ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜ ಕಲ್ಯಾಣ ಇಲಾಖೆಯಲ್ಲಿ ಹಗರಣ: ಮೋಸದ ‘ಮರುಮದುವೆ’, ಪ್ರೋತ್ಸಾಹಧನ ಲೂಟಿ

Last Updated 19 ಅಕ್ಟೋಬರ್ 2019, 19:33 IST
ಅಕ್ಷರ ಗಾತ್ರ

ಮೈಸೂರು: ಪರಿಶಿಷ್ಟ ಜಾತಿ ವಿಧವೆಯರು ಮರುಮದುವೆಯಾದಲ್ಲಿ ಅವರಿಗೆ ಸರ್ಕಾರದಿಂದ ಸಿಗಬೇಕಾದ
₹ 3 ಲಕ್ಷ ಪ್ರೋತ್ಸಾಹ ಧನವನ್ನು ಅಕ್ರಮ ಜಾಲವು ಕಬಳಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.

ಅಸಲಿಗೆ ವಿಧವೆಯರೇ ಅಲ್ಲದವರಿಗೆ ವಿಧವೆಯ ಪಟ್ಟ ಕಟ್ಟಿ, ಪ್ರೀತಿಸಿ ಅಂತರ್ಜಾತಿ ಮದುವೆಯಾದವರನ್ನೂ ಈ ಯೋಜನೆಯಡಿ ತಂದು ಸರ್ಕಾರದ ಹಣವನ್ನು ಕೊಳ್ಳೆ ಹೊಡೆದಿರುವ ಭ್ರಷ್ಟರು, ಇದೀಗ ಆ ಕುಟುಂಬಗಳ ನೆಮ್ಮದಿಗೂ ಕೊಳ್ಳಿ ಇಟ್ಟಿದ್ದಾರೆ. ಅಕ್ರಮ ಜಾಲದ ಸೂತ್ರಧಾರನು ಇಲಾಖೆ ಅಧಿಕಾರಿ, ಸಿಬ್ಬಂದಿ ಜತೆ ಶಾಮೀಲಾಗಿ ತನ್ನದೇ ಜಾತಿಯ ಅಮಾಯಕರ ವಂಚನೆಗೆ ಯೋಜನೆ ಹೆಣೆದಿದ್ದಾನೆ.

2017-18ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿದ ಪ್ರಕಾರ, ಮರುಮದುವೆಯಾದ ಪರಿಶಿಷ್ಟ ಜಾತಿಯ ವಿಧವೆಯರಿಗೆ ₹ 3 ಲಕ್ಷ ಪ್ರೋತ್ಸಾಹಧನ ನೀಡಲಾಗುತ್ತದೆ. ಮರುಮದುವೆಯಾದ ಒಂದು ವರ್ಷದ ಒಳಗಾಗಿ ಪ್ರೋತ್ಸಾಹಧನಕ್ಕೆ ಅರ್ಜಿ ಸಲ್ಲಿಸಿರಬೇಕು. ಮೃತಪಟ್ಟ ಗಂಡನ ಮರಣ ಪ್ರಮಾಣ ಪತ್ರ, ಆತನ ವಿಳಾಸ ದೃಢೀಕರಿಸುವ ಯಾವುದಾದರೂ ಒಂದು ದಾಖಲೆ ಸಹಿತ ಇತರೆ ಕೆಲ ದಾಖಲೆಗಳನ್ನು ಆನ್ ಲೈನ್ ಮೂಲಕ ಸಲ್ಲಿಸುವುದು ಕಡ್ಡಾಯ.

ಆದರೆ, ಫಲಾನುಭವಿ ಯುವತಿ/ಮಹಿಳೆಯು ವಿಧವೆ ಎಂಬುದೇ ಸುಳ್ಳಾದರೆ? ಹೌದು. ಹೊಸದಾಗಿ ಮದುವೆಯಾದ ಹೆಣ್ಣುಮಕ್ಕಳನ್ನು ಯಾರದೋ ವಿಧವೆಯರನ್ನಾಗಿ ಮಾಡಿ, ಯೋಜನೆಯ ದುರ್ಬಳಕೆ ಮಾಡಿಕೊಳ್ಳುತ್ತಿರುವ ವ್ಯವಸ್ಥಿತ ಜಾಲ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ಕಾರ್ಯ ನಿರ್ವಹಿಸಿದ್ದು, ಪ್ರೋತ್ಸಾಹಧನವನ್ನು ನುಂಗಿಹಾಕಿದೆ.

ಜಿಲ್ಲೆಯಲ್ಲಿ ಸಲ್ಲಿಕೆಯಾದ ಅರ್ಜಿಗಳ ಪೈಕಿ ಈ ಪಿರಿಯಾಪಟ್ಟಣ ತಾಲ್ಲೂಕು ಒಂದರಲ್ಲೇ ಹೆಚ್ಚಿನ ಸಂಖ್ಯೆಯ ಅರ್ಜಿಗಳಿಗೆ (16) ಹಣ ಬಿಡುಗಡೆಯಾಗಿದೆ. ಅವುಗಳಲ್ಲಿ ಬಹುತೇಕ ಫಲಾನುಭವಿಗಳು ನಕಲಿ. ದಲಿತರಿಗೆ ಸೌಲಭ್ಯ ತಲುಪಿಸಬೇಕಿದ್ದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ, ಸಿಬ್ಬಂದಿಯೂ ಭ್ರಷ್ಟರೊಂದಿಗೆ ಕೈಜೋಡಿಸಿ, ಸೌಲಭ್ಯವನ್ನು ದೋಚಿರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿದೆ.

ಎಷ್ಟೋ ವರ್ಷಗಳ ಹಿಂದೆ ಮೃತ ಪಟ್ಟ 13 ವ್ಯಕ್ತಿಗಳ ಮರಣ ಪ್ರಮಾಣ ಪತ್ರಗಳನ್ನು ಒಬ್ಬನೇ ವ್ಯಕ್ತಿ ಒಂದೇ ದಿನ ಪಡೆದಿರುವುದು, ಆ ಹೆಸರಿನ ವ್ಯಕ್ತಿಯ ಹೆಂಡತಿ ಇದ್ದರೂ ಮತ್ತಾರನ್ನೋ ಅವರ ವಿಧವೆ ಎಂದು ದಾಖಲೆ ಸೃಷ್ಟಿಸಿರುವುದು, ಮರುಮದುವೆಯ ಪ್ರಮಾಣಪತ್ರದಲ್ಲಿ ಬೇರೆ ಬೇರೆ ಸಂಬಂಧಗಳ ಹೆಸರಿನಲ್ಲಿ ಸಹಿ ಹಾಕಿರುವುದು, ಫಲಾನುಭವಿಗಳ ಆಯ್ಕೆ ಸಂದರ್ಭದಲ್ಲಿ ಮಹಜರು ನಡೆಸದೇ ಇರುವುದು, ಮಹಜರು ಹೇಳಿಕೆ ಪತ್ರದಲ್ಲಿ ಸಾಕ್ಷಿಯಾಗಿ ಸಹಿ ಹಾಕಿರುವ ಗ್ರಾಮಸ್ಥರ ಹೆಸರುಗಳ ಪೈಕಿ, ಅಂಥ ಹೆಸರಿನವರೇ ಗ್ರಾಮಗಳಲ್ಲಿ ಇಲ್ಲದಿರುವುದು, ಒಂದೇ ಪತ್ರದಲ್ಲಿ ಇಬ್ಬರು ಮಹಿಳೆಯರ ಹೆಸರನ್ನು ಬರೆದು ಗೊಂದಲ ಮೂಡಿಸಿರುವುದು ಅಕ್ರಮ ನಡೆದಿರುವುದಕ್ಕೆ ಸಾಕ್ಷಿ.

ಅವರ ಹೆಸರು ಲಕ್ಷ್ಮಿ. ಪಿರಿಯಾಪಟ್ಟಣದ ಕೊಪ್ಪ ಗ್ರಾಮದ ದಲಿತ ಸಮುದಾಯಕ್ಕೆ ಸೇರಿದ ಮಹಿಳೆ. 2006ರಲ್ಲಿಯೇ ಮಾದಿಗ ಸಮುದಾಯದ ಯೋಗೇಶ್‌ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಇಬ್ಬರು ಮಕ್ಕಳು ಶಾಲೆಗೆ ಹೋಗುತ್ತಾರೆ. ಆದರೆ, ಸರ್ಕಾರಿ ದಾಖಲೆಗಳ ಪ್ರಕಾರ, ಲಕ್ಷ್ಮಿ ಅವರು 2011ರಲ್ಲಿ ಮೃತಪಟ್ಟ ರಾವಂದೂರು ಹೋಬಳಿಯ ಹೊನ್ನೇನಹಳ್ಳಿಯ 60 ವರ್ಷದ ಜಯಯ್ಯಎಂಬುವವರ ವಿಧವೆ! ಈಗ ಯೋಗೇಶ್‌ ಅವರೊಂದಿಗೆ ಮದುವೆಯಾಗಿ ವಿಧವಾ ಮರುವಿವಾಹದ ಪ್ರೋತ್ಸಾಹಧನ ಪಡೆದಿದ್ದಾರೆ. ಅದು ಕೂಡ ₹ 60 ಸಾವಿರ ಮಾತ್ರ!

ಆಸಕ್ತಿದಾಯಕ ವಿಷಯವೆಂದರೆ, ಮೃತಪಟ್ಟ ಹೊನ್ನೇನಹಳ್ಳಿ ಜಯಯ್ಯ ಅವರಿಗೆ ಪತ್ನಿ ಇದ್ದಾರೆ. ಏಳು ಜನ ಮಕ್ಕಳಿದ್ದು ಎಲ್ಲರಿಗೂ ಮದುವೆಯಾಗಿದೆ! ಉತ್ತೇನಹಳ್ಳಿಯ ಲಿಂಗಾಯತ ಸಮುದಾಯದ ತಮ್ಮಣ್ಣನ ವಿಧವೆ ಎಂದು ಬೇರಾರನ್ನೋ ಫಲಾನುಭವಿ ಮಾಡಲಾಗಿದೆ ಆದರೆ, ತಮ್ಮಣ್ಣನ ಪತ್ನಿ ಶಿವಮ್ಮನೂ ಬದುಕಿದ್ದಾರೆ! 2012ರಲ್ಲಿ ಮೃತಪಟ್ಟ ತಮ್ಮ ಪತಿ ಜವರಯ್ಯ ಅವರ ಮರಣ ಪ್ರಮಾಣಪತ್ರವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಸ್ವತಃ ಹೊನ್ನೇನಹಳ್ಳಿಯ ಪುಟ್ಟಮ್ಮ ಅವರು ತಹಶೀಲ್ದಾರರಿಗೆ ದೂರು ಸಲ್ಲಿಸಿದ್ದಾರೆ.

ಎಚ್‌.ಡಿ. ಕೋಟೆ ತಾಲ್ಲೂಕಿನ ಯುವತಿಯೊಬ್ಬಳನ್ನು ತಮ್ಮ ತಂದೆಯ ವಿಧವೆ ಎಂದು ಹೇಳುವ ನಕಲಿ ದಾಖಲೆ ಸೃಷ್ಟಿಸಿ, ವಂಚಿಸಲಾಗಿದೆ ಎಂದು ದೊರೆಕೆರೆಯ ಕರಿಯಯ್ಯ ದೂರಿದ್ದಾರೆ. ಇನ್ನು ಹಲವು ಪ್ರಕರಣಗಳಲ್ಲಿ ಸಂಬಂಧಿಕರಲ್ಲೇ ಫಲಾನುಭವಿಗಳ ಹಂಚಿಕೆ ಆಗಿದೆ.

ಅಂತರ್ಜಾತಿ ವಿವಾಹದ ಪ್ರೋತ್ಸಾಹಧನ ಕೊಡಿಸುವುದಾಗಿ ಹೇಳಿ, ಈ ರೀತಿ ತಮ್ಮನ್ನು ದಿಕ್ಕು ತಪ್ಪಿಸಿದ್ದು ಲೋಕೇಶ್‌ ಎಂಬ ವ್ಯಕ್ತಿ ಎನ್ನುತ್ತಾರೆ ಲಕ್ಷ್ಮಿ–ಯೋಗೇಶ್‌ ದಂಪತಿ. ಅಧಿಕಾರಿಗಳಿಗೆ ಕೊಡಬೇಕೆಂದು ಹೇಳಿದ್ದಕ್ಕೆ, ತಮ್ಮ ಖಾತೆಗೆ ಜಮೆಯಾದ ₹ 3 ಲಕ್ಷದಲ್ಲಿ ₹ 2.5 ಲಕ್ಷ ನಗದನ್ನು ತೆಗೆಸಿ ಆತನ ಕೈಗಿಟ್ಟಿದ್ದಾರೆ. ಕೆಲವರಿಗೆ ಆ ವ್ಯಕ್ತಿ ಮತ್ತೆ ₹ 10 ಸಾವಿರ ನಗದು ಕೊಟ್ಟಿದ್ದರೆ, ಮತ್ತೆ ಕೆಲವರಿಗೆ ಇಲ್ಲ. ಇವರಂತೆ ಇನ್ನೊಂದು ಜೋಡಿಯೂ ಈ ಊರಿನಲ್ಲಿ ಮೋಸ ಹೋಗಿದೆ.

‘ಥೂ! ದುಡ್ನಾ ಹಿಂಗೂ ಸಂಪಾದನೆ ಮಾಡೋದಾ, ಗಂಡ ಇದ್ದೂ ಸತ್ತೋನೆ ಅಂತ ಹೆಂಗ್‌ ಸರ್ಟಿಫಿಕೇಟ್‌ ಕೊಟ್ಟೋರೆ ನೋಡಿ. ವಿಷಯ ಗೊತ್ತಾದ್‌ ಮ್ಯಾಲಿಂದ ಎದೆನೇ ಒಡ್ದೊಗೈತೆ. ಪಂಚಾಯ್ತೀಲಿ ಜನ ಆಡ್ಕೊಂತಾವ್ರೆ. ಕೋರ್ಟು–ಜೈಲು ಅಂತ ಹೆದ್ರಸ್ತಾರೆ. ಮಾನ ಮರ್ಯಾದೆ ಎಲ್ಲಾ ಹೋಯ್ತು. ಈಗ ಸಣ್ಣ ಮಕ್ಕಳ್ನ ಬಿಟ್ಟು ಕೋರ್ಟು– ಕಚೇರಿ ಅಲೆಯಕ್ಕಾಯ್ತದಾ? ಸಿಕ್ಕ ಅರವತ್ತು ಸಾವಿರ ರೂಪಾಯಿನ ಮಗನ ಆಸ್ಪತ್ರೆ ಖರ್ಚಿಗೆ ಬಳಸ್ಕೊಂಡೀನಿ. ವಾಪಸ್‌ ಕಟ್ಟಬೇಕು ಅಂದ್ರೆ, ದುಡ್ದು ತೀರಸ್ತೀವಿ. ಇದರಾಗೆ ನಮ್ದೇನೂ ತಪ್ಪಿಲ್ಲ. ದುಡ್ಡು ತಿಂದ ಅಪವಾದ ಬ್ಯಾಡ ನಮಗೆ. ಲೋಕೇಶ ಅವರನ್ನ ನಂಬಿ ಕೆಟ್ವಿ’ ಎಂದು ಲಕ್ಷ್ಮಿ ಹೇಳುವಾಗ ಅವರ ದನಿಯಲ್ಲಿ ಸಿಟ್ಟು, ನೋವು, ಸಂಕಟ ಮಡುಗಟ್ಟಿತ್ತು.

ವಿದ್ಯಾವಂತರಾಗಿದ್ದರೆ ಈ ರೀತಿ ಮೋಸ ಹೋಗಬೇಕಿರಲಿಲ್ಲ ಎಂದು ಹಳಹಳಿಸಿದ ಆ ಮಹಿಳೆ, ಅಧಿಕಾರಿಗಳಾದರೂ ತಮ್ಮ ನೆರವಿಗೆ ಬರಬೇಕಿತ್ತು; ಆದರೆ ಅವರೂ ಹಾಗೆ ಮಾಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ದಲಿತ ಸಮುದಾಯದ ತಮಗೆ ಯಾವುದೋ ಸ್ಕೀಂನಿಂದ ದುಡ್ಡು ಕೊಡಿಸಿದ ಪುಣ್ಯಾತ್ಮ ಎಂದು ಭಾವಿಸಿದ್ದ ಮನುಷ್ಯನನ್ನು ಮರ್ಯಾದೆ ತೆಗೆದ ನೀಚ ಎಂದು ಶಪಿಸುತ್ತಿದ್ದಾರೆ. ಎಂದೋ ಎಲ್ಲೋ ಸತ್ತ ವ್ಯಕ್ತಿಯ ವಿಧವೆಯನ್ನಾಗಿಸಿದ್ದಕ್ಕೆ ಸಮಾಜದ ಮುಂದೆಯೇ ಬರಲು ಅವರು ಹಿಂದೇಟು ಹಾಕುತ್ತಿದ್ದಾರೆ. ಆದರೆ, ವಿದ್ಯಾವಂತರು ಎನ್ನಿಸಿಕೊಂಡೂ ನಿರ್ಲಜ್ಜತನ ತೋರಿದವರು, ತಮ್ಮೊಂದಿಗೆ ಅಧಿಕಾರಿಗಳಿದ್ದಾರೆ ಎಂಬ ಭಂಡ ಧೈರ್ಯದಲ್ಲಿಯೇ ಇದ್ದಾರೆ.

ಈ ನಡುವೆ ತಮ್ಮ ಸಂಬಂಧಿಕರ (ಗಂಡ, ತಂದೆ, ಸೋದರ) ಮರಣಪತ್ರದ ದುರ್ಬಳಕೆ ಮಾಡಿಕೊಳ್ಳಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪಿರಿಯಾಪಟ್ಟಣ ತಾಲ್ಲೂಕು ಮತ್ತೂರಿನ ರವಿ, ದೊರೆಕೆರೆಯ ಕರಿಯಯ್ಯ, ಹೊನ್ನೇನಳ್ಳಿಯ ಪುಟ್ಟಮ್ಮ, ಕೃಷ್ಣ ಹಾಗೂ ಲೋಕೇಶ್ ಎಂಬುವವರು ಅ.15ರಂದು ತಹಶೀಲ್ದಾರ್ ಶ್ವೇತಾ ರವೀಂದ್ರ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಇಡೀ ಅಕ್ರಮದ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗೆ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಿಗೆ ಹಾಗೂ ಸಚಿವ ಗೋವಿಂದ ಕಾರಜೋಳ ಅವರಿಗೆ ಗ್ರಾಮಸ್ಥರು ಮನವಿಪತ್ರ ರವಾನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT