ಶನಿವಾರ, 3 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಹಾಲು ಮಾರಾಟ ಆರಂಭಿಸಿದ ಜಿಮ್ ಟ್ರೇನರ್

Last Updated 17 ಜುಲೈ 2021, 21:06 IST
ಅಕ್ಷರ ಗಾತ್ರ

ದಾವಣಗೆರೆ: ದಿನವೂ ಹತ್ತಾರು ಜನರಿಗೆ ದೈಹಿಕ ಕಸರತ್ತಿಗೆ ಮಾರ್ಗದರ್ಶನ ಮಾಡಿ ಅವರ ಆರೋಗ್ಯ ವೃದ್ಧಿಸಲು ಸಹಕರಿಸುತ್ತಿದ್ದ ಜಿಮ್‌ ತರಬೇತುದಾರ ಕಿರಣಕುಮಾರ್‌ ಎಸ್‌.ಪಿ. ಅವರು ಕೋವಿಡ್‌ ಲಾಕ್‌ಡೌನ್‌ ಪರಿಣಾಮ ಕೆಲಸ ಕಳೆದುಕೊಂಡಿದ್ದರಿಂದ, ಜೀವನ ನಿರ್ವಹಣೆಗೆ ಮನೆ–ಮನೆಗೆ ತೆರಳಿ ಹಾಲು ಮಾರಾಟಕ್ಕೆ ಮುಂದಾಗಿದ್ದಾರೆ.

ನಗರದ ಸಾಯಿ ಜಿಮ್‌ನಲ್ಲಿ ತರಬೇತುದಾರರಾಗಿದ್ದ ಹರಿಹರ ತಾಲ್ಲೂಕಿನ ದೇವರಬೆಳಕೆರೆಯ ಕಿರಣಕುಮಾರ್‌, ಲಾಕ್‌ಡೌನ್‌ ಜಾರಿಯಾದಾಗ ಸಂಕಷ್ಟಕ್ಕೆ ಸಿಲುಕಿಕೊಂಡರು. ಹೀಗಾಗಿ ತಮ್ಮ ಊರಿನಿಂದ ಹಾಲು ತಂದು ನಗರದ ಹತ್ತಾರು ಮನೆ ಹಾಗೂ ಹೋಟೆಲ್‌ಗಳಿಗೆ ಹಾಕುತ್ತಿದ್ದು, ಬದುಕಿನ ಬಂಡಿ ಸಾಗಿಸಲು ಹೆಣಗಾಡುತ್ತಿದ್ದಾರೆ.

‘ಐದು ವರ್ಷಗಳಿಂದ ಜಿಮ್‌ನಲ್ಲಿ ತರಬೇತುದಾರನಾಗಿ ಕೆಲಸ ಮಾಡುತ್ತಿದ್ದೆ. ತಿಂಗಳಿಗೆ ₹ 8,000 ವೇತನವೂ ಸಿಗುತ್ತಿತ್ತು. ಕಳೆದ ವರ್ಷ ಮದುವೆಯಾದೆ. ಆದರೆ ಕೆಲವೇ ದಿನಗಳಲ್ಲಿ ಲಾಕ್‌ಡೌನ್‌ ಘೋಷಿಸಿದ್ದರಿಂದ ಜಿಮ್‌ ಬಂದ್‌ ಆಗಿ ಕೆಲಸ ಕಳೆದುಕೊಂಡೆ. ಜೀವನ ನಡೆಸುವುದೇ ಕಷ್ಟವಾಗಿತ್ತು. ಈಗ ಕೋವಿಡ್‌ ಎರಡನೇ ಅಲೆ ಬಂದು ಮತ್ತೆ ಕೆಲಸ ಇಲ್ಲದಂತಾಯಿತು. ಹೆಂಡತಿ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ ಆಗಿದ್ದು, ಅವರೇ ದುಡಿದು ಕುಟುಂಬ ನಡೆಸುವಂತಾಯಿತು. ಕುಟುಂಬ ನಿರ್ವಹಣೆಗೆ ಹಣ ಹೊಂದಿಸಲು ಕಷ್ಟವಾಗಿದ್ದರಿಂದ ಊರಿನಿಂದ ದಿನಾಲೂ ಬೆಳಿಗ್ಗೆ 25 ಲೀಟರ್‌ ಹಾಲು ತರಿಸಿಕೊಂಡು ಮಾರಾಟ ಮಾಡುತ್ತಿದ್ದೇನೆ. ಇದರಿಂದ ದಿನಕ್ಕೆ ₹ 250 ಸಿಗುತ್ತಿದೆ’ ಎಂದು ಕಿರಣಕುಮಾರ್‌ ಸಂಕಟವನ್ನು ಹೇಳಿಕೊಂಡರು.

‘ಬೆಂಗಳೂರಿನಲ್ಲಿ ನಡೆದಿದ್ದ ದೇಹದಾರ್ಢ್ಯ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಮೂರನೇ ಸ್ಥಾನ ಬಂದಿತ್ತು. ‘ಮಿಸ್ಟರ್‌ ದಾವಣಗೆರೆ’, ‘ಮಿಸ್ಟರ್‌ ರಾಣೆಬೆನ್ನೂರು’ ಟೈಟಲ್‌ಗಳನ್ನು ಗೆದ್ದುಕೊಂಡಿರುವುದರಿಂದ ಸ್ಥಳೀಯವಾಗಿ ಜನಪ್ರಿಯತೆ ಗಳಿಸಿದ್ದೆ’ ಎಂದು ಹೇಳಿದರು.

‘ಈಗ ಜಿಮ್‌ ತೆರೆದಿದ್ದರೂ ಕಡಿಮೆ ಹುಡುಗರು ಬರುತ್ತಿರುವುದರಿಂದ ಮಾಲೀಕರು ಕೆಲಸಕ್ಕೆ ತೆಗೆದುಕೊಂಡಿರಲಿಲ್ಲ. ಅಭ್ಯಾಸ ತಪ್ಪಬಾರದು ಎಂದು ಸಂಬಳ ಕೊಡದಿದ್ದರೂ ಜಿಮ್‌ಗೆ ಹೋಗಿ ಮಾರ್ಗದರ್ಶನ ಮಾಡುತ್ತಿದ್ದೇನೆ. ಸಂಕಷ್ಟದಲ್ಲಿರುವ ಜಿಮ್‌ ತರಬೇತುದಾರರಿಗೂ ಸರ್ಕಾರ ಕೋವಿಡ್‌ ಪರಿಹಾರ ನೀಡಿದರೆ ಅನುಕೂಲವಾಗಲಿದೆ’ ಎನ್ನುತ್ತಾರೆ ಕಿರಣಕುಮಾರ್‌.

ಪೈಲ್ವಾನರಿಗೂ ಸಂಕಷ್ಟ

ಕುಸ್ತಿಪಟುಗಳದ್ದೂ ಇದೇ ಕಥೆ. ನಾಡಕುಸ್ತಿ ಆಡುವವರು ಜಾತ್ರೆ, ಹಬ್ಬದ ಸಂದರ್ಭಗಳಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ಭಾಗವಹಿಸಿ ಅಷ್ಟೊ ಇಷ್ಟೊ ದುಡಿಯುತ್ತಿದ್ದರು. ಅವರಿಗೆಲ್ಲ ಆದಾಯದ ಮೂಲ ತಪ್ಪಿದಂತಾಗಿದೆ.

‘ಕುಸ್ತಿಪಟುಗಳಿಗೆ ತುಂಬಾನೆ ತೊಂದರೆಯಾಗಿದೆ. ಎರಡು ವರ್ಷ ಸರಿಯಾಗಿ ತರಬೇತಿಯೂ ನಡೆದಿಲ್ಲ. ಕೆಲವರು ಕೃಷಿ ಕೆಲಸಗಳಲ್ಲಿ ತೊಡಗಿದ್ದಾರೆ. ಕೆಲವು ಪೈಲ್ವಾನರಿಗೆ ಕ್ರೀಡಾ ಕೋಟಾದಡಿ ಸೇನೆ ಸೇರಿದಂತೆ ಇತರ ಕಡೆ ಇದ್ದ ಉದ್ಯೋಗಾವಕಾಶಗಳೂ ಕೈತಪ್ಪಿವೆ’ ಎನ್ನುತ್ತಾರೆ ಹಿರಿಯ ಕುಸ್ತಿ ತರಬೇತುದಾರ, ದಾವಣಗೆರೆಯ ಶಿವಾನಂದ ಅವರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT