ಮಂಗಳವಾರ, ಜನವರಿ 28, 2020
25 °C

ಒಳನೋಟ | ಯಾರ ಹಿತಕ್ಕಾಗಿ 'ಆರ್‌ಟಿಇ' ಕಾಯ್ದೆಗೆ ತಿದ್ದುಪಡಿ

ರಶ್ಮಿ ಬೇಲೂರು Updated:

ಅಕ್ಷರ ಗಾತ್ರ : | |

Prajavani

ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಆರ್‌ಟಿಇ ಜಾರಿಗೆ ತಂದ  ರಾಜ್ಯ ಎಂಬ ಖ್ಯಾತಿಗೆ ಪಾತ್ರವಾದ ಕರ್ನಾಟಕ 2019-20ರಲ್ಲಿ ಅದಕ್ಕೆ ತಿದ್ದುಪಡಿ ತಂದಿತು. ಇದರಿಂದ ರಾಜ್ಯದಲ್ಲಿ ಆರ್‌ಟಿಇ ಬೇಡಿಕೆ ದೊಡ್ಡ ಪ್ರಮಾಣದಲ್ಲಿ ಕುಸಿದಿದೆ.

ಕಾಯ್ದೆಗೆ ತಂದ ತಿದ್ದುಪಡಿಯ ಪ್ರಕಾರ ಆರ್‌ಟಿಇ ಅಡಿಯಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಪ್ರವೇಶಕ್ಕೆ ಮೊದಲ ಆದ್ಯತೆ. ಒಂದು ವೇಳೆ ಆ ಪ್ರದೇಶದಲ್ಲಿ ಸರ್ಕಾರಿ ಅಥವಾ ಅನುದಾನಿತ ಶಾಲೆ ಲಭ್ಯವಿಲ್ಲದಿದ್ದರೆ ಮಾತ್ರ ಖಾಸಗಿ ಅನುದಾನರಹಿತ ಶಾಲೆಗಳಲ್ಲಿ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ.

ಇದು ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿಸುವ ಉದ್ದೇಶದಿಂದ ತಂದ ತಿದ್ದುಪಡಿ ಎಂದು ಅಧಿಕಾರಿಗಳು ಸಮರ್ಥಿಸಿಕೊಳ್ಳುತ್ತಾರಾದರೂ, ಇದು ಖಾಸಗಿ ಶಾಲೆಗಳ ಲಾಬಿಗೆ ತಲೆಬಾಗಿ ಸರ್ಕಾರ ಮಾಡಿದ ತಿದ್ದುಪಡಿ ಎಂದು ಆರ್‌ಟಿಇ ಪರ ಕಾರ್ಯಕರ್ತರು ಆರೋಪಿಸುತ್ತಾರೆ.

‘ಶೇ 25 ಸೀಟುಗಳನ್ನು ಆರ್‌ಟಿಇ ಅಡಿ ಸಾಮಾಜಿಕ ಬದ್ಧತೆ ಎಂದು ಖಾಸಗಿ ಶಾಲೆಗಳಿಗೆ ನೀಡಲಾಗಿತ್ತಾದರೂ, ಇತ್ತೀಚೆಗೆ ತಂದ ತಿದ್ದು ಪಡಿಯ ಹಿಂದೆ ಖಾಸಗಿ ಶಾಲೆಗಳ ಕೈವಾಡವೂ ಇದೆ. ಸರ್ಕಾರ ಆ ಸೀಟುಗಳಿಗೆ ಪ್ರತಿ ಮಗುವಿಗೆ ನೀಡುವುದು ₹16 ಸಾವಿರ. ಆದರೆ ಅದೇ ಸೀಟುಗಳು ಬಿಕರಿಯಾದರೆ ಲಕ್ಷ ಲಕ್ಷ ಹಣ ಸಿಗುತ್ತದೆ’ ಎನ್ನುತ್ತಾರೆ ಆರ್‌ಟಿಇ ಕಾರ್ಯಪಡೆಯ ನಾಗಸಿಂಹ ಜಿ. ರಾವ್.

2018-19ರಲ್ಲಿ ಆರ್‌ಟಿಇ ಅಡಿಯಲ್ಲಿ 1.20 ಲಕ್ಷ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರೆ, ಕಾಯ್ದೆಗೆ ತಂದ ತಿದ್ದುಪಡಿ ತಂದ ನಂತರ ಈ ಸಂಖ್ಯೆ 4 ಸಾವಿರಕ್ಕೆ ಕುಸಿದಿದೆ!

ತಿದ್ದುಪಡಿಯ ಪ್ರಕಾರ ಕಾಯ್ದೆಯ 12 (1) (ಸಿ) ಅನುದಾನ ರಹಿತ ಶಾಲೆಗಳ ಪ್ರವೇಶಕ್ಕೆ ಕತ್ತರಿ ಹಾಕಿ, 12 (1) (ಬಿ) ಅನುದಾನಿತ ಶಾಲೆಗಳಿಗೆ ಮಾತ್ರ ಪ್ರವೇಶ ನಿಗದಿಪಡಿಸಲಾಯಿತು.

ಇದನ್ನೂ ಓದಿ... ಒಳನೋಟ | ಅನುಷ್ಠಾನದಲ್ಲೇ ಗೊಂದಲ, ಆರ್‌ಟಿಇ ಅಡಕತ್ತರಿ!

ಸಾಮಾಜಿಕ ಬದ್ಧತೆ ಹೆಸರಲ್ಲಿ ಅರ್ಥಿಕ ಸಂಕಷ್ಟಕ್ಕೆ ದೂಡುವುದೇ?
ಆರ್‌ಟಿಇ ಅಡಿಯಲ್ಲಿ ಸರ್ಕಾರ ಇನ್ನೂ ₹1200 ಕೋಟಿ ಶುಲ್ಕವನ್ನು ಬಾಕಿ ಉಳಿಸಿಕೊಂಡಿದೆ ಎಂಬುದು ಖಾಸಗಿ ಶಾಲಾ ಆಡಳಿತ ಮಂಡಳಿಗಳ ಆರೋಪ.

‘ಆರ್‌ಟಿಇ ಅಡಿ ಖಾಸಗಿ ಶಾಲೆಗಳು ಸೀಟು ಕೊಡುವುದು ಸಾಮಾಜಿಕ ಬದ್ಧತೆ ಎಂದು ಸರ್ಕಾರ ಹೇಳುತ್ತದೆ. ಆದರೆ, ಡೊನೇಷನ್ ಪಡೆಯಲು ಅವಕಾಶಗಳಿಲ್ಲ. ಹೀಗಿರುವಾಗ ಸಾಮಾಜಿಕ ಬದ್ಧತೆ ಹೆಸರಿನಲ್ಲಿ ಖಾಸಗಿ ಶಾಲೆಗಳನ್ನು ಆರ್ಥಿಕವಾಗಿ ದುರ್ಬಲಗೊಳಿಸುವುದು ಸರಿಯೇ’ ಎನ್ನುವರು ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ (ಕ್ಯಾಮ್ಸ್‌) ಕಾರ್ಯದರ್ಶಿ ಶಶಿಕುಮಾರ್.

‘ಆರ್‌ಟಿಇ ಅಡಿ ಪ್ರವೇಶ ಪಡೆದ ಶೇ 90 ಮಕ್ಕಳ ಪೋಷಕರು ಆರ್ಥಿಕವಾಗಿ ಸಬಲರಾದವರೇ. ಈ ವಿಷಯವನ್ನು ಸರ್ಕಾರದ ಗಮನಕ್ಕೂ ತಂದಿದ್ದೇವೆ.ಹಲವರು ಸುಳ್ಳು ದಾಖಲೆಗಳನ್ನು ಸಲ್ಲಿಸಿ ಸೀಟು ಪಡೆದಿರುವ ಪ್ರಕರಣಗಳಿವೆ. ಆದರೆ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಬದಲಾಗಿ ಶಿಕ್ಷಣ ಇಲಾಖೆ ಕಂದಾಯ ಇಲಾಖೆ ನೀಡಿದ ದಾಖಲಾತಿಗಳ ಆಧಾರದ ಮೇಲೆ ಸೀಟ್ ನೀಡಿದ್ದೇವೆ ಎಂದು ಕೈತೊಳೆದುಕೊಂಡಿದೆ’ ಎನ್ನುವರು.

‘ಆರ್‌ಟಿಇ ಸರ್ಕಾರಕ್ಕೆ ಹೊರೆಯೇ. ಏಕೆಂದರೆ ಆರ್‌ಟಿಇ ಕಾಯ್ದೆಯಡಿ ನರ್ಸರಿ ಪ್ರವೇಶಕ್ಕೆ ಅವಕಾಶ ಇಲ್ಲದ ಕಾರಣ ಕೇಂದ್ರ ಸರ್ಕಾರ ಅನುದಾನ ನೀಡಿಲ್ಲ. ಇನ್ನು ಈಗ 9 ಮತ್ತು 10ನೇ ತರಗತಿಗೂ ವಿಸ್ತರಿಸಿದರೆ ಮತ್ತಷ್ಟು ಹೊರೆ ಬೀಳಲಿದೆ. ಸರ್ಕಾರ ನೀಡುತ್ತಿರುವ ಆರ್‌ಟಿಇ ಮರುಪಾವತಿ ಖಾಸಗಿ ಶಾಲೆಗಳಲ್ಲಿ ನಿಗದಿಯಾದ ಶುಲ್ಕಕ್ಕೆ ಸಮಾನವಾಗಿಲ್ಲ. ಹೀಗಾಗಿ ಆರ್‌ಟಿಇ ಅಡಿ ಶೇ 25 ಸೀಟು ಪಡೆದ ವಿದ್ಯಾರ್ಥಿಗಳ ಪಾಲನ್ನು ಉಳಿದ ಶೇ 75 ವಿದ್ಯಾರ್ಥಿಗಳ ಪೋಷಕರು ಭರಿಸುವಂತಾಗಿದೆ’ ಎನ್ನುತ್ತಾರೆ ಶಶಿಕುಮಾರ್.

ಇದನ್ನೂ ಓದಿ... ಶಿಕ್ಷಣ ಹಕ್ಕು ಕಾಯ್ದೆಯ ಮೂಲ ಆಶಯ ಮೂಲೆಗುಂಪು

ಸರ್ಕಾರ ಶಾಲೆಗಳಿಗೆ ಶಕ್ತಿ ತುಂಬಬಹುದಿತ್ತು
ಕಳೆದ 8 ವರ್ಷಗಳಲ್ಲಿ ಆರ್‌ಟಿಇ ಅಡಿಯಲ್ಲಿ ಖಾಸಗಿ ಶಾಲೆಗಳಿಗೆ ನೀಡಿದ ಹಣದಲ್ಲೇ ಸರ್ಕಾರಿ ಶಾಲೆಗಳನ್ನು ಸಬಲೀಕರಣಗೊಳಿಸಬಹುದಿತ್ತು ಎಂಬ ವಾದವೂ ಇದೆ.

ಇಲಾಖೆಯಲ್ಲಿ ಲಭ್ಯವಿರುವ ಅಂಕಿ-ಅಂಶಗಳ ಪ್ರಕಾರ 2012–13 ರಿಂದ 2018–19ರ ಶೈಕ್ಷಣಿಕ ವರ್ಷದವರೆಗೆ ಆರ್‌ಟಿಇ ಅಡಿಯಲ್ಲಿ ಸರ್ಕಾರ ಖಾಸಗಿ ಶಾಲೆಗಳಿಗೆ ಮರು ಪಾವತಿ ಮಾಡಿದ ಒಟ್ಟು ಮೊತ್ತ ₹ 1643. 57 ಕೋಟಿ!

‘ಈ ಮೊತ್ತ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಅದೇ ಹಣವನ್ನು ಸರ್ಕಾರಿ ಶಾಲೆಗಳ ಬಲವರ್ಧನೆಗೆ ಬಳಸಬಹುದಿತ್ತು’ ಎನ್ನುತ್ತಾರೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು.

ಆರ್‌ಟಿಇ ಎಂಬ ಅಪಮಾನ!
ಆರ್‌ಟಿಇ ಅಡಿಯಲ್ಲಿ ಖಾಸಗಿ ಶಾಲೆಗಳಲ್ಲಿ ಪ್ರವೇಶ ಪಡೆದ ಮಕ್ಕಳು ಮಾನಸಿಕ ಹಿಂಸೆ ಅನುಭವಿಸಿದ ನೂರಾರು ನಿದರ್ಶನಗಳು ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಮುಂದಿವೆ. ಶಾಲೆಗಳಲ್ಲಿ ಮಕ್ಕಳ ನಡುವೆ ತಾರತಮ್ಯ, ಆರ್‌ಟಿಇ ಮಕ್ಕಳಿಗೆ ಬೇರೆ ತರಗತಿಯಲ್ಲಿ ಪಾಠ, ಉಳಿದ ಮಕ್ಕಳೊಂದಿಗೆ ಬೆರೆಯಲು ಅವಕಾಶ ನೀಡದಿರುವುದು, ಕ್ರೀಡೆ ಸಾಂಸ್ಕೃತಿಕ ಚಟುವಟಿಕೆಗೆ ಸೇರಿಸಿಕೊಳ್ಳದಿರುವುದು, ಸೌಲಭ್ಯದ ನೆಪದಲ್ಲಿ ಹಣ ನೀಡುವಂತೆ ಪೋಷಕರಿಗೆ ಕಿರುಕುಳ ನೀಡುವುದು, ಶಾಲೆಯಲ್ಲಿಯೇ ಪಠ್ಯ ಪುಸ್ತಕ, ಸಮವಸ್ತ್ರ ಖರೀದಿ ಮಾಡುವಂತೆ ಒತ್ತಡ, ಅಷ್ಟೇ ಏಕೆ, ದೈಹಿಕ ಶಿಕ್ಷೆ ನೀಡಿದ ಪ್ರಕರಣಗಳೂ ದಾಖಲಾಗಿವೆ.

ತಮ್ಮ ಮಕ್ಕಳು ಆರ್‌ಟಿಇ ಮಕ್ಕಳೊಂದಿಗೆ ಬೆರೆಯಬಾರದು ಎಂದು ಕೆಲ ಪೋಷಕರು ತಮ್ಮ ಮಕ್ಕಳನ್ನು ಶಾಲೆ ಬಿಡಿಸಿದ ಉದಾಹರಣೆಗಳೂ ಇವೆ.

ಮುಖ್ಯಮಂತ್ರಿ ಜತೆ ಚರ್ಚಿಸುತ್ತೇನೆ: ಸುರೇಶ್ ಕುಮಾರ್‌

6ರಿಂದ 14 ವರ್ಷದೊಳಗಿನವರಿಗೆ ಉಚಿತವಾಗಿ ಶಿಕ್ಷಣ ಪಡೆಯುವ ಹಕ್ಕು ಇದೆ. ಆ ವ್ಯವಸ್ಥೆಯನ್ನು ರಾಜ್ಯದಲ್ಲೂ ಮಾಡಲಾಗಿದೆ. 14 ವರ್ಷವಾದ ಮೇಲೆ ಏನು ಎಂಬುದು ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತಿರುವ ಪ್ರಶ್ನೆ. ಇತರ ರಾಜ್ಯಗಳಲ್ಲೂ ಈ ಸಮಸ್ಯೆ ಇದೆ. ಇದಕ್ಕೆ ರಾಷ್ಟ್ರ ಮಟ್ಟದಲ್ಲೇ ನಿರ್ಣಯ ಕೈಗೊಳ್ಳಬೇಕಾಗುತ್ತದೆ. ಆದರೂ ರಾಜ್ಯದಲ್ಲಿ ಈ ವಿಷಯವನ್ನು ಹೇಗೆ ನಿಭಾಯಿಸಬಹುದು ಎಂಬ ಬಗ್ಗೆ ಮುಖ್ಯಮಂತ್ರಿ ಅವರ ಜತೆಗೆ ಸಮಾಲೋಚನೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು.
–ಎಸ್.ಸುರೇಶ್ ಕುಮಾರ್‌, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು

**

ಆರ್‌ಟಿಇಯಿಂದ ಬದುಕಿದ ಗ್ರಾಮೀಣ ಶಾಲೆಗಳು 
ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳ ಪ್ರವೇಶ ಇಲ್ಲದೆ ಮುಚ್ಚುವ ಹಂತದಲ್ಲಿದ್ದ ಶಾಲೆಗಳು ಬದುಕಿದ್ದೇ ಆರ್‌ಟಿಇಯಿಂದ. ನಗರ ಪ್ರದೇಶಗಳಲ್ಲಿ ಹಣದ ಹರಿವು ಹೆಚ್ಚಿರುವ ಕಾರಣ ಆ ಶಾಲೆಗಳಿಗೆ ಆರ್‌ಟಿಇ ಅಗತ್ಯ ಇರುವುದಿಲ್ಲ. ಆದರೆ ಗ್ರಾಮೀಣ ಭಾಗದ ಶಾಲೆಗಳು ಪೋಷಕರಿಂದ ಅಷ್ಟು ಹಣ ಪಡೆಯುವುದು ಸಾಧ್ಯವಿಲ್ಲ. ಆದ್ದರಿಂದ ಸರ್ಕಾರ ಪ್ರತಿ ಮಗುವಿಗೆ ಕೊಡುವ ಶುಲ್ಕ ಮರುಪಾವತಿ ಯೇ ಆ ಶಾಲೆಗಳಿಗೆ ಜೀವಾಳ. ಆರ್‌ಟಿಇ ನಿಯಮಕ್ಕೆ ತಿದ್ದುಪಡಿ ತಂದಿದ್ದರಿಂದ  ಗ್ರಾಮೀಣ ಭಾಗದ ಶಾಲೆಗಳ ಎದುರು ಅಳಿವು ಉಳಿವಿನ ಪ್ರಶ್ನೆ ಎದುರಾಗಿದೆ.
–ಅರುಣ್ ಶಹಾಪುರ, ವಿಧಾನಪರಿಷತ್‌ ಸದಸ್ಯ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು