ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮ ಪಂಚಾಯ್ತಿಗೆ ಶುದ್ಧ ನೀರಿನ ‘ಹೊರೆ’

ಗ್ರಾಮೀಣ ಪ್ರದೇಶಗಳಲ್ಲಿ ನೀಗಿದ ದಾಹ l ವಿದ್ಯುತ್, ಜಲಮೂಲಗಳ ಕೊರತೆ lಎಲ್ಲೆಲ್ಲೂ ನಿರ್ವಹಣೆಯದ್ದೇ ಸಮಸ್ಯೆ
Last Updated 29 ಜೂನ್ 2019, 19:59 IST
ಅಕ್ಷರ ಗಾತ್ರ

ಗದಗ: ಪ್ಲೊರೊಸಿಸ್‌ ನಿಯಂತ್ರಣ ಮತ್ತು ತಡೆಗಟ್ಟುವಿಕೆಯ ರಾಷ್ಟ್ರೀಯ ಕಾರ್ಯಕ್ರಮ (ಎನ್‌ಪಿಪಿಸಿಎಫ್‌) 2009ರಲ್ಲಿ ಆರಂಭವಾಯಿತು. ಅದೇ ವರ್ಷ ಗದಗ ತಾಲ್ಲೂಕಿನ ಹುಲಕೋಟಿ ಗ್ರಾಮದಲ್ಲಿ, ಕೆ.ಎಚ್‌ ಪಾಟೀಲ ಪ್ರತಿಷ್ಠಾನದಿಂದ ಮೊದಲ ಶುದ್ದ ಕುಡಿಯುವ ನೀರಿನ ಘಟಕ (ಆರ್‌ಒ) ಸ್ಥಾಪನೆಗೊಂಡಿತು. ಮುಂದೆ ಸಿದ್ದರಾಮಯ್ಯ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾದ ಎಚ್‌.ಕೆ ಪಾಟೀಲ ಅವರು ರಾಜ್ಯದಾದ್ಯಂತ ಇಂತಹ ಘಟಕಗಳ ಸ್ಥಾಪನೆಗೆ ಯೋಜನೆ ರೂಪಿಸಿದರು.

ಸದ್ಯ ಗದಗ ಜಿಲ್ಲೆಯಲ್ಲಿ ಒಟ್ಟು 474 ಆರ್‌ಒ ಘಟಕಗಳಿವೆ. ಇದರಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ 218 ಮತ್ತು ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದಿಂದ (ಕೆಆರ್‌ಐಡಿಎಲ್‌) 182 ಘಟಕಗಳನ್ನು ಸ್ಥಾಪಿಸಲಾಗಿದೆ. ಇನ್ನುಳಿದ 74 ಘಟಕಗಳಲ್ಲಿ 20 ಘಟಕಗಳು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಮತ್ತು ಉಳಿದವು ಕೆ.ಎಚ್‌ ಪಾಟೀಲ ಪ್ರತಿಷ್ಠಾನಕ್ಕೆ ಸೇರಿದವು.

ಸರ್ಕಾರ ಸ್ಥಾಪಿಸಿರುವ 400 ಘಟಕಗಳಲ್ಲಿ ಸದ್ಯ 29 ಘಟಕಗಳು ಸ್ಥಗಿತಗೊಂಡಿವೆ. ನೀರಿನ ಸಮಸ್ಯೆಯಿಂದ 2, ವಿದ್ಯುತ್‌ ಸಂಪರ್ಕ ಇಲ್ಲದ ಕಾರಣ 6 ಹಾಗೂ ದುರಸ್ತಿ ಮತ್ತಿತರ ತಾಂತ್ರಿಕ ಕಾರಣಗಳಿಗೆ 22 ಘಟಕಗಳು ಸ್ಥಗಿತಗೊಂಡಿವೆ. ಖಾಸಗಿ ಸಂಸ್ಥೆಗೆ ಸೇರಿದ 74 ಘಟಕಗಳಲ್ಲಿ 1 ಘಟಕ ಮಾತ್ರ ಕಚ್ಚಾ ನೀರಿನ ಸಮಸ್ಯೆಯಿಂದ ಸ್ಥಗಿತಗೊಂಡಿದೆ.

ಆರ್‌ಒ ಘಟಕಗಳು ಗ್ರಾಮೀಣ ಪ್ರದೇಶದಲ್ಲಿ ಜನರ ನೀರಿನ ಬವಣೆ ನೀಗಿಸಿವೆ. ಆರೋಗ್ಯವನ್ನೂ ಸುಧಾರಿಸಿದೆ. ಆದರೆ, ಈ ಎಲ್ಲ ಘಟಕಗಳು ಕೊಳವೆಬಾವಿಯ ನೀರನ್ನೇ (ಕಚ್ಚಾ ನೀರಿಗಾಗಿ) ಅವಲಂಬಿಸಿವೆ. ಎರಡು ವರ್ಷಗಳಿಂದ ಈಚೆಗೆ, ನದಿಮೂಲದಿಂದ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕೆರೆಗಳನ್ನು ತುಂಬಿಸಿರುವುದರಿಂದ, ಕೆರೆಯ ಸುತ್ತಮುತ್ತಲ ಪ್ರದೇಶಗಳಲ್ಲಿ ಅಂತರ್ಜಲ ಹೆಚ್ಚಳಗೊಂಡಿದೆ. ಹೀಗಾಗಿ ಕೊಳವೆಬಾವಿಯಲ್ಲೂ ನೀರು ಬರುತ್ತಿದೆ. ಗ್ರಾಮೀಣ ಜನರು ಶುದ್ಧ ನೀರು ಕುಡಿಯುತ್ತಿದ್ದಾರೆ.

ರೋಣ ತಾಲ್ಲೂಕಿನಲ್ಲಿ 125 ಆರ್‌ಒ ಘಟಕಗಳಿದ್ದು, ಅವುಗಳಲ್ಲಿ ಮಾಡಲಗೇರಿ, ಮಾಳವಾಡ, ನಿಡಗುಂದಿ, ಜಿಗೇರಿ, ವೀರಾಪುರ ಗ್ರಾಮಗಳ ಒಟ್ಟು 5 ಘಟಕಗಳು ದುರಸ್ತಿಯಲ್ಲಿವೆ. ಗಜೇಂದ್ರಗಡ ಪಟ್ಟಣದಲ್ಲಿನ 6 ಘಟಕಗಳಲ್ಲಿ 1 ಮಾತ್ರ ಚಾಲನೆಯಲ್ಲಿದೆ. ‘ಜಿಗೇರಿ ಗ್ರಾಮದಲ್ಲಿನ ಘಟಕ ಸ್ಥಾಪನೆಯಾಗಿ 4 ವರ್ಷ ಕಳೆದರೂ ಪಂಚಾಯ್ತಿಗೆ ಹಸ್ತಾಂತರಗೊಂಡಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಜನರು ಶುದ್ಧ ಕುಡಿಯುವ ನೀರಿನಿಂದ ವಂಚಿತರಾಗಿದ್ದಾರೆ’ ಎಂದು ಗ್ರಾಮಸ್ಥ ದುರಗೇಶ ಕಟ್ಟಿಮನಿ ಹೇಳಿದರು.

ಲಕ್ಷ್ಮೇಶ್ವರ ಮತ್ತು ಶಿರಹಟ್ಟಿ ತಾಲ್ಲೂಕು ಸೇರಿ 114 ಆರ್‌ಒ ಘಟಕಗಳಿದ್ದು, ಇವುಗಳಲ್ಲಿ 10 ಘಟಕ ಸ್ಥಗಿತಗೊಂಡಿವೆ. ಇನ್ನುಳಿದವು ಕಾರ್ಯನಿರ್ವಹಿಸುತ್ತಿವೆ. ಲಕ್ಷ್ಮೇಶ್ವರ ತಾಲ್ಲೂಕಿನಲ್ಲಿ ಯಾವುದೇ ಘಟಕ ಸ್ಥಗಿತಗೊಂಡಿಲ್ಲ. ನರಗುಂದ ತಾಲ್ಲೂಕಿನಲ್ಲಿ 40 ಆರ್‌ಒ ಘಟಕಗಳಿದ್ದು, ಕೊಣ್ಣೂರು ಗ್ರಾಮದಲ್ಲಿನ 2 ಮತ್ತು ಬನಹಟ್ಟಿಯಲ್ಲಿನ 1 ಘಟಕ ಸೇರಿ 3 ಘಟಕಗಳು ಸ್ಥಗಿತಗೊಂಡಿವೆ. ಮುಂಡರಗಿ ತಾಲ್ಲೂಕಿನಲ್ಲಿ 85 ಆರ್‌ಒ ಘಟಕಗಳಿದ್ದು, ಇದರಲ್ಲಿ 11 ಘಟಕಗಳು ಸ್ಥಗಿತಗೊಂಡಿವೆ. ಹಿರೇವಡ್ಡಟ್ಟಿ ತಾಲ್ಲೂಕಿನ ಬಹುದೊಡ್ಡ ಗ್ರಾಮವಾಗಿದ್ದು, ಕಳೆದ 15 ದಿನಗಳಿಂದ ಗ್ರಾಮದ ಎರಡೂ ಆರ್‌ಒ ಘಟಕಗಳು ಸ್ಥಗಿತಗೊಂಡಿದ್ದು, ಕುಡಿಯಲು ಕೊಳವೆಬಾವಿ ನೀರನ್ನೇ ಅವಲಂಬಿಸಿದ್ದಾರೆ.

ನಿರ್ವಹಣೆಯೇ ಹೊರೆ

ಸರಿಯಾಗಿ ಕಾರ್ಯನಿರ್ವಹಿಸದಿದ್ದರಿಂದ ಆರ್‌ಒ ಘಟಕಗಳ ನಿರ್ವಹಣೆ ಗುತ್ತಿಗೆ ಪಡೆದಿದ್ದ ಸ್ಮಾರ್ಟ್‌ ಇಂಡಿಯಾ ಕಂಪೆನಿಯ ಒಪ್ಪಂದ ರದ್ದುಗೊಂಡಿದೆ. ಹೊಸದಾಗಿ ಟೆಂಡರ್‌ ಕರೆಯಲಾಗಿದೆ. ಅದುವರೆಗೆ ಜಿಲ್ಲೆಯ 293 ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆಯನ್ನು ಗ್ರಾಮ ಪಂಚಾಯ್ತಿಗೆ ವಹಿಸಲಾಗಿದೆ. ವಿದ್ಯುತ್‌ ಶುಲ್ಕ, ಘಟಕದ ಸಿಬ್ಬಂದಿ ವೇತನ, ದುರಸ್ತಿ ವೆಚ್ಛ ಕಳೆದು, ಬರುವ ನೀರಿನ ವರಮಾನದಿಂದ ನಷ್ಟವನ್ನು ಸರಿದೂಗಿಸಿಕೊಳ್ಳಲು ಗ್ರಾಮ ಪಂಚಾಯ್ತಿಗಳು ಹರಸಾಹಸ ಪಡುತ್ತಿವೆ. ನಷ್ಟ ಸರಿದೂಗಿಸಿಕೊಳ್ಳಲು ಈಗಾಗಲೇ ಜಿಲ್ಲೆಯ ಕೆಲವು ಆರ್‌ಒ ಘಟಕಗಳಲ್ಲಿ 20 ಲೀಟರ್‌ ನೀರಿಗೆ ₹2ರ ಬದಲು, ₹5 ದರ ಪಡೆಯಲಾಗುತ್ತಿದೆ.

***

ಆರ್‌ಒ ಘಟಕ ಸ್ಥಾಪನೆಗೂ ಮೊದಲು ಕೊಳವೆಬಾವಿ ನೀರು ಬಳಸುತ್ತಿದ್ದೆವು. ಪ್ಲೋರೈಡ್‌ ಅಂಶ ಹೆಚ್ಚಿರುವ ಈ ನೀರು ಕುಡಿದು ಹಲ್ಲುಗಳ ಮೇಲೆ ಕೆಂಪು ಕಲೆಗಳು ಬಿದ್ದಿವೆ. ಮೂಳೆ, ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಈಗ ಕಡಿಮೆಯಾಗಿದೆ.

ಸಂಗನಗೌಡ ಪಾಟೀಲ, ಗ್ರಾಮಸ್ಥ, ಮುಶಿಗೇರಿ, ಗಜೇಂದ್ರಗಡ

ಇವನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT