ಗುರುವಾರ , ಅಕ್ಟೋಬರ್ 29, 2020
20 °C
ಗಣ್ಯರ ಹೆಸರಿಗೆ ಅಪಮಾನ

ಒಳನೋಟ | ವಿಶ್ವವಿದ್ಯಾಲಯ ಪೀಠಗಳಲ್ಲಿ ‘ಕಾಸಿಗೆ ತಕ್ಕಷ್ಟು ಕಜ್ಜಾಯ’ ಸೂತ್ರ

ಕೆ.ನರಸಿಂಹಮೂರ್ತಿ Updated:

ಅಕ್ಷರ ಗಾತ್ರ : | |

Prajavani

ಬಳ್ಳಾರಿ: ಐದು ವರ್ಷದ ಹಿಂದೆ ಕಲಬುರ್ಗಿಯಲ್ಲಿ ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರವು ಸಂತ ಸೇವಾಲಾಲ್‌ ಮತ್ತು ವಾಲ್ಮೀಕಿ ಅಧ್ಯಯನ ಪೀಠವನ್ನು ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸುವ ನಿರ್ಧಾರ ಕೈಗೊಂಡಿತ್ತು. ಆದೇಶವೂ ಹೊರಬಿತ್ತು.

ಅದರೆ, ವಾಲ್ಮೀಕಿ ಪೀಠಕ್ಕೆ ₹1 ಕೋಟಿ ಇಡುಗಂಟು ಕೊಡಬೇಕಿದ್ದ ಸರ್ಕಾರವು ವಿಶ್ವವಿದ್ಯಾಲಯದ ಅನುದಾನದಲ್ಲೇ ಅದನ್ನು ತೆಗೆದುಕೊಳ್ಳಲು ಹೇಳಿ ಕೈತೊಳೆದುಕೊಂಡಿತು. ಈ ನಡುವೆ, ಇರುವ ಅನುದಾನವನ್ನು ವಿಶ್ವವಿದ್ಯಾಲಯವು ಎಂದಿನಂತೆ ಕ್ರಿಯಾಯೋಜನೆಗಳಿಗೆ ತಕ್ಕಂತೆ ಖರ್ಚು ಮಾಡಿತ್ತು. ಪೀಠಕ್ಕೆ ಪರಿನಿಯಮಾವಳಿ (statute) ರಚಿಸಿದ ವಿಶ್ವವಿದ್ಯಾಲಯ ಅದನ್ನು ಅನುಮೋದಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಇಂದಿಗೂ ಕಾಯುತ್ತಲೇ ಇದೆ. ಅನುಮೋದನೆ ಸಿಕ್ಕರೆ ಮಾತ್ರ ಅನುದಾನ, ಇಲ್ಲದಿದ್ದರೆ ಇಲ್ಲ!

ಹಿಂದಿನ ವರ್ಷ ಸರ್ಕಾರ ಬೆಳಗಾವಿಯ ರಾಣಿ ಚನ್ನಮ್ಮ ಅಧ್ಯಯನ ಪೀಠಕ್ಕೆ ಘೋಷಿಸಿದ್ದ ₹2 ಕೋಟಿ ಅನುದಾನ ಬಂದಿಲ್ಲ. ವಿಶ್ವವಿದ್ಯಾಲಯದ ಆರ್ಥಿಕ ಸಂಪನ್ಮೂಲವೇ ಅದಕ್ಕೆ ಆಧಾರ.  ಜಾತಿ ಸಮುದಾಯಗಳನ್ನು ಓಲೈಸುವ ಮತಬ್ಯಾಂಕ್‌ ರಾಜಕಾರಣವನ್ನೇ ನೆಚ್ಚಿಕೊಂಡು ಬಜೆಟ್‌ನಲ್ಲಿ ಪೀಠಗಳನ್ನು ಘೋಷಿಸುವ ಸರ್ಕಾರದ ಇಂಥ ನಿಲುವುಗಳ ಕಾರಣಕ್ಕಾಗಿಯೇ ಬಹುತೇಕ ಅಧ್ಯಯನ ಪೀಠಗಳು ಕಳಪೆ ಸಾಧನೆಯಿಂದ ಇದ್ದೂ ಇಲ್ಲದಂತಾಗಿವೆ.

ಮಹತ್ವಾಕಾಂಕ್ಷೆಯಿಂದ ಆರಂಭವಾದರೂ ಅಗತ್ಯ ನೆರವಿಲ್ಲದೆ, ಆರೈಕೆ ಇಲ್ಲದೆ ಸೊರಗುತ್ತಿವೆ. ವಿದ್ಯಾರ್ಥಿಗಳು ಮತ್ತು ಜನಸಮುದಾಯದ ನಡುವೆ ಬಂದು ನಿಲ್ಲದೇ, ಜವಾಬ್ದಾರಿ ಮರೆತ ಏಕಾಕಿಗಳಂತೆ ನಿಂತಲ್ಲೇ ಗಿರಕಿ ಹೊಡೆಯುತ್ತಿವೆ. ದೂರದೃಷ್ಟಿ ಮತ್ತು ಹೊಣೆಗಾರಿಕೆಯ ಕೊರತೆಯನ್ನು ಈ ಸನ್ನಿವೇಶ ಸ್ಫುಟವಾಗಿ ಎತ್ತಿ ತೋರಿಸುತ್ತದೆ.

‘ಸರ್ಕಾರಕ್ಕೆ ಓಟಿಗಾಗಿ ಅಧ್ಯಯನ ಪೀಠ ಬೇಕು. ಪೀಠದ ಹೊಣೆಗಾರಿಕೆ ಮಾತ್ರ ಬೇಡ’ – ಪೀಠಗಳ ಹೊಣೆ ಹೊತ್ತ ಬಹುತೇಕರ ಸಂಕಟದ ಮಾತು ಇದು. ಬಿಸಿಲ ನಾಡು ಕಲಬುರ್ಗಿಯಿಂದ ದೂರದ ರಾಜಧಾನಿ ಬೆಂಗಳೂರಿಗೆ ಅನುದಾನವನ್ನು ಕೇಳಲು ಬಂದು ಹೋಗುವುದು ಅಷ್ಟು ಸುಲಭವೇ? ಹೀಗಾಗಿ ಪೀಠವೇನೋ ಇದೆ: ಅಧ್ಯಯನ? ಕೇಳಬೇಡಿ!

ಎಷ್ಟೊಂದು ಪೀಠಗಳು!: ಬುದ್ಧ, ಬಸವ, ಕನಕ, ವೇಮನ, ಹೇಮರೆಡ್ಡಿ ಮಲ್ಲಮ್ಮ, ಸಂಗೊಳ್ಳಿ ರಾಯಣ್ಣ, ರಾಣಿ ಚೆನ್ನಮ್ಮ, ದೀನ್‌ ದಯಾಳ್‌ ಉಪಾಧ್ಯಾಯ, ಸ್ವಾಮಿ ವಿವೇಕಾನಂದ, ಶಾಹು ಮಹಾರಾಜ್‌, ರಾಜ್‌ಕುಮಾರ್‌, ಜಾಕಿರ್ ಹುಸೇನ್‌, ಗಂಗೂಬಾಯಿ ಹಾನಗಲ್‌, ಬಾಬು ಜಗಜೀವನರಾಂ, ಬಿ.ಆರ್‌.ಅಂಬೇಡ್ಕರ್‌, ಆದಿಕವಿ ಪಂಪ, ಅಬ್ದುಲ್‌ ನಜೀರ್‌ಸಾಬ್‌, ಬಿ.ಕೃಷ್ಣಪ್ಪ, ಶಾಂತವೇರಿ ಗೋಪಾಲಗೌಡ, ಕೆ.ಎಚ್‌.ಪಾಟೀಲ್‌, ಕುಮಾರವ್ಯಾಸ, ನಾಡಪ್ರಭು ಕೆಂಪೇಗೌಡ, ಎಂ.ಡಿ.ನಂಜುಂಡಸ್ವಾಮಿ, ಶಿಶುನಾಳ ಶರೀಫ, ಕುವೆಂಪು, ಜುಂಜಪ್ಪ, ಮಂಟೇಸ್ವಾಮಿ, ದೇವರಾಜ ಅರಸು, ಜೀ.ಶಂ.ಪರಮಶಿವಯ್ಯ, ಎಂ.ವಿಶ್ವೇಶ್ವರಯ್ಯ, ಗುಬ್ಬಿ ವೀರಣ್ಣ, ಟಿಪ್ಪು ಸುಲ್ತಾನ್‌, ಎನ್‌.ರಾಚಯ್ಯ, ಪಿ.ಆರ್‌.ತಿಪ್ಪೇಸ್ವಾಮಿ, ಪುರಂದರ ದಾಸರು, ಶಂ.ಬಾ.ಜೋಷಿ, ರಾಮಮನೋಹರ ಲೋಹಿಯಾ, ದೇವರ ದಾಸಿಮಯ್ಯ, ಒನಕೆ ಓಬವ್ವ....

– ಹೀಗೆ, ಭಾರತೀಯ ಪರಂಪರೆ ಮತ್ತು ಆಧುನಿಕತೆಯಲ್ಲಿ ಬಂದು ಹೋಗಿರುವ ವಿವಿಧ ಕ್ಷೇತ್ರಗಳ ಮಹನೀಯರೆಲ್ಲರ ಹೆಸರಿನಲ್ಲೂ ಪೀಠಗಳಿವೆ. ಈ ಪೀಠಗಳಿಗೆ ಅನುದಾನ ನೀಡುವಲ್ಲೂ ದೊಡ್ಡ ಮಟ್ಟದ ತಾರತಮ್ಯ ಉಂಟು.

ಇದನ್ನೂ ಓದಿ... ಒಳನೋಟ | ಜೆಎನ್‌ಯುನಲ್ಲಿ ಹೊಳೆವ ಕನ್ನಡದ ಘನತೆ

ಸಣ್ಣ ಸಮುದಾಯಗಳ ಕುರಿತ ಸರ್ಕಾರದ ರಾಜಕೀಯ ಲೆಕ್ಕಾಚಾರದಿಂದ ಮೂಡಿದ ಜಿಪುಣತನವೂ ದೊಡ್ಡ ಮತ್ತು ಪ್ರಭಾವಿ ಸಮುದಾಯಗಳ ಕಡೆಗಿನ ಔದಾರ್ಯವೂ ಅನುದಾನದ ಅಂಕಿ ಅಂಶಗಳನ್ನು ಗಮನಿಸಿದರೆ ಢಾಳಾಗಿ ಕಾಣುತ್ತದೆ. ಈ ದೃಷ್ಟಿಯಿಂದ ಪೀಠಗಳ ಸ್ಥಾಪನೆಯು, ಮೇಲುನೋಟಕ್ಕೆ ಪ್ರಜಾಪ್ರಭುತ್ವದ ಪರವಾಗಿರುವಂತೆ ಭಾಸವಾದರೂ, ಅದರ ವಿರುದ್ಧವಾಗಿಯೇ ಇರುವಂತೆ ತೋರುತ್ತದೆ.

ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ವಾಲ್ಮೀಕಿ ಪೀಠದೊಂದಿಗೆ ಸ್ಥಾಪನೆಯಾದರೂ ಸಂತ ಸೇವಾಲಾಲ್‌ ಪೀಠಕ್ಕೆ ಇರುವ ಇಡುಗಂಟು ₹25 ಲಕ್ಷ ಮಾತ್ರ.  ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ₹50 ಕೋಟಿ ವೆಚ್ಚದಲ್ಲಿ ನಾಡಪ್ರಭು ಕೆಂಪೇಗೌಡ ಅಧ್ಯಯನ ಪೀಠ ಮತ್ತು ಸಂಶೋಧನಾ ಕೇಂದ್ರ ಸ್ಥಾಪನೆಗೆ ರಾಜ್ಯ ಸರ್ಕಾರ ಇತ್ತೀಚೆಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ.

ಕನ್ನಡ ವಿಶ್ವವಿದ್ಯಾಲಯದಲ್ಲಿರುವ ಡಾ.ರಾಜ್‌ಕುಮಾರ್‌ ಅಧ್ಯಯನ ಪೀಠಕ್ಕೆ ₹15 ಲಕ್ಷ ಇಡುಗಂಟಿದೆ. ಸ್ಥಾಪನೆಯಾಗಿ ಸುಮಾರು 13 ವರ್ಷಗಳ ಬಳಿಕ ಬೆಂಗಳೂರಿನಲ್ಲಿ ಪೀಠಕ್ಕೆ 2 ಎಕರೆ ಜಮೀನು ಗುರುತಿಸಲಾಗಿದೆ.

ತುಮಕೂರು ವಿಶ್ವವಿದ್ಯಾಲಯದ ಹಲವು ಪೀಠಗಳಲ್ಲಿ ಫಲಕ ಬರೆಸಲೂ ಹಣವಿಲ್ಲ. ಕೊಠಡಿಗಳಂತೂ ಇಲ್ಲ. 1963ರಲ್ಲೇ ಮೈಸೂರು ವಿಶ್ವವಿದ್ಯಾಲಯದಲ್ಲಿ ಸ್ಥಾಪನೆಯಾಗಿರುವ ‘ಸರ್.ಎಂ.ವಿಶ್ವೇಶ್ವರಯ್ಯ ಪೀಠ’ದ ಇಡುಗಂಟು ₹5 ಲಕ್ಷ. ಬೆಳಗಾವಿಯಲ್ಲಿ ಇತ್ತೀಚೆಗೆ ಸ್ಥಾಪನೆಯಾಗಿರುವ ಪಂಡಿತ್‌ ದೀನದಯಾಳ್ ಉಪಾಧ್ಯಾಯ ಹೆಸರಿನ, ದಕ್ಷಿಣ ಭಾರತದ ಮೊದಲ ಪೀಠಕ್ಕೆ ಕೇಂದ್ರದ ಸಂಸ್ಕೃತಿ ಸಚಿವಾಲಯ ₹5.78 ಕೋಟಿ ಇಡುಗಂಟು ಕೊಟ್ಟಿದೆ.

ವಿಪರ್ಯಾಸವೆಂದರೆ ಒಬ್ಬರೇ ಹೆಸರಿನ ಪೀಠಗಳು ಕೆಲವೆಡೆ ಸೊರಗುತ್ತಿದ್ದರೆ, ಕೆಲವೆಡೆ ಕೋಟಿ ಇಡುಗಂಟಿನಲ್ಲಿ ಹೊಳೆಯುತ್ತಿವೆ. ರಾಜ್ಯದಲ್ಲಿರುವ 15ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳ ಸುಮಾರು 100 ಪೀಠಗಳು ಮತ್ತು ಅವುಗಳ ಇಡುಗಂಟಿನ ಮೊತ್ತಗಳೂ ಇಂಥ ತಾರತಮ್ಯವನ್ನೇ ಹೇಳುತ್ತವೆ. ಈ ತಾರತಮ್ಯಕ್ಕೆ ತಾರ್ಕಿಕ ಸಮರ್ಥನೆಗಳೂ ಇಲ್ಲ.

‘ಬಡ್ಡಿ ಪೀಠ’: ಸರ್ಕಾರ, ಕಂಪನಿಗಳು ಹಾಗೂ ದಾನಿಗಳು ನೀಡಿರುವ ಇಡುಗಂಟಿನಿಂದ ಬರುವ ವಾರ್ಷಿಕ ಬಡ್ಡಿಹಣವನ್ನೇ ಬಹುತೇಕ ಪೀಠಗಳು ನೆಚ್ಚಿಕೊಂಡಿವೆ. ಹೆಚ್ಚು ಇಡುಗಂಟಿದ್ದರೆ ಹೆಚ್ಚು ಬಡ್ಡಿ; ಹೆಚ್ಚು ಕಾರ್ಯಕ್ರಮ, ಹೆಚ್ಚು ಸಂಕಿರಣಗಳು, ಪುಸ್ತಕ ಪ್ರಕಟಣೆಗಳು. ಕಡಿಮೆ ಇಡುಗಂಟಿದ್ದರೆ ಕಡಿಮೆ ಬಡ್ಡಿ. ಕಡಿಮೆ ಕಾರ್ಯಕ್ರಮ.

ಇದು ‘ಕಾಸಿಗೆ ತಕ್ಕ ಕಜ್ಜಾಯ’ ಎಂಬ ವ್ಯಾಪಾರಿ ಸೂತ್ರವನ್ನು ನೆಚ್ಚಿಕೊಂಡ ಶೈಕ್ಷಣಿಕ ಚಟುವಟಿಕೆಯಷ್ಟೇ. ಹೀಗಾಗಿಯೇ ‘ಅಧ್ಯಯನ ಪೀಠ’ ಹೆಸರಿನಲ್ಲಿ ‘ಅಧ್ಯಯನ’ ಎಂಬುದಕ್ಕೆ ಬಹುತೇಕ ಕಡೆಗಳಲ್ಲಿ ಆದ್ಯತೆ ಇಲ್ಲ.

‘ವಿಭಾಗದ ಕೆಲಸ, ಬೋಧನೆ, ಆಡಳಿತದ ಜವಾಬ್ದಾರಿ, ಸಂಶೋಧನೆ ಜೊತೆಗೆ ಪೀಠದ ಕೆಲಸ ಮಾಡೋದು ಹೇಗೆ?’ ಇದೇ ಬಹುತೇಕ ಸಿಬ್ಬಂದಿಯ ಸಂಕಟ. ಕೆಲವರಿಗೆ ತಮ್ಮ ವಿಷಯ ಪರಿಣಿತಿಗೆ ಸಂಬಂಧಿಸಿರದ ಪೀಠಗಳ ಹೊಣೆ. ಇದು, ವಿಷಯ ತಜ್ಞರಲ್ಲದವರನ್ನು ನೇಮಕ ಮಾಡುವ ನಿರ್ಲಿಪ್ತ ಆಡಳಿತದ ವೈಖರಿ. ಹೀಗಾಗಿ ಪೀಠಗಳು ‘ನಿವೃತ್ತರ ಗಂಜಿ ಕೇಂದ್ರಗಳು’ ಎಂಬ ಅನ್ವರ್ಥನಾಮವೂ ಉಂಟು.

ಸ್ಥಾವರ ಪೀಠ: ಪೀಠ ಎಂದರೆ ಸ್ಥಾವರ ನೆಲೆಯದ್ದು ಎಂಬುದೇ ಬಹುತೇಕರ ನಂಬಿಕೆ. ಹೀಗಾಗಿ ಸ್ಥಾವರ ನೆಲೆಯಿಂದ ಜಂಗಮ ನೆಲೆಗೆ ಜಿಗಿದು ವಿದ್ಯಾರ್ಥಿಗಳು ಮತ್ತು ಜನಸಮುದಾಯಗಳ ನಡುವೆ ಬರಬೇಕಿದ್ದ ಬಹುತೇಕ ಪೀಠಗಳು ವಿಶ್ವವಿದ್ಯಾಲಯಗಳ ಆವರಣದಿಂದ ಹೊರಬಂದಿಲ್ಲ.

ಸಮಾನ ಚಿಂತನೆಯ ಸಂಘ ಸಂಸ್ಥೆಗಳು, ಸರ್ಕಾರದ ವಿವಿಧ ಅಂಗ ಸಂಸ್ಥೆಗಳು, ಇಲಾಖೆ, ಅಕಾಡೆಮಿಗಳ ಸಹಯೋಗ ಪಡೆದು, ಆ ಮೂಲಕವೇ ಅನುದಾನದ ಕೊರತೆ ನೀಗಿಸಿಕೊಂಡು ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಪ್ರಯೋಗಕ್ಕೆ ಒಡ್ಡಿಕೊಂಡ ಪ್ರಯತ್ನಗಳೂ ಅತಿ ವಿರಳ. ಕೆಲವೆಡೆ ಕೆಲವು ಕೋರ್ಸ್‌ಗಳನ್ನು ನಡೆಸುವುದೇ ಕೆಲಸ.

ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿರುವ 13 ಪೀಠಗಳ ಪೈಕಿ, ಹೈದ್ರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಅಧ್ಯಯನ ಪೀಠವು ವಿಶ್ವವಿದ್ಯಾಲಯದಿಂದ ಹೊರಬಂದು ಹೈ–ಕ ವ್ಯಾಪ್ತಿಯ ಆರು ಜಿಲ್ಲೆಗಳಲ್ಲಿ ಒಮ್ಮೆಯೂ ತನ್ನ ಅಸ್ತಿತ್ವವನ್ನು ತೋರ್ಪಡಿಸಿಕೊಂಡಿಲ್ಲ. ಹೈ–ಕ ಅಭಿವೃದ್ಧಿಗಾಗಿಯೇ ಇರುವ, ಕೋಟ್ಯಂತರ ರೂಪಾಯಿ ಅನುದಾನವುಳ್ಳ ಈಗಿನ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯೊಂದಿಗೆ ಅದರ ಸಂಪರ್ಕವೇ ಏರ್ಪಟ್ಟಿಲ್ಲ.

ಬೇಡ ಸಾರ್‌: ಇಂಥ ‘ಬೌದ್ಧಿಕ ದಿವಾಳಿತನ’ ಒಂದೆಡೆ ಇದ್ದರೆ, ಜವಾಬ್ದಾರಿಯ ಮಹತ್ವ ಅರಿಯದೇ ರಾಜೀನಾಮೆ ಕೊಡುವವರೂ ಇದ್ದಾರೆ. ವಿಶ್ವವಿದ್ಯಾಲಯ ಸುಮ್ಮನೆ ಇರುತ್ತದೆಯೇ?

‘ಪೀಠದ ಹೆಚ್ಚುವರಿ ಹೊಣೆ ಬೇಡ’ ಎಂದು ಸಹಾಯಕ ಪ್ರಾಧ್ಯಾಪಕರೊಬ್ಬರು ಸಂಯೋಜಕ ಸ್ಥಾನಕ್ಕೆ ಏಪ್ರಿಲ್‌ನಲ್ಲಿ ರಾಜೀನಾಮೆ ನೀಡಿದ್ದರೂ ಸ್ವೀಕೃತಿಯಾಗಿಲ್ಲ. ವಿದ್ಯಾರ್ಥಿನಿಲಯದ ವಾರ್ಡ್‌ನ್ ಆಗಿದ್ದ ಅವರನ್ನು ಪಿ.ಜಿ.ಕೇಂದ್ರಕ್ಕೆ ನಿಯೋಜನೆ ಮೇಲೆ ಕಳಿಸಲಾಗಿದೆ. ವಿಶ್ವವಿದ್ಯಾಲಯದಲ್ಲಿರುವ ಎಲ್ಲ ಪೀಠಗಳ ಸಮುಚ್ಛಯವನ್ನೇ ನಿರ್ಮಿಸುವುದಾಗಿ ಕುಲಪತಿ ಪ್ರೊ.ಸ.ಚಿ.ರಮೇಶ್‌ ಹೇಳಿದ್ದರು. ಅಂಥದ್ದೇನೂ ಆಗಿಲ್ಲ. ಇತರೆ ವಿಶ್ವವಿದ್ಯಾಲಯಗಳಲ್ಲೂ ಹಲವು ಪೀಠಗಳಿಗೆ ಸ್ವಂತ ಕಟ್ಟಡವಿಲ್ಲ.

ಈ ಸನ್ನಿವೇಶದಲ್ಲೇ, ಹೊಸ ಪೀಠಗಳ ಸ್ಥಾಪನೆಗೆ ವಿಶ್ವವಿದ್ಯಾಲಯಗಳು ಪ್ರಸ್ತಾವನೆ ಸಲ್ಲಿಸುತ್ತಿವೆ. ಇದು, ಪೀಠಗಳ ಪ್ರವಾಹದಲ್ಲಿ ಕೊಚ್ಚಿಹೋಗಬೇಕೆನ್ನುವ ಮನಸ್ಥಿತಿ.

ಬಜೆಟ್‌ನಲ್ಲಿ ಪ್ರಮುಖ ಸ್ಥಾನ ಪಡೆಯುವ ಪೀಠಗಳು ಸ್ಥಾಪನೆಯಾದ ಬಳಿಕ ಅವುಗಳ ಕಾರ್ಯಕ್ಷಮತೆಯ ಮೌಲ್ಯಮಾಪನವೂ ನಡೆಯುತ್ತಿಲ್ಲ. ಹೆಚ್ಚೆಂದರೆ ನ್ಯಾಕ್‌ ಸಮಿತಿ ಮುಂದೆ ವರದಿ ಸಲ್ಲಿಸುವಾಗ ಪೀಠಗಳು ಹೆಚ್ಚುವರಿ ಅರ್ಹತೆ ಎಂಬಂತೆ ಮಂಡಿಸಲ್ಪಡುತ್ತವೆ.

ರಾಜ್ಯದ ವಿಶ್ವವಿದ್ಯಾಲಯಗಳಲ್ಲಿರುವ ಅಧ್ಯಯನಪೀಠಗಳ ಕಾರ್ಯವೈಖರಿಗೆ ಒಂದು ಖಚಿತವಾದ, ಏಕರೂಪಿಯಾದ ನಿರ್ದೇಶಕ ತತ್ವಗಳೇ ಇಲ್ಲ. ‘ಅಧ್ಯಯನ’ ಕುರಿತ ಸ್ಪಷ್ಟ ನೋಟ, ನಿಲುವುಗಳಿಲ್ಲ. ಕೆಲವೆಡೆ ಸಂದರ್ಶಕ ಪ್ರಾಧ್ಯಾಪಕರಿದ್ದಾರೆ. ಕೆಲವೆಡೆ ಪ್ರಾಧ್ಯಾಪಕರೇ ಪೀಠದ ಸಂಯೋಜಕರು.

ಅಧ್ಯಯನ ಪೀಠಗಳಿಂದ ತಕ್ಷಣದ ಫಲಿತಾಂಶವನ್ನು ನಿರೀಕ್ಷಿಸಬಾರದು. ನಿಜ. ಆದರೆ ಸ್ಥಾಪನೆಯಾಗಿ ದಶಕ, ಎರಡು ದಶಕ ಪೂರೈಸಿದ ಪೀಠಗಳು ಏನು ಮಾಡಿವೆ? ಮಾಡುತ್ತಿವೆ? ಹೊಸ ಪೀಠಗಳು ಅವುಗಳಿಂದ ಕಲಿಯಬೇಕಾದ್ದು ಏನು? ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಹಾಗೂ ಜನ ಸಮುದಾಯಕ್ಕೆ ಆಗುವ ಪ್ರಯೋಜನವೇನು? ನಿಜಕ್ಕೂ ‘ಅಧ್ಯಯನ ಪೀಠ’ದಲ್ಲಿರುವ ‘ಅಧ್ಯಯನ’ ಎಂದರೆ ಏನು? ಇದು ಮೊದಲು ಸ್ಪಷ್ಟವಾಗಬೇಕು. ಪೀಠಗಳಿಗೆ ವೃತ್ತಿಪರ ವ್ಯಕ್ತಿತ್ವ ಪ್ರಾಪ್ತವಾಗಬೇಕು. ರಾಜಕೀಯ ಪಕ್ಕಕ್ಕಿಡಬೇಕು. ನಂತರ ಹೊಸ ಪೀಠಗಳು ಸ್ಥಾಪನೆಯಾಗಬೇಕು.

ಅಸಮರ್ಪಕ ಬಳಕೆ: ಆಯೋಗ
ಅಧ್ಯಯನ ಪೀಠಗಳ ಬಗ್ಗೆ 2018ರಲ್ಲಿ ಉನ್ನತ ಶಿಕ್ಷಣ ಇಲಾಖೆಗೆ ವರದಿ ಸಲ್ಲಿಸಿದ್ದ ವಿಶ್ವವಿದ್ಯಾಲಯಗಳ ಪರಾಮರ್ಶೆ ಆಯೋಗದ ಅಧ್ಯಕ್ಷ ಪ್ರೊ.ಎನ್‌.ಆರ್‌.ಶೆಟ್ಟಿ, ‘ಸರ್ಕಾರ, ದಾನಿಗಳು, ಕಂಪನಿಗಳ ಅನುದಾನದಲ್ಲಿ ಸ್ಥಾಪನೆಯಾದ ಪೀಠಗಳು ಆಶಯಕ್ಕೆ ತಕ್ಕಂತೆ ಕೆಲಸ ಮಾಡುತ್ತಿಲ್ಲ. ಲೆಕ್ಕಪರಿಶೋಧನೆಯೇ ನಡೆದಿಲ್ಲ’ ಎಂದು ಹೇಳಿದ್ದರು.

‘ರಾಜ್ಯದಲ್ಲಿ 16 ವಿಶ್ವವಿದ್ಯಾಲಯಗಳಲ್ಲಿ 98 ಅಧ್ಯಯನ ಪೀಠಗಳಿಗೆ ಸರ್ಕಾರ ಮತ್ತು ವಿವಿಧ ಕಂಪನಿಗಳು ₹65 ಕೋಟಿ ಅನುದಾನ ನೀಡಿವೆ. ಮಂಗಳೂರು ವಿಶ್ವವಿದ್ಯಾಲಯವನ್ನು ಹೊರತುಪಡಿಸಿದರೆ ಉಳಿದ ವಿಶ್ವವಿದ್ಯಾಲಯಗಳಲ್ಲಿ ಲೆಕ್ಕಪತ್ರ ನಿರ್ವಹಣೆ ಇಲ್ಲ. ನಿಯಮಿತ ಚಟುವಟಿಕೆಗಳೂ ನಡೆಯುತ್ತಿಲ್ಲ. ಲೆಕ್ಕಪರಿಶೋದನೆ ನಡೆಸಬೇಕು. ಉತ್ತರದಾಯಿತ್ವವನ್ನು ನಿಗದಿಪಡಿಸಬೇಕು’ ಎಂದು ಸಲಹೆ ನೀಡಿದ್ದರು.

ಈ ಬಗ್ಗೆ ಸಭೆ ನಡೆಸಿದ ಉನ್ನತ ಶಿಕ್ಷಣ ಪರಿಷತ್ತು, ಕುಲಪತಿಗಳಿಗೆ ಪತ್ರ ಬರೆಯುವಂತೆ, ಯಾವುದೇ ಪೀಠಗಳನ್ನು ಮುಚ್ಚದಿರುವಂತೆ ಸರ್ಕಾರಕ್ಕೆ ಸಲಹೆ ನೀಡಿತ್ತು. ನಂತರವೂ, ಬೇರಾವ ಬದಲಾವಣೆಗಳಿಲ್ಲದೆ ಪೀಠಗಳು ಮುಂದುವರಿದಿವೆ.

ಪೀಠಕ್ಕೆ ಎಷ್ಟು ಅನುದಾನ ಅಗತ್ಯ?
ಸ್ಥಾಪನೆಯ ಆಶಯಕ್ಕೆ ತಕ್ಕಂತೆ ವೃತ್ತಿಪರತೆಗೆ ಚ್ಯುತಿ ಬಾರದಂತೆ ಕಾರ್ಯ ನಿವರ್ಹಿಸಲು ಪೀಠವೊಂದಕ್ಕೆ ಎಷ್ಟು ಅನುದಾನ ಬೇಕು ಎಂಬ ಚರ್ಚೆ ಇದುವರೆಗೂ ನಡೆದಿಲ್ಲ !

ಈಗ ಪೀಠಗಳಲ್ಲಿ ಇರುವವರು, ಇದ್ದವರು ಹೇಳವಂತೆ, ಪೀಠಕ್ಕೆ ಸ್ವಂತ ಕಟ್ಟಡ, ಪೀಠೋಪಕರಣಗಳಿಗಾಗಿ ಕನಿಷ್ಟ 1.50 ಕೋಟಿ ರೂ. ಬೇಕು. ಪೀಠದ ಸ್ವಾವಲಂಬನೆ, ಪೂರ್ಣಾವಧಿಯ ಸಿಬ್ಬಂದಿ, ಸಂಶೋಧನೆ ಚಟುವಟಿಕೆಗಳಿಗಾಗಿ ಕನಿಷ್ಟ ಒಂದು ಕೋಟಿ ರೂ.ಇಡುಗಂಟಿಡಬೇಕು. ಒಟ್ಟಾರೆ 2.50 ಕೋಟಿ ರೂ.ಇದ್ದರೆ ಪೀಠ ಸಮರ್ಥವಾಗಿ ನಿರ್ವಹಿಸಲು ಸಾಧ್ಯ.

ಈ ಬಗ್ಗೆ ಸರ್ಕಾರ ಆದ್ಯತೆ ಮೇರೆಗೆ ತಜ್ಞರೊಂದಿಗೆ ಗಂಭೀರ ಚರ್ಚೆನಡೆಸಬೇಕು. ಖಚಿತ ನಿಲುವಿಗೆ ಬರಬೇಕು. ಪೀಠಗಳ ನಡುವಿನ ಅಸಮಾನತೆ ನಿವಾರಣೆಗೆ ಇದು ಅತ್ಯಗತ್ಯ.

ಏನಾಗಬೇಕು?

*ಪೀಠ ಸ್ಥಾಪನೆಗೆ ಓಟು ಮಾನದಂಡವಾಗಬಾರದು

*ಸಮುದಾಯಗಳ ಓಲೈಕೆಗೆ ಪೀಠ ಸ್ಥಾಪಿಸಬಾರದು

*ನಿಜಕ್ಕೂ ಪೀಠ ಅಗತ್ಯವೇ ಎಂಬ ಬಗ್ಗೆ ಸಮಾಲೋಚನೆ ನಡೆಯಬೇಕು

*ಪೀಠದ ಗೊತ್ತು–ಗುರಿಗಳು ಸ್ಪಷ್ಟವಾಗಬೇಕು

*ಅನುದಾನ ನಿಗದಿಯಾಗಿ, ಬಿಡುಗಡೆಯಾಗಬೇಕು

*ಪ್ರತ್ಯೇಕ ಕಟ್ಟಡ, ಸಿಬ್ಬಂದಿ ನೇಮಕವಾಗಬೇಕು

*ಬಡ್ಡಿ ಹಣದ ಅವಲಂಬನೆಯ ಪದ್ಧತಿ ಬದಲಾಗಬೇಕು

*ಈಗ ಇರುವ ಪೀಠಗಳ ಮೌಲ್ಯಮಾಪನ ನಡೆಯಬೇಕು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು