ಗುರುವಾರ , ಮೇ 26, 2022
24 °C

ಒಳನೋಟ: ಲಯ ತಪ್ಪಿದ ಸಂಗೀತ ವಿಶ್ವವಿದ್ಯಾಲಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಸಂಗೀತ ವಿಶ್ವವಿದ್ಯಾಲಯದಲ್ಲಿ ಆಡಳಿತ, ಮೂಲಸೌಲಭ್ಯ, ಕಟ್ಟಡ ಎಲ್ಲವೂ ಲಯ ತಪ್ಪಿವೆ. ಆರಂಭವಾದಾಗಿನಿಂದ ಕಾಯಂ ಉಪನ್ಯಾಸಕರು ಒಬ್ಬರೂ ಇಲ್ಲ, ಸ್ವಂತ ಕಟ್ಟಡವೂ ಇಲ್ಲ. ಹೀಗಾಗಿ, ಸಂಶೋಧನಾ ಕಾರ್ಯ ನಡೆದಿಲ್ಲ. ಕುಲಪತಿ ಹಾಗೂ ಹಣಕಾಸು ಅಧಿಕಾರಿ ಮಾತ್ರ ಕಾಯಂ ಆಗಿದ್ದಾರೆ.

ಸದ್ಯ ವಾರ್ಷಿಕ ₹ 50 ಲಕ್ಷ ಅಭಿವೃದ್ಧಿ ಹಣ ಬರುತ್ತದೆ. ಹತ್ತು ಮಂದಿ ಹೊರಗುತ್ತಿಗೆ ನೌಕರರನ್ನೂ ಈಚೆಗೆ ಕೆಲಸದಿಂದ ತೆಗೆಯಲಾಗಿದೆ. ಕಳೆದ ಎಂಟು ತಿಂಗಳಿಂದ ತಾತ್ಕಾಲಿಕ ನೌಕರರು ಹಾಗೂ ಅತಿಥಿ ಉಪನ್ಯಾಸಕರಿಗೆ ವೇತನ ನೀಡಿಲ್ಲ.

‘ನೌಕರರಿಗೆ ನೀಡಲು ಸರ್ಕಾರದಿಂದ ಇನ್ನೂ ಹಣ ಬಿಡುಗಡೆಯಾಗಿಲ್ಲ. ಸರ್ಕಾರದ ಅನುಮೋದನೆ ಇಲ್ಲದೆ ನೇಮಕಾತಿ ಆಗಿರುವುದರಿಂದ ವೇತನ ಮಂಜೂರಾಗಿಲ್ಲ. ಹಿಂದೆ ಆಡಳಿತ ನಡೆಸಿದವರು ಅಭಿವೃದ್ಧಿ ಅನುದಾನವನ್ನು ವೇತನಕ್ಕಾಗಿ ನಿಯಮಬಾಹಿರವಾಗಿ ಬಳಸಿದ್ದಾರೆ’ ಎಂದು ಕುಲಪತಿ ಪ್ರೊ.ನಾಗೇಶ್ ವಿ.ಬೆಟ್ಟಕೋಟೆ ಹೇಳುತ್ತಾರೆ.  ಸಂಗೀತದ ವಾತಾವರಣವೇ ಇಲ್ಲದೆ, ಈ ವಿಶ್ವವಿದ್ಯಾಲಯ ಸೊರಗುತ್ತಿದೆ.

**
‘ಸಂಗೀತಮಯವಾಗಲಿ’
ಗಂಗೂಬಾಯಿ ಹಾನಗಲ್‌ ಅವರಂಥ ಶ್ರೇಷ್ಠರ ಹೆಸರನ್ನು ಸಂಗೀತ ವಿಶ್ವವಿದ್ಯಾಲಯಕ್ಕೆ ಇಟ್ಟಿದ್ದು, ಅದಕ್ಕೆ ತಕ್ಕಂತೆ ಗುಣಮಟ್ಟ ಕಾಯ್ದುಕೊಳ್ಳಬೇಕು. ವಿಶ್ವವಿದ್ಯಾಲಯ ‘ಸಂಗೀತ’ಮಯವಾಗಿರಬೇಕು.  

ಸ್ವಂತ ಕಟ್ಟಡ ನಿರ್ಮಿಸಿ ಕುಲಸಚಿವರು, ಎಂಜಿನಿಯರ್‌ ಹಾಗೂ ಕಾಯಂ ಬೋಧಕರನ್ನು ನೇಮಿಸಬೇಕು. ಸಿಂಡಿಕೇಟ್‌ನಲ್ಲಿ ಸಂಗೀತಗಾರರು ಹಾಗೂ ಸಂಗೀತ ತಿಳಿದವರನ್ನೇ ನೇಮಿಸಬೇಕು. ವರ್ಷದಲ್ಲಿ ನಾಲ್ಕು ಬಾರಿ ವಿದ್ವಾಂಸರಿಂದ ಕಾರ್ಯಾಗಾರ ನಡೆಸಬೇಕು. ವಾದ್ಯ ಪರಿಕರ ಹೆಚ್ಚಿಸಬೇಕು. ಸಂಗೀತಕ್ಕೆ ಸಂಬಂಧಿಸಿದಂತೆ ಸಿ.ಡಿ ಹಾಗೂ ಪುಸ್ತಕ ಸಂಗ್ರಹಾಲಯ ಸ್ಥಾಪಿಸಬೇಕು.

ಹೆಸರಾಂತ ಕಲಾವಿದರು, ಪರಿಣತರನ್ನು ಆಹ್ವಾನಿಸಿ ಸಂವಾದ ಕಾರ್ಯಕ್ರಮ ಆಯೋಜಿಸಬೇಕು. ರಾಜ್ಯ ಸರ್ಕಾರವೇ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡು ಮುನ್ನಡೆಸಬೇಕು. ಉನ್ನತ ಶಿಕ್ಷಣ ಸಚಿವರು ಈ ವಿಚಾರದತ್ತ ಗಮನ ಹರಿಸಬೇಕು.


-ಸಿ.ಆರ್‌.ಹಿಮಾಂಶು, ಸಂಗೀತ ವಿ.ವಿ ಸಿಂಡಿಕೇಟ್‌ ಮಾಜಿ ಸದಸ್ಯ, ಸಂಗೀತ ಪೋಷಕ, ಮೈಸೂರ

**
ರೋಗಗ್ರಸ್ತ ವಿ.ವಿಗೆ ಚಿಕಿತ್ಸೆ ಬೇಕಿದೆ!

ಶ್ರೇಷ್ಠ ಸಂಗೀತಗಾರರಿಗೆ ಜನ್ಮ ನೀಡಿದ ಸಾಂಸ್ಕೃತಿಕ ನಗರಿಯಲ್ಲೇ ಸಂಗೀತ ವಿಶ್ವವಿದ್ಯಾಲಯ ಸ್ಥಾಪಿಸಿಬೇಕೆಂದು ಹಲವರು ಪಟ್ಟು ಹಿಡಿದಿದ್ದರ ಫಲವಾಗಿ ಇಲ್ಲಿ ವಿಶ್ವವಿದ್ಯಾಲಯ ತಲೆಯೆತ್ತಿತು. ದಕ್ಷಿಣ ಭಾರತದಲ್ಲಿ ಸಂಗೀತಕ್ಕೆ ಮೀಸಲಾಗಿರುವ ಪೂರ್ಣಪ್ರಮಾಣದ ಏಕೈಕ ವಿಶ್ವವಿದ್ಯಾಲಯವಿದು.

ವಿಶ್ವವಿದ್ಯಾಲಯವು ರೋಗಗ್ರಸ್ತ ಶಿಶುವಿನಂತಾಗಿದ್ದು, ಚಿಕಿತ್ಸೆ ಅಗತ್ಯವಿದೆ. ಆಡಳಿತ, ಪರೀಕ್ಷಾಂಗ ಕುಲಪತಿ ನೇಮಕವಾದರೆ ವ್ಯವಸ್ಥೆ ಸರಿ ಹೋಗಬಹುದು.

ವ್ಯವಸ್ಥೆ ಸರಿಯಿಲ್ಲವೆಂದು ಒಂದು ವಿಶ್ವವಿದ್ಯಾಲಯವನ್ನು ಮುಚ್ಚುವುದು ಸುಲಭ. ಆದರೆ, ಉಳಿಸಿ ಬೆಳೆಸಿಕೊಂಡು ಹೋಗುವುದು ಸವಾಲಿನ ವಿಷಯ.  


-ಕೃಪಾ ಫಡ್ಕೆ, ನೃತ್ಯ ಕಲಾವಿದೆ, ಮೈಸೂರು

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು