿ ಸದಸ್ಯರು ಆಯೋಗಕ್ಕೆ ಪರಸ್ಪರ ದೂರು ಪತ್ರ ಬರೆಯುವುದು, ಪರಸ್ಪರ ದೂಷಿಸುವುದು, ಕಾಯ್ದೆಗಳ ಪಾಲನೆ–ಉಲ್ಲಂಘನೆ ವಿಚಾರದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ನಿರ್ಭಿಡೆಯಿಂದ ವರ್ತಿಸದೇ ಇರುವುದು, ಸಮಿತಿ ಅಧ್ಯಕ್ಷರ ಸಂಬಂಧಿಕರು ತಾವು ಕೆಲಸ ಮಾಡುವ ಸ್ಥಳಗಳಲ್ಲಿ ಸಹೋದ್ಯೋಗಿಗಳ ವಿರುದ್ಧ ಸುಳ್ಳು ದೂರು ನೀಡುವುದು–ಇಂಥ ಅಸಮರ್ಪಕ ಕಾರ್ಯವೈಖರಿಯಿಂದಲೇ ಕಲ್ಯಾಣ ಸಮಿತಿ ರಚನೆಯ ಆಶಯವೂ ಮೂಲೆಗುಂಪಾಗಿದೆ.

ಇದನ್ನು ಓದಿ: 

ಉತ್ತರ ಕರ್ನಾಟಕದ ತಾಂಡಾವೊಂದರ ಬಾಲಕನಿಗೆ 12 ವರ್ಷವಿದ್ದಾಗ ತಂದೆ–ತಾಯಿ ತೀರಿಕೊಂಡರು. ಬಾಲಕ ಶಾಲೆ ಬಿಟ್ಟು ಭಿಕ್ಷೆ ಬೇಡುತ್ತಾ, ಅಲ್ಲಲ್ಲಿ ಕೆಲಸ ಮಾಡುತ್ತಿದ್ದ. ಈಗ ಅವನಿಗೆ 14 ವರ್ಷ ದಾಟಿದೆ. 12 ವರ್ಷದ ಆತನ ತಂಗಿ ಮಾನಸಿಕ ಅಸ್ವಸ್ಥೆ. ಅಜ್ಜಿಯ ಕೈ–ಕಾಲು ಸ್ವಾಧೀನವಿಲ್ಲ. ಇಬ್ಬರನ್ನೂ ಸಾಕುವುದಕ್ಕೆ ಹುಡುಗ ದುಡಿಮೆಗೆ ನಿಂತಿದ್ದಾನೆ. ಆ ಬಗ್ಗೆ ಪತ್ರಿಕೆಗಳಲ್ಲಿ ವರದಿ ಪ್ರಕಟವಾದರೂ ಕಲ್ಯಾಣ ಸಮಿತಿ, ರಕ್ಷಣಾ ಘಟಕದ ನೆರವು ಸಿಕ್ಕಿಲ್ಲ.

ದಕ್ಷಿಣ ಕರ್ನಾಟಕದ ಜಿಲ್ಲೆಯೊಂದರ ವ್ಯಕ್ತಿಗೆ ಬಾಲಕಿಯನ್ನು ದತ್ತು ಕೊಡುವ ಸಂದರ್ಭದಲ್ಲಿ ಸಮಿತಿಯು ಆ ವ್ಯಕ್ತಿಯ ಸಾಮಾಜಿಕ ತನಿಖಾ ವರದಿಯನ್ನೇ ಪಡೆದಿರಲಿಲ್ಲ. ಸಮಿತಿ ಸದಸ್ಯರೊಬ್ಬರೊಂದಿಗಿನ ಪರಿಚಯವನ್ನಷ್ಟೇ ಪರಿಗಣಿಸಿ ದತ್ತು ನೀಡಲಾಗಿತ್ತು ಎಂಬ ಆರೋಪಕ್ಕೆ ಗುರಿಯಾಗಿದೆ.

ಇನ್ನೊಂದು ಜಿಲ್ಲೆಯಲ್ಲಿ, ಬಾಲಮಂದಿರದಲ್ಲಿದ್ದ ಬಾಲಕಿಯೇ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಳು. ‘ಕೊಲೆ ಆರೋಪದಲ್ಲಿ ಪೋಷಕರೆಲ್ಲರೂ ಜೈಲಿನಲ್ಲಿದ್ದಾಗ, ಒಂಟಿಯಾದ ಬಾಲಕಿಯನ್ನು ಬಾಲಮಂದಿರದಲ್ಲಿ ಇರಿಸಲಾಗಿತ್ತು. ಆಕೆ ಖಿನ್ನತೆಗೆ ಒಳಗಾಗದ ರೀತಿ ಆಪ್ತಸಮಾಲೋಚನೆ, ಚಿಕಿತ್ಸೆ ನೀಡಿ, ನಿಗಾ ಇರಿಸಿದ್ದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ. ಆದರೆ ಕಲ್ಯಾಣ ಸಮಿತಿಯಾಗಲೀ, ರಕ್ಷಣಾ ಘಟಕವಾಗಲೀ ಕಿಂಚಿತ್ತೂ ಗಮನಹರಿಸದೇ ಇದ್ದುದರಿಂದಲೇ ಆಯೋಗವು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದೆ’ ಎಂದು ಆಯೋಗದ ಸದಸ್ಯ ಎಂ.ಎಲ್.ಪರಶುರಾಮ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಎರಡು ಸಭೆಯ ಹೆಚ್ಚುವರಿ ಭತ್ಯೆಯ ಆಮಿಷಕ್ಕೆ ಒಳಗಾದ ಮಕ್ಕಳ ಕಲ್ಯಾಣ ಸಮಿತಿಯು, ಬಾಲನ್ಯಾಯ ಕಾಯ್ದೆಯ ಪ್ರಾಯೋಜಕತ್ವದ ಅಡಿ ಫಲಾನುಭವಿಗಳಾದ ನೂರಾರು ಮಕ್ಕಳ ಮಾಹಿತಿಯನ್ನೇ ನೋಡದೆ, ಮಕ್ಕಳ ರಕ್ಷಣಾ ಘಟಕದ ಕಡತಗಳಿಗೆ ಸಹಿ ಹಾಕಿದ ಘಟನೆಯೂ 2019ರಲ್ಲಿ ಮಂಡ್ಯದಲ್ಲಿ ನಡೆದಿದೆ. ಆಯೋಗವು ಅಲ್ಲಿ ನಡೆಸಿದ ಸಭೆಯಲ್ಲಿ ಈ ಪ್ರಕರಣವನ್ನು, ಸಹಿ ಹಾಕಿದವರೇ ಗಮನಕ್ಕೆ ತಂದಿದ್ದರು!

‘ಸಮಿತಿ ಸದಸ್ಯರು ಬಾಲ ನ್ಯಾಯ ಕಾಯ್ದೆ ಉಲ್ಲಂಘಿಸಿರುವುದರಿಂದ, ಘಟಕವು ಅನುದಾನ ದುರ್ಬಳಕೆ ಮಾಡಿರುವುದರಿಂದ ಕ್ರಮ ಕೈಗೊಳ್ಳಬೇಕು ಎಂದು ಮಂಡ್ಯ ಜಿಲ್ಲಾಧಿಕಾರಿಗೆ ಆಯೋಗದಿಂದ ಆದೇಶ ಪತ್ರ ಬರೆಯಲಾಗಿತ್ತು. ಆದರೆ ಎರಡು ವರ್ಷದ ಬಳಿಕ ಈಗ ಜಿಲ್ಲಾಡಳಿತ ಮಕ್ಕಳ ರಕ್ಷಣಾ ನಿರ್ದೇಶನಾಲಯಕ್ಕೆ ಪತ್ರ ಬರೆದು, ಕ್ರಮಕ್ಕೆ ಶಿಫಾರಸು ಮಾಡಿದೆ. ಹಲವು ಪ್ರಕರಣಗಳಲ್ಲಿ ಇಂಥ ನಿಧಾನಗತಿ ಕಾರ್ಯವೈಖರಿ ಮುಂದುವರಿಯುತ್ತಲೇ ಇದೆ’ ಎಂದು ಪರಶುರಾಂ ವಿಷಾದಿಸಿದರು. 

ಇದನ್ನು ಓದಿ: 

‘ನ್ಯಾಯಾಂಗ ಮತ್ತು ಕಾರ್ಯಾಂಗದ ಜೊತೆ ಸಹಕಾರ– ಸಮನ್ವಯದೊಂದಿಗೆ ಕೆಲಸ ಮಾಡಬಲ್ಲ ಸಾಮರ್ಥ್ಯ, ಸಾಮಾಜಿಕ ಹಿನ್ನೆಲೆ ಹಾಗೂ ಕಾನೂನು ತಿಳಿವಳಿಕೆಯುಳ್ಳವರ ಆಯ್ಕೆ ನಡೆಯದೇ ಇರುವುದು ಸದ್ಯದ ಸ್ಥಿತಿಗೆ ಕಾರಣ’ ಎಂದು ಆಯೋಗದ ಇನ್ನಿಬ್ಬರು ಸದಸ್ಯರಾದ ಎಚ್‌.ಸಿ.ರಾಘವೇಂದ್ರ ಮತ್ತು ಡಿ.ಶಂಕರಪ್ಪ ಅಭಿಪ್ರಾಯಪಟ್ಟರು.

*

ಮಕ್ಕಳ ಕಲ್ಯಾಣ ಸಮಿತಿಗಳು ಉದ್ದೇಶಕ್ಕೆ ತಕ್ಕಂತೆ ಕಾರ್ಯ ನಿರ್ವಹಿಸುತ್ತಿಲ್ಲ ಎಂಬುದು, ಬೆಳಕಿಗೆ ಬಂದ ಪ್ರಕರಣಗಳಿಂದ ಗೊತ್ತಾಗಿದೆ.

-ಎಂ.ಎಲ್‌.ಪರಶುರಾಮ್‌, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ

*

ಮಕ್ಕಳ ಹಕ್ಕುಗಳ ಕ್ಷೇತ್ರದಲ್ಲಿ ವಿಶಿಷ್ಟ ಪರಿಶ್ರಮ ಉಳ್ಳವರು ಸಮಿತಿಗಳಲ್ಲಿ ಇಲ್ಲದಿರುವುದೂ ಕೂಡ ಮಕ್ಕಳಿಗೆ ಸಮಸ್ಯೆಯಾಗಿ ಮಾರ್ಪಟ್ಟಿದೆ.

-ಕೆ.ವಿ.ಸ್ಟ್ಯಾನ್ಲಿ, ಒಡನಾಡಿ ಸೇವಾ ಸಂಸ್ಥೆ, ಮೈಸೂರು

*

ಆರೋಪಗಳಿಗೆ ಸಮಿತಿಯು ಬಹಿರಂಗವಾಗಿ ಪ್ರತಿಕ್ರಿಯಿಸಲು ಆಗದು. ಆದರೆ, ಬಾಲನ್ಯಾಯ ಕಾಯ್ದೆ ಅನುಸಾರವಾಗಿಯೇ ಕಾರ್ಯನಿರ್ವಹಿಸುತ್ತಿದೆ.
-ಎಚ್‌.ಟಿ.ಕಮಲಾ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ, ಮೈಸೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು