ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ| ಪಶು ಸಂಗೋಪನೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ: ಅರ್ಧದಷ್ಟು ಹುದ್ದೆ ಖಾಲಿ

ಪಶು ವೈದ್ಯಕೀಯ ಮತ್ತು ಪಶು ಸಂಗೋಪನೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ
Last Updated 18 ಸೆಪ್ಟೆಂಬರ್ 2021, 20:07 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಪಶು ಸಂಗೋಪನೆ ಮತ್ತು ಹೈನುಗಾರಿಕೆ ಚಟುವಟಿಕೆಗಳ ಬೆನ್ನೆಲುಬಾಗಿ ಕೆಲಸ ಮಾಡಬೇಕಿರುವ ಪಶು ವೈದ್ಯಕೀಯ ಮತ್ತು ಪಶು ಸಂಗೋಪನೆ ಇಲಾಖೆಯು, ಸಿಬ್ಬಂದಿ ಕೊರತೆಯಿಂದ ಸೊರಗಿದೆ. ಮಂಜೂರಾದ ಒಟ್ಟು ಹುದ್ದೆಗಳಲ್ಲಿ ಸರಿ ಸುಮಾರು ಅರ್ಧದಷ್ಟು ಖಾಲಿ ಬಿದ್ದಿವೆ.

ಈ ಇಲಾಖೆಯಲ್ಲಿ ಎರಡು ವಿಧದ ಹುದ್ದೆಗಳಿವೆ. ಇಲಾಖೆಯ ಕಚೇರಿಗಳಿಗೆ ಸೀಮಿತವಾದ ಆಡಳಿತ ಸಿಬ್ಬಂದಿ ಒಂದು ಗುಂಪಿನಲ್ಲಿದ್ದರೆ; ಪಶು ವೈದ್ಯರು, ಸಹಾಯಕರು ಸೇರಿದಂತೆ ಕ್ಷೇತ್ರದಲ್ಲಿ ಕೆಲಸ ಮಾಡುವ ಇನ್ನೊಂದು ಗುಂಪು ಇದೆ. ಎರಡೂ ವರ್ಗದಲ್ಲಿ ಮಂಜೂರಾದ ಹುದ್ದೆಗಳಿಗೆ ಹೋಲಿಸಿದರೆ ಬಹುತೇಕ ಅರ್ಧದಷ್ಟು ಹುದ್ದೆಗಳು ಖಾಲಿ ಇವೆ.

ಗ್ರಾಮೀಣ ಪ್ರದೇಶಗಳಲ್ಲಿರುವ ಪಶುಚಿಕಿತ್ಸಾ ಕೇಂದ್ರಗಳು ಹಾಗೂ ತಾಲ್ಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರತೆ ಹೆಚ್ಚುತ್ತಲೇ ಇದೆ. ಮುಖ್ಯ ಪಶು ವೈದ್ಯಾಧಿಕಾರಿಗಳು, ಹಿರಿಯ ಪಶು ವೈದ್ಯಾಧಿಕಾರಿಗಳು, ಪಶು ವೈದ್ಯಾಧಿಕಾರಿಗಳು, ಜಾನುವಾರು ಅಭಿವೃದ್ಧಿ ಅಧಿಕಾರಿ, ಜಾನುವಾರು ಅಧಿಕಾರಿ, ಹಿರಿಯ ಪಶು ವೈದ್ಯಕೀಯ ಪರಿವೀಕ್ಷಕರು, ಪಶು ವೈದ್ಯಕೀಯ ಪರಿವೀಕ್ಷಕರು ಮತ್ತು ಪಶು ವೈದ್ಯಕೀಯ ಸಹಾಯಕರ ಕೊರತೆಯು ನೇರವಾಗಿ ಪಶುಸಂಗೋಪನೆ ಹಾಗೂ ಹೈನುಗಾರಿಕೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ.

ಆರ್ಥಿಕ ಇಲಾಖೆಯ ತಡೆ: ಖಾಲಿ ಇರುವ ಹುದ್ದೆಗಳ ಭರ್ತಿಗೆ ಹಲವು ವರ್ಷಗಳಿಂದಲೂ ಪ್ರಯತ್ನ ನಡೆಯು
ತ್ತಿದೆ. ಆದರೆ, ಆರ್ಥಿಕ ಇಲಾಖೆಯ ಒಪ್ಪಿಗೆ ದೊರೆಯದ ಕಾರಣದಿಂದ ನೇಮಕಾತಿ ವಿಳಂಬವಾಗುತ್ತಿದೆ. ಕೋವಿಡ್‌ ಬಿಕ್ಕಟ್ಟಿನಿಂದಾಗಿ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಹೀಗಾಗಿ ಪಶು ವೈದ್ಯ ಇಲಾಖೆಯಲ್ಲಿನ ಸಿಬ್ಬಂದಿಯ ಕೊರತೆಯ ಸಮಸ್ಯೆಗೆ ಕಾಲಮಿತಿಯೊಳಗೆ ಪರಿಹಾರ ದೊರಕುವ ಲಕ್ಷಣಗಳೂ ಗೋಚರಿಸುತ್ತಿಲ್ಲ.

ಇಲಾಖೆಯಲ್ಲಿನ ಸಿಬ್ಬಂದಿ ಕೊರತೆಯ ಸಮಸ್ಯೆಯು ವಿಧಾನಮಂಡಲ ಅಧಿವೇಶನದಲ್ಲೂ ಪ್ರತಿಧ್ವನಿಸಿದೆ. ಆರ್ಥಿಕ ಇಲಾಖೆಯ ಅನುಮತಿ ಇಲ್ಲದೇ ನೇಮಕಾತಿ ಅಸಾಧ್ಯ ಎಂಬ ಉತ್ತರ ನೀಡಿರುವ ಪಶು ಸಂಗೋಪನಾ ಸಚಿವ ಪ್ರಭು ಚವಾಣ್‌, ‘ಆರ್ಥಿಕ ಇಲಾಖೆ ಒಪ್ಪಿದರೆ ಮುಂದಿನ ದಿನಗಳಲ್ಲಿ ನೇಮಕಾತಿ ಮಾಡುತ್ತೇವೆ’ ಎಂದು ಅಸಹಾಯಕತೆ ತೋಡಿಕೊಂಡಿದ್ದಾರೆ.

ಶೀಘ್ರ ಕ್ರಮ

ರಾಜ್ಯದಲ್ಲಿ 900 ಪಶು ವೈದ್ಯರ ನೇಮಕಾತಿ ಮಾಡಿಕೊಳ್ಳಲು ಹಣಕಾಸು ಇಲಾಖೆಗೆ ಈಗಾಗಲೇ ಪ್ರಸ್ತಾವ ಸಲ್ಲಿಸಲಾಗಿದೆ. ಹಣಕಾಸು ಇಲಾಖೆಯಿಂದ ಅನುಮತಿ ದೊರೆಯಲು ವಿಳಂಬವಾದರೆ 600 ಪಶು ವೈದ್ಯರನ್ನು ಶೀಘ್ರದಲ್ಲೇ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುವುದು.

ಕಲ್ಯಾಣ ಕರ್ನಾಟಕದಲ್ಲಿ 47 ಪಶು ವೈದ್ಯರ ನೇಮಕಾತಿಗೆ ಸಿಂಧುತ್ವ ಪ್ರಮಾಣಪತ್ರ ಪರಿಶೀಲಿಸಲಾಗುತ್ತಿದೆ. ಶೀಘ್ರದಲ್ಲೇ ನೇಮಕಾತಿ ಆದೇಶ ಕೊಡಲಾಗುವುದು.

ಪಶು ಚಿಕಿತ್ಸಾಲಯದಲ್ಲಿ ಸಾಂಕೇತಿಕ ಶುಲ್ಕ ಪಡೆಯುವ ನಿರ್ಧಾರವನ್ನು ಕೈಬಿಡಲಾಗಿದೆ. ಮೊದಲಿನಂತೆ ಪಶುಗಳಿಗೆ ಉಚಿತ ಚಿಕಿತ್ಸೆ ನೀಡುವುದು ಮುಂದುವರಿಯಲಿದೆ.

ಪ್ರಭು ಚವಾಣ್,ಪಶು ಸಂಗೋಪನೆ ಸಚಿವ

ಇವುಗಳನ್ನೂ ಓದಿ:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT