ಗುರುವಾರ , ಏಪ್ರಿಲ್ 2, 2020
19 °C
ಆಯುಕ್ತಾಲಯದ ಶೇ 60ರಷ್ಟು ಸಿಬ್ಬಂದಿ ನಿಯೋಜನೆ ಮೇಲೆ ನೇಮಕ

ಒಳನೋಟ| ಕಾಯ್ದೆ ಇದ್ದರೂ ಇಲ್ಲ ಕಡಿವಾಣ! ದೂರುಗಳು ಬೆಟ್ಟದಷ್ಟು, ಕ್ರಮ ಇಷ್ಟೇ ಇಷ್ಟು

ರಾಜೇಶ್‌ ರೈ ಚಟ್ಲ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆಹಾರದಲ್ಲಿ ಕಲಬೆರಕೆ ತಡೆ ಗಟ್ಟಲು ‘ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ–2006’ ಅನ್ನು ಜಾರಿಗೆ ತರಲಾಗಿದೆ. ಈ ಕಾಯ್ದೆಯಡಿ ಕ್ರಮ ಜರುಗಿಸಲು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಆಯುಕ್ತಾಲಯವನ್ನು ಸ್ಥಾಪಿಸಲಾಗಿದ್ದರೂ ಸಿಬ್ಬಂದಿ ಕೊರತೆಯಿಂದ ನರಳುತ್ತಿದೆ.

ಇದರಿಂದಾಗಿ, ‘ಕಲಬೆರಕೆ ದಂಧೆ’ ತಡೆಯಲು ಆಯುಕ್ತಾಲಯ ವಿಫಲವಾಗಿದೆ. ಬೆಣ್ಣೆ, ತುಪ್ಪ ತಯಾರಿಸುವ ಸಂಸ್ಥೆಗಳ ಮೇಲೆ ಬೆರಳೆಣಿಕೆಯ ಸಂಖ್ಯೆಯಷ್ಟು ದಾಳಿ ನಡೆಸಿರುವುದನ್ನು ಬಿಟ್ಟರೆ, ಖಾದ್ಯ ತೈಲ ಕಲಬೆರಕೆ ಮಾಫಿಯಾ ಮೇಲೆ ನಿಯಂತ್ರಣ ಸಾಧಿಸಲು ಸಾಧ್ಯವಾಗಿಲ್ಲ. 2018ರ ಏಪ್ರಿಲ್‌ನಿಂದ 2020 ಫೆಬ್ರುವರಿ ಅವಧಿಯಲ್ಲಿ ಬಾಗಲಕೋಟೆಯಲ್ಲಿ ಕಳಪೆ ಗುಣಮಟ್ಟದ ಬೆಣ್ಣೆ, ತುಪ್ಪ ಮಾರಾಟಗಾರರ ಮೇಲೆ ಮೊಕದ್ದಮೆ ದಾಖಲಿಸಿಕೊಂಡಿರುವ ಆಯುಕ್ತಾಲಯ ₹ 3 ಸಾವಿರ ದಂಡ ವಿಧಿಸಿದೆ. ಉಳಿದಂತೆ, 67 ಪ್ರಕರಣಗಳನ್ನು ಮೌನ ವಹಿಸಿ ಕುಳಿತಿದೆ.

‘ದಿಢೀರ್‌ ದಾಳಿ ನಡೆಸಿ ಪರಿಶೀಲನೆ ನಡೆಸಲು ಸಿಬ್ಬಂದಿ ಕೊರತೆಯಿಂದಾಗಿ ಸಾಧ್ಯವಾಗುತ್ತಿಲ್ಲ. ಏಕಕಾಲದಲ್ಲಿ ಎರಡು ಹುದ್ದೆಗಳ ಕಾರ್ಯಭಾರ ನಿರ್ವಹಿಸಬೇಕಾದ ಒತ್ತಡದಿಂದಾಗಿ ಪರಿಣಾಮಕಾರಿಯಾಗಿ ಕೆಲಸ ಮಾಡಲು ಆಗುತ್ತಿಲ್ಲ’ ಎನ್ನುವುದು ಆಯುಕ್ತಾಲಯದ ಸಿಬ್ಬಂದಿಯ ಅಳಲು.

210 ಸಿಬ್ಬಂದಿ ಪೈಕಿ ಕೆಲವು ಉನ್ನತ ಹುದ್ದೆಗಳನ್ನು ಹೊರತುಪಡಿಸಿದರೆ, ಶೇ 60ಕ್ಕೂ ಹೆಚ್ಚು ಮಂದಿ ನಿಯೋಜನೆ ಮೇಲೆ ಕೆಲಸ ಮಾಡುತ್ತಿದ್ದಾರೆ. ಕೆಳಹಂತದ ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲಾಗಿದೆ. ಇಲ್ಲಿಯ ಆಯುಕ್ತರು, ಡ್ರಗ್‌ ಆ್ಯಂಡ್‌ ಲಾಜಿಸ್ಟಿಕ್‌ ಹೆಚ್ಚುವರಿ ನಿರ್ದೇಶಕರಾಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಆಹಾರ ಕಲಬೆರಕೆ ಕಂಡುಬಂದರೆ ಈ ಕಾಯ್ದೆಯ ಸೆಕ್ಷನ್ 52- 64ರ ಅಡಿಯಲ್ಲಿ ಕ್ರಮ ತೆಗೆದುಕೊಳ್ಳಲು ಅವಕಾಶ ಇದೆ. ನಿಯಮಬದ್ಧವಾಗಿ ಆಹಾರ ಮಾದರಿ ಸಂಗ್ರಹಿಸಿ, ಪರೀಕ್ಷೆಗೆ ಒಳಪಡಿಸಿ ತಪ್ಪಿತಸ್ಥರ ವಿರುದ್ಧ ಹೆಚ್ಚುವರಿ ಜಿಲ್ಲಾಧಿಕಾರಿ (ಎಡಿಸಿ) ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿಕೊಂಡು ದಂಡ ವಿಧಿಸಲು ಅವ ಕಾಶವಿದೆ. ಅಸುರಕ್ಷಿತವೆಂದು ಕಂಡುಬಂದರೆ ಮಾರಾಟಗಾರರ ವಿರುದ್ಧ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿ, ಕ್ರಮ ತೆಗೆದುಕೊಳ್ಳಬಹುದು. ಆದರೆ, ಈ ಕೆಲಸಗಳನ್ನು ನಿರ್ವಹಿಸಲು ಸಿಬ್ಬಂದಿಯೇ ಇಲ್ಲ.

ಜಿಲ್ಲಾ ಮಟ್ಟದ ಅಂಕಿತ ಅಧಿಕಾರಿ ಗಳ 36 ಹುದ್ದೆಗಳಿವೆ. ಆಹಾರ ಪದಾರ್ಥ ಗಳ ಗುಣಮಟ್ಟದ ಮೇಲೆ ನಿಗಾ ಇಡುವ ಜೊತೆಗೆ, ಅಪಾಯಕಾರಿ ರಾಸಾಯನಿಕ ಬಳಕೆ ನಿಯಂತ್ರಿಸುವ ಹೊಣೆಗಾರಿಕೆ ಈ ಅಧಿಕಾರಿಗಳದ್ದು. ಈ ಪೈಕಿ, ಒಂಬತ್ತು ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಲು ಸರ್ಕಾರ ಮೀನಮೇಷ ಎಣಿಸುತ್ತಿದೆ. ಇದು, ಕಲಬೆರಕೆ ಮಾಫಿಯಾಕ್ಕೆ ಅನುಕೂಲವಾಗಿದೆ.

ಜಂಕ್ ಫುಡ್‌ ಬಳಕೆ, ಆಹಾರದಲ್ಲಿ ಕಲಬೆರಕೆ ಪ್ರಕರಣಗಳು ಹೆಚ್ಚುತ್ತಿವೆ. ಜನರ ಆರೋಗ್ಯ ಗಮನದಲ್ಲಿಟ್ಟು ಕೊಂಡೇ ಕೇಂದ್ರ ಸರ್ಕಾರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಜಾರಿಗೆ ತಂದಿದೆ. ಈ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕಾದರೆ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಜೊತೆಗೆ, ಆಹಾರ ಪ್ರಯೋಗಾಲಯಗಳಿಗೆ ಅಗತ್ಯವಾದ ಉಪಕರಣಗಳನ್ನು ಒದಗಿಸಬೇಕು’ ಎಂದು ಆಯುಕ್ತಾಲಯದ ಅಧಿಕಾರಿಯೊಬ್ಬರು ಅಭಿಪ್ರಾಯಪಡುತ್ತಾರೆ.

ಕಾಯ್ದೆ ಉಲ್ಲಂಘಿಸಿದರೆ ಕಾನೂನಿನ ಕುಣಿಕೆ
ವೈಜ್ಞಾನಿಕ ಗುಣಮಟ್ಟ ಆಧರಿಸಿ ಆಹಾರ ತಯಾರಿಕೆ, ದಾಸ್ತಾನು, ಪ್ಯಾಕಿಂಗ್, ಸಾಗಣೆ, ಹಂಚಿಕೆ, ಮಾರಾಟ ಮತ್ತು ಆಮದು ಮತ್ತಿತರ ವಿಚಾರದಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಆಯುಕ್ತಾಲಯದ ಅಧಿಕಾರಿಗಳು ತಪಾಸಣೆ ನಡೆಸುತ್ತಾರೆ. ನಿಯಮ ಉಲ್ಲಂಘಿಸಿದವರಿಗೆ ನ್ಯಾಯಾಲಯ ಕನಿಷ್ಠ 6 ತಿಂಗಳ ಶಿಕ್ಷೆ, ಗರಿಷ್ಠ ಜೀವಾವಧಿ ಶಿಕ್ಷೆ ವಿಧಿಸಲು ಅವಕಾಶವಿದೆ. ಅಸುರಕ್ಷಿತ ಆಹಾರದಿಂದ ತೊಂದರೆ ಅನುಭವಿಸಿದವರಿಗೆ ಸಂಬಂಧಿಸಿದ ಉದ್ದಿಮೆದಾರರು ₹ 2 ಲಕ್ಷದಿಂದ ₹ 5 ಲಕ್ಷದವರೆಗೆ ಪರಿಹಾರ ನೀಡಬೇಕಿದೆ.

ಬೀದಿಬದಿ ಮಾರಾಟಗಾರರಿಂದ ಹಿಡಿದು ದೊಡ್ಡ ಆಹಾರ ಉದ್ದಿಮೆದಾರರು, ಹಾಲು ಉತ್ಪಾದಕರು, ಮಾಂಸ, ಸಸ್ಯಾಹಾರ, ಮದ್ಯ, ತಂಪು ಪಾನೀಯ, ನೀರು, ಅಕ್ಕಿ, ಸಕ್ಕರೆ, ಎಣ್ಣೆ, ಬೇಕರಿ ಪದಾರ್ಥಗಳ ತಯಾರಕರು, ನ್ಯಾಯಬೆಲೆ ಅಂಗಡಿ ಮಾಲೀಕರು ಈ ಕಾಯ್ದೆ ವ್ಯಾಪ್ತಿಗೆ ಬರುತ್ತಾರೆ.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಆಯುಕ್ತಾಲಯದಲ್ಲಿ ಏಪ್ರಿಲ್‌ 2019ರಿಂದ ಜನವರಿ 2020ರ ಅವಧಿಯಲ್ಲಿ ಸುಮಾರು 61,884 ಆಹಾರ ಉದ್ದಿಮೆಗಳನ್ನು ನೋಂದಣಿ ಮಾಡಿಕೊಳ್ಳಲಾಗಿದ್ದು, 9,210ಕ್ಕೆ ಪರವಾನಗಿ ನೀಡಲಾಗಿದೆ. ಇದರಿಂದ ಸರ್ಕಾರಕ್ಕೆ ಸುಮಾರು₹ 5.54 ಕೋಟಿ ಸಂದಾಯವಾಗಿದೆ.

ಇದನ್ನೂ ಓದಿ:  

ಒಳನೋಟ | ಕಲಬೆರಕೆ ಮಾಫಿಯಾ, ಖಾದ್ಯ ತೈಲದಲ್ಲೂ ವಿಷ
ಒಳನೋಟ | ರಾಜ್ಯದಲ್ಲಿ ಇನ್ನೂ ಉಸಿರಾಡುತ್ತಿದೆ ಗಾಣದೆಣ್ಣೆ ಉದ್ಯಮ
ಒಳನೋಟ | ಕಲಬೆರಕೆ ತಡೆಗೆ ಆಧುನಿಕ ಗಾಣ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು