ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ | ಸಾಲ ಮಾಡಿ ಕಂತು ಕಟ್ಟಿದರೂ ಸಿಗದ ವಿಮೆ: ರೈತರು ಕಂಗಾಲು

Last Updated 9 ಜುಲೈ 2022, 19:30 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಸಾಲ ಮಾಡಿ ಸತತ ಮೂರು ವರ್ಷ ಶೇಂಗಾ ಬೆಳೆಗೆ ವಿಮೆ ಕಂತು ಕಟ್ಟಿದೆ. ಆದರೆ, ಒಮ್ಮೆಯೂ ವಿಮೆ ಪರಿಹಾರ ಹಣ ಸಿಕ್ಕಿಲ್ಲ. ಕೃಷಿ ಹಾಗೂ ಕೂಲಿಯನ್ನೇ ನಂಬಿಕೊಂಡಿರುವ ನಮಗೆ ಒಂದೊಂದು ಪೈಸೆಯೂ ಮುಖ್ಯ. ಬೆಳೆ ನಷ್ಟಕ್ಕೆ ವಿಮೆ ಪರಿಹಾರ ದೊರೆಯದಿದ್ದರೆ ಕಂತು ಏಕೆ ಪಾವತಿಸಬೇಕು....’

– ಇದು ಬರಪೀಡಿತ ಚಳ್ಳಕೆರೆ ತಾಲ್ಲೂಕಿನ ಹಿರೇಹಳ್ಳಿಯ ರೈತ ಮಂಜುನಾಥ್‌ ಪ್ರಶ್ನೆ. 2019–20ರಿಂದ ಪ್ರತಿ ವರ್ಷದ ಮುಂಗಾರು ಹಂಗಾಮಿನ ಶೇಂಗಾ ಬೆಳೆಗೆ ಅವರು ಕಂತು ಪಾವತಿಸಿದ್ದಾರೆ. ಮಳೆಯಾಶ್ರಿತ ಎಂಟು ಎಕರೆಗೆ ಪ್ರತಿ ಬಾರಿ ₹ 4 ಸಾವಿರದಷ್ಟು ಹಣ ಕಟ್ಟಿದ್ದಾರೆ.

‘ಬೆಳೆ ವಿಮೆ ಬಗ್ಗೆ ಕೃಷಿ ಮತ್ತು ಬ್ಯಾಂಕ್‌ ಅಧಿಕಾರಿಗಳು ಗಮನ ಸೆಳೆದರು. ಬೆಳೆ ಸಾಲಕ್ಕೆ ವಿಮೆ ಕಡ್ಡಾಯಗೊಳಿಸಿದ್ದರಿಂದ ಕಂತಿನ ಮೊತ್ತವನ್ನು ಪಾವತಿಸಿಕೊಂಡೇ ಸಾಲ ನೀಡಲಾಗುತ್ತಿತ್ತು. ಹೀಗೆ ಮೂರು ವರ್ಷ ಹಣ ಕಳೆದುಕೊಂಡಿದ್ದರಿಂದ ವಿಮೆಯ ಸಹವಾಸವೇ ಬೇಡವೆಂದು ತೀರ್ಮಾನಿಸಿದ್ದೇನೆ’ ಎಂದು ಬೇಸರ ವ್ಯಕ್ತಪಡಿಸಿದರು.

2019 ಹಾಗೂ 2020ರಲ್ಲಿ ಮಳೆ ಕೊರತೆಯಿಂದ ಶೇಂಗಾ ಬೆಳೆಗೆ ಹಾನಿಯಾಯಿತು. 2021ರಲ್ಲಿ ಅಧಿಕ ಮಳೆಯಿಂದ ತೇವಾಂಶ ಹೆಚ್ಚಿದ ಪರಿಣಾಮ ಇಳುವರಿ ಕುಸಿಯಿತು. ಮಂಜುನಾಥ್ ಅವರಿಗೆ ಮೂರು ವರ್ಷವೂ ಬೆಳೆ ಕೈಗೆ ಸಿಕ್ಕಿಲ್ಲ. ಇದಕ್ಕೆ ಪರಿಹಾರವಾಗಿ ವಿಮೆ ಪರಿಹಾರವೂ ಬಂದಿಲ್ಲ. ಫಸಲ್‌ ಬಿಮಾ ಯೋಜನೆಯ ಬಗ್ಗೆ ಅವರು ಸಂಪೂರ್ಣ ನಂಬಿಕೆ ಕಳೆದುಕೊಂಡಿದ್ದಾರೆ.

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ನೇಸರಗಿಯ ರೈತ ಸೋಮಪ್ಪ ಮಾಳಣ್ಣವರ ಅನುಭವ ಇದಕ್ಕಿಂತ ಭಿನ್ನವಾಗಿಲ್ಲ. ‘ಇತ್ತೀಚಿನ ವರ್ಷಗಳಲ್ಲಿ ಉತ್ತಮ ಫಸಲು ಕೈಗೆ ಬರುತ್ತಿರಲಿಲ್ಲ. ಏನೋ ನೆರವಾಗಬಹುದೆಂದು ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ವಿಮೆ ಹಣ ಕಟ್ಟಿದ್ದೆ. ಆದರೆ, ವಿಮೆ ಕ್ಲೇಮ್‌ ಮೊತ್ತ ಬಾರದ್ದರಿಂದ ಇನ್ನಷ್ಟು ತೊಂದರೆಗೆ ಸಿಲುಕಿದ್ದೇನೆ’ ಎಂದು ‘ಪ್ರಜಾವಾಣಿ’ ಎದುರು ಅಳಲು ತೋಡಿಕೊಂಡರು.

‘2016–17ರಲ್ಲಿ ತುಂಬಿದ್ದ ವಿಮೆ ಹಣ ಬರಲಿಲ್ಲ. ಹೀಗಾಗಿ, ನಂತರದ ಮೂರು ವರ್ಷ ವಿಮೆ ಕಂತು ಕಟ್ಟಿರಲಿಲ್ಲ. ಕಳೆದ ಬಾರಿ ಕೃಷಿ ಇಲಾಖೆ ಅಧಿಕಾರಿಗಳ ಒತ್ತಾಯದ ಮೇರೆಗೆ ಮುಂಗಾರು ಹಂಗಾಮಿನಲ್ಲಿ ಸೋಯಾಬಿನ್‌ಗೆ ₹ 1,200 ವಿಮೆ, ಹಿಂಗಾರಿನಲ್ಲಿ ಕಡಲೆಗೆ ₹ 600 ಮತ್ತು ಜೋಳಕ್ಕೆ ₹ 200 ಕಟ್ಟಿದ್ದೇನೆ. ವಿಮೆ ಮೊತ್ತ ಬಾರದ್ದರಿಂದ ಇನ್ನಷ್ಟು ಇಕ್ಕಟ್ಟಿಗೆ ಸಿಲುಕಿದ್ದೇನೆ’ ಎಂದರು.

***

ನಾಲ್ಕೈದು ವರ್ಷಗಳಿಂದ ನಿಂಬೆ ಬೆಳೆಗೆ ವಿಮೆ ತುಂಬುತ್ತಾ ಬಂದಿದ್ದೇವೆ. ಆಲಿಕಲ್ಲು ಮಳೆ ಬಿದ್ದು ಗಿಡಗಳು ಹಾಳಾಗಿವೆ. ಬಿರುಗಾಳಿಗೆ ಸಾಕಷ್ಟು ಗಿಡಗಳು ಬಿದ್ದಿವೆ. ಒಂದೇ ಒಂದು ಪೈಸೆ ವಿಮೆ ಹಣ ಬಂದಿಲ್ಲ.

– ಶಂಕರಗೌಡ ಅಗ್ನಿ, ರೈತ ಬೂದಿಹಾಳ ಗ್ರಾಮ, ಬಸವನಬಾಗೇವಾಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT