ಶುಕ್ರವಾರ, 1 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಬರಡಾಗುವತ್ತ ಭತ್ತದ ನೆಲ– ಕೃಷಿ ಭೂಮಿಯಲ್ಲಿ ಸವಳು–ಜವಳು ಸಮಸ್ಯೆ

ಜಲಾಶಯ ಆಶ್ರಿತ ಕೃಷಿ ಭೂಮಿಯಲ್ಲಿ ಸವಳು–ಜವಳು ಸಮಸ್ಯೆ
Last Updated 23 ಏಪ್ರಿಲ್ 2022, 20:11 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ದು ನಾಲ್ಕೂವರೆ ಎಕರೆ ಜಮೀನು. ಮೇಲ್ಭಾಗದಲ್ಲಿ 2 ಎಕರೆ ಮಸಾರಿ(ಕೆಂಪು ಮಣ್ಣು) ಭೂಮಿ. ಉಳಿದಿದ್ದು ಸವಳು. ಮಸಾರಿಯಲ್ಲಿ ಎಕರೆಗೆ 40 ಕ್ವಿಂಟಲ್ ಭತ್ತ ಇಳುವರಿಬಂದ್ರೆ, ಸವಳು ಗದ್ದೆಯಲ್ಲಿ 20 ಕ್ವಿಂಟಲ್ ಬರೋದಿಲ್ಲ..!

– ಸವಳು ಮಣ್ಣಿನಿಂದ ಭತ್ತದ ಇಳುವರಿ ಕುಸಿದಿರುವುದನ್ನು ಹೀಗೆ ಬೇಸರದಿಂದಲೇ ವಿವರಿಸಿದರು ಬಳ್ಳಾರಿ ಜಿಲ್ಲೆಯ ಭೈರಾಪುರದ ಕೃಷಿಕ ಧನುಕೋಟಿ.

'ಒಂದು ಕಾಲದಲ್ಲಿ ಈ ಜಮೀನಿನಲ್ಲಿ ಭತ್ತದ ಇಳುವರಿ ಚೆನ್ನಾಗಿತ್ತು. ನಿರಂತರವಾಗಿ ನೀರು ನಿಲ್ಲಿಸಿ ಭತ್ತ ಬೆಳೆದಿದ್ದರಿಂದ, ಮಣ್ಣು ಸವಳಾಯಿತು. ಈಗ ಇಲ್ಲಿ ಏನೂ ಬೆಳೆಯೋದಿಲ್ಲ. 20 ಎಕರೆ ಪೂರ್ಣ ಹಾಳಾಗಿದೆ‘ ಎಂದು ತಮ್ಮ ಜಮೀನಿನ ಆಸು–ಪಾಸಿನಲ್ಲಿನ ಸವಳು ಭೂಮಿಯ ಸೋಲಿನ ಕಥೆ ಹೇಳಿದರು ಸಿರುಗುಪ್ಪದ ಕೃಷಿಕ ಸೂರ್ಯಭಾಸ್ಕರ್‌ !

ಇದು ಸಿರುಗುಪ್ಪ ಮಾತ್ರವಲ್ಲ, ರಾಜ್ಯದ ಜಲಾಶಯಗಳ ಅಚ್ಚುಕಟ್ಟು ಪ್ರದೇಶದಲ್ಲಿ ನಿರಂತರವಾಗಿ ನೀರು ನಿಲ್ಲಿಸಿ ಭತ್ತ, ಕಬ್ಬು ಬೆಳೆಯುವ ಸಾವಿರಾರು ಹೆಕ್ಟೇರ್‌ ಜಮೀನಿನ ಸ್ಥಿತಿ ಇದಕ್ಕಿಂತ ಭಿನ್ನವಾಗೇನಿಲ್ಲ. ಹೆಚ್ಚು ಇಳುವರಿ, ಲಾಭದ ಆಸೆಗಾಗಿಸತತವಾಗಿ ನೀರು ನಿಲ್ಲಿಸಿ, ವಿವೇಚನೆ ಇಲ್ಲದೇ ರಸಗೊಬ್ಬರ, ಕೀಟನಾಶಕ ಬಳಸಿ ವರ್ಷಕ್ಕೆ ಎರಡು ಬಾರಿ ಭತ್ತ ಬೆಳೆಯುತ್ತಿರುವ ಕೃಷಿ ಭೂಮಿಗಳು ಇಂಥ ಅಧೋಗತಿ ತಲುಪಿವೆ.

ಮೂರು ವರ್ಷಗಳ ಹಿಂದೆ ಸಮೀಕ್ಷೆ ನಡೆಸಿದ್ದ ಕೇಂದ್ರ ಸರ್ಕಾರದ ರಾಷ್ಟ್ರೀಯ ಮಣ್ಣು ಸರ್ವೇಕ್ಷಣಾ ಮತ್ತು ಭೂಬಳಕೆ ಯೋಜನಾ ಸಂಸ್ಥೆ (ಎನ್‌ಬಿಎಸ್‌ಎಸ್‌) ಕೂಡ, ‘ರಾಜ್ಯದ ಕಬ್ಬು, ಭತ್ತ ಬೆಳೆಯುವ ಜಲಾನಯನ ಪ್ರದೇಶಗಳ ಮಣ್ಣಿನಲ್ಲಿ ಲವಣಾಂಶ ಹೆಚ್ಚಾಗುತ್ತಿದ್ದು, ಇದು ಹೀಗೇ ಮುಂದುವರೆದರೆ, ಭವಿಷ್ಯದಲ್ಲಿ ಆ ಭೂಮಿಯಲ್ಲಿ ಯಾವುದೇ ಬೆಳೆ ಬೆಳೆಯಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗುತ್ತದೆ’ ಎಂದು ಎಚ್ಚರಿಕೆ ನೀಡಿತ್ತು.

ಈ ಎಚ್ಚರಿಕೆಯ ನಂತರವೂ, ತುಂಗಭದ್ರಾ, ಮಲಪ್ರಭಾ–ಘಟಪ್ರಭಾ, ಕೃಷ್ಣಾ, ಭದ್ರಾ, ಕಾವೇರಿ ನದಿ ನೀರು ಅಚ್ಚುಕಟ್ಟು ವ್ಯಾಪ್ತಿಯ ಭತ್ತ ಮತ್ತು ಕಬ್ಬು ಕೃಷಿ ಪ್ರದೇಶದಲ್ಲಿ ಸವಳು ಮಣ್ಣಿನ ಸಮಸ್ಯೆ ಹೆಚ್ಚಾಗುತ್ತಲೇ ಇದೆ. ಎರೆಮಣ್ಣು ಪ್ರಧಾನವಾದ ತುಂಗಭದ್ರಾ ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ 3 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 90 ಸಾವಿರದಿಂದ 1 ಲಕ್ಷ ಹೆಕ್ಟೇರ್‌ವರೆಗೆ ಜಮೀನು ಸವಳಾಗಿದೆ ಎಂದು ಅಂದಾಜಿಸಲಾಗಿದೆ.

ಮಲಪ್ರಭಾ–ಘಟಪ್ರಭಾ ಪ್ರದೇಶದ (ಬಹುತೇಕ ಕಬ್ಬು ಬೆಳೆಯುವ ಪ್ರದೇಶ) 85,525 ಹೆಕ್ಟೇರ್‌ ಸವಳು–ಜವಳಾಗಿದೆ. ಕಾವೇರಿ ಅಚ್ಚುಕಟ್ಟು ಪ್ರದೇಶದ 7,707 ಹೆಕ್ಟೇರ್‌ನಲ್ಲಿ ಜವಳು ಸಮಸ್ಯೆಯಿದೆ. ಮಲೆನಾಡಿನ ಚಿಕ್ಕಮಗಳೂರು ಜಿಲ್ಲೆಯ ಎನ್‌.ಆರ್‌.ಪುರ, ಕೊಪ್ಪ, ಮೂಡಿಗೆರೆ, ಶೃಂಗೇರಿ ಭಾಗದಲ್ಲಿ ಭತ್ತ ಬೆಳೆಯುತ್ತಿರುವ 10 ಸಾವಿರ ಹೆಕ್ಟೇರ್‌ ಪೈಕಿ 5 ಸಾವಿರ ಹಕ್ಟೇರ್‌ನಲ್ಲಿ ಈ ಸಮಸ್ಯೆ ಇದೆ. ಕೆಂಪು ಮಣ್ಣು ಹೆಚ್ಚಾಗಿರುವ ಭಾಗದಲ್ಲಿ ತೀವ್ರತೆ ಕಡಿಮೆ.

ಕಾರಣವೇನು? : ಅತಿಯಾಗಿ ನೀರು ನಿಲ್ಲಿಸಿ, ನಿರಂತರವಾಗಿ ಏಕ ಬೆಳೆ ಬೆಳೆಯುತ್ತಿರುವುದೇ (ವರ್ಷದಲ್ಲಿ ಎರಡು ಬೆಳೆ) ಪ್ರಮುಖ ಕಾರಣ. ನೀರಾವರಿ ಯೋಜನೆಗಳ ವ್ಯಾಪ್ತಿಯ ಕೃಷಿ ಜಮೀನು ಸಾಮಾನ್ಯವಾಗಿ ಸವಳು, ಕ್ಷಾರ ಮತ್ತು ಜವುಳಾಗುತ್ತದೆ. ಭತ್ತ, ಕಬ್ಬು ಬೆಳೆಯುವಲ್ಲಿ ಹೆಚ್ಚು ನೀರು ಬಳಕೆಯಿಂದ ಸವಳಿನ ತೀವ್ರತೆ ಹೆಚ್ಚು.

‘ನೀರು ನಿಲ್ಲಿಸುವುದರಿಂದ ಬಿಸಿಲಿಗೆ ಸಿಹಿನೀರಿನ ಅಂಶ ಆವಿಯಾಗಿ ಮೇಲೆ ಮಣ್ಣಿನಲ್ಲಿರುವ ಮತ್ತು ಮಣ್ಣಿನ ಸ್ತರದ ಕೆಳಗಿರುವ ಲವಣಾಂಶಗಳು ಮೇಲ್ಮಣ್ಣಿನಲ್ಲಿ ಸಂಗ್ರಹವಾಗುತ್ತವೆ. ಹಾಗಾಗಿ ಮಣ್ಣು ಸವುಳು (ಮಣ್ಣಿನಲ್ಲಿ ಕ್ಯಾಲ್ಷಿಯಂ ಮುಂತಾದ ಲವಣಗಳ ಹೆಚ್ಚುವಿಕೆ) ಮತ್ತು ಕ್ಷಾರ (ಲವಣಗಳು ಹೋಗಿ ಸೋಡಿಯಂ ಅಂಶ ಹೆಚ್ಚಾಗುವುದರಿಂದ) ವಾಗುತ್ತದೆ. ತಗ್ಗು ಪ್ರದೇಶಗಳಲ್ಲಿ ನೀರು ಬಸಿಯುವಿಕೆ ಇಲ್ಲದೆ, ಗದ್ದೆಗಳಲ್ಲಿ ಜವಳು–ಸವಳಿನ ಸಮಸ್ಯೆ ಹೆಚ್ಚು’ ಎನ್ನುತ್ತಾರೆ ನಿವೃತ್ತ ಕೃಷಿ ಜಂಟಿ ನಿರ್ದೇಶಕ ಆರ್‌.ಜಿ.ಗೊಲ್ಲರ್.

ಪರಿಣಾಮವೇನು?: ಸವಳು–ಜವಳಿ ನಿಂದ ಬೆಳೆಗಳಿಗೆ ಪೋಷಕಾಂಶ ಗಳ ಕೊರತೆಯಾಗುತ್ತಿದೆ. ಮಿತಿಯಿಲ್ಲದೇ ರಸಗೊಬ್ಬರ ಬಳಸಿದ್ದರಿಂದ ಮಣ್ಣಿನ ರಚನೆಯೇ ಹಾಳಾಗಿದೆ. ಇಳುವರಿ ಕಡಿಮೆಯಾಗಿದೆ.

‘ತುಂಗಭದ್ರಾ ಜಲಾಶಯದ ಭಾಗ ದಲ್ಲಿ ಎಕರೆಗೆ 40 ರಿಂದ 45 ಕ್ವಿಂಟಲ್ ಭತ್ತದ ಇಳುವರಿ ತೆಗೆಯುತ್ತಾರೆ. ಆದರೆ, ಸವಳು ಮಣ್ಣು ಹೆಚ್ಚಾದ ಗದ್ದೆಗಳಲ್ಲಿ ಎಕರೆಗೆ 20–25 ಕ್ವಿಂಟಲ್‌ಗೆ ಇಳಿದಿದೆ’ ಎನ್ನುತ್ತಾರೆ ಗಂಗಾವತಿ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ರವಿ.

‌‘ಪೋಷಕಾಂಶಗಳ ಕೊರತೆ ನೀಗಿಸಲು ರಸಗೊಬ್ಬರ ಮತ್ತಿತರ ಒಳಸುರಿಗಳಿಗೆ (Inputs) ರೈತರು ತುಂಬಾ ಖರ್ಚು ಮಾಡುತ್ತಿದ್ದಾರೆ. ಇದೂ ರೈತರಿಗೆ ಹೊರೆಯಾಗಿದೆ. ಅವು ಮಣ್ಣಿನ ಫಲವತ್ತತೆ ಹಾಳು ಮಾಡಿದ್ದು, ಆಹಾರ ಭದ್ರತೆ ಮೇಲೂ ದುಷ್ಪರಿಣಾಮ ಉಂಟು ಮಾಡುವ ಸಾಧ್ಯತೆ ಇದೆ‘ ಎಂದು ವಿಜ್ಞಾನಿಗಳು ಅಂದಾಜಿಸುತ್ತಾರೆ.

ಪರಿಹಾರ?: ಭತ್ತದ ಗದ್ದೆಗಳ ವ್ಯಾಪ್ತಿಯಲ್ಲಿ ಬಸಿಗಾಲುವೆ ನಿರ್ಮಿಸಿ, ಲವಣಾಂಶ ಯುಕ್ತ ನೀರು (ಕೇಡು ನೀರು) ಹರಿದು ಹೊರ ಹೋಗುವ ವ್ಯವಸ್ಥೆ ಮಾಡಬೇಕು. ಬೆಳೆ ಪರಿವರ್ತನೆ, ಗದ್ದೆಗಳಿಗೆ ಹಸಿರೆಲೆ ಗೊಬ್ಬರದಂತಹ ಸಾವಯವ ಅಂಶಗಳನ್ನು ನೀಡುವುದು ಸದ್ಯದ ಪರಿಹಾರ.

‘ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರಗಳ (ಕಾಡಾ) ವ್ಯಾಪ್ತಿಯಲ್ಲಿ ಇಂಥ ಚಟುವಟಿಕೆಗಳು ನಡೆಯುತ್ತಿವೆ’ ಎನ್ನುತ್ತಾರೆ ಅಧಿಕಾರಿಗಳು. ಆದರೆ, ‘ಅವು ಹೇಳಿಕೊಳ್ಳುವ ಮಟ್ಟದಲ್ಲಿಲ್ಲ’ ಎಂದೂ ಹೇಳಲಾಗುತ್ತಿದೆ.ಕೆಲವು ರೈತರು ವೈಯಕ್ತಿಕ ವಾಗಿಯೂ ತಮ್ಮ ಜಮೀನುಗಳಲ್ಲಿ ‘ಚಿಕಿತ್ಸಾ‘ ಕ್ರಮಗಳನ್ನು ಅನುಸರಿಸುತ್ತಿದ್ದಾರೆ. ಈ ಪ್ರಮಾಣ ತೀರಾ ಕಡಿಮೆ.

‘ಎರೆಮಣ್ಣಿನಲ್ಲಿ ಭತ್ತ ಲಾಭದಾಯಕವಾಗಿಲ್ಲ. ಆದ್ದರಿಂದ ಎರಡನೇ ಬೆಳೆಯಾಗಿ ಅಲಸಂದೆ, ಸಾಸಿವೆ, ಸಜ್ಜೆ, ಹೆಸರು, ಎಳ್ಳು ಬೆಳೆಯುವಂತೆ ಸಲಹೆ ನೀಡಿದ್ದೇವೆ. ಅದರಿಂದ ಇಳುವರಿ ಕಡಿಮೆಯಾಗುವುದಿಲ್ಲ‌’ ಎಂದು ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಕವಡಿಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಅಮರೇಶ ಹೇಳುತ್ತಾರೆ. ಆದರೆ, ಈ ಬೆಳೆ ಪರಿವರ್ತನೆಯ ಸಲಹೆಯನ್ನು ರೈತರು ಒಪ್ಪುವುದಿಲ್ಲ. ‘ಈ ಮಣ್ಣಿನಲ್ಲಿ ಭತ್ತ ಬಿಟ್ಟು ಬೇರೆ ಬರುವುದಿಲ್ಲ‘ ಎಂಬುದು ಅವರ ವಾದ. ಹೀಗಾಗಿ ಕೆಲವು ರೈತರು ಸವಳಿಗೆ ಹೊಂದುವ ಭತ್ತದ ತಳಿಗಳನ್ನೇ ಬೆಳೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ‘ಸವಳು ಮಣ್ಣು ನಿರೋಧಕ ಭತ್ತದ ತಳಿ' ಅಭಿವೃದ್ಧಿಪಡಿಸುವ ಪ್ರಯತ್ನಗಳೂ ನಡೆದಿವೆ.

ಸಹಭಾಗಿತ್ವದ ‘ದಾರಿ’ : ಮತ್ತೊಂದೆಡೆ, ‘ಸವಳು ನಿವಾರಣೆಗಾಗಿ ಬಸಿಗಾಲುವೆ ನಿರ್ಮಿಸುವುದು ದುಬಾರಿ ಕಾಮಗಾರಿ. ಇದಕ್ಕೆ ಸರ್ಕಾರ, ಹೆಚ್ಚಿನ ಅನುದಾನ ನೀಡಿ, ರೈತರ ಸಹಭಾಗಿತ್ವದಲ್ಲೇ ಸಮಸ್ಯೆಯನ್ನು ತ್ವರಿತಗತಿಯಲ್ಲಿ ಬಗೆಹರಿಸಬೇಕು‘ ಎಂಬುದು ಅಚ್ಚುಕಟ್ಟು ಭಾಗದ ಕೆಲ ರೈತರ ಬೇಡಿಕೆ.

ರೈತರು ಹಾಗೂ ಗ್ರಾಮ ಪಂಚಾಯ್ತಿಯ ಸಹಭಾಗಿತ್ವದಲ್ಲಿ ನರೇಗ ಯೋಜನೆಯಡಿ ಬಸಿಗಾಲುವೆ ನಿರ್ಮಾಣದಂತಹ ಚಟುವಟಿಕೆಗಳನ್ನು ಕೈಗೊಳ್ಳಬಹುದು. ಇದರಿಂದ ಭವಿಷ್ಯದಲ್ಲಾಗುವ ಅನಾಹುತ ತಪ್ಪಿಸಬಹುದು. ಸವಳು ಮಣ್ಣಿಗೆ ಸಕಾಲದಲ್ಲಿ ಚಿಕಿತ್ಸೆ ದೊರೆಯದಿದ್ದರೆ, ಮಣ್ಣು ಫಲವತ್ತತೆ ಕಳೆದುಕೊಳ್ಳುತ್ತದೆ. ‘ಭತ್ತದ ಕಣಜ‘ ವಾಗಿರುವ ಪ್ರದೇಶ ಭವಿಷ್ಯದಲ್ಲಿ ‘ಮರುಭೂಮಿ‘ಯಾಗುತ್ತದೆ ಎಂದು ಎಚ್ಚರಿಸುತ್ತಾರೆ ವಿಜ್ಞಾನಿಗಳು.

ಪೂರಕ ಮಾಹಿತಿ: (ಕೆ.ಎಸ್‌.ಗಿರೀಶ್‌– ಮೈಸೂರು, ನಾಗರಾಜ ಚಿನಗುಂಡಿ– ರಾಯಚೂರು, ಬಿ.ಜಿ.ಪ್ರವೀಣಕುಮಾರ– ಯಾದಗಿರಿ, ಸಿದ್ದನಗೌಡ ಪಾಟೀಲ–ಕೊಪ್ಪಳ, ಎಂ.ಮಹೇಶ್–ಬೆಳಗಾವಿ, ರವಿ ಬಳೂಟಗಿ– ಹುಬ್ಬಳ್ಳಿ, ಬಾಲಚಂದ್ರ ಎಚ್‌.–ಉಡುಪಿ, ಬಿ.ಜೆ.ಧನ್ಯಪ್ರಸಾದ್– ಚಿಕ್ಕಮಗಳೂರು, ಚಿದಂಬರಪ್ರಸಾದ–ಮಂಗಳೂರು, ಹೊನಕೆರೆ ನಂಜುಂಡೇಗೌಡ-ಬಳ್ಳಾರಿ, ಎಂ.ಎಸ್‌.ಸದಾಶಿವ–ಕಾರವಾರ)

ಪ್ರಾಯೋಗಿಕ ಅಧ್ಯಯನ

ಸವಳು–ಜವಳು’ ಸಮಸ್ಯೆಯಸಮಗ್ರ, ವೈಜ್ಞಾನಿಕ ವಿಶ್ಲೇಷಣೆಗೆ ಮಲಪ್ರಭಾ–ಘಟಪ್ರಭಾ ಯೋಜನೆಗಳ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು (ಕಾಡಾ) ಪ್ರಾಯೋಗಿಕ ಯೋಜನೆಯೊಂದನ್ನು ರೂಪಿಸಿದೆ.

ಬಾಗಲಕೋಟೆ ಜಿಲ್ಲೆಯ ಇಂಗಳಗಿ ಹಾಗೂ ಯಡಹಳ್ಳಿಯನ್ನು ಆಯ್ಕೆ ಮಾಡಿದ್ದು, ಕಾಡಾ ಹಾಗೂ ಧಾರವಾಡದ ನೆಲ ಮತ್ತು ಜಲ ನಿರ್ವಹಣಾ ಸಂಸ್ಥೆ (ವಾಲ್ಮಿ) ಸಹಯೋಗದಲ್ಲಿ2 ಸಾವಿರ ಹೆಕ್ಟೇರ್‌ನಲ್ಲಿ ಅಧ್ಯಯನ ನಡೆಯಲಿದೆ.

‘ಭೂಮಿ ಸವಳಾಗಲು ಕಾರಣಗಳ ಬಗ್ಗೆ ಸುಧಾರಿತ ತಂತ್ರಜ್ಞಾನ ಬಳಸಿ ಅಧ್ಯಯನ ನಡೆಯಲಿದೆ‘ ಎನ್ನುತ್ತಾರೆ ಕಾಡಾ ಆಯುಕ್ತ ಶಶಿಧರ ಕುರೇರ.

ಕಾಡಾ– ವ್ಯಾಪ್ತಿಯ ಸವಳು–ಜವಳು ಪ್ರಮಾಣ

ಮಲಪ್ರಭಾ – ಘಟಪ್ರಭಾ, ಭದ್ರಾ, ಕಾವೇರಿ ಸೇರಿದಂತೆ ರಾಜ್ಯದ ವಿವಿಧ ಜಲಾಶಯಗಳ (ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರ – ಕಾಡಾ) ಅಚ್ಚುಕಟ್ಟು ಪ್ರದೇಶದಲ್ಲಿ ಸವಳು– ಜವಳಿನ ಪ್ರಮಾಣ, ಪರಿಹಾರ ಕುರಿತ ಮಾಹಿತಿ ಇಲ್ಲಿದೆ;

ಮಲಪ್ರಭಾ–ಘಟಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿ 85,525 ಹೆಕ್ಟೇರ್‌ ಭೂಮಿ ಸವಳು–ಜವಳಾಗಿದೆ. ಈವರೆಗೆ 39,273 ಹೆಕ್ಟೇರ್‌ ಜಮೀನಿನಲ್ಲಿನ ಸಮಸ್ಯೆಯನ್ನು ಪರಿಹರಿಸಲಾಗಿದೆ. ಇನ್ನೂ 46,251 ಹೆಕ್ಟೇರ್‌ ಪ್ರದೇಶದಲ್ಲಿ ಸಮಸ್ಯೆ ಇದೆ. ಪ್ರಸಕ್ತ ಸಾಲಿನಲ್ಲಿ ಸವಳು–ಜವಳು ಮಣ್ಣನ್ನು ಫಲವತ್ತಾಗಿಸಲು ₹9.75 ಕೋಟಿ ಅನುದಾನ ಕಾಡಾಕ್ಕೆ ಲಭ್ಯವಾಗಿದೆ. ಉಳಿದ ಸಮಸ್ಯೆ ಪರಿಹರಿಸಲು ಅಗತ್ಯವಿರುವ ಅನುದಾನ ₹231 ಕೋಟಿ.

ಕಾವೇರಿ ನದಿ (ಮೈಸೂರು ವ್ಯಾಪ್ತಿ) ಅಚ್ಚುಕಟ್ಟು ಪ್ರದೇಶದಲ್ಲಿ 7,707 ಹೆಕ್ಟೇರ್ ಜವಳು(Water logging) ಹಾಗೂ 6307 ಹೆಕ್ಟೇರ್‌ನಲ್ಲಿ ಸವಳು ಸಮಸ್ಯೆ ಇದೆ. ಈವರೆಗೆ 25,257 ಹೆಕ್ಟೇರ್‌ ಪ್ರದೇಶದಲ್ಲಿನ ಜವಳು/ಕ್ಷಾರ, ಸವಳು ಸಮಸ್ಯೆಯನ್ನು ಪರಿಹರಿಸಲಾಗಿದೆ. ಮಣ್ಣು ಫಲವತ್ತಾಗಿಸಲು 2021–22ನೇ ಸಾಲಿನಲ್ಲಿ ₹ 38 ಲಕ್ಷ ಅನುದಾನವನ್ನು ಬಳಸಿ 110 ಹೆಕ್ಟೇರ್ ಪ್ರದೇಶವನ್ನು ಫಲವತ್ತಾಗಿಸಲಾಗಿದೆ. ಬಾಕಿ ಉಳಿದಿರುವ 14,014 ಹೆಕ್ಟೇರ್ ಪ್ರದೇಶದ ಸಾರವರ್ಧನೆಗೆ ₹ 40 ಕೋಟಿ ಅನುದಾನ ಬೇಕಿದೆ ಎಂದು ಕಾಡಾದ ಭೂ ಅಭಿವೃದ್ಧಿ ಅಧಿಕಾರಿ ಮಧುಸೂದನ್ ತಿಳಿಸಿದ್ದಾರೆ.

ಭದ್ರಾ ಜಲಾಶಯದ ವ್ಯಾಪ್ತಿಯಲ್ಲಿ, 40 ಸಾವಿರ ಹೆಕ್ಟೇರ್‌ನಲ್ಲಿ ಭತ್ತ, 12 ಸಾವಿರ ಹೆಕ್ಟೇರ್‌ನಲ್ಲಿ ಕಬ್ಬು ಬೆಳೆಯಲಾಗುತ್ತಿದೆ. 23,207 ಹೆಕ್ಟೇರ್‌ನಷ್ಟು ಸವಳು–ಜವಳು ಪ್ರದೇಶವಿದೆ. ಈವರೆಗೆ 8,200 ಹೆಕ್ಟೇರ್ ಜಮೀನಿನಲ್ಲಿ ಸಮಸ್ಯೆ ಪರಿಹರಿಸಲಾಗಿದೆ. ಪ್ರಸ್ತುತ ಸವಳು ಸಮಸ್ಯೆ ಪರಿಹಾರಕ್ಕಾಗಿ ಬಂದಿರುವ 3600 ರೈತರ ಅರ್ಜಿಗಳು ಬಾಕಿ ಉಳಿದಿವೆ. ಈವರೆಗೆ ಮಣ್ಣು ಫಲವತ್ತಾಗಿಸಲು ಕಾಡಾಕ್ಕೆ ₹ 95 ಲಕ್ಷ ಅನುದಾನ ಲಭ್ಯವಾಗಿದೆ. ಮಣ್ಣು ಫಲವತ್ತಾಗಿಸಲು ಅಗತ್ಯವಿರುವ ಅಂದಾಜು ಅನುದಾನ
₹ 26 ಕೋಟಿ.

ಅಂಕಿ– ಅಂಶ

ಮಲಪ್ರಭಾ, ಘಟಪ್ರಭಾ ಅಚ್ಚುಕಟ್ಟು ಪ್ರದೇಶದ ಅಂಕಿ–ಅಂಶ (ಕಬ್ಬು ಬೆಳೆಯುವ ಪ್ರದೇಶ)

85,525 ಹೆಕ್ಟೇರ್‌ ಜಮೀನು ಸವಳು–ಜವಳು

39,273 ಈವರೆಗೆ ಹೆಕ್ಟೇರ್‌ ಜಮೀನಿನಲ್ಲಿ ಸಮಸ್ಯೆ ಪರಿಹರಿಸಲಾಗಿದೆ.

46,251 ಹೆಕ್ಟೇರ್‌ ಪ್ರದೇಶದಲ್ಲಿ ಸಮಸ್ಯೆಯಿದೆ.

₹231 ಕೋಟಿ ಮಣ್ಣನ್ನು ಫಲವತ್ತಾಗಿಸಲು ಅಗತ್ಯವಿರುವ ಅನುದಾನದ ಅಂದಾಜು

₹9.75 ಕೋಟಿ ಪ್ರಸಕ್ತ ಸಾಲಿನಲ್ಲಿ ಕಾಡಾಕ್ಕೆ ಲಭ್ಯವಾಗಿರುವ ಅನುದಾನ

ಮೈಸೂರು..

–––––––––

ಕಾಡಾ– ಮೈಸೂರು ವ್ಯಾಪ್ತಿಯ ಮಾಹಿತಿ

ಜವಳು/ಕ್ಷಾರ ಇರುವ ಪ್ರದೇಶ– 7,707 ಹೆಕ್ಟೇರ್

ಸವಳು ಇರುವ ಪ್ರದೇಶ– 6,307

ಈವರೆಗೆ 25,257 ಹೆಕ್ಟೇರ್‌ ಪ್ರದೇಶದಲ್ಲಿನ ಜವಳು/ಕ್ಷಾರ, ಸವಳು ಸಮಸ್ಯೆಯನ್ನು ಪರಿಹರಿಸಲಾಗಿದೆ.

ಮಣ್ಣು ಫಲವತ್ತಾಗಿಸಲು 2021–22ನೇ ಸಾಲಿನಲ್ಲಿ ₹ 38 ಲಕ್ಷ ಅನುದಾನವನ್ನು ಬಳಸಿ 110 ಹೆಕ್ಟೇರ್ ಪ್ರದೇಶವನ್ನು ಫಲವತ್ತಾಗಿಸಲಾಗಿದೆ.

ಬಾಕಿ ಉಳಿದಿರುವ 14,014 ಹೆಕ್ಟೇರ್ ಪ್ರದೇಶದ ಸಾರವರ್ಧನೆಗೆ ₹ 40 ಕೋಟಿ ಅನುದಾನ ಬೇಕಿದೆ.

ಮಾಹಿತಿ ನೀಡಿದವರು ಕಾಡಾದ ಭೂ ಅಭಿವೃದ್ಧಿ ಅಧಿಕಾರಿ ಮಧುಸೂದನ್

––––––––––––

ಭದ್ರಾ ಜಲಾಶಯದ ವ್ಯಾಪ್ತಿ

ಒಟ್ಟು ಎಷ್ಟು ಹೆಕ್ಟೇರ್ ಪ್ರದೇಶದಲ್ಲಿ ಭತ್ತ / ಕಬ್ಬು ಬೆಳೆಯುತ್ತಾರೆ.
ಭತ್ತ: 40 ಸಾವಿರ ಹೆಕ್ಟೇರ್
ಕಬ್ಬು: 12 ಸಾವಿರ ಹೆಕ್ಟೇರ್

ಎಷ್ಟು ಹೆಕ್ಟೇರ್‌ ಜಮೀನು ಸವಳು–ಜವಳು ಪ್ರದೇಶವಿದೆ.

23,207 ಹೆಕ್ಟೇರ್

ಈವರೆಗೆ ಹೆಕ್ಟೇರ್‌ ಜಮೀನಿನಲ್ಲಿ ಸಮಸ್ಯೆ ಪರಿಹರಿಸಲಾಗಿದೆ.

8,200 ಹೆಕ್ಟೇರ್

ಎಷ್ಟು ಹೆಕ್ಟೇರ್‌ ಪ್ರದೇಶದಲ್ಲಿ ಸಮಸ್ಯೆ ಬಾಕಿ ಉಳಿದಿದೆ.

ಪ್ರಸ್ತುತ 3600 ರೈತರ ಅರ್ಜಿಗಳು ಬಾಕಿ ಉಳಿದಿವೆ.

ಮಣ್ಣು ಫಲವತ್ತಾಗಿಸಲು ಕಾಡಾಕ್ಕೆ ಲಭ್ಯವಿರುವ ಅನುದಾನು ?

₹ 95 ಲಕ್ಷ

ಮಣ್ಣು ಫಲವತ್ತಾಗಿಸಲು ಅಗತ್ಯವಿರುವ ಅಂದಾಜು ಅನುದಾನ ₹ 26 ಕೋಟಿ

**********

[object Object]

ಕಬ್ಬು ಬೆಳೆಯುವ ಭೂಮಿಯೂ ರಸ ಹೀನ

-ಎಂ.ಎನ್‌.ಯೋಗೇಶ್

ಮಂಡ್ಯ: ಜಿಲ್ಲೆಯಲ್ಲಿ ಕಬ್ಬು, ಭತ್ತ ಬೆಳೆಯುವ ಭೂಮಿ ಸವಳಾಗಿದ್ದು ಬೆಳೆಯ ಇಳುವರಿ ತಗ್ಗಿದೆ. ‘ನೀರು ಕಟ್ಟು, ಗೊಬ್ಬರ ಹಾಕು’ ಎಂಬ ಸ್ಥಿತಿಯಿಂದ ಭೂಮಿಯ ಮೇಲ್ಪದರ ಶಕ್ತಿಹೀನವಾಗಿದೆ. ರಸಸಾರ ಹಾಳಾಗಿದೆ.

2014ರಲ್ಲಿ ತಾಲ್ಲೂಕಿನ ವಿ.ಸಿ.ಫಾರಂ ಕೃಷಿ ವಿಜ್ಞಾನ ಕೇಂದ್ರದ ತಜ್ಞರು ಸವಳಾಗುತ್ತಿರುವ ಕೃಷಿ ಭೂಮಿಯ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಕೆಆರ್‌ಎಸ್‌ ನೀರು ವ್ಯಾಪಕವಾಗಿ ಹರಿಯುವ ಶ್ರೀರಂಗಪಟ್ಟಣ, ಪಾಂಡವಪುರ, ಮಂಡ್ಯ ಹಾಗೂ ಮದ್ದೂರು ತಾಲ್ಲೂಕಿನಲ್ಲಿ ಭೂಮಿ ಹೆಚ್ಚು ಸವಳಾಗಿದೆ. ಕೇಂದ್ರದ ಮಣ್ಣು ತಜ್ಞರು ಮದ್ದೂರು ತಾಲ್ಲೂಕಿನ ದೊಡ್ಡರಸಿನಕೆರೆ ಗ್ರಾಮದ 50 ಎಕರೆ ಕೃಷಿ ಭೂಮಿ, ಹೊಸಹಳ್ಳಿಯ 20 ಎಕರೆ ಭೂಮಿಯಲ್ಲಿ ಪ್ರಯೋಗ ನಡೆಸಿದ್ದು ಭೂಮಿಯ ಎರಡೂವರೆ ಅಡಿ ಮೇಲ್ಪದರ ಶಕ್ತಿಹೀನಗೊಂಡಿರುವುದು ಪತ್ತೆಯಾಗಿದೆ.

ಚೌಳು ಹಾಗೂ ಕ್ಷಾರ ಮಣ್ಣಿನಲ್ಲಿರುವ ಉಪ್ಪಿನಾಂಶ ತೆರವಿಗೆ ‘ಬಸಿಗಾಲುವೆ’ ವ್ಯವಸ್ಥೆ ಮಾಡಿ ಉಪ್ಪಿನಾಂಶ ಹೊರಹಾಕ ಬೇಕು ಎಂಬುದು ಕೇಂದ್ರದ ಸಲಹೆ.

ಕಡಿಮೆ ನೀರಿನಿಂದ ಬೆಳೆಯಬಹುದಾದ ಕೆಎಂಪಿ– 175 (ಕರ್ನಾಟಕ ಮಂಡ್ಯ ಪ್ಯಾಡಿ) ಭತ್ತದ ತಳಿಯನ್ನು ವಿ.ಸಿ ಫಾರಂ ತಜ್ಞರು ಅಭಿವೃದ್ಧಿಪಡಿಸಿದ್ದಾರೆ. ಒಂದು ವರ್ಷದಿಂದ 25 ಕ್ವಿಂಟಲ್‌ ಬಿತ್ತನೆ ಬೀಜ ಮಾರಾಟವಾಗಿದೆ.

**********

[object Object]

ಸವಳು ಮಣ್ಣು ಗೆದ್ದವರು!

-ಗಾಣದಾಳು ಶ್ರೀಕಂಠ

ಬೆಂಗಳೂರು/ಬಳ್ಳಾರಿ/ಬಾಗಲಕೋಟೆ: ಸವಳು ಮಣ್ಣಿನ ಸಮಸ್ಯೆಯನ್ನು ಪರಿಸರ ಸ್ನೇಹಿ ಕೃಷಿಯ ಮೂಲಕ ಎದುರಿಸಿದ ರೈತರೂ ನಮ್ಮ ನಡುವೆ ಇದ್ದಾರೆ. ಬಳ್ಳಾರಿ ಜಿಲ್ಲೆಯ ಸಿರುಗು‌ಪ್ಪ ತಾಲ್ಲೂಕಿನ ಬೈರಾಪುರದ ರೈತ ಬಿ.ಎಂ.ಈರಪ್ಪಯ್ಯ ಎರಡು ದಶಕಗಳ ಹಿಂದೆಯೇ ಹಳೆ ಪದ್ಧತಿಗೆ ವಿದಾಯ ಹೇಳಿದ್ದಾರೆ. ರಸಗೊಬ್ಬರ, ಕೀಟನಾಶಕ ಬಳಸದೇ ಸಾವಯವ ಜೀವಾಮೃತವನ್ನಷ್ಟೇ ಹಾಕುತ್ತಿದ್ದಾರೆ. ಎರೆಹುಳು ಸಮೃದ್ಧವಾಗಿವೆ.

ಪ್ರವೃತ್ತಿಯಲ್ಲಿ ವಕೀಲರಾಗಿರುವ ಅವರು, ಸಮಯವನ್ನು ಸಂಪೂರ್ಣವಾಗಿ ಕೃಷಿಗೆ ಮೀಸಲಿಟ್ಟಿದ್ದಾರೆ. 25 ಎಕರೆ ಜಮೀನು ಹೊಂದಿರುವ ಅವರು, ಪ್ರತಿ ಎಕರೆಯಲ್ಲಿ ಕನಿಷ್ಠ 20 ಕ್ವಿಂಟಲ್‌ ಭತ್ತ ಬೆಳೆಯುತ್ತಾರೆ.

‘ಗದ್ದೆಯಲ್ಲಿ ನೀರು ನಿಲ್ಲದಂತೆ ಬಸಿ ಕಾಲುವೆಗಳನ್ನು ಮಾಡಿಸಿದ್ದಾರೆ. ಹೆಚ್ಚಾದ ನೀರು ಕಾಲುವೆಗೆ ಹೋಗುತ್ತದೆ. ಕಾಲುವೆಗಳ ಪಕ್ಕದಲ್ಲೇ ಜಮೀನು ಇರುವುದರಿಂದ ನಿರೀಕ್ಷಿತ ಪ್ರಮಾಣಕ್ಕಿಂತ ಹೆಚ್ಚು ನೀರು ಇರುತ್ತದೆ. ಹೀಗಾಗಿ, ಕಾಲುವೆ ಅನುಕೂಲವಾಗಿದೆ. ನಮ್ಮ ಅಕ್ಕಪಕ್ಕದ ಜಮೀನು ಸವಳಾಗಿದೆ’ ಎನ್ನುತ್ತಾರೆ ಅವರು.

ಅದೇ ತಾಲ್ಲೂಕಿನ ರೈತ ಸೂರ್ಯಭಾಸ್ಕರ್ ಏಳು ವರ್ಷಗಳಿಂದ ಸವಳು ಮಣ್ಣಿನೊಂದಿಗೆ ಹೋರಾಡುತ್ತಿದ್ದಾರೆ. 2014ರಲ್ಲಿ ಅವರು ಖರೀದಿಸಿದ 35 ಎಕರೆ ಜಮೀನು ಅಚ್ಚುಕಟ್ಟು ಪ್ರದೇಶದ ಕೆಳಭಾಗದಲ್ಲಿರುವುದರಿಂದ ಮೇಲ್ಭಾಗದ ಗದ್ದೆಗಳಲ್ಲಿ ನಿಲ್ಲಿಸಿದ ನೀರು, ಬಸಿದು, ಅವರ ಗದ್ದೆಗೆ ಹರಿದು, ಮಣ್ಣು ಸವಳಾಗುತ್ತಿತ್ತು. ಅದನ್ನು ಗುರುತಿಸಿದ ಅವರು, ಮಣ್ಣಿಗೆ ಹೆಚ್ಚುವರಿ ಪೋಷಕಾಂಶಗಳನ್ನು ಕೊಟ್ಟು ಭತ್ತ ಬೆಳೆಯುತ್ತಿದ್ದರು. ಸಮಸ್ಯೆ ತೀವ್ರಗೊಂಡಾಗ ನೆರವಿಗೆ ಬಂದ ಗಂಗಾವತಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು, ಬಸಿಗಾಲುವೆ ಮಾಡಿಸಿದರು.

ಈ ರೈತರಿಬ್ಬರೂ ಪ್ರತಿ ವರ್ಷ ಯಥೇಚ್ಚವಾಗಿ ಹಸಿರೆಲೆ ಗೊಬ್ಬರ, ಕುರಿ ಗೊಬ್ಬರ, ಹಟ್ಟಿ ಗೊಬ್ಬರ ನೀಡುತ್ತಾರೆ. ನೀರು ನಿಲ್ಲದ ಅವಧಿಯಲ್ಲಿ ಬೇರೆ ಬೆಳೆ ಬೆಳೆಯುತ್ತಾರೆ.

ಬಾಗಲಕೋಟೆ ಜಿಲ್ಲೆಯ ಮುಧೋಳ, ಜಮಖಂಡಿ ತಾಲ್ಲೂಕಿನ ರೈತರೂ ಬಸಿಗಾಲುವೆ ನಿರ್ಮಿಸಿ ಪರಿಹಾರ ಕಂಡುಕೊಂಡಿದ್ದಾರೆ.

‘ಅಕ್ಕಿಮರಡಿ ಗ್ರಾಮವೊಂದರಲ್ಲೇ 120 ಎಕರೆಯ ಸವಳು ಭೂಮಿಯನ್ನು ಯೋಗ್ಯಭೂಮಿಯಾಗಿಸಿದ್ದೇವೆ. ನಾವು ಸಂಘವನ್ನು ಕಟ್ಟಿಕೊಂಡಿಲ್ಲ. ಸರ್ಕಾರದ ನೆರವಿಲ್ಲ ಸಲಹೆ, ಮಾರ್ಗದರ್ಶನ, ಮಾಹಿತಿ ವಿನಿಮಯದ ಮೂಲಕವೇ ಕೆಲಸ ನಡೆದಿದೆ’ ಎನ್ನುತ್ತಾರೆ ಮಹಾಲಿಂಗಪುರದ ರೈತ ಮಹಾಂತೇಶ ಹಿಟ್ಟಿನಮಠ.

ಡಿಎಸ್‌ಆರ್ ಪದ್ಧತಿ

ಸವಳು ಮಣ್ಣಿನ ಸಮಸ್ಯೆಗೆ ಪರಿಹಾರವಾಗಿ ತುಂಗಭದ್ರಾ ಜಲಾಶಯದ (ಎರೆಭೂಮಿ) ಕೆಲ ರೈತರು ಭತ್ತದ ಬೀಜವನ್ನು ನೇರವಾಗಿ ಗದ್ದೆಗೆ ನಾಟಿ ಮಾಡುವ ‘ಡಿಎಸ್‌ಆರ್‌‘ (Direct seeded rice) ಪದ್ಧತಿಯನ್ನು ಅನುಸರಿಸುತ್ತಿದ್ದಾರೆ.

ಮೂರು ಎಕರೆಯಲ್ಲಿ ಇದೇ ವಿಧಾನ ಅಳವಡಿಸಿರುವ ಗಂಗಾವತಿ ಸಮೀಪದ ಜಂತಕಲ್ ಗ್ರಾಮದ ಕೃಷಿಕ ಮೆಹಬೂಬ್‌, ‘ನೇರ ನಾಟಿಯಿಂದ ಬೀಜದ ಪ್ರಮಾಣವೂ ಕಡಿಮೆಯಾಗುತ್ತದೆ. ನೀರು ನಿಲ್ಲಿಸಬೇಕಿಲ್ಲ. ತೆಂಡೆಗಳು ಚೆನ್ನಾಗಿ ಒಡಮೂಡಿ, ಉತ್ತಮ ಇಳುವರಿಯೂ ಬರುತ್ತದೆ‘ ಎನ್ನುತ್ತಾರೆ.

‘ಮೊದಲು ಎಕರೆಗೆ ₹25 ಸಾವಿರದವರೆಗೂ ಖರ್ಚಾಗುತ್ತಿತ್ತು. ಡಿಎಸ್‌ಆರ್ ವಿಧಾನದ ನಂತರ ₹ 15 ಸಾವಿರವಷ್ಟೇ ಖರ್ಚಾಗುತ್ತಿದೆ. ಮಣ್ಣು ಚೆನ್ನಾಗಿದೆ‘ ಎಂದು ಹರ್ಷ ವ್ಯಕ್ತಪಡಿಸುತ್ತಾರೆ.

ಜನಪ್ರಿಯವಾಗದ ‘ಶ್ರೀ’ ಪದ್ಧತಿ

ಸವಳು ಮಣ್ಣಿಗೆ ಪರಿಹಾರವಾಗಿ ದಶಕಗಳ ಹಿಂದೆ ‘ಶ್ರೀ‘ (SRI-System of Rice Intensification) ಪದ್ಧತಿ, ಏರೋಬಿಕ್ ಪದ್ಧತಿಯಂತಹ ಕೆಲವು ಪರಿಸರ ಸ್ನೇಹಿ ಪದ್ಧತಿಗಳನ್ನು ಪರಿಚಯಿಸಲಾಯಿತು.

ಅಗತ್ಯವಿರುವಷ್ಟೇ ನೀರಿನಿಂದ ನೆಲವನ್ನು ತೇವಗೊಳಿಸಿ ಬೀಜವನ್ನು ನೇರವಾಗಿ ನಾಟಿ ಮಾಡಿ ಭತ್ತ ಬೆಳೆಸುವಂತಹ ‘ಶ್ರೀ’ ಪದ್ಧತಿ ಮಣ್ಣು ಸವಳಾಗುವುದನ್ನು ತಪ್ಪಿಸಿ, ಬಿತ್ತನೆ ಬೀಜ ಮತ್ತು ನೀರನ್ನು ಉಳಿಸುತ್ತಿತ್ತು.

‘ಆದರೆ, ಇದಕ್ಕೆ ಹೆಚ್ಚು ಕಾರ್ಮಿಕರು ಬೇಕೆಂಬ ಕಾರಣಕ್ಕೋ ಏನೋ, ಜನಪ್ರಿಯವಾಗಲಿಲ್ಲ’ ಎನ್ನುತ್ತಾರೆ ರೈತರು. ಆದರೂ, ಸಾವಯವ, ನೈಸರ್ಗಿಕ ಕೃಷಿ ಮಾಡುತ್ತಿರುವವರು ಈ ಪದ್ಧತಿಯನ್ನೇ ಅನುಸರಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT