ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ‘ಅನುದಾನ’ಕ್ಕೆ ಪಟ್ಟು ‘ಅನುಮಾನ’ದ ಪೆಟ್ಟು!

ಸಾಂಸ್ಕೃತಿಕ ವಲಯದ ಕೆಂಗಣ್ಣಿಗೆ ಗುರಿಯಾಗಿದ್ದ ಡಿ.ಕೆ. ಶಿವಕುಮಾರ್‌
Last Updated 26 ಮಾರ್ಚ್ 2022, 20:11 IST
ಅಕ್ಷರ ಗಾತ್ರ

ಅನುದಾನ ದುರುಪಯೋಗದ ಅನುಮಾನದಿಂದ ಸಂಘ ಸಂಸ್ಥೆಗಳಿಗೆ, ಕಲಾವಿದರಿಗೆ 2018-2019ನೇ ಸಾಲಿನ ಅನುದಾನ ಬಿಡುಗಡೆ ಮಾಡದೇ, 2019-2020ರ ಸಾಲಿನ ಅನುದಾನ ಸ್ಥಗಿತಗೊಳಿಸಲು ಸಮ್ಮಿಶ್ರ (ಜೆಡಿಎಸ್ - ಕಾಂಗ್ರೆಸ್) ಸರ್ಕಾರ ಮುಂದಾಗಿತ್ತು. ಆಗಿನ ಸರ್ಕಾರದಲ್ಲಿ ಕನ್ನಡ ಮತ್ತು ಸಂಸ್ಕೃತಿಸಚಿವರಾಗಿದ್ದ ಡಿ.ಕೆ. ಶಿವಕುಮಾರ್‌ ಅವರ ನಡೆ ನಾಡಿನ ಸಾಂಸ್ಕೃತಿಕ ವಲಯವನ್ನು ಕೆರಳಿಸಿತ್ತು. ಶಿವಕುಮಾರ್ ಅವರು ಕಲಾವಿದರ ಕೆಂಗಣ್ಣಿಗೆ ಗುರಿಯಾಗಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವ ಸಂಘ– ಸಂಸ್ಥೆಗಳಿಗೆ ಸರ್ಕಾರ ಕೊಡುವ ಅನುದಾನವನ್ನು ವ್ಯಾಪಕವಾಗಿ ದುರ್ಬಳಕೆ ಮಾಡಲಾಗುತ್ತಿದೆ. ಸುಳ್ಳು ದಾಖಲೆ ನೀಡುವ ಮೂಲಕ ನಕಲಿ ಕಲಾ ಸಂಘಗಳು ಹಣವನ್ನು ಲಪಟಾಯಿಸುತ್ತಿವೆ. ಹೀಗಾಗಿ, ಅನುದಾನ ಸ್ಥಗಿತಗೊಳಿಸುವುದಾಗಿ ಶಿವಕುಮಾರ್ ಸಮರ್ಥಿಸಿಕೊಂಡಿದ್ದರು.

‘ಕೆಲವರ ವಿದೇಶ ಪ್ರವಾಸ ಸೇರಿದಂತೆ ವರ್ಷದಲ್ಲಿ ಬೊಕ್ಕಸದ ₹ 20 ಕೋಟಿ ಹಣ ಪೋಲಾಗುತ್ತಿದೆ. ಅಧಿಕಾರಿಗಳಿಗೆ ಬೆದರಿಸಿ ತೆಗೆದುಕೊಂಡವನೇ ಮತ್ತೆ ಮತ್ತೆ ತೆಗೆದುಕೊಳ್ಳುವುದು ನಿಲ್ಲಬೇಕು. ಕನ್ನಡ‌ ಮತ್ತು ಸಂಸ್ಕೃತಿ ಉಳಿವಿಗಾಗಿ ಯಾವ ತ್ಯಾಗಕ್ಕಾದರೂ ನಾನು ಸಿದ್ಧ. ನನ್ನ ವಿರುದ್ದ ಪ್ರತಿಭಟನೆ ಮಾಡಲಿ, ನನ್ನನ್ನು ಸುಡಲಿ, ಟೀಕೆ ಮಾಡಲಿ’ ಎಂದು ಶಿವಕುಮಾರ್ ಗುಡುಗಿದ್ದರು. ಕಳೆದ ಹತ್ತು ವರ್ಷಗಳಲ್ಲಿ ಯಾರು ಯಾರು ಎಷ್ಟು ಹಣ ತೆಗೆದುಕೊಂಡಿದ್ದಾರೆ ಎಂಬ ಬಗ್ಗೆ ಪಟ್ಟಿ ಬಿಡುಗಡೆಗೆ ಸಿದ್ದ, ಇಲಾಖೆಯನ್ನು ಸ್ವಚ್ಛಗೊಳಿಸುವುದು ನನ್ನ ಗುರಿ’ ಎಂದೂ ಸಾರಿದ್ದರು.

ಅನುದಾನ ಬಿಡುಗಡೆ ಮಾಡದೇ ರಾಜ್ಯದ ಸಾಂಸ್ಕೃತಿಕ ಕ್ಷೇತ್ರಕ್ಕೆ ಅಪಮಾನ ಮಾಡಿದ್ದಾರೆ. ಅನುಮಾನಪಟ್ಟು ಅನುದಾನ ಸ್ಥಗಿತಗೊಳಿಸಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ್ದ ಕಲಾವಿದರು, ಸಂಘ ಸಂಸ್ಥೆಯವರು, ಸಾಂಸ್ಕೃತಿಕ ಪ್ರಜ್ಞೆ ಇರುವವರಿಗೆ ಇಲಾಖೆಯನ್ನು ವಹಿಸಬೇಕೆಂದು ಆಗ್ರಹಿಸಿದ್ದರು. ಆಗ ಮಾತು ಬದಲಿಸಿದ್ದ ಶಿವಕುಮಾರ್, ಅರ್ಹರಿಗೆ ಮಾತ್ರ ಧನಸಹಾಯ ಎಂದಿದ್ದರು.

ಬಳಿಕ ಸಂಸ್ಥೆಗಳು ಹಾಗೂ ಕಲಾವಿದರಿಗೆ ತಡೆಹಿಡಿದಿದ್ದ 2018-19ನೇ ಸಾಲಿನ ಧನ ಸಹಾಯವನ್ನು ಆ ವರ್ಷಾಂತ್ಯದಲ್ಲಿ ರಾಜ್ಯ ಸರ್ಕಾರ ಬಿಡುಗಡೆ ಮಾಡಿತ್ತು. ಆಯ್ಕೆ ಸಲಹಾ ಸಮಿತಿ ₹ 13 ಕೋಟಿಯ ಪ್ರಸ್ತಾವ ಸಲ್ಲಿಸಿದ್ದರೆ, ಸರ್ಕಾರ, ₹ 11.60 ಕೋಟಿ ಅನುದಾನಕ್ಕೆ ಮಂಜೂರಾತಿ ನೀಡಿತ್ತು. ಆದರೆ, ಅದರ ಬೆನ್ನಿಗೆ, 2019-20ನೇ ಸಾಲಿನ ಅನುದಾನ ಬಿಡುಗಡೆ ಮಾಡುವ ಕುರಿತು ಹೊಸ ನೀತಿ ಜಾರಿಗೆ ತರುವ ಉದ್ದೇಶದಿಂದ ಧನಸಹಾಯಕ್ಕಾಗಿ ಆನ್‌ಲೈನ್‌ ಮೂಲಕ ಅರ್ಜಿ ಕರೆಯುವ ಪ್ರಕ್ರಿಯೆ ನಿಲ್ಲಿಸಲಾಗಿದೆ ಎಂದೂ ಹೇಳಿತ್ತು.

ಇದಕ್ಕೆ ಸಂಘ-ಸಂಸ್ಥೆಗಳು ಮತ್ತು ಕಲಾವಿದರಿಂದ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಗ್ರಾಮೀಣ ಭಾಗದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡುವ ಸಹಾಯಧನವನ್ನೇ ನಂಬಿಕೊಂಡು ನೂರಾರು ರಂಗ ತಂಡಗಳು ಮತ್ತು ಸಾವಿರಾರು ಕಲಾವಿದರು ಕೆಲಸ ಮಾಡುತ್ತಿದ್ದಾರೆ. ವರ್ಷವಿಡೀ ತಮ್ಮ ಜೇಬಿನಿಂದ ಹಣ ಖರ್ಚು ಮಾಡಿ ನಾಡಿನ ಸಾಂಸ್ಕೃತಿಕ ಕ್ಷೇತ್ರವನ್ನು ಶ್ರೀಮಂತಗೊಳಿಸುವ ಕಾರ್ಯದಲ್ಲಿ ಮಗ್ನವಾಗಿದ್ದಾರೆ. ಹೀಗಿರುವಾಗ ಸರ್ಕಾರ ಧನ ಸಹಾಯ ನಿಲ್ಲಿಸುವ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ ಎಂದು ಕೋಪಗೊಂಡಿದ್ದರು.

ಮೈತ್ರಿ ಸರ್ಕಾರ ಉರುಳಿ ಯಡಿಯೂರಪ್ಪ ಸರ್ಕಾರ ಬಂದ ಬಳಿಕ ಕನ್ನಡ ಮತ್ತು ಸಂಸ್ಕೃತಿ ಖಾತೆ ಸಿ.ಟಿ. ರವಿ ಹೆಗಲೇರಿತ್ತು. ಕಲಾವಿದರನ್ನು ಅನುಮಾನದಿಂದ ನೋಡುವುದು ಸರಿಯಲ್ಲ. ಸಾಂಸ್ಕೃತಿಕ ಸಂಘಗಳಿಗೆ ಅನುದಾನ ನೀಡುವ ವ್ಯವಸ್ಥೆ ಸ್ಥಗಿತಗೊಳಿಸಿರುವ ಬಗ್ಗೆ ಅನೇಕ ಕಲಾವಿದರು, ಸಂಘಟನೆಗಳು ನೊಂದಿದ್ದಾರೆ. ಈ ಬಗ್ಗೆ ತಜ್ಞರ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಮೊದಲು ಹೇಳಿದ್ದ ಅವರು, ನಂತರ ಹಳೆ ವ್ಯವಸ್ಥೆಗೆ ಮರಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT