ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಸೋರುತಿಹುದು, ಬೀಳುತಿಹುದು ಶಾಲೆ ಮಾಳಿಗೆ...

ಜೀವಭಯದಲ್ಲಿಯೇ ಪಾಠ ಆಲಿಸುವ ವಿದ್ಯಾರ್ಥಿಗಳು
Last Updated 11 ಜೂನ್ 2022, 19:31 IST
ಅಕ್ಷರ ಗಾತ್ರ

ಬಾಗಲಕೋಟೆ: ಚಾವಣಿಯ ಸಿಮೆಂಟ್ ಕಿತ್ತು ಕಬ್ಬಿಣದ ಸರಳುಗಳು ಕಾಣುತ್ತಿವೆ. ಹೆಂಚುಗಳು ಒಡೆದು ಅದರೊಳಗಿಂದ ಸೂರ್ಯನ ಕಿರಣಗಳು ಕೊಠಡಿಯೊಳಕ್ಕೆ ಬರುತ್ತವೆ. ಮಳೆ, ಗಾಳಿಗೆ ತಗಡಿನ ಶೀಟ್‌ಗಳು ಹಾರಿಹೋಗಿವೆ. ಮಳೆ ಬಂದರೆ ನೆನೆದುಕೊಂಡೇ ಪಾಠ ಕೇಳಬೇಕಾದ ಸ್ಥಿತಿ ರಾಜ್ಯದ ಹಲವು ಶಾಲೆಗಳಲ್ಲಿದೆ.

ಬಾಗಲಕೋಟೆಯ ಜಮಖಂಡಿ ತಾಲ್ಲೂಕಿನ ಬಿದರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಗಳು ಶಿಥಿಲಗೊಂಡಿವೆ. ಇಲ್ಲಿ ಏಳನೇ ತರಗತಿಯವರೆಗೆ ಅವಕಾಶ ಇದ್ದು, 395 ಮಕ್ಕಳು ಓದುತ್ತಿದ್ದಾರೆ. ಶಾಲೆಯ ಆಟದ ಮೈದಾನದಲ್ಲಿಯೇ ಪಾಠ ಮಾಡಬೇಕಾದ ಸ್ಥಿತಿ ಇದೆ.

ಹುನಗುಂದ ತಾಲ್ಲೂಕಿನ ಕೌಜಗನೂರು ಶಾಲೆಯ ಚಾವಣಿಯ ಸಿಮೆಂಟ್‌ ಉದುರಿ ಬಿದ್ದಿದ್ದು, ಸರಳುಗಳು ಕಾಣಿಸುತ್ತಿವೆ. ಶಾಲೆಯ ಐದು ಕೊಠಡಿಗಳಲ್ಲಿ ಮೂರು ಕೊಠಡಿಗಳು ಶಿಥಿಲಗೊಂಡಿವೆ. ಒಂದೇ ಕೊಠಡಿಯಲ್ಲಿ ಮಕ್ಕಳು ಪಾಠ ಕೇಳಬೇಕಾಗಿದೆ.

ಶಿವಮೊಗ್ಗ ನಗರದ ನ್ಯೂ ಮಂಡ್ಲಿಯಲ್ಲಿರುವ ಶಾಲೆಯ ಕೊಠಡಿಗಳೆಲ್ಲ ಸೋರುತ್ತಿವೆ. ಈಗಲೋ, ಆಗಲೋ ಬೀಳುವ ಸ್ಥಿತಿಯಲ್ಲಿರುವ ಕೊಠಡಿಗಳಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡು ವಿದ್ಯಾರ್ಥಿಗಳು ಪಾಠ ಕೇಳುತ್ತಿದ್ದಾರೆ.

ಇದು ಒಂದೆರಡು ಶಾಲೆಗಳ ಕಥೆಯಲ್ಲ. ಸಾವಿರಾರು ಶಾಲೆಗಳ ಸ್ಥಿತಿ ಹೀಗೆಯೇ ಇದೆ. ಶತಮಾನಗಳ ಶಾಲೆಗಳು ಹೊಸ ಕಟ್ಟಡವನ್ನೇ ಕಂಡಿಲ್ಲ. ಇಂದೋ, ನಾಳೆಯೋ ಬೀಳುವಂತಹ ಸ್ಥಿತಿಗಳಲ್ಲಿರುವ ಶಾಲೆಯಲ್ಲಿಯೇ ಕಲಿಸಬೇಕಾಗಿದೆ.

ಪ್ರತಿ ವರ್ಷ ಹತ್ತಾರು ಕೋಟಿ ಖರ್ಚು ಮಾಡಿ ಕೊಠಡಿಗಳ ದುರಸ್ತಿ ಮಾಡಲಾಗುತ್ತಿದೆ. ಹೊಸ ಕೊಠಡಿಗಳ ನಿರ್ಮಾಣ ಕಾರ್ಯವೂ ನಡೆದಿದೆ. ಆದರೆ, ಹಳೆಯದಾದ, ಮಳೆ, ಪ್ರವಾಹ ದಿಂದ ಹಾನಿಗೊಳಗಾಗುವ ಕೊಠಡಿಗಳ ಸಂಖ್ಯೆ ಅದಕ್ಕಿಂತಲೂ ಹೆಚ್ಚಿದೆ.

ಬೆಳಗಾವಿ ವಿಭಾಗದಲ್ಲಿ 8,103 ಕೊಠಡಿಗಳು ದುರಸ್ತಿ ಕಾಣಬೇಕಿದೆ. ದುರಸ್ತಿಗಾಗಿ ₹60 ಕೋಟಿ ಮೊತ್ತದ ಪ್ರಸ್ತಾವವನ್ನು ಶಿಕ್ಷಣ ಇಲಾಖೆಯ ಅಧಿಕಾರಿಗಳು ಸರ್ಕಾರಕ್ಕೆ ಕಳುಹಿಸಿದ್ದಾರೆ. 3,500ಕ್ಕೂ ಹೆಚ್ಚು ಹೊಸ ಕೊಠಡಿಗಳಿಗೆ ಬೇಡಿಕೆ ಇದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಈಗಲೂ 807 ಶಾಲೆಗಳು ಮಣ್ಣಿನ ಗೋಡೆ ಹೊಂದಿವೆ. ಅಷ್ಟೂ ಶಾಲೆಗಳನ್ನು ನಿರ್ಮಾಣ ಮಾಡುವ ಕೆಲಸ ಆಗಬೇಕಿದೆ. ಇದೇ ರೀತಿ ರಾಜ್ಯದ ವಿವಿಧೆಡೆಗಳಲ್ಲಿಯೂ ಮಣ್ಣಿನ ಶಾಲೆಗಳಿವೆ.

ಹೊಸ ಶಾಲೆಗಳನ್ನು ಮಂಜೂರು ಮಾಡಲಾಗುತ್ತದೆ. ಆದರೆ, ವಿದ್ಯಾರ್ಥಿಗಳ ಪ್ರವೇಶಕ್ಕೆ ತಕ್ಕಂತೆ ಕೊಠಡಿಗಳ ನಿರ್ಮಾಣ ಮಾಡುವುದಿಲ್ಲ. ಎಷ್ಟೋ ಶಾಲೆಗಳಲ್ಲಿ ಮೂರ್ನಾಲ್ಕು ತರಗತಿಗಳನ್ನು ಒಂದೇ ಕೊಠಡಿಯಲ್ಲಿ ಕಲಿಸಬೇಕಾದ ಸ್ಥಿತಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT