ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಡಾರ್ಕ್‌ನೆಟ್‌ ‘ಸಿಂಥೆಟಿಕ್’ ಡ್ರಗ್ಸ್ ದಂಧೆ

ನೈಸರ್ಗಿಕ ಡ್ರಗ್ಸ್‌ಗಿಂತ ದುಬಾರಿ ರಾಸಾಯನಿಕ ಡ್ರಗ್ಸ್
Last Updated 14 ಜನವರಿ 2023, 20:49 IST
ಅಕ್ಷರ ಗಾತ್ರ

ಬೆಂಗಳೂರು: ನೈಸರ್ಗಿಕವಾಗಿ ಬೆಳೆಯುವ ಗಾಂಜಾ, ಅಫೀಮು ಜೊತೆಯಲ್ಲೇ ಇತ್ತೀಚಿನ ದಿನಗಳಲ್ಲಿ ‘ಸಿಂಥೆಟಿಕ್’ ಡ್ರಗ್ಸ್ ವಹಿವಾಟು ವ್ಯಾಪಕವಾಗುತ್ತಿದೆ. ಯುವ ಸಮೂಹವನ್ನು ಬಹುಬೇಗ ಜಾಲದೊಳಗೆ ಸಿಲುಕಿಸಿ ವ್ಯಸನಿಗಳಾಗಿ ಮಾಡಲಾಗುತ್ತಿದೆ. ಸಂಪೂರ್ಣ ರಾಸಾಯನಿಕವನ್ನಷ್ಟೇ ಬಳಸಿ ಸಿದ್ಧಪಡಿಸುವ ಸಿಂಥೆಟಿಕ್ ಡ್ರಗ್ಸ್‌ ಸಾಗಣೆ ಹಾಗೂ ಮಾರಾಟದಿಂದ ದೇಶ–ವಿದೇಶಗಳಲ್ಲಿ ಕೋಟ್ಯಂತರ ರೂಪಾಯಿ ವ್ಯವಹಾರ ನಡೆಯುತ್ತಿದೆ.

ಮೊಬೈಲ್, ದೂರವಾಣಿ, ಇ– ಮೇಲ್, ಆ್ಯಪ್‌, ಸಾಮಾಜಿಕ ಮಾಧ್ಯಮಗಳ ಸಂಪರ್ಕದ ಮೂಲಕ ನಡೆಯುತ್ತಿದ್ದ ಸಿಂಥೆಟಿಕ್ ಡ್ರಗ್ಸ್ ದಂಧೆ, ಇದೀಗ ‘ಡಾರ್ಕ್‌ನೆಟ್‌’ ರೂಪ ಪಡೆದುಕೊಂಡಿದೆ. ಅಪರಿಚಿತರಾಗಿ ಕೋಡ್‌ಗಳ ಮೂಲಕ ಸಿಂಥೆಟಿಕ್ ಡ್ರಗ್ಸ್ ಮಾರಾಟ ಹಾಗೂ ಖರೀದಿ ಪ್ರಕ್ರಿಯೆ ನಡೆಸುತ್ತಿರುವ ಪೆಡ್ಲರ್ ಮತ್ತು ಮಧ್ಯವರ್ತಿಗಳು, ವ್ಯವಸ್ಥಿತ ಜಾಲ ಹುಟ್ಟುಹಾಕಿದ್ದಾರೆ.

ಸ್ನೇಹಿತರು, ಸಹೋದ್ಯೋಗಿಗಳ ಸಹವಾಸದಿಂದ ಯುವಸಮೂಹ ವ್ಯಸನಿಗಳಾಗುತ್ತಿದ್ದಾರೆ. ಕೆಲ ಶಾಲಾ– ಕಾಲೇಜು ವಿದ್ಯಾರ್ಥಿಗಳು, ಕೆಲ ಐಟಿ–ಬಿಟಿ ಕಂಪನಿಗಳ ಉದ್ಯೋಗಿಗಳು, ಉದ್ಯಮಿಗಳು, ವ್ಯಾಪಾರಿಗಳು, ಸಿನಿ ತಾರೆಯರು ಸೇರಿದಂತೆ ಹಲವರು ಕ್ರಮೇಣ ವ್ಯಸನಿಗಳಾಗುತ್ತಿದ್ದಾರೆ. ಸಣ್ಣ ವಯಸ್ಸಿನಲ್ಲೇ ಮಾನಸಿಕ ಹಾಗೂ ದೈಹಿಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ.

ಸಂಗೀತ ಹಾಗೂ ವೀಕೆಂಡ್ ಕಾರ್ಯಕ್ರಮ, ವಿಶೇಷ ಔತಣಕೂಟ, ಮೋಜು–ಮಸ್ತಿ ಸ್ಥಳಗಳು.. ಸೇರಿದಂತೆ ವಿವಿಧೆಡೆ ಸಿಂಥೆಟಿಕ್ ಡ್ರಗ್ಸ್ ಹಾವಳಿ ಇದೆ. ವ್ಯಸನಿಗಳು, ತಮ್ಮ ಸ್ನೇಹಿತರು ಹಾಗೂ ಆಪ್ತರನ್ನು ಪಾರ್ಟಿಗಳಿಗೆ ಕರೆದೊಯ್ಯುತ್ತಾರೆ. ಚಾಕೊಲೇಟ್, ಮದ್ಯ ಹಾಗೂ ಪಾನೀಯಗಳಲ್ಲಿ ಮಾದಕ ವಸ್ತುಗಳ ಮಿಶ್ರಣ ಮಾಡಿ ಹೊಸಬರಿಗೆ ನೀಡುತ್ತಾರೆ. ಒಮ್ಮೆ ಅದನ್ನು ಸೇವಿಸುವ ವ್ಯಕ್ತಿ, ಪದೇ ಪದೇ ಬೇಕೆಂದು ಹಂಬಲಿಸುತ್ತಾರೆ. ಅವಾಗಲೇ ವ್ಯಸನಿಯಾಗಿ ಬದಲಾಗುತ್ತಾರೆ. ಜೊತೆಗೆ, ವ್ಯಸನಿಗಳೇ ಪೆಡ್ಲರ್‌ಗಳಾಗಿ ಮಾರ್ಪಡುತ್ತಿದ್ದಾರೆ.

ಇವುಗಳನ್ನು ಸೇವಿಸುವವರ ಪೈಕಿ, ವಿದ್ಯಾವಂತರೇ ಹೆಚ್ಚಿದ್ದಾರೆ. ದುಬಾರಿ ಮಾದಕವಸ್ತು ಖರೀದಿಸಿ ಅಮಲು ಏರಿಸಿಕೊಳ್ಳುತ್ತಿದ್ದಾರೆ. ಕೆಲ ಎಂಜಿನಿಯರ್‌ಗಳು, ಕೆಲ ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳು, ಕಚೇರಿ–ಕಾಲೇಜಿನಲ್ಲಿ ತಮ್ಮದೇ ತಂಡ ಕಟ್ಟಿಕೊಂಡು ಡ್ರಗ್ಸ್ ಸೇವಿಸುತ್ತಿದ್ದಾರೆ.

ಮೈಸೂರಿನಲ್ಲಿ ಕಾನೂನು ವಿದ್ಯಾರ್ಥಿ ಹಾಗೂ ವಕೀಲರೊಬ್ಬರು ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದರು. ಮಂಗಳೂರಿನ ಐದು ವೈದ್ಯಕೀಯ ಕಾಲೇಜುಗಳ ಇಬ್ಬರು ವೈದ್ಯರು, ಎಂಬಿಬಿಎಸ್‌, ಬಿಡಿಎಸ್‌ ಹಾಗೂ ಎಂಡಿ ಕಲಿಯುತ್ತಿರುವ 11 ವೈದ್ಯ ವಿದ್ಯಾರ್ಥಿಗಳು ಸೆರೆ ಸಿಕ್ಕಿದ್ದಾರೆ. ಗ್ರಾಹಕರಾಗಿ ಜಾಲದೊಳಗೆ ಪ್ರವೇಶಿಸಿದ್ದ ವೈದ್ಯರು, ಕ್ರಮೇಣ ಪೆಡ್ಲರ್‌ ಆಗಿ ಮಾರ್ಪಟ್ಟಿದ್ದಾರೆ.

ಡ್ರಗ್ಸ್‌ನಲ್ಲಿ ಮೂರು ವಿಧ: ದೇಶದೊಳಗೆ ಸಾಮಾನ್ಯವಾಗಿ ಸಿಗುವ ಅಫೀಮು, ಗಾಂಜಾ ಹಾಗೂ ಕೋಕಾ.. ಇವು ನೈಸರ್ಗಿಕ ಮಾದಕ ವಸ್ತುಗಳು. ಆಂಧ್ರಪ್ರದೇಶ, ಕೇರಳ, ಅಸ್ಸಾಂ, ಒಡಿಶಾ ಹಾಗೂ ಕರ್ನಾಟಕದ ಕೆಲವೆಡೆ ಈ ಮಾದಕ ವಸ್ತು ದೊರೆಯುತ್ತದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಸೆಮಿ ಸಿಂಥೆಟಿಕ್ ಹಾಗೂ ಸಿಂಥೆಟಿಕ್ ಡ್ರಗ್ಸ್‌ ಉತ್ಪಾದನೆ ಹೇರಳವಾಗಿದ್ದು, ಬೆಲೆಯೂ ದುಬಾರಿ.

‘ನೈಸರ್ಗಿಕ ಡ್ರಗ್ಸ್ ಜೊತೆ ರಾಸಾಯನಿಕ ವಸ್ತು ಮಿಶ್ರಣ ಮಾಡಿ ತಯಾರಿಸುವುದೇ ಸೆಮಿ ಸಿಂಥೆಟಿಕ್ ಡ್ರಗ್ಸ್
(ಮಾರ್ಫಿನ್, ಹೆರಾಯಿನ್, ಕೊಡೈನ್). ಶೇ 100ರಷ್ಟು ರಾಸಾಯನಿಕವನ್ನೇ ಬಳಸಿ ಸಿದ್ಧಪಡಿಸುವುದು ಸಿಂಥೆಟಿಕ್ ಡ್ರಗ್ಸ್ (ಆ್ಯಂಫೆಟಮೈನ್, ಮೆಥಾಂಫೆಟಮೈನ್, ಎಂಡಿಎಂಎ, ಎಲ್‌ಎಸ್‌ಡಿ, ಕೆಟಾಮಿನ್, ಸೂಡೊ ಎಫೆಡ್ರೈನ್, ಟ್ರಮಡೋಲ್, ಎಕ್ಸ್‌ಟೆಸ್ಸಿ, ಕೊಕೇನ್ ಇತರೆ). ಇವುಗಳಿಗೆ ಹೆಚ್ಚಿನ ಬೇಡಿಕೆ ಬಂದಿದ್ದು, ಹಲವು ಪೆಡ್ಲರ್‌ಗಳು ಸಿಂಥೆಟಿಕ್ ಡ್ರಗ್ಸ್‌ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದಾರೆ’ ಎಂದು ಹೆಸರು ಹೇಳಲಿಚ್ಛಿಸದ ಸಿಸಿಬಿ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ಡ್ರಗ್ಸ್ ಜಾಲದಿಂದ ಹರಿದುಬರುವ ಕೋಟಿ ಕೋಟಿ ಹಣ, ಮಧ್ಯವರ್ತಿಗಳು, ಪೆಡ್ಲರ್‌ಗಳು, ಕೆಲ ಪೊಲೀಸರು, ಕೆಲ ರಾಜಕಾರಣಿಗಳು ಹಾಗೂ ಪಾರ್ಟಿ ಆಯೋಜಿಸುವ ಖಾಸಗಿ ಏಜೆನ್ಸಿಗಳ ಕೈ ಸೇರುತ್ತಿರುವ ಮಾಹಿತಿ ಇದೆ.

ಡಾರ್ಕ್‌ನೆಟ್‌ ಖರೀದಿ, ಕೊರಿಯರ್‌ನಲ್ಲಿ ಸಾಗಣೆ: ‘ಬೆಂಗಳೂರು, ಮುಂಬೈ, ದೆಹಲಿ, ಗೋವಾ, ರಾಜಸ್ಥಾನ, ಕೊಲ್ಕತ್ತಾ, ಜೈಪುರ, ಹೈದರಾಬಾದ್... ಹಲವು ನಗರಗಳಲ್ಲಿ ಸಿಂಥೆಟಿಕ್ ಡ್ರಗ್ಸ್ ಮಾರಾಟ ಜೋರಾಗಿದೆ. ಡಾರ್ಕ್‌ನೆಟ್‌ ಮೂಲಕ ಖರೀದಿ ನಡೆದಿದೆ. ಕ್ರಿಪ್ಟೊ ಕರೆನ್ಸಿ ಮೂಲಕ ನಗದು ವರ್ಗಾವಣೆ ಆಗುತ್ತಿದೆ. ಈ ವ್ಯವಹಾರವನ್ನು ಭೇದಿಸುವುದು ತುಂಬಾ ಕಷ್ಟ’ ಎಂದು ಹೇಳಿದರು.

‘ಬಟ್ಟೆ, ಪಾತ್ರೆ, ಸೋಪು, ಆಟಿಕೆ, ಕ್ರೀಡಾ ಸಾಮಗ್ರಿ, ಅಲಂಕಾರಿಕ ಸಾಮಗ್ರಿ, ಹೀಗೆ... ವಿವಿಧ ವಸ್ತುಗಳಲ್ಲಿ ಡ್ರಗ್ಸ್ ಬಚ್ಚಿಟ್ಟು ಅಂತರರಾಷ್ಟ್ರೀಯ ಕೊರಿಯರ್ ಮೂಲಕ ಆಯಾ ದೇಶಗಳಿಗೆ ಕಳುಹಿಸಲಾಗುತ್ತಿದೆ. ಅತ್ಯಾಧುನಿಕ ತಂತ್ರಜ್ಞಾನದ ಅಲಭ್ಯತೆಯಿಂದಾಗಿ ಕೊರಿಯರ್ ಸ್ಕ್ಯಾನಿಂಗ್ ಪ್ರಕ್ರಿಯೆ ಸಮರ್ಪಕವಾಗಿ ನಡೆಯುತ್ತಿಲ್ಲ. ಹೀಗಾಗಿ, ಡ್ರಗ್ಸ್ ಪೊಟ್ಟಣ ಸುಲಭವಾಗಿ ಉಪ ಪೆಡ್ಲರ್‌ಗಳ ಕೈ ಸೇರುತ್ತಿದೆ. ಅಲ್ಲಿಂದ, ಗ್ರಾಹಕರಿಗೆ ತಲುಪುತ್ತಿದೆ’ ಎಂದು ಅಧಿಕಾರಿ ವಿವರಿಸಿದರು.

‘ಯಾರಾದರೂ ಮಾಹಿತಿ ನೀಡಿದರೆ ಮಾತ್ರ ತನಿಖಾ ತಂಡಗಳು, ಕೊರಿಯರ್ ಕೇಂದ್ರದಲ್ಲಿ ತಪಾಸಣೆ ನಡೆಸಿ ಡ್ರಗ್ಸ್ ಪತ್ತೆ ಮಾಡುತ್ತವೆ. ವಿದೇಶದಿಂದ ಬರುವ ಪ್ರತಿಯೊಂದು ಕೊರಿಯರ್‌ ಬಿಚ್ಚಿ ನೋಡಲು ಸಾಧ್ಯವಿಲ್ಲ. ಜೊತೆಗೆ, ವಿಮಾನ ನಿಲ್ದಾಣದಲ್ಲೂ ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ ಕೊರಿಯರ್ ಹೊರಗೆ ಬರುತ್ತದೆ. ಕೆಲವು ಬಾರಿ ಮಾತ್ರ ಭದ್ರತಾ ಸಿಬ್ಬಂದಿ ಕಣ್ಣಿಗೆ ಡ್ರಗ್ಸ್ ಬೀಳುತ್ತದೆ. ತಪಾಸಣೆ ವೈಫಲ್ಯಗಳಿಂದ ಪೆಡ್ಲರ್‌ಗಳಿಗೆ ಅನುಕೂಲವಾಗಿದೆ. ಇತ್ತೀಚೆಗೆ ಬಂಧಿಸಿದ್ದ ಕೆಲ ಆರೋಪಿಗಳು, ಡಾರ್ಕ್‌ನೆಟ್ ಬಗ್ಗೆ ಮಾಹಿತಿ ನೀಡಿದ್ದರು. ಆದರೆ, ಮುಖ್ಯ ಪೆಡ್ಲರ್‌ಗಳ ಬಗ್ಗೆ ಇದುವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ’ ಎಂದು ಹೇಳಿದರು.

ತಪಾಸಣೆ ಕಡಿಮೆ ಎಂಬ ಕಾರಣಕ್ಕೆ ಕೆಲವೆಡೆ ಇವುಗಳ ಸಾಗಣೆಗಾಗಿ ಯುವತಿಯರನ್ನು ಬಳಸಿಕೊಳ್ಳಲಾಗುತ್ತಿದೆ.
ಇಂಥ ಐವರು ಯುವತಿಯರನ್ನು 2022ರ ಮೇ 24ರಂದು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದ ಎನ್‌ಸಿಬಿ ಅಧಿಕಾರಿಗಳು, ₹54.50 ಕೋಟಿ ಮೌಲ್ಯದ 34 ಕೆ.ಜಿ 89 ಗ್ರಾಂ ಹೆರಾಯಿನ್ ಜಪ್ತಿ ಮಾಡಿದ್ದರು. ರೈಲು, ಬಸ್‌ ಹಾಗೂ ವಾಹನಗಳಲ್ಲೂ ಡ್ರಗ್ಸ್ ಸಾಗಿಸುವವರು ಇದ್ದಾರೆ.

ಕೆಲ ಉದ್ಯಮಿಗಳು, ಸಿನಿ ತಾರೆಯರು ಹಾಗೂ ಗಣ್ಯ ವ್ಯಕ್ತಿಗಳು ಪಾಲ್ಗೊಳ್ಳುತ್ತಿದ್ದ ಪಾರ್ಟಿಗಳಲ್ಲಿ ಸಿಂಥೆಟಿಕ್ ಡ್ರಗ್ಸ್ ಬಳಕೆಯಾಗುತ್ತಿತ್ತು. ಕ್ರಮೇಣ ಇಂಥ ಪಾರ್ಟಿಗಳು ಹಲವೆಡೆ ಆಯೋಜನೆಗೊಂಡು, ಇದೀಗ ವ್ಯಾಪ್ತಿಯನ್ನು ವಿಸ್ತರಿಸಿವೆ. ಸಂಗೀತ ಸೇರಿದಂತೆ ವಿವಿಧ ಕಾರ್ಯಕ್ರಮ ಸಂಘಟಿಸುವ ಸೋಗಿನಲ್ಲಿ ಕೆಲ ಖಾಸಗಿ ಏಜೆನ್ಸಿಗಳು, ಇವುಗಳ ಮಾರಾಟಕ್ಕೆ ವೇದಿಕೆ ಕಲ್ಪಿಸುತ್ತಿವೆ. ಜಾಹೀರಾತು ನೀಡಿ ಯುವಕ–ಯುವತಿಯರನ್ನು ಆಹ್ವಾನಿಸಿ ಮತ್ತಿನಲ್ಲಿ ತೇಲಿಸಲಾಗುತ್ತಿದೆ.

ಮಿನಿ ಲ್ಯಾಬ್‌ನಲ್ಲಿ ತಯಾರಿ: ‘ಕೆಲ ರಾಸಾಯನಿಕಗಳ ವೈಜ್ಞಾನಿಕ ಮಿಶ್ರಣದಿಂದ ಸುಲಭವಾಗಿ ಸಿಂಥೆಟಿಕ್ ಡ್ರಗ್ಸ್ ತಯಾರಿಸಬಹುದು. ಈ ಬಗ್ಗೆ ತಿಳಿದುಕೊಂಡ ಪೆಡ್ಲರ್‌ಗಳು, ಮನೆ ಹಾಗೂ ಕಚೇರಿಯಲ್ಲೇ ಸಣ್ಣದೊಂದು ಲ್ಯಾಬ್ ಸೃಷ್ಟಿಸಿಕೊಂಡು ಡ್ರಗ್ಸ್ ತಯಾರಿಸುತ್ತಿದ್ದಾರೆ’ ಎಂದು ಡ್ರಗ್ಸ್ ವಿರುದ್ಧದ ಕಾರ್ಯಾಚರಣೆಯಲ್ಲಿದ್ದ ಹೆಸರು ಹೇಳಲಿಚ್ಛಿಸದ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದರು.

‘ವಿದೇಶದಿಂದ ಡ್ರಗ್ಸ್ ಖರೀದಿಸಿ ತರಲು ಹೆಚ್ಚು ಹಣ ಬೇಕು. ಆಕಸ್ಮಾತ್, ತನಿಖಾ ತಂಡಗಳ ಕೈಗೆ ಡ್ರಗ್ಸ್ ಸಿಕ್ಕರೆ ಹಣ ವ್ಯರ್ಥ. ಇದೇ ಕಾರಣಕ್ಕೆ ಪೆಡ್ಲರ್‌ಗಳು, ಸಣ್ಣ ಲ್ಯಾಬ್ ನಿರ್ಮಿಸಿ ಸಿಂಥೆಟಿಕ್ ಡ್ರಗ್ಸ್ ತಯಾರಿಸುತ್ತಿದ್ದಾರೆ. ಅದನ್ನು ವ್ಯವಸ್ಥಿತ ಜಾಲದ ಮೂಲಕ ಗ್ರಾಹಕರಿಗೆ ತಲುಪಿಸಿ ಹಣ ಗಳಿಸುತ್ತಿದ್ದಾರೆ’ ಎಂದು ಅವರು ತಿಳಿಸಿದರು.

‘ಬೆಂಗಳೂರಿನ ಸೋಲದೇವನಹಳ್ಳಿಯಲ್ಲಿ ವಾಸವಿದ್ದ ನೈಜೀರಿಯಾ ಪ್ರಜೆಯೊಬ್ಬ ಬಾಡಿಗೆ ಮನೆಯಲ್ಲಿ ಕಿರು ಪ್ರಯೋಗಾಲಯ (ಮಿನಿ ಲ್ಯಾಬ್) ಸ್ಥಾಪಿಸಿದ್ದ. ಕೆಲ ರಾಸಾಯನಿಕ, 10 ಲೀಟರ್ ಸಾಮರ್ಥ್ಯದ ಪ್ರೆಷರ್ ಕುಕ್ಕರ್, ಪ್ಲಾಸ್ಟಿಕ್ ಕೊಳವೆ ಹಾಗೂ ಕಚ್ಚಾ ವಸ್ತು ಬಳಸಿ ಡ್ರಗ್ಸ್ ತಯಾರಿಸುತ್ತಿದ್ದ. ಮನೆ ಮೇಲೆ ದಾಳಿ ಮಾಡಿ, ₹50 ಲಕ್ಷ ಮೌಲ್ಯದ ಕೊಕೇನ್ ಹಾಗೂ ಎಂಡಿಎಂಎ ಡ್ರಗ್ಸ್ ಜಪ್ತಿ ಮಾಡಲಾಗಿತ್ತು’ ಎಂದು ಹೇಳಿದರು.

‘ಹೈದರಾಬಾದ್‌ ಬಾಲನಗರದಲ್ಲಿರುವ ಮನೆಯೊಂದರಲ್ಲಿ ಮಿನಿ ಲ್ಯಾಬ್ ಮಾಡಿಕೊಂಡು, ಆಲ್ಫ್ರಝೋಲಮ್ ಡ್ರಗ್ಸ್ ತಯಾರಿಸಲಾಗುತ್ತಿತ್ತು. ಎನ್‌ಸಿಬಿ ಅಧಿಕಾರಿಗಳು ದಾಳಿ ಮಾಡಿ, ₹12.75 ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿ ನಾಲ್ವರನ್ನು ಜೈಲಿಗಟ್ಟಿದ್ದರು’ ಎಂದು ತಿಳಿಸಿದರು.

‘ಕೋಲಾರ ಜಿಲ್ಲೆಯ ಮುಳಬಾಗಿಲು ನಗರದ ಮನೆಯೊಂದರಲ್ಲಿ ಮಿನಿ ಲ್ಯಾಬ್ ನಿರ್ಮಿಸಿ, ಮೆಥಾಂಫೆಟಮೈನ್ ತಯಾರಿಸಲಾಗುತ್ತಿತ್ತು. ಮನೆ ಮೇಲೆ ದಾಳಿ ಮಾಡಿದ್ದ ಪೊಲೀಸರು, ಮುಂಬೈನ ಇಬ್ಬರು ಹಾಗೂ ಅಸ್ಸಾಂನ ನಾಲ್ವರನ್ನು ಬಂಧಿಸಿದ್ದರು’ ಎಂದರು.

ಬದಲಾದ ಡೆಲಿವರಿ ಸ್ವರೂಪ: ಗ್ರಾಹಕರಿಗೆ ಡ್ರಗ್ಸ್ ಡೆಲಿವರಿ ಮಾಡುವ ಸ್ವರೂಪ ಬದಲಾಗಿದೆ. ನಿಗದಿತ ಸ್ಥಳಕ್ಕೆ ಹೋಗಿ ಗ್ರಾಹಕರ ಕೈಗೆ ಡ್ರಗ್ಸ್ ಕೊಟ್ಟು ಬರುತ್ತಿದ್ದ ಮಧ್ಯವರ್ತಿಗಳು, ಪೊಲೀಸರು ತಮ್ಮನ್ನು ಬಂಧಿಸಬಹುದೆಂಬ ಭಯದಲ್ಲಿ ನಾನಾ ರೂಪದಲ್ಲಿ ತಲುಪಿಸುತ್ತಿದ್ದರು.

‘ಮೊಬೈಲ್ ಆ್ಯಪ್, ಸಾಮಾಜಿಕ ಮಾಧ್ಯಮಗಳಲ್ಲಿ ಕೋಡ್‌ ವರ್ಡ್‌ ಮೂಲಕ ಡ್ರಗ್ಸ್ ಖರೀದಿ ನಡೆಯುತ್ತಿದೆ. ಆಹಾರ ಪೂರೈಕೆ ಆ್ಯಪ್ ಕಂಪನಿಗಳ ಪ್ರತಿನಿಧಿಗಳ ಸೋಗಿನಲ್ಲಿ ಡೆಲಿವರಿ ಮಾಡಲಾಗುತ್ತಿದೆ. ಕೆಲವರು, ನಿರ್ಜನ ಪ್ರದೇಶದಲ್ಲಿ ಡ್ರಗ್ಸ್ ಇರಿಸಿ ಅದರ ಲೊಕೇಶನ್‌ಗಳನ್ನು ಗ್ರಾಹಕರಿಗೆ ಕಳುಹಿಸುತ್ತಿದ್ದಾರೆ. ಗ್ರಾಹಕರು ಅಲ್ಲಿಗೆ ಹೋಗಿ ಡ್ರಗ್ಸ್ ಪಡೆಯುತ್ತಿದ್ದಾರೆ’ ಎಂದು ಸಿಸಿಬಿ ಪೊಲೀಸರು ಹೇಳಿದರು.

ಸಿಂಥೆಟಿಕ್ ಡ್ರಗ್ಸ್ ತಯಾರಿಸುತ್ತಿದ್ದ ಆರೋಪಿಯಿಂದ ಬೆಂಗಳೂರಿನ ಸಿಸಿಬಿ ಪೊಲೀಸರು ಜಪ್ತಿ ಮಾಡಿದ್ದ ವಸ್ತುಗಳು
ಸಿಂಥೆಟಿಕ್ ಡ್ರಗ್ಸ್ ತಯಾರಿಸುತ್ತಿದ್ದ ಆರೋಪಿಯಿಂದ ಬೆಂಗಳೂರಿನ ಸಿಸಿಬಿ ಪೊಲೀಸರು ಜಪ್ತಿ ಮಾಡಿದ್ದ ವಸ್ತುಗಳು

ಕೆಲ ಪೊಲೀಸರೂ ಶಾಮೀಲು: ಈ ದಂಧೆಯ ಆರೋಪಿಗಳ ಜೊತೆ ಕೆಲ ಪೊಲೀಸರು ಶಾಮೀಲಾಗಿರುವ ಪ್ರಕರಣಗಳು ವರದಿಯಾಗುತ್ತಿವೆ. ತಪ್ಪಿತಸ್ಥ ಪೊಲೀಸರ ತಲೆದಂಡವೂ ಆಗುತ್ತಿದೆ. ಕೆಲವೆಡೆ ಪೊಲೀಸರ ಕೃಪಾಕಟಾಕ್ಷದಿಂದ ಡ್ರಗ್ಸ್ ಮಾರಾಟ ಆಗುತ್ತಿರುವುದು ಜಗಜ್ಜಾಹೀರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಆರ್‌.ಟಿ.ನಗರ ಮನೆ ಭದ್ರತೆಯಲ್ಲಿದ್ದ ಹೆಡ್‌ ಕಾನ್‌ಸ್ಟೆಬಲ್ ಸಂತೋಷ್ ಹಾಗೂ ಕಾನ್‌ಸ್ಟೆಬಲ್ ಶಿವಕುಮಾರ್ ಡ್ರಗ್ಸ್ ಹೊಂದಿದ್ದ ಪ್ರಕರಣದಲ್ಲಿ ಸಿಕ್ಕಿಬಿದ್ದು ಅಮಾನತಾಗಿದ್ದರು. ರಾಜಕಾರಣಿ, ವೈದ್ಯ, ಉದ್ಯಮಿ ಸೇರಿದಂತೆ ಹಲವು ಪ್ರಭಾವಿ ವ್ಯಕ್ತಿಗಳ ಮಕ್ಕಳು ಸೇರಿಕೊಂಡು ನಡೆಸುತ್ತಿದ್ದ ಈ ಜಾಲದ ಕೃತ್ಯಕ್ಕೆ ಸಹಕರಿಸಿದ್ದ ಆರೋಪದಡಿ ಸದಾಶಿವನಗರ ಠಾಣೆ ಹೆಡ್ ಕಾನ್‌ಸ್ಟೆಬಲ್ ಪ್ರಭಾಕರ್ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು.

ಡ್ರಗ್ಸ್ ಆರೋಪಿಗಳ ಬಗ್ಗೆ ಮಾಹಿತಿ ಕಲೆಹಾಕಲು ಪೊಲೀಸರು ಕೆಲ ಬಾತ್ಮಿದಾರರನ್ನು ನಂಬಿಕೊಂಡಿದ್ದಾರೆ. ಅಂಥ ಬಾತ್ಮಿದಾರರೂ ಪೆಡ್ಲರ್‌ಗಳ ಜೊತೆ ಕೈ ಜೋಡಿಸಿದ್ದಾರೆ. ಇಂಥ ಭಾತ್ಮಿದಾರರಾದ ರವಿ ಹಾಗೂ ರತನ್ ಲಾಲ್ ಎಂಬುವರನ್ನು ಪೊಲೀಸರು ಸೆರೆಹಿಡಿದು ಜೈಲಿಗಟ್ಟಿದ್ದರು.

ಮಾದಕ ವಸ್ತುಗಳ ವಿರುದ್ಧದ ಕಾರ್ಯಾಚರಣೆ ಬಗ್ಗೆ ಮಾತನಾಡಿದ ಸಿಸಿಬಿ ಜಂಟಿ ಕಮಿಷನರ್ ಎಸ್‌.ಡಿ. ಶರಣಪ್ಪ, ‘ಪದೇ ಪದೇ ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿಬಿದ್ದ ಎಂಟು ಪೆಡ್ಲರ್‌ಗಳನ್ನು ಮಾದಕ ದ್ರವ್ಯ ಹಾಗೂ ನಿದ್ರಾಜನ್ಯ ವಸ್ತುಗಳ ಅಕ್ರಮ ಸಾಗಾಣಿಕೆ ತಡೆ (ಪಿಐಟಿ–ಎನ್‌ಡಿಪಿಎಸ್)’ ಕಾಯ್ದೆಯಡಿ ಬಂಧಿಸಿ ಜೈಲಿಗಟ್ಟಲಾಗಿದೆ. ಈ ಪೈಕಿ ಇಬ್ಬರು ಪೆಡ್ಲರ್‌ಗಳ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಸೇವನೆ ಮಾಡುವವರ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗುತ್ತಿದೆ’ ಎಂದು ಹೇಳಿದರು.

‘ಒಂದೇ ಪುಸ್ತಕದಲ್ಲಿ ₹ 2.40 ಕೋಟಿ ಮೌಲ್ಯದ ಎಲ್‌ಎಸ್‌ಡಿ’
‘ಸಿಂಥೆಟಿಕ್ ಡ್ರಗ್ಸ್‌ಗಳಲ್ಲಿ ಒಂದಾದ ಎಲ್‌ಎಸ್‌ಡಿ ಕಾಗದ ರೂಪದಲ್ಲಿರುತ್ತದೆ. ಕಾಗವನ್ನು ಚೂರುಗಳ(ಬ್ಲಾಕ್‌) ಲೆಕ್ಕದಲ್ಲಿ ಬೇರ್ಪಡಿಸಿ, ಅದಕ್ಕೆ 'ಲೈಸರ್ಜಿಕ್ ಆ್ಯಸಿಡ್ ಡೈಥೈಲಾಮೈಡ್‘ ದ್ರಾವಣವನ್ನು ಸಿಂಪಡಿಸುತ್ತಾರೆ. ವ್ಯಕ್ತಿ, ಪ್ರೇಕ್ಷಣೀಯ ಸ್ಥಳಗಳು, ದೇವರುಗಳ ಫೋಟೊ... ನಾನಾ ರೀತಿಯ ಸ್ಟಿಕ್ಕರ್ ರೂಪದಲ್ಲಿ ಇಂಥ ಕಾಗದಗಳು ಗೋಚರಿಸುತ್ತವೆ‘ ಎಂದು ಡ್ರಗ್ಸ್ ವಿರುದ್ಧದ ಕಾರ್ಯಾಚರಣೆಯಲ್ಲಿರುವ ಅಧಿಕಾರಿ ಹೇಳಿದರು.

‘ಎಲ್‌ಎಸ್‌ಡಿಯಲ್ಲಿ ಸಿಂಗಲ್ ಡಿಪ್ (300 ಮೈಕ್ರಾನ್) ಹಾಗೂ ಡಬಲ್ ಡಿಪ್ (600 ಮೈಕ್ರಾನ್) ಎಂಬ ಎರಡು ವಿಧಗಳಿವೆ. ಇಂಥ ಕಾಗದದ ಚೂರುಗಳನ್ನು ನಾಲಿಗೆಗೆ ತಾಗಿಸಿಕೊಂಡರೆ, ಅಮಲು ಏರುತ್ತದೆ. 100 ಪುಟಗಳ ಒಂದೇ ಪುಸ್ತಕದಲ್ಲಿ ₹ 2.40 ಕೋಟಿ ಮೌಲ್ಯದ ಎಲ್‌ಎಸ್‌ಡಿ ಕಾಗದ ಚೂರುಗಳ ಹಾಳೆಗಳನ್ನು ಬಚ್ಚಿಟ್ಟು ಸಾಗಿಸಬಹುದು. ಇಂಥ ಸಾಗಣೆ ಯಾರಿಗೂ ಗೊತ್ತೇ ಆಗುವುದಿಲ್ಲ. ಹಲವು ಪೆಡ್ಲರ್‌ಗಳು, ಎಲ್‌ಎಸ್‌ಡಿ ಸಾಗಣೆಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ’ ಎಂದು ವಿವರಿಸಿದರು.

ಎಲ್‌ಎಸ್‌ಡಿ ಕಾಗದ
ಎಲ್‌ಎಸ್‌ಡಿ ಕಾಗದ

ಸಿಂಥೆಟಿಕ್ ಡ್ರಗ್ಸ್ ಸಾಗಣೆ, ಮಾರಾಟಕ್ಕೆ ಸಂಬಂಧಪಟ್ಟಂತೆ ಮಾದಕ ವಸ್ತು ನಿಯಂತ್ರಣ ಕಾಯ್ದೆಯ (ಎನ್‌ಡಿಪಿಎಸ್) ಸೆಕ್ಷನ್ 20, 21, 22, 23ರಲ್ಲಿ ಶಿಕ್ಷೆ ಹಾಗೂ ದಂಡದ ಪ್ರಮಾಣ ಉಲ್ಲೇಖಿಸಲಾಗಿದೆ. ಡ್ರಗ್ಸ್ ಉತ್ಪಾದನೆ, ಮಾರಾಟ, ಖರೀದಿ, ಸಾಗಣೆ, ಅಂತರರಾಜ್ಯ ಸಾಗಣೆ, ಇತರೆ ಚಟುವಟಿಕೆಗಳಿಗೆ ಈ ಶಿಕ್ಷೆ ಅನ್ವಯವಾಗಲಿದೆ. ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣಗಳು, ಜಾಮೀನುರಹಿತವಾಗಿವೆ.

ಜಪ್ತಿ ಮಾಡಲಾಗುವ ಡ್ರಗ್ಸ್‌ ಮೌಲ್ಯಕ್ಕೆ ತಕ್ಕಂತೆ ಕನಿಷ್ಠ 6 ತಿಂಗಳು ಹಾಗೂ ಗರಿಷ್ಠ 20 ವರ್ಷದವರೆಗೂ ಶಿಕ್ಷೆ ಇದೆ. ಕನಿಷ್ಠ ₹10 ಸಾವಿರ ಹಾಗೂ ಗರಿಷ್ಠ ₹2 ಲಕ್ಷದವರೆಗೂ ದಂಡವಿದೆ.

ಡ್ರಗ್ಸ್ ಸೇವಿಸಿದವರನ್ನೂ ಬಂಧಿಸಲು ಕಾಯ್ದೆಯಲ್ಲಿ ಅವಕಾಶವಿದೆ. ಇವುಗಳ ವಹಿವಾಟು ಮಾಡುವವರಿಗೆ ಹಣಕಾಸಿನ ನೆರವು ನೀಡುವುದು ಹಾಗೂ ಇಂಥ ವಹಿವಾಟಿನಲ್ಲಿ ಹಣ ತೊಡಗಿಸುವುದು ಅಪರಾಧ.

ವಿದೇಶಿಗರೇ ಮೊದಲು
‘ಸಿಂಥೆಟಿಕ್ ಡ್ರಗ್ಸ್ ಮಾರಾಟದಲ್ಲಿ ವಿದೇಶಿಗರೇ ಮುಂಚೂಣಿಯಲ್ಲಿದ್ದಾರೆ. ರಾಜ್ಯದಲ್ಲಿ ನೆಲೆಸಿರುವ ವಿದೇಶಿ ಪ್ರಜೆಗಳ ಪೈಕಿ ಹಲವರು, ಡ್ರಗ್ಸ್ ಮಾರಾಟದಲ್ಲಿ ತೊಡಗಿರುವುದು ಹಲವು ಪ್ರಕರಣಗಳಲ್ಲಿ ಪತ್ತೆಯಾಗಿದೆ’ ಎನ್ನುತ್ತಾರೆ ಪೊಲೀಸರು.

‘ತಮ್ಮ ದೇಶದಲ್ಲಿ ಕಡಿಮೆ ಬೆಲೆಗೆ ಸಿಗುವ ಡ್ರಗ್ಸ್‌ ಖರೀದಿಸಿ ರಾಜ್ಯಕ್ಕೆ ತಂದು, ಇಲ್ಲಿಯ ಮಧ್ಯವರ್ತಿಗಳ ಮೂಲಕ ಮಾರುತ್ತಿದ್ದಾರೆ’ ಎಂದು ಹೇಳುತ್ತಾರೆ.

‘ಗ್ರಾಂ.ಗೆ ಕನಿಷ್ಠ ₹3 ಸಾವಿರದಿಂದ ₹50 ಸಾವಿರವರೆಗೂ ಸಿಂಥೆಟಿಕ್ ಡ್ರಗ್ಸ್ ಮಾರಾಟವಾಗುತ್ತಿದೆ. ಕೆಲ ತಾರೆಯರು, ಗರಿಷ್ಠ ಬೆಲೆಯ ಡ್ರಗ್ಸ್ ಖರೀದಿಸಲು ಇಷ್ಟಪಡುತ್ತಾರೆ. ಉಳಿದಂತೆ, ಕಾಲೇಜು ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳು, ಕನಿಷ್ಠ ಹಾಗೂ ಮಧ್ಯಮ ಬೆಲೆಯ ಡ್ರಗ್ಸ್ ಖರೀದಿಸುತ್ತಾರೆ’ ಎಂದು ತಿಳಿಸುತ್ತಾರೆ.

ಏನಿದು ಡಾರ್ಕ್‌ನೆಟ್
ಎನ್‌ಕ್ರಿಪ್ಟ್ (ಸಂದೇಶ ಅಥವಾ ಮಾಹಿತಿಯನ್ನು ಕೋಡ್ ಆಗಿ ಪರಿವರ್ತಿಸುವ ಒಂದು ಅಕ್ರಮ ವ್ಯವಸ್ಥೆ. ಇದನ್ನು ‘ಕೀ‘ ಹೊಂದಿರುವವರು ಮಾತ್ರ ಓದಬಹುದು) ಮಾಡಲಾದ ಸರ್ಚ್ ಎಂಜಿನ್‌ಗಳ ಅಕ್ರಮ ತಾಣವೇ ಡಾರ್ಕ್‌ನೆಟ್. ಇದನ್ನು ಡಾರ್ಕ್ ವೆಬ್‌ ಎಂದು ಸಹ ಕರೆಯುತ್ತಾರೆ.

‘ಡಾರ್ಕ್‌ನೆಟ್ ಕತ್ತಲಿನ ಸಾಮ್ರಾಜ್ಯವಾಗಿದ್ದು, ಇಲ್ಲಿ ಕೋಡಿಂಗ್ ಸಂವಹನದಿಂದ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ. ಇಲ್ಲಿ ಒಬ್ಬರ ಮುಖ ಮತ್ತೊಬ್ಬರಿಗೆ ಹಾಗೂ ಒಬ್ಬರ ಮಾಹಿತಿ ಮತ್ತೊಬ್ಬರಿಗೆ ಗೊತ್ತಾಗುವುದಿಲ್ಲ. ಏನು ಬೇಕು? ಎಷ್ಟು ಬೇಕು? ಎಂಬುದಷ್ಟೇ ಮುಖ್ಯ. ಖರೀದಿಸಿದ ವಸ್ತು, ಕೊರಿಯರ್ ಹಾಗೂ ಇತರೆ ಮಾರ್ಗದ ಮೂಲಕ ಡೆಲಿವರಿ ಆಗುತ್ತದೆ’ ಎಂದು ಸಿಸಿಬಿ ಅಧಿಕಾರಿಯೊಬ್ಬರು ಹೇಳಿದರು.

ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿಬಿದ್ದ ಪ್ರಮುಖರು

* 2022: ಡ್ರಗ್ಸ್ ಖರೀದಿಸುವ ವೇಳೆ ಮಾಜಿ ಸಂಸದ ಆದಿಕೇಶವುಲು ಅವರ ಮೊಮ್ಮಗ ಉದ್ಯಮಿ ಆದಿ ಶ್ರೀನಿವಾಸ್ ನಾಯ್ಡು ಅವರನ್ನು ಎನ್‌ಸಿಬಿ (ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ಘಟಕ) ಅಧಿಕಾರಿಗಳು ಬಂಧಿಸಿದ್ದರು

* 2020: ಡ್ರಗ್ಸ್ ಪ್ರಕರಣದಲ್ಲಿ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗರ್ಲಾನಿ ಸೇರಿ ಹಲವರನ್ನು ಬಂಧಿಸಲಾಗಿತ್ತು. ಸದ್ಯ ಇವರಿಗೆ ಜಾಮೀನು ಸಿಕ್ಕಿದೆ

* 2022: ಒಳ ಉಡುಪಿನಲ್ಲಿ ಡ್ರಗ್ಸ್ ಬಚ್ಚಿಟ್ಟುಕೊಂಡು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದೊಳಗೆ ಸಾಗಿಸುತ್ತಿದ್ದ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಗಂಗಾಧರ್ ಅವರನ್ನು ಪೊಲೀಸರು ಸೆರೆ ಹಿಡಿದಿದ್ದರು.

* 2020: ಕೆಂಪೇಗೌಡ ನಗರ ಠಾಣೆ ಡ್ರಗ್ಸ್ ಪ್ರಕರಣದಲ್ಲಿ ಮಂಗಳೂರಿನ ಪ್ರತೀಕ್ ಶೆಟ್ಟಿ, ಕಾಂಗ್ರೆಸ್‌ ಮುಖಂಡರೂ ಆಗಿರುವ ಮಾಜಿ ಸಚಿವ ಹಾವೇರಿಯ ರುದ್ರಪ್ಪ ಲಮಾಣಿ ಪುತ್ರ ದರ್ಶನ್‌ ಅವರನ್ನು ಬಂಧಿಸಲಾಗಿತ್ತು

* 2022: ಟ್ರಿನಿಟಿ ವೃತ್ತ ಬಳಿಯ ‘ದಿ ಪಾರ್ಕ್‌’ ಪಂಚತಾರಾ ಹೋಟೆಲ್‌ ಐ–ಬಾರ್‌ನಲ್ಲಿ ಡ್ರಗ್ಸ್ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಬಾಲಿವುಡ್ ನಟ ಶಕ್ತಿ ಕಪೂರ್ ಅವರ ಮಗ ಸಿದ್ಧಾಂತ್ (38) ಅವರನ್ನು ಹಲಸೂರು ಪೊಲೀಸರು ಬಂಧಿಸಿದ್ದರು

* 2022: ಡ್ರಗ್ಸ್ ಪ್ರಕರಣದಲ್ಲಿ ಮಹಿಳಾ ಉದ್ಯಮಿ ಸೋನಿಯಾ ಅಗರವಾಲ್ ಹಾಗೂ ವೈದ್ಯ ಡಾ. ದಿಲೀಪ್ ಎಂಬುವರನ್ನು ಗೋವಿಂದಪುರ ಠಾಣೆ ಪೊಲೀಸರು ಬಂಧಿಸಿದ್ದರು.

*
ಬೆಂಗಳೂರು ನಗರದಲ್ಲಿ ಡ್ರಗ್ಸ್ ಸಾಗಣೆ ಹಾಗೂ ಮಾರಾಟದ ವಿರುದ್ಧ ಸಿಸಿಬಿ ಅಧಿಕಾರಿಗಳು ಕಾರ್ಯಾರಣೆ ನಡೆಸುತ್ತಿದ್ದಾರೆ. 2022ರಲ್ಲಿ ₹ 77 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿ, ನಾಶಪಡಿಸಲಾಗಿದೆ.
-ಎಸ್‌.ಡಿ. ಶರಣಪ್ಪ, ಜಂಟಿ ಕಮಿಷನರ್, ಸಿಸಿಬಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT